ಪುತ್ತೂರು: ಜಾಗದ ತಕರಾರಿಗೆ ಸಂಬಂಧಿಸಿದಂತೆ ವ್ಯಕ್ತಿ ಯೋರ್ವರ ಮೇಲೆ ಮೂವರು ಯುವಕರು ಹಲ್ಲೆ ನಡೆಸಿದ ಘಟನೆ ಅ. 20ರಂದು ಸಂಜೆ ತಿಂಗಳಾಡಿಯಲ್ಲಿ ನಡೆದಿದೆ. ಕೆದಂಬಾಡಿ ಗ್ರಾಮದ ಚಾವಡಿ ನಿವಾಸಿ ರಘುನಾಥ ರೈ ಎಂಬವರ ಮೇಲೆ ಹಲ್ಲೆ ನಡೆಸಲಾಗಿದೆ.
ರಘುನಾಥ ರೈ ಅವರು ಬಂಟ್ವಾಳದಲ್ಲಿ ಮದುವೆ ಕಾರ್ಯಕ್ರಮವನ್ನು ಮುಗಿಸಿ ಬಸ್ಸಲ್ಲಿ ಬಂದು ತಿಂಗಳಾಡಿಯಲ್ಲಿ ಇಳಿದು ಅಂಗಡಿಯ ಜಗಲಿಯಲ್ಲಿ ನಿಂತಿದ್ದ ವೇಳೆ ಅಲ್ಲೇ ಕಾಯುತ್ತಿದ್ದ ಮೂವರು ಯುವಕರಾದ ರಘುನಾಥ ರೈ ಅವರ ಅಕ್ಕನ ಮಗ ಸುದೀನ್ ಹಾಗೂ ಅವನ ಸ್ನೇಹಿತರಾದ ನಿಶಾಂತ್ ಮತ್ತು ವಿಜೇತ್ ಎಂಬವರು ರಘುನಾಥ್ ರೈ ಅವರನ್ನು ಹಿಡಿದುಕೊಂಡು ಅವರ ತಲೆಯನ್ನು ಗೋಡೆಗೆ ಜಜ್ಜಿ ಹಲ್ಲೆ ನಡೆಸಿದ್ದಾರೆ. ಈ ವೇಳೆ ರಘುನಾಥ್ ರೈ ಅವರ ತಲೆಗೆ ತೀವ್ರ ಗಾಯವಾಗಿದೆ.
ಚುನಾವಣಾ ಸಂಬಂಧಿ ಪಂಚಾಯತ್ ಗೆ ಬಂದೋಬಸ್ತಿಗೆ ಬಂದಿದ್ದ ಸಂಪ್ಯ ಠಾಣಾ ಪೊಲೀಸ್ ಓರ್ವರು ಇವರ ಗಲಾಟೆಯನ್ನು ಗಮನಿಸಿ ತಕ್ಷಣವೇ ಸ್ಥಳಕ್ಕೆ ಬಂದು ಆರೋಪಿಗಳನ್ನು ಹಿಡಿದುಕೊಂಡಿದ್ದಾರೆ. ಗಾಯಾಳು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಆರೋಪಿಗಳನ್ನು ಸಂಪ್ಯ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಜಾಗದ ವಿಚಾರಕ್ಕೆ ಹಲ್ಲೆ ನಡೆಸಿ ಕೊಲೆ ಬೆದರಿಕೆಯೊಡ್ಡಿದ್ದಾರೆ:
ಕುಟುಂಬದ ಜಾಗದ ವಿಚಾರಕ್ಕೆ ಸಂಬಂಧಿಸಿ ಈ ಹಲ್ಲೆ ನಡೆದಿದೆ. ನಾನು ಬಂಟ್ವಾಳದಲ್ಲಿ ಮದುವೆ ಕಾರ್ಯಕ್ರಮಕ್ಕೆ ಹೋಗಿ ಬಸ್ ನಲ್ಲಿ ಬಂದು ತಿಂಗಳಾಡಿಯಲ್ಲಿದಾಗ ನನ್ನ ಅಕ್ಕನ ಮಗ ಸುದೀನ್ ಬಂದು ಅವಾಚ್ಯ ಶಬ್ದಗಳಿಂದ ಬೈದಿದ್ದಾನೆ. ಅವನ ಜೊತೆಗಿದ್ದ ಆತನ ಸ್ನೇಹಿತ ನಿಶಾಂತ್ ಚೂರಿ ತೋರಿಸಿ ಕೊಲೆ ಬೆದರಿಕೆಯೊಡ್ಡಿದ್ದಾನೆ.
ಇದೇ ವೇಳೆ ಅವರಿಬ್ಬರು ನನ್ನನ್ನು ಪಕ್ಕದ ಗೋಪಾಲ ಪೂಜಾರಿ ಎಂಬವರ ಅಂಗಡಿಯ ರೋಲಿಂಗ್ ಶೆಟರ್ ಗೆ ದೂಡಿದರು. ಬಳಿಕ ನನ್ನ ತಲೆಯನ್ನು ಅಂಗಡಿಯ ಗೋಡೆಗೆ ಜಜ್ಜಿದರು. ನನ್ನ ತಲೆಯಿಂದ ರಕ್ತ ಚಿಮ್ಮುವಂತೆ ಹಲ್ಲೆ ನಡೆಸಿದ್ದಾರೆ ಎಂದು ಆಸ್ಪತ್ರೆಯಲ್ಲಿ ದಾಖಲಾಗಿರುವ ರಘುನಾಥ ರೈ ಆರೋಪಿಸಿದ್ದಾರೆ.