ಮಾಣಿ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯಶಿಕ್ಷಕಿ ಸುಪ್ರಿಯಾ ಡಿ. ರವರಿಗೆ ರಾಜ್ಯ ಮಟ್ಟದ ‘ವಿದ್ಯಾರತ್ನ’ ಪ್ರಶಸ್ತಿ

0

ವಿಟ್ಲ: ಕರ್ನಾಟಕ ರಾಜ್ಯ ಮಾನ್ಯತೆ ಪಡೆದ ಅನುದಾನ ರಹಿತ ಖಾಸಗಿ ಶಾಲೆಗಳ ಸಂಘ(RUPSA) ಕೊಡಮಾಡುವ ರಾಜ್ಯ ಮಟ್ಟದ ‘ವಿದ್ಯಾರತ್ನ’ ಪ್ರಶಸ್ತಿಗೆ ಮಾಣಿ ಪೆರಾಜೆ ವಿದ್ಯಾನಗರ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯಶಿಕ್ಷಕಿ ಸುಪ್ರಿಯಾ ಡಿ. ರವರು ಆಯ್ಕೆಯಾಗಿದ್ದಾರೆ. ಅವರಿಗೆ‌ ಅ.21ರಂದು ಬೆಂಗಳೂರಿನ ಜುಬಿಲಿ ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ ಕರ್ನಾಟಕ ಸರಕಾರದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪರವರು ಈ ಪ್ರಶಸ್ತಿಯನ್ನು ಪ್ರಧಾನ ಮಾಡಿದರು.


ಕಳೆದ 15 ವರ್ಷಗಳಿಂದ ಶಿಕ್ಷಣ ಕ್ಷೇತ್ರದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರುವ ಸುಪ್ರಿಯಾ ಡಿ. ರವರು ಪಠ್ಯ ಮಾತ್ರವಲ್ಲದೇ ಪಠ್ಯೇತರ ಚಟುವಟಿಕೆಗಳಲ್ಲೂ ಅಪಾರವಾದ ಆಸಕ್ತಿಯನ್ನು ಹೊಂದಿದ್ದಾರೆ. ಕಳೆದ 8 ವರ್ಷಗಳಿಂದ ಗೈಡ್ ಕ್ಯಾಪ್ಟನ್ ಆಗಿರುವ ಇವರು ಅನೇಕ ವಿದ್ಯಾರ್ಥಿಗಳನ್ನು ತರಬೇತುಗೊಳಿಸಿ ರಾಜ್ಯ ಪುರಸ್ಕಾರ ಪಡೆಯುವಂತೆ ಮಾಡಿದ್ದಾರೆ. ಶಾಲೆಯ ವಿದ್ಯಾರ್ಥಿಗಳಿಗೆ ಪ್ರಬಂಧ ,ಭಾಷಣ ,ಕವಿಗೋಷ್ಠಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ,ಕಿರು ಚಿತ್ರಗಳಿಗೆ ಗೀತ ಸಾಹಿತ್ಯ ರಚನೆ ಹಾಗೂ ಬಾಲವಿಕಾಸ ಶಾಲೆಯ ಮಕ್ಕಳು ಅಭಿನಯಿಸಿದ “ಯಂತ್ರ ಯಾನ ” ವಿಜ್ಞಾನ ನಾಟಕವನ್ನು ರಚಿಸುವ ಮೂಲಕ ಪ್ರಶಸ್ತಿ ಲಭಿಸುವಂತೆ ಮಾಡಿದ್ದಾರೆ. ಇವರೊಬ್ಬ ಉತ್ತಮ ಕವಯಿತ್ರಿಯಾಗಿದ್ದು ವಿದ್ಯಾರ್ಥಿ ಕವಿಗೋಷ್ಠಿಯನ್ನು ಸಹ ನಡೆಸುತ್ತಿದ್ದಾರೆ. ರಾಜ್ಯಮಟ್ಟದ ಕವಿ ಕಾವ್ಯ ಕಮ್ಮಟದಲ್ಲಿ ಕವನ ವಾಚನ ಮಾಡಿ ಪುರಸ್ಕೃತರಾಗಿದ್ದಾರೆ. ನೂರಕ್ಕಿಂತಲೂ ಅಧಿಕವಾಗಿ ಕಾರ್ಯಕ್ರಮ ನಿರೂಪಣೆ ಮಾಡಿ ‘ಉತ್ತಮ ನಿರೂಪಕಿ’ ಎನ್ನುವ ಕೀರ್ತಿಗೆ ಭಾಜನರಾಗಿದ್ದಾರೆ. ಶಿಕ್ಷಣ ಸಂಬಂಧಿತ ಸಾಕ್ಷ್ಯಚಿತ್ರಗಳಿಗೆ ಹಿನ್ನೆಲೆ ಧ್ವನಿಯಾಗುತ್ತಿರುವ ಇವರು ತಮ್ಮ ಅದ್ಭುತ ಬೋಧನಾ ಕೌಶಲ್ಯ ಹೊಂದಿರುವ ವಿದ್ಯಾರ್ಥಿಗಳ ನೆಚ್ಚಿನ ಕನ್ನಡ ಶಿಕ್ಷಕಿಯಾಯಾಗಿದ್ದಾರೆ. ಈ ಹಿಂದೆ ಉಪ್ಪಿನಂಗಡಿಯ ಇಂದ್ರಪ್ರಸ್ಥ ವಿದ್ಯಾಲಯದಲ್ಲಿ ಸಹ ಶಿಕ್ಷಕಿಯಾಗಿ ಹಾಗೂ ಉಪ ಪ್ರಾಂಶುಪಾಲರಾಗಿ ಸೇವೆಸಲ್ಲಿಸಿದ್ದ ಅವರು ಪ್ರಸ್ತುತ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯಿಂದ ಗುರುತಿಸಿಕೊಂಡು 2024-25ನೇ ಶೈಕ್ಷಣಿಕ ವರ್ಷದಲ್ಲಿ ಬಂಟ್ವಾಳ ತಾಲೂಕಿನಿಂದ ರಾಜ್ಯಮಟ್ಟದ ‘ವಿದ್ಯಾರತ್ನ’ ಪ್ರಶಸ್ತಿಗೆ ಭಾಜನರಾಗಿದ್ದಾರೆ.


ಕನ್ನಡ ಸ್ನಾತಕೋತ್ತರ ಪದವೀಧರೆಯಾಗಿರುವ ಅವರು ಮಂಗಳೂರಿನ ಜೆಪ್ಪು ನಿವಾಸಿ. ನಿವೃತ್ತ ವಿಷಯ ಪರಿವೀಕ್ಷಣಾಧಿಕಾರಿ ದಿ | ದಾಮೋದರ ಗೌಡ ದೇವರಮಜಲು ಮತ್ತು ವಾರಿಜಾ ದಂಪತಿಗಳ ಪುತ್ರಿಯಾಗಿದ್ದು, ಮೆಸ್ಕಾಂನ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಆಗಿರುವ ವಸಂತ ಕುಮಾರ್ ರವರ ಪತ್ನಿಯಾಗಿದ್ದಾರೆ.

LEAVE A REPLY

Please enter your comment!
Please enter your name here