ಪರೋಪಕಾರವೇ ಬದುಕಿನ ಸಾರ್ಥಕತೆ : ಅವಿನಾಶ್ ಕೊಡಂಕಿರಿ
ಪುತ್ತೂರು: ಅಸಹಾಯಕರಿಗೆ ಮಾಡುವ ಅಗತ್ಯ ಸೇವೆಯೇ ಮಾನವ ಧರ್ಮ ಹಾಗೂ ಅದೇ ಜೀವನದ ಸಾರ್ಥಕತೆ ಎಂದು ನರಿಮೊಗರು ಸರಸ್ವತಿ ವಿದ್ಯಾ ಮಂದಿರದ ಸಂಚಾಲಕ ಅವಿನಾಶ್ ಕೊಡೆಂಕಿರಿಯವರು ಹೇಳಿದರು.
ಬನ್ನೂರು ಅಯೋಧ್ಯಾನಗರ ಶ್ರೀ ಶಿವಪಾರ್ವತಿ ಮಂದಿರದ ಸಭಾಂಗಣದಲ್ಲಿ ಯೋಗ ಕೇಂದ್ರ ಪುತ್ತೂರು, ಪ್ರಗತಿ ವಿದ್ಯಾಕೇಂದ್ರ ಕಾಣಿಯೂರು, ಅನಿಕೇತನ ಎಜುಕೇಶನಲ್ ಟ್ರಸ್ಟ್ ಪುತ್ತೂರು ಮತ್ತು ಪ್ರಶಾಂತಿ ಸದ್ಭಾವನಾ ಟ್ರಸ್ಟ್ ಪುತ್ತೂರು ಇವರ ಸಹಯೋಗದಲ್ಲಿ ನಡೆದ 10ನೇ ಯೋಗ ಸತ್ಸಂಗ ಕಾರ್ಯಕ್ರಮದಲ್ಲಿ ವಿಟ್ಲ ಸಮೀಪದಲ್ಲಿ ಪ್ರವಾಹದ ನೀರಿನಲ್ಲಿ ಕೊಚ್ಚಿಹೋಗುತ್ತಿದ್ದ ವಯೋ ವೃದ್ಧರನ್ನು ತಮ್ಮ ಜೀವದ ಹಂಗು ತೊರೆದು ಕಾಪಾಡಿದ ಯುವ ನ್ಯಾಯವಾದಿ ಅಶೋಕ್ ಸಿ.ಎಚ್ ಮತ್ತು ಇಲೆಕ್ಟ್ರೀಷಿಯನ್ ಸುರೇಶ್ ಸಿ.ಎಚ್ ಎಂಬವರನ್ನು ಸನ್ಮಾನಿಸಿ ಅವರು ಮಾತನಾಡಿದರು. ಕೊಡೆಂಕಿರಿಯವರು ಇಬ್ಬರೂ ಯುವಕರ ಸಾಹಸವು ಇತರರಿಗೆ ಪ್ರೇರಣೆ ಮತ್ತು ಮಾರ್ಗದರ್ಶಕವಾಗಿರಲಿ ಎಂದು ಶ್ಲಾಘಿಸಿದರು.
ಯೋಗ ಕೇಂದ್ರ ಪುತ್ತೂರು ಇದರ ಅಧ್ಯಕ್ಷ ಹಾಗೂ ಹಿರಿಯ ವಕೀಲ ಶ್ರೀಗಿರೀಶ್ ಮಳಿಯವರು ಧಾವಂತದ ಬದುಕಿನಲ್ಲಿ ಉತ್ತಮ ಜೀವನ ಶೈಲಿ ರೂಪಿಸಿಕೊಳ್ಳಲು ಹಾಗೂ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಯೋಗ ಮತ್ತು ಉತ್ತಮ ವಿಚಾರಧಾರೆಗಳ ಅವಶ್ಯಕತೆಯಿದ್ದು ಅವುಗಳಿಗೆ ಪೂರಕವಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು.
ಶ್ರೀ ಪ್ರಗತಿ ವಿದ್ಯಾಕೇಂದ್ರದ ಸಂಚಾಲಕ ಜಯಸೂರ್ಯ ರೈ ಮಾದೋಡಿ, ಅನಿಕೇತನ ಎಜುಕೇಶನಲ್ ಟ್ರಸ್ಟ್ ನ ಮುಖ್ಯಸ್ಥ ವಕೀಲ ಕೃಷ್ಣಪ್ರಸಾದ್ ನನ್ಸಾರ್, ಯೋಗ ಗುರು ಪ್ರಸಾದ್ ಪಾಣಾಜೆ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಸತ್ಸಂಗ ಕಾರ್ಯಕ್ರಮದಲ್ಲಿ ಸಂಸ್ಕೃತ ಉಪನ್ಯಾಸಕ ಪರೀಕ್ಷಿತ್ ತೋಳಾಡಿಯವರು ವಿಷ್ಣು ಸಹಸ್ರನಾಮ ಪಠಣವನ್ನು ನಡೆಸಿಕೊಟ್ಟರು. ಅವಿನಾಶ್ ಕೊಡೆಂಕಿರಿಯವರಿಂದ ಸ್ವಾಮಿ ವಿವೇಕಾನಂದರ ಏಕಮಾತ್ರ ಬರಹವಾದ ರಾಜಯೋಗ ಎಂಬ ಗ್ರಂಥದ ಬಗ್ಗೆ ವಿಶೇಷ ಉಪನ್ಯಾಸ ಕಾರ್ಯಕ್ರಮ ಜರುಗಿತು. ಯೋಗ ಗುರು ಪ್ರಸಾದ್ ಪಾಣಾಜೆ ಸ್ವಾಗತಿಸಿ, ಯೋಗಕೇಂದ್ರದ ಖಜಾಂಚಿ ಹರಿಕೃಷ್ಣ ವಂದಿಸಿದರು. ಜ್ಯೋತಿ ಇಲೆಕ್ಟಿಕಲ್ಸ್ ಮಾಲಕ ಸುಂದರ ಮತ್ತು ರಾಣಿ ದಂಪತಿ ಕಾರ್ಯಕ್ರಮವನ್ನು ಆಯೋಜಿಸಿದ್ದರು.