ಶ್ರೀನಿವಾಸ್ ಎಚ್.ಬಿ ಹುಟ್ಟುಹಬ್ಬ ಪ್ರಯುಕ್ತ ಮಡಿಕೇರಿಯಲ್ಲಿ ಹಿರಿಯ ವಿದ್ಯಾರ್ಥಿಗಳ ಸಂಭ್ರಮ

0

ಪುತ್ತೂರು: ಸರ್ವೆ ಎಸ್‌ಜಿಎಂ ಪ್ರೌಢ ಶಾಲೆಯ ನಿವೃತ್ತ ಮುಖ್ಯಗುರು, ಜನ ಮೆಚ್ಚಿದ ಶಿಕ್ಷಕ ಖ್ಯಾತಿಯ ಶ್ರೀನಿವಾಸ್ ಹೆಚ್ ಬಿ ಅವರ 64ನೇ ಹುಟ್ಟು ಹಬ್ಬದ ಪ್ರಯುಕ್ತ ‘ಗುರು ಶಿಷ್ಯರ ಸಮ್ಮಿಲನ’ ಹಿರಿಯ ವಿದ್ಯಾರ್ಥಿಗಳ ದಿಣಾಚರಣೆ ಅ.20ರಂದು ಮಡಿಕೇರಿ ಕ್ಯಾಪಿಟಲ್ ವಿಲೇಜ್ ರೆಸಾರ್ಟ್‌ನಲ್ಲಿ ನಡೆಯಿತು. ಶ್ರೀನಿವಾಸ್ ಹೆಚ್ ಬಿ ಅವರ ಹಿರಿಯ ವಿದ್ಯಾರ್ಥಿಗಳು ಹಾಗೂ ಆತ್ಮೀಯ ಬಳಗದಲ್ಲಿ ಗುರುತಿಸಿಕೊಂಡಿದ್ದ ಸುಮಾರು 40 ಮಂದಿ ಭಾಗವಹಿಸಿದ್ದರು. ಭಕ್ತಕೋಡಿ ಶ್ರೀ ರಾಮ ಭಜನಾ ಮಂದಿರದ ಬಳಿ ಲಕ್ಷ್ಮಣ ಆಚಾರ್ಯ ಅವರು ತೆಂಗಿನ ಕಾಯಿ ಒಡೆಯುವ ಮೂಲಕ ಪ್ರವಾಸಕ್ಕೆ ಚಾಲನೆ ನೀಡಿದರು.


ಶ್ರೀನಿವಾಸ್ ಎಚ್.ಬಿ ಅವರ ಹುಟ್ಟು ಹಬ್ಬದ ಪ್ರಯುಕ್ತ ಬಸ್ ಮೂಲಕ ಮಡಿಕೇರಿ ಪ್ರವಾಸ ಆಯೋಜಿಸಲಾಗಿತ್ತು. ಕ್ಯಾಪಿಟಲ್ ವಿಲೇಜ್ ರೆಸಾರ್ಟ್‌ನಲ್ಲಿ ಕೇಕ್ ಕತ್ತರಿಸಿ ಹಿರಿಯ ವಿದ್ಯಾರ್ಥಿಗಳು, ಆತ್ಮೀಯ ಬಳಗದವರು ಸಂಭ್ರಮಿಸಿದರು. ತಮ್ಮ ಗುರುವಿನ ಜನ್ಮದಿನದ ಪ್ರಯುಕ್ತ ಹಿರಿಯ ವಿದ್ಯಾರ್ಥಿಗಳೆಲ್ಲ ಸೇರಿ ಹಾಡು ಹಾಡಿ, ಡ್ಯಾನ್ಸ್ ಮಾಡಿ ಕುಣಿದು ಕುಪ್ಪಳಿಸಿದರು. ವಿವಿಧ ಆಟೋಟ ಸ್ಪರ್ಧೆಗಳೂ ನಡೆಯಿತು. ಶ್ರೀನಿವಾಸ್ ಹೆಚ್.ಬಿ ಕುರಿತು ಪ್ರತಿಯೋರ್ವರೂ ಅನಿಸಿಕೆ ವ್ಯಕ್ತಪಡಿಸಿದರು. ಇಂತಹ ವಿಭಿನ್ನ ಮತ್ತು ಅರ್ಥಪೂರ್ಣ ಹುಟ್ಟುಹಬ್ಬ ಆಚರಣೆ ಜಗತ್ತಿನ ಬೇರೆಲ್ಲೂ ಕಾಣಲು ಸಾಧ್ಯವಿಲ್ಲ ಎಂದು ಹಲವರು ಗುಣಗಾನ ಮಾಡಿದರು.

ಕಲ್ಲಮ ಶ್ರೀ ಗುರು ರಾಘವೇಂದ್ರ ಮಠದ ವ್ಯವಸ್ಥಾಪಕರಾದ ಡಾ.ಸೀತಾರಾಮ ಭಟ್ ಕಲ್ಲಮ ಮಾತನಾಡಿ ಶ್ರೀನಿವಾಸ್ ಮಾಸ್ಟ್ರು ಒಬ್ಬ ವಿಶಿಷ್ಟ ವ್ಯಕ್ತಿ, ಅವರಂತ ಜನರು ಸಮಾಜದಲ್ಲಿ ಸಿಗುವುದು ಅಪರೂಪ, ತನ್ನ ಹಿರಿಯ ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿ ಬಯಸುತ್ತಾ ಅವರನ್ನು ಗೆಳೆಯರಂತೆ ಒಟ್ಟುಗೂಡಿಸಿಕೊಂಡು ತಮ್ಮ ಜೀವನವನ್ನು ಆನಂದಭರಿತವಾಗಿ ಸಂಭ್ರಮಿಸುತ್ತಾರೆ, ಇದು ಮಾದರಿ ಎಂದು ಹೇಳಿದರು.ಒಬ್ಬ ಶಿಕ್ಷಕನ ಹುಟ್ಟು ಹಬ್ಬಕ್ಕೆ ಈ ರೀತಿಯ ಪ್ರವಾಸ ಕಾರ್ಯಕ್ರಮ ಆಯೋಜನೆ ಮಾಡುವುದು ಬೇರೆಲ್ಲೂ ಕಾಣಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.

ನಿವೃತ್ತ ಶಿಕ್ಷಕ ಮಹಾಬಲ ರೈ ಮಾತನಾಡಿ ಶ್ರೀನಿವಾಸ್ ಹೆಚ್.ಬಿ ಒಬ್ಬ ಅಪರೂಪದ ವ್ಯಕ್ತಿ. ಇವರ ಹುಟ್ಟು ಹಬ್ಬವನ್ನು ನಾವೆಲ್ಲಾ ಸೇರಿ ಸಂಭ್ರಮಿಸುವುದೆಂದರೆ ಅದೊಂದು ಖುಷಿ, ಇಂತಹ ಸನ್ನಿವೇಶಗಳನ್ನು ನಾನು ಬೇರೆಲ್ಲೂ ನೋಡಿಲ್ಲ. ಮುಂದಕ್ಕೂ ಶ್ರೀನಿವಾಸ್ ಹೆಚ್.ಬಿ ಅವರ ಹುಟ್ಟು ಹಬ್ಬ ಇದೇ ರೀತಿ ಮಾದರಿಯಾಗಿ ಆಚರಣೆಯಾಗಲಿ ಎಂದು ಹೇಳಿದರು.

ಬರ್ತ್ ಡೇ ಪ್ರಯುಕ್ತ ಗೌರವ ಸನ್ಮಾನ ಸ್ವೀಕರಿಸಿದ ಶ್ರೀನಿವಾಸ್ ಹೆಚ್.ಬಿ ಮಾತನಾಡಿ ನನ್ನ ಹುಟ್ಟಿದ ದಿನವನ್ನು ಹಿರಿಯ ವಿದ್ಯಾರ್ಥಿಗಳ ಗೌರವ ದಿನ ಎಂದು ನಾಲ್ಕು ವರ್ಷಗಳ ಹಿಂದೆ ಘೋಷಿಸಿದ್ದೇನೆ. ಹಿರಿಯ ವಿದ್ಯಾರ್ಥಿಗಳೆಂದರೆ ನನಗೆ ಪಂಚಪ್ರಾಣ. ನಮ್ಮ ಜೀವನ ಬಹಳ ಸಣ್ಣದು, ನಾವು ಜೀವಿಸುವ ಸಮಯದಲ್ಲಿ ಖುಷಿಯಾಗಿ ಎಲ್ಲರೊಂದಿಗೆ ಬೆರೆತು ಜೀವಿಸಬೇಕು. ನನ್ನ ಜನ್ಮ ದಿನವನ್ನು ಹಿರಿಯ ವಿದ್ಯಾರ್ಥಿಗಳು ಸೇರಿ ಪ್ರತೀ ವರ್ಷ ಪ್ರವಾಸ ಆಯೋಜಿಸಿ ಸಂಭ್ರಮದಿಂದ ಆಚರಣೆ ಮಾಡುತ್ತಿದ್ದು ನನಗೆ ಇದಕ್ಕಿಂತ ಖುಷಿ ಇನ್ನೊಂದಿಲ್ಲ. ಇರುವಷ್ಟು ಕಾಲ ನಾವೆಲ್ಲಾ ಖುಷಿಯಿಂದ, ಪ್ರೀತಿಯಿಂದ ಜೀವಿಸೋಣ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದ ಸಾರಥ್ಯ ವಹಿಸಿದ್ದ ಹಿರಿಯ ವಿದ್ಯಾರ್ಥಿ, ಬೆಂಗಳೂರಿನ ಉದ್ಯಮಿ ಪ್ರಕಾಶ್ ಶೆಟ್ಟಿಮಜಲು ಮಾತನಾಡಿ ನನಗೆ ವಿದ್ಯೆ ಕಲಿಸಿದ ಗುರುವಿನ ಹುಟ್ಟು ಹಬ್ಬವನ್ನು ಆಚರಿಸಲು ಮತ್ತು ಅದಕ್ಕೆ ನೇತೃತ್ವ ವಹಿಸಲು ನನಗೆ ಅವಕಾಶ ಸಿಕ್ಕಿರುವುದು ನನ್ನ ಸೌಭಾಗ್ಯ. ಇಂತಹ ಕಾರ್ಯಕ್ರಮ ಪ್ರತೀ ವರ್ಷ ನಡೆಯಬೇಕು ಎಂದು ಹೇಳಿದರು.

ಹನೀಫ್ ರೆಂಜಲಾಡಿ, ಲಕ್ಷ್ಮಣ್ ಸಂಪ್ಯಗೆ ಸನ್ಮಾನ:
ಸಾಮಾಜಿಕ, ಶೈಕ್ಷಣಿಕ, ಸಂಘಟನಾತ್ಮಕ ಹಾಗೂ ಮಾನವೀಯ ಸೇವೆಗಳಿಗಾಗಿ ಸರ್ವೆ ಸೌಹಾರ್ದ ವೇದಿಕೆಯ ಅಧ್ಯಕ್ಷ ಕೆ.ಎಂ ಹನೀಫ್ ರೆಂಜಲಾಡಿಯವರನ್ನು ಸನ್ಮಾನಿಸಿ ಗೌರವಿಸಲಾಯಿತು. ಅದೇ ರೀತಿ ಉದ್ಯಮ ಕ್ಷೇತ್ರದ ಸಾಧಕ ಲಕ್ಷ್ಮಣ್ ಸಂಪ್ಯ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸನ್ಮಾನ ಸ್ವೀಕರಿಸಿದ ಕೆ.ಎಂ ಹನೀಫ್ ರೆಂಜಲಾಡಿ ಮಾತನಾಡಿ ಗುರುಗಳಿಂದ ಸನ್ಮಾನ ಸ್ವೀಕರಿಸುವ ಭಾಗ್ಯ ಸಿಕ್ಕಿರುವುದು ಅತೀವ ಸಂತೋಷ ತಂದಿದೆ, ಇದು ನನ್ನ ಪಾಲಿನ ಅವಿಸ್ಮರಣೀಯ ಕ್ಷಣ ಎಂದು ಹೇಳಿದರು.

ಷಣ್ಮುಖ ಯುವಕ ಮಂಡಲ, ಹಿರಿಯ ವಿದ್ಯಾರ್ಥಿ ಸಂಘದಿಂದ ಗೌರವಾರ್ಪಣೆ:
ಶ್ರೀನಿವಾಸ್ ಹೆಚ್.ಬಿ ಅವರಿಗೆ ಷಣ್ಮುಖ ಯುವಕ ಮಂಡಲ ಹಾಗೂ ಹಿರಿಯ ವಿದ್ಯಾರ್ಥಿ ಸಂಘದಿಂದ ಗೌರವಾರ್ಪಣೆ ನಡೆಯಿತು. ಅಬಕಾರಿ ಇನ್ಸ್‌ಪೆಕ್ಟರ್ ಲೋಕೇಶ್ ಸುವರ್ಣ ಅವರಿಗೂ ಇದೇ ಸಂದರ್ಭದಲ್ಲಿ ಷಣ್ಮುಖ ಯುವಕ ಮಂಡಲದಿಂದ ಗೌರವಾರ್ಪಣೆ ನಡೆಯಿತು. ಕಬಡ್ಡಿಯಲ್ಲಿ ದಕ್ಷಿಣ ವಲಯ ಮಟ್ಟದ ಯುನಿವರ್ಸಿಟಿ ಪಂದ್ಯಾಟಕ್ಕೆ ಆಯ್ಕೆಯಾಗಿರುವ ಚಿರಾಗ್ ರೈ ಮೇಗಿನಗುತ್ತು ಅವರನ್ನು ಸನ್ಮಾನಿಸಲಾಯಿತು.

ಸೌಹಾರ್ದ ವೇದಿಕೆಯಿಂದ ಗೌರವಾರ್ಪಣೆ:
ಸರ್ವೆ ಸೌಹಾರ್ದ ವೇದಿಕೆ ವತಿಯಿಂದ ಶ್ರೀನಿವಾಸ್ ಹೆಚ್.ಬಿ ಅವರಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ಅದೇ ರೀತಿ ಡಾ.ಸೀತಾರಾಮ ಭಟ್ ಕಲ್ಲಮ ಅವರಿಗೂ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ನಾಲ್ಕನೇ ವರ್ಷದ ಪ್ರವಾಸ:
ಶ್ರೀನಿವಾಸ್ ಹೆಚ್ ಬಿ ಅವರು ತಮ್ಮ ಹುಟ್ಟು ಹಬ್ಬವನ್ನು ಹಿರಿಯ ವಿದ್ಯಾರ್ಥಿಗಳ ಗೌರವ ದಿನವನ್ನಾಗಿ ಆಚರಿಸುತ್ತಿದ್ದು ಇದು ನಾಲ್ಕನೇ ವರ್ಷದ ಕಾರ್ಯಕ್ರಮವಾಗಿದೆ. ಶಿಕ್ಷಕ ವೃತ್ತಿಯಿಂದ ನಿವೃತ್ತರಾದ ಬಳಿಕ ತಮ್ಮ 61ನೇ ವರ್ಷದ ಹುಟ್ಟು ಹಬ್ಬದ ಪ್ರಯುಕ್ತ ಮೊದಲ ಬಾರಿ ಹಿರಿಯ ವಿದ್ಯಾರ್ಥಿಗಳ ಗೌರವ ದಿನ ಎನ್ನುವ ಹೆಸರಿನಲ್ಲಿ 2021ರಲ್ಲಿ ಬಿಸಿಲೆ ಘಾಟ್ ಗೆ ಪ್ರವಾಸ ಹಮ್ಮಿಕೊಂಡಿದ್ದ ಶ್ರೀನಿವಾಸ್ ಹೆಚ್ ಬಿ ಅವರು 2022ರಲ್ಲಿ ಕೊಡಗು ಪ್ರವಾಸ ಆಯೋಜಿಸಿದ್ದರು.2023ರಲ್ಲಿ ಮಂಗಳೂರು ಕಡಲ ಕಿನಾರೆಗೆ ಪ್ರವಾಸ ಆಯೋಜನೆ ಮಾಡಲಾಗಿತ್ತು. ತನ್ನ ಜನ್ಮ ದಿನದಂದು ಹಿರಿಯ ವಿದ್ಯಾರ್ಥಿಗಳನ್ನು ಗೌರವಿಸುವ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿರುವ ಶ್ರೀನಿವಾಸ್ ಹೆಚ್ ಬಿ ಅವರು ನಿವೃತ್ತಿ ಜೀವನದಲ್ಲೂ ವಿಭಿನ್ನ ಕಾರ್ಯಕ್ರಮ ನಡೆಸುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ.

ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸುರೇಶ್ ಎಸ್.ಡಿ, ಸರ್ವೆ ಷಣ್ಮುಖ ಯುವಕ ಮಂಡಲದ ಅಧ್ಯಕ್ಷ ಗೌತಮ್‌ರಾಜ್ ಕರುಂಬಾರು, ಸರ್ವೆ ಸೌಹಾರ್ದ ವೇದಿಕೆಯ ಅಧ್ಯಕ್ಷ ಕೆ.ಎಂ ಹನೀಫ್ ರೆಂಜಲಾಡಿ, ಉದ್ಯಮಿ ಲಕ್ಷ್ಮಣ್ ಸಂಪ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಹಿರಿಯ ವಿದ್ಯಾರ್ಥಿ ಅಬಕಾರಿ ಇನ್ಸ್‌ಪೆಕ್ಟರ್ ಲೋಕೇಶ್ ಸುವರ್ಣ ಮಾತನಾಡಿ ಶುಭ ಹಾರೈಸಿದರು.

ಮುಂಡೂರು ಗ್ರಾ.ಪಂ ಸದಸ್ಯ ಕಮಲೇಶ್ ಸರ್ವೆದೋಳಗುತ್ತು ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here