ಮಹಾಲಿಂಗೇಶ್ವರ ಭಜನಾ ಸೇವಾ ಟ್ರಸ್ಟ್ ವಾರ್ಷಿಕ ಮಹಾಸಭೆ

0

ಭಜನೆ ಇದ್ದಲ್ಲಿ ವಿಭಜನೆ ಇಲ್ಲ-ಸಂತೋಷ್ ಪಿ ಅಳಿಯೂರು

ಪುತ್ತೂರು: ಸಮರ್ಪಣಾಭಾವ, ಭಕ್ತಿ ಶ್ರದ್ಧೆಯಿಂದ ಮಾಡುವ  ಭಗವಂತನ ಸ್ಮರಣೆ  ಭಗವಂತನಿಗೇ ತಲುಪುತ್ತದೆ. ಭಜನೆ, ನಾಮಾವಳಿಗಳಿಂದ ಮಾಡಿದ ಭಗವತ್ಸೇವೆ ನಾವು ಮಾಡಿದ ಕರ್ಮಗಳಿಂದ ಮುಕ್ತವಾಗಿಸುತ್ತದೆ ಎಂದು ಧರ್ಮಸ್ಥಳ ಭಜನಾ ಪರಿಷತ್ ಜಿಲ್ಲಾ ಸಂಚಾಲಕ  ಸಂತೋಷ್ ಪಿ ಅಳಿಯೂರು ಹೇಳಿದರು.

ಅವರು ಪುತ್ತೂರು ಶ್ರೀ ಮಹಾಲಿಂಗೇಶ್ವರ ಭಜನಾ ಸೇವಾ ಟ್ರಸ್ಟ್ (ರಿ) ಇದರ 9ನೇ ವಾರ್ಷಿಕ ಮಹಾಸಭೆಯನ್ನು ದೀಪಬೆಳಗಿ ಚಾಲನೆಗೈದು ಮಾತನಾಡುತ್ತಿದ್ದರು. ಎಲ್ಲಾ ಚಟುವಟಿಕೆಗಳಲ್ಲಿ ಪರಸ್ಪರ  ಕೈಜೋಡಿಸಿ ಮುಂದುವರಿದಾಗ ಸಂಘಟನೆ ಯಶಸ್ವಿಯಾಗಿ ಬೆಳೆಯುತ್ತದೆ ಎಂದ ಅವರು, ಭಜನಾ ಕಮ್ಮಟದ ಸಮಾರೋಪ ಸಮಾರಂಭದಲ್ಲಿ ಧರ್ಮಸ್ಥಳದ ಪರಮಪೂಜ್ಯ ಶ್ರೀ ಡಿ ವೀರೇಂದ್ರ ಹೆಗ್ಗಡೆಯವರಿಂದ “ತಾಲೂಕಿನ ಶ್ರೇಷ್ಠ ಭಜನಾ ಮಂಡಳಿ” ಪ್ರಶಸ್ತಿ ಪಡೆದು, ತಂಡದ ಜವಾಬ್ದಾರಿ ಇನ್ನೂ ಹೆಚ್ಚಿದೆ ಎಂದು ಹೇಳಿದರು.

ಇನ್ನೋರ್ವ ಅತಿಥಿ ನಿವೃತ್ತ ಶಿಕ್ಷಕ  ನಾರಾಯಣ ರೈ ಕುಕ್ಕುವಳ್ಳಿ ಮಾತನಾಡುತ್ತಾ ಭಜನೆಯ ಭಾವ, ಗುಣಮಟ್ಟ ಕಾಯ್ದುಕೊಂಡು ಎಲ್ಲರೂ ಒಂದೇ ಮನಸ್ಸಿನಿಂದ ದುಡಿಯುವುದು ಸಂಘದ ಬೆಳವಣಿಗೆಗೆ ಪೂರಕ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಚೆನ್ನೈ ಯ ಅಮೇರಿಕನ್ ಯುನಿವರ್ಸಿಟಿಯಿಂದ ಗೌರವ ಡಾಕ್ಟರೇಟ್ ಪದವಿ ಪುರಸ್ಕೃತರಾದ ಟ್ರಸ್ಟ್ ನ ಸಂಚಾಲಕ ಗೋಪಾಲಕೃಷ್ಣ ಇವರನ್ನು ಭಜನಾ ತಂಡದ ವತಿಯಿಂದ  ಗೌರವಿಸಲಾಯಿತು. ಗೌರವ ಸ್ವೀಕರಿಸಿ ಮಾತನಾಡಿದ ಗೋಪಾಲಕೃಷ್ಣ ಅವರು ತನ್ನ ಸಾಧನೆಯ  ಹಿಂದಿನ ಶ್ರಮ, ಲಭಿಸಿದ ಸಹಕಾರ, ಮಾರ್ಗದರ್ಶನ ಇತ್ಯಾದಿಗಳನ್ನು ಸಭೆಯಲ್ಲಿ ಹಂಚಿಕೊಂಡರು. 

ಸಭಾಧ್ಯಕ್ಷತೆ ವಹಿಸಿದ ಟ್ರಸ್ಟ್ ನ ಅಧ್ಯಕ್ಷೆ ಶಾರದಾಕೃಷ್ಣ ಮಾತನಾಡುತ್ತಾ ತಂಡದ ಪ್ರತಿಯೊಬ್ಬ ಹಿರಿಯ ಕಿರಿಯ ಸದಸ್ಯರ ಒಮ್ಮನದ ಸಹಕಾರದಿಂದ ಈವರಿಗಿನ ಯಶಸ್ಸು ಸಾಧ್ಯವಾಗಿದೆ. ಮುಂದೆಯೂ ಸಹಕಾರ ಹೀಗೆಯೇ ಲಭಿಸಿ, ತಂಡದ “ದಶಮಾನೋತ್ಸವ” ಅತ್ಯಂತ ವಿಜೃಂಭಣೆಯಿಂದ ನೆರವೇರಲಿ ಎಂದರು. ಗೌರವಾಧ್ಯಕ್ಷರ ಸೂಚನೆಯಂತೆ 2024-25ನೇ ಸಾಲಿಗೆ ಅಧ್ಯಕ್ಷರಾಗಿ ಶ್ರೀಮತಿ ಶಾರದಾಕೃಷ್ಣ, ಉಪಾಧ್ಯಕ್ಷರಾಗಿ ಕುಸುಮಾಕರ್,  ಕಾರ್ಯದರ್ಶಿಯಾಗಿ ವೆಂಕಟೇಶ್ ಪ್ರಸಾದ್,  ಜತೆ ಕಾರ್ಯದರ್ಶಿಯಾಗಿ ಜಯಂತಿ ಹೆಗ್ಡೆ, ಕೋಶಾಧಿಕಾರಿಯಾಗಿ ಪ್ರೇಮ ಅಜ್ಜಿಕಲ್ಲು ಇವರನ್ನು ಆಯ್ಕೆ ಮಾಡಲಾಯಿತು. ನಿಕಟಪೂರ್ವ ಕಾರ್ಯದರ್ಶಿ ಪ್ರಭಾವತಿ ಕಳೆದ ಸಾಲಿನ ವರದಿ ವಾಚಿಸಿದರು.  ನಿಕಟಪೂರ್ವ ಕೋಶಾಧಿಕಾರಿ ಕುಮಾರಿ ಧನುಷಾ ಕಳೆದ ಸಾಲಿನ ಲೆಕ್ಕಪತ್ರ ಮಂಡಿಸಿದರು. ಪ್ರೇಮಲತಾ ಪ್ರಾರ್ಥಿಸಿದರು. ಟ್ರಸ್ಟಿನ ಹಿರಿಯ ಸದಸ್ಯ ವಿಷ್ಣು ಪ್ರಭು ಸ್ವಾಗತಿಸಿ, ಗೌರವಾಧ್ಯಕ್ಷರಾದ ಜಗನ್ನಾಥ ಪೂಜಾರಿ ವಂದಿಸಿದರು. ವೆಂಕಟೇಶ್ ಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here