ಪುತ್ತೂರಿನಿಂದ 1,500ಕ್ಕೂ ಅಧಿಕ ಮಂದಿ ಭಾಗಿ
ಪುತ್ತೂರು:ಮರಾಟಿಗರ ಸಮಗ್ರ ಬಲವರ್ಧನೆ ಹಾಗೂ ಪ್ರಗತಿಗಾಗಿ ‘ಗದ್ದಿಗೆ’ ಕರಾವಳಿ ಮರಾಟಿ ಸಮಾವೇಶವು ನ.10ರಂದು ಮೂಡಬಿದರೆ ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ನಡೆಯಲಿದೆ. ಕಳೆದ 22 ವರ್ಷಗಳ ನಂತರ ನಡೆಯುವ ಈ ಸಮಾವೇಶದಲ್ಲಿ ಕರ್ನಾಟಕದ ದ.ಕ., ಉಡುಪಿ, ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು, ಕೇರಳದ ಕಾಸರಗೋಡುಗಳಲ್ಲಿರುವ ಮರಾಟಿ ಸಮುದಾಯದವರು ಒಟ್ಟು ಸೇರಿ ಈ ಸಮಾವೇಶ ಆಯೋಜಿಸಲಾಗಿದೆ ಎಂದು ಪುತ್ತೂರು ಮರಾಟಿ ಸಮಾಜ ಸೇವಾ ಸಂಘದ ಅಧ್ಯಕ್ಷರು, ಸಮಾವೇಶದ ಸ್ಮರಣ ಸಂಚಿಕೆಯ ಪ್ರಧಾನ ಸಂಪಾದಕರಾಗಿರುವ ಎನ್ ದುಗ್ಗಪ್ಪ ನಾಯ್ಕ ಹೇಳಿದರು.
ಅ.28ರಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿಕ್ಷಣ, ಸಂಘಟನೆ ಹಾಗೂ ಸ್ವಾಭಿಮಾನದ ಧ್ಯೇಯೋದ್ದೇಶವನ್ನು ಮುಂದಿಟ್ಟುಕೊಂಡು ಸಮಾವೇಶ ಆಯೋಜಿಸಲಾಗುತ್ತಿದೆ. ಸಮುದಾಯದ ಶೇ.80ರಷ್ಟು ಜನರು ಇಂದಿಗೂ ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಹಿಂದುಳಿದಿದ್ದು ಅನೇಕ ಸಮಸ್ಯೆ ಹಾಗೂ ಸವಾಲುಗಳನ್ನು ಎದುರಿಸುತ್ತಿದ್ದಾರೆ. ಈ ಸಮಸ್ಯೆಗಳ ಬಗ್ಗೆ ಚರ್ಚಿಸುವುದು ಹಾಗೂ ಸಮುದಾಯ ಸಂಸ್ಕೃತಿ, ಆಚರಣೆಗಳನ್ನು ಅನಾವರಣಗೊಳಿಸುವುದೇ ಸಮಾವೇಶದ ಉದ್ದೇಶವಾಗಿದೆ. ಸಮಾವೇಶದಲ್ಲಿ ಮರಾಟಿಗರ ವಿವಿಧ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ವಿಚಾರಗಳನ್ನು ಪ್ರತಿಬಿಂಬಿಸುವ ಪ್ರಮುಖ ಗೋಷ್ಠಿಗಳು ನಡೆಯಲಿದೆ ಎಂದರು.
ಸಮಾವೇಶವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಉದ್ಘಾಟಿಸಲಿದ್ದಾರೆ. ಸಮಾವೇಶದ ಗದ್ದಿಗೆ ಸ್ಮರಣ ಸಂಚಿಕೆಯನ್ನು ಮೂಡಬಿದರೆ ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಬಿಡುಗಡೆಗೊಳಿಸಲಿದ್ದಾರೆ. ವಿಧಾನ ಸಭಾ ಸ್ಪೀಕರ್ ಯು.ಟಿ ಖಾದರ್, ಸಮಾಜ ಕಲ್ಯಾಣ ಇಲಾಖೆಯ ಸಚಿವ ಹೆಚ್.ಸಿ ಮಹದೇವಪ್ಪ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಮೂಡಬಿದರೆ ಶಾಸಕ ಉಮಾನಾಥ ಕೋಟ್ಯಾನ್, ವಿಧಾನ ಪರಿಷತ್ ಸದಸ್ಯ ಐವನ್ ಡಿ ಸೋಜ, ಮಾಜಿ ಸಚಿವರಾದ ಅಭಯಚಂದ್ರ ಜೈನ್, ವಿನಯ ಕುಮಾರ್ ಸೊರಕೆ, ಉದ್ಯಮಿ ಶಶಿಧರ್ ಶೆಟ್ಟಿ ಬರೋಡಾ ಸೇರಿದಂತೆ ಹಲವು ಮಂದಿ ಗಣ್ಯರು ಅತಿಥಿಗಳಾಗಿ ಆಗಮಿಸಲಿದ್ದಾರೆ. ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಅಮೈ ಮಹಾಲಿಂಗ ನಾಯ್ಕರವರಿಗೆ ಸನ್ಮಾನ ನಡೆಯಲಿದೆ. ಮರಾಟಿಗರ ಅಹವಾಲುಗಳನ್ನು ಸಮಾವೇಶದ ಗೌರವಾಧ್ಯಕ್ಷ ಡಾ| ಕೆ.ಸುಂದರ ನಾಯ್ಕ ಮುಖ್ಯಮಂತ್ರಿಗಳಿಗೆ ಸಲ್ಲಿಸಲಿದ್ದಾರೆ. ಕಾರ್ಯಕ್ರಮದಲ್ಲಿ ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿದ ಮರಾಟಿ ಸಮುದಾಯದ ಸಾಧಕರನ್ನು ಗೌರವಿಸಲಾಗುವುದು.
ನ.9ರಂದು ಮರಾಟಿಗರಿಗಾಗಿ ಉದ್ಯೋಗ ಮೇಳ:
ಸಮಾವೇಶದಲ್ಲಿ ಕರ್ನಾಟಕ ಮರಾಟಿ ಸಂಘ ಬೆಂಗಳೂರು ಇವರ ಸಹಕಾರದಿಂದ ಮರಾಟಿಗರಿಗಾಗಿಯೇ ಉದ್ಯೋಗ ಮೇಳವನ್ನು ಹಮ್ಮಿಕೊಳ್ಳಲಾಗಿದೆ. ಸುಮಾರು 30ಕ್ಕೂ ಅಧಿಕ ಕಂಪನಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸಲಿದೆ. ಸುಮಾರು 1500ಕ್ಕೂ ಅಧಿಕ ಮಂದಿ ಮರಾಟಿ ಉದ್ಯೋಗಾಕಾಂಕ್ಷಿಗಳು ಈಗಾಗಲೇ ಹೆಸರು ನೋಂದಾಯಿಸಿಕೊಂಡಿದ್ದಾರೆ. ಸಮಾವೇಶಕ್ಕೆ ದೂರದ ಊರುಗಳಿಂದ ಆಗಮಿಸುವವರಿಗೆ ವಸತಿ, ಊಟ, ಉಪಹಾರದ ಸೌಲಭ್ಯಗಳನ್ನು ಕಲ್ಪಿಸಲಾಗುವುದು.
ಗೋಷ್ಠಿಗಳು:
ಸಮಾವೇಶದಲ್ಲಿ 4 ಗೋಷ್ಠಿಗಳು ನಡೆಯಲಿದೆ. ಶಿಕ್ಷಣ ಮತ್ತು ಯುವಜನತೆ ಎಂಬ ವಿಷಯದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ, ಮರಾಟಿಗರ ಆಚಾರ, ವಿಚಾರ ಮತ್ತು ಸಂಸ್ಕಾರ ಎಂಬ ವಿಷಯದಲ್ಲಿ ಪುತ್ತೂರಿನ ನೋಟರಿ ನ್ಯಾಯವಾದಿ ಮಂಜುನಾಥ ಎನ್. ಎಸ್., ಮರಾಟಿ ಭಾಷೆ ಉಳಿಸಿ, ಬೆಳೆಸುವ ವಿಷಯದಲ್ಲಿ ಶಂಕರನಾರಾಯಣದ ದೈಹಿಕ ಶಿಕ್ಷಣ ಶಿಕ್ಷಕಿ ರತಿ ಪ್ರಭಾಕರ ನಾಯ್ಕ, ಮರಾಟಿಗರ ಸಮಸ್ಯೆ ಮತ್ತು ಸವಾಲುಗಳ ಬಗ್ಗೆ ಹೈಕೋಟ್ ನ್ಯಾಯವಾದಿ ಪ್ರವೀಣ್ ಕುಮಾರ್ ಮುಗುಳಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಗೋಷ್ಠಿ ನಡೆಸಿಕೊಡಲಿದ್ದಾರೆ.
ಸಂಜೆ ನಡೆಯುವ ಸಮಾವೇಶದಲ್ಲಿ ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ, ಮಂಗಳೂರು ಸಂಸದ ಕ್ಯಾ.ಬ್ರಿಜೇಶ್ ಚೌಟ, ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ, ಕೆನರಾ ಬ್ಯಾಂಕ್ ಜಿ.ಎಂ ರಾಮ ನಾಯ್ಕ, ದ.ಕ ಮತ್ತು ಉಡುಪಿ ಜಿಲ್ಲೆಯ ಎಲ್ಲಾ ಶಾಸಕರು ಹಾಗೂ ಮುಖಂಡರು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.
ಜಮ್ಮು-ಕಾಶ್ಮೀರ ಸರಕಾರದ ಪ್ರಧಾನ ಕಾರ್ಯದರ್ಶಿಯಾಗಿರುವ, ಸಮಾವೇಶದ ಅಧ್ಯಕ್ಷರೂ ಆಗಿರುವ ಉಡುಪಿಯ ಹೆಚ್. ರಾಜೇಶ್ ಪ್ರಸಾದ್ ಅಧ್ಯಕ್ಷತೆ ವಹಿಸಲಿದ್ದಾರೆ. ಸಮಾವೇಶಕ್ಕೆ ಸಂಬಂಧಿಸಿದಂತೆ 33 ವಿವಿಧ ಉಪ ಸಮಿತಿಗಳನ್ನು ರಚಿಸಿಕೊಂಡು ಎಲ್ಲಾ ಸಿದ್ದತೆಗಳನ್ನು ನಡೆಸಲಾಗುತ್ತಿದೆ.
ಪುತ್ತೂರಿನಿಂದ 15೦೦ ಮಂದಿ:
ಕರಾವಳಿ ಮರಾಟಿ ಸಮಾವೇಶ ಗದ್ದಿಗೆಯಲ್ಲಿ ಸುಮಾರು 15,೦೦೦ ಮಂದಿ ಮರಾಟಿಗರು ಭಾಗವಹಿಸಲಿದ್ದಾರೆ. ಪುತ್ತೂರಿನಿಂದ 15೦೦ಕ್ಕೂ ಅಧಿಕ ಮಂದಿ ಮರಾಟಿ ಬಾಂಧವರು ಭಾಗವಹಿಸಲಿದ್ದಾರೆ. ಸಮಾವೇಶದಲ್ಲಿ ಭಾಗವಹಿಸುವವರಿಗೆ ವಾಹನದ ಸೌಲಭ್ಯವನ್ನು ಒದಗಿಸಲಾಗುವುದು.
ಸಮಾವೇಶದ ಬಗ್ಗೆ ಮರಾಟಿ ಸಮಾಜ ಸೇವಾ ಸಂಘದಿಂದ ಮಹಿಳಾ ವೇದಿಕೆ, ಯುವ ವೇದಿಕೆಯ ಸಹಕಾರದಲ್ಲಿ ಪುತ್ತೂರು ತಾಲೂಕಿನಾದ್ಯಂತ ವ್ಯಾಪಕ ಪ್ರಚಾರ ನೀಡುತ್ತಿದೆ. ಸಂಘದ ಆಶ್ರಯದಲ್ಲಿರುವ 13 ಗ್ರಾಮ ಸಮಿತಿಗಳ ಸಭೆ ನಡೆಸಿ ಸಮಾವೇಶದ ಬಗ್ಗೆ ಮಾಹಿತಿ ನೀಡಲಾಗಿದೆ. ಮರಾಟಿ ಬಾಂಧವರ ಪ್ರತಿ ಮನೆಗಳಿಗೂ ಆಮಂತ್ರಣ ವಿತರಿಸಲಾಗಿದೆ. ಸಮಾವೇಶದಲ್ಲಿ ಬಿಡುಗಡೆಗೊಳ್ಳಲಿರುವ ಗದ್ದಿಗೆ ಸ್ಮರಣ ಸಂಚಿಕೆ ಪ್ರಧಾನ ಸಂಪಾದಕರಾಗಿ ಮರಾಟಿ ಸಮಾಜ ಸೇವಾ ಸಂಘದ ಅಧ್ಯಕ್ಷರು, ವಿಶ್ರಾಂತ ಪ್ರಾಂಶುಪಾಲರಾಗಿರುವ ಎನ್.ದುಗ್ಗಪ್ಪ ನಾಯ್ಕ, ಸಂಘದ ನಿಕಟಪೂರ್ವ ಅಧ್ಯಕ್ಷರು, ನ್ಯಾಯವಾದಿ ಮಂಜುನಾಥ ಎನ್.ಎಸ್ ಗೋಷ್ಠಿಯಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ ಸಮಾವೇಶದ ಗೌರವ ಸಲಹೆಗಾರರಾಗಿ ಸಂಘದ ಮಾಜಿ ಅಧ್ಯಕ್ಷರು, ಜಿ.ಪಂ ನಿವೃತ್ತ ಮುಖ್ಯಕಾರ್ಯನಿರ್ವಹಣಾಧಿಕಾರಿಯಾಗಿರುವ ಸುಂದರ ನಾಯ್ಕ ಕರ್ಕುಂಜ, ಸನ್ಮಾನ ಸಮಿತಿ ಅಧ್ಯಕ್ಷರಾಗಿ ರಾಮಚಂದ್ರ ನಾಯ್ಕ ಕೇಪುಳು, ಸ್ಮರಣ ಸಂಚಿಕೆ ಸದಸ್ಯರಾಗಿ ಮಹಾಲಿಂಗ ನಾಯ್ಕ ನರಿಮೊಗರು ಸೇವೆ ಸಲ್ಲಿಸುತ್ತಿದ್ದಾರೆ ಎಂದು ಅವರು ತಿಳಿಸಿದರು.
ಸಂಘದ ನಿಕಟಪೂರ್ವ ಅಧ್ಯಕ್ಷರು, ಸಮಾವೇಶದ ಪುತ್ತೂರು ತಾಲೂಕು ಸಂಚಾಲಕರಾಗಿರುವ ಮಂಜುನಾಥ ಎನ್.ಎಸ್., ಸಂಘದ ಮಾಜಿ ಅಧ್ಯಕ್ಷ ಮಹಾಲಿಂಗ ನಾಯ್ಕ, ಮಹಿಳಾ ವೇದಿಕೆ ಅಧ್ಯಕ್ಷೆ ಮೀನಾಕ್ಷಿ ಮಂಜುನಾಥ, ಸಂಘದ ಮಾಜಿ ಅಧ್ಯಕ್ಷರು ಸಮಾವೇಶದ ಗೌರವ ಸಲಹೆಗಾರರಾಗಿರುವ ಸುಂದರ ನಾಯ್ಕ ಕರ್ಕುಂಜ, ಸಂಘದ ಖಜಾಂಚಿ ಮೋಹನ ನಾಯ್ಕ ಹಾಗೂ ನಿಕಟಪೂರ್ವ ಕಾರ್ಯದರ್ಶಿ ಅಶೋಕ್ ಬಲ್ನಾಡು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.