ಸ್ಯಾಕ್ಸೋಫೋನ್ ಕಲಾವಿದ ವೇಣುಗೋಪಾಲ್‌ರವರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ

0

ಪುತ್ತೂರು: ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಜಿಲ್ಲೆಯ ಸಾಧಕರಿಗೆ ನೀಡುವ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಜಿಲ್ಲೆಯ ಹೆಸರಾಂತ ಸ್ಯಾಕ್ಸೋಫೋನ್ ಕಲಾವಿದರಲ್ಲಿ ಒಬ್ಬರಾಗಿರುವ ಎಂ.ವೇಣುಗೋಪಾಲ್ ಪುತ್ತೂರು ಇವರು ಭಾಜನರಾಗಿದ್ದಾರೆ. 7ನೇ ತರಗತಿಯಲ್ಲಿರುವಾಗಲೇ ಸ್ಯಾಕ್ಸೋಫೋನ್ ಕಛೇರಿ ನೀಡಲು ಪ್ರಾರಂಭಿಸಿದ ಇವರು ಪ್ರತಿ ವರುಷವು ಪುತ್ತೂರು
ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರಾ ವಿಷು ದಿವಸದ ಉತ್ಸವದಂದು ಸ್ಯಾಕ್ಸೋಫೋನ್ ಕಲಾಸೇವೆ ನೀಡುತ್ತಿದ್ದಾರೆ.

ಬಲ್ನಾಡು ಶ್ರೀ ಉಳ್ಳಾಲ್ತಿ ದೈವಸ್ಥಾನ, ಕುಂಟ್ಯಾನ ,ಶ್ರೀ ಸದಾಶಿವ ದೇವಸ್ಥಾನ, ದೇಂತಡ್ಕ ಶ್ರೀವನದುರ್ಗಾ ದೇವಸ್ಥಾನ, ಕುಂಜೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಪಲ್ಲತ್ತಡ್ಕ ಶ್ರೀ ಹೊಸಮ್ಮ ದೈವಸ್ಥಾನ, ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ, ಬೊಳುವಾರು ಶ್ರೀ ದುರ್ಗಾಪರಮೇಶ್ವರಿ – ಮಲರಾಯ ದೈವಸ್ಥಾನ, ಆತೂರು ಶ್ರೀ ಸದಾಶಿವ ದೇವಸ್ಥಾನ, ಕುಕ್ಕಿನಡ್ಕ
ಶ್ರೀ ಸುಬ್ರಾಯ ದೇವಸ್ಥಾನ, ಬೈಲಾಡಿ ಶ್ರೀ ಶಾಸ್ತಾರ ದೇವಸ್ಥಾನ, ಮರೀಲು ಶ್ರೀಪಂಚಮುಖಿ ಗಾಯತ್ರಿ ಗಣಪತಿ ಆಂಜನೇಯ ಕ್ಷೇತ್ರ, ನಾವೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನ, ಬನ್ನೂರು ಶಿವ ಪಾರ್ವತಿ ಭಜನಾ ಮಂದಿರ, ಪದಾಳ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ, ಕುರಿಯ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನ, ನೆಟ್ಟಣಿಗೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಜಾತ್ರಾ ಉತ್ಸವದಲ್ಲಿ, ಶ್ರೀ ದೇವತಾ ಸಮಿತಿ ವತಿಯಿಂದ ನಡೆಯುವ ಶ್ರೀ ಮಹಾಗಣೇಶೋತ್ಸವ ಮತ್ತು ಹಲವಾರು ದೇವಸ್ಥಾನ ಮತ್ತು ದೈವಸ್ಥಾನಗಳಲ್ಲಿ ಕಲಾ ಸೇವೆ ಮಾಡುತ್ತಿದ್ದಾರೆ.


ಕಲೆಯೊಂದಿಗೆ ಶ್ರೀಮಹಾ ರೂಫಿಂಗ್ ಎಂಬ ಸ್ವಂತ ಉದ್ಯಮವನ್ನು ಬೊಳುವಾರಿನಲ್ಲಿ ನಡೆಸುತ್ತಿದ್ದಾರೆ. ಆರಂಭದಲ್ಲಿ ಸ್ಯಾಕ್ಸೋಫೋನ್ ವಾದನವನ್ನು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವಿದ್ವಾನ್ ಪಿ.ಕೆ ಗಣೇಶ್ ಇವರಿಂದ ಅಭ್ಯಸಿಸಿರುತ್ತಾರೆ. ನಂತರ ವಿದ್ವಾನ್ ಕಾಂಚನ ಈಶ್ವರ ಭಟ್ (ಸುನಾದ ಸಂಗೀತ ಕಲಾಶಾಲೆಯ ಗುರುಗಳು) ಇವರ ಬಳಿ ಕರ್ನಾಟಕ ಶಾಸ್ತ್ರೀಯ ವಾದ್ಯ ಸಂಗೀತವನ್ನು ಅಭ್ಯಾಸ ಮಾಡುತ್ತಿದ್ದಾರೆ.


ದಕ್ಷಿಣ ಕನ್ನಡದ ಗಂಡುಕಲೆ ಯಕ್ಷಗಾನದಲ್ಲಿ ಆಸಕ್ತಿ ಇದ್ದ ಇವರು ದಿ. ಶ್ರೀಧರ ಭಂಡಾರಿ ಪುತ್ತೂರು ಇವರ ಶಿಷ್ಯರೂ ಹೌದು. ಕೊರೋನಾ ಸಂದರ್ಭದಲ್ಲಿ ಕೊರೋನಾ ವಾರಿಯರ್ಸ್‌ಗಳಿಗೆ ಕೃತಜ್ಞತೆ ಸಲ್ಲುವ ವಂದೇಮಾತರಂ ಎಂಬ ಕವರ್ ಸಾಂಗ್ ಮಾಡಿದ್ದಾರೆ. ಹಾಗೂ ಇನ್ನೂ ಕೆಲವಾರು ಕವರ್ ಸಾಂಗ್‌ಗಳಿಗೆ ಸ್ಯಾಕ್ಸೋಫೋನ್ ನುಡಿಸಿದ್ದಾರೆ. ಅಂತೆಯೇ ನಮ್ಮ ಕುಡ್ಲ, ಡೈಜಿವರ್ಲ್ಡ್, ಕಹಳೆ ನ್ಯೂಸ್, ಸುದ್ದಿ ಮುಂತಾದ ಟಿ.ವಿ.ಚಾನಲ್‌ಗಳಲ್ಲಿ ತಮ್ಮ ಕಛೇರಿಗಳನ್ನು ನೀಡಿದ್ದಾರೆ. ಹಾಗೂ ಮಂಗಳೂರು ಆಕಾಶವಾಣಿಯ ಯುವವಾಣಿ ಕಾರ್ಯಕ್ರಮದಲ್ಲಿ ಸಂದರ್ಶನ ನೀಡಿದ್ದಾರೆ.


ಕರ್ನಾಟಕ ಶಾಸ್ತ್ರೀಯ ವಾದ್ಯ ಸಂಗೀತ ಸೀನಿಯರ್ ಪರೀಕ್ಷೆಯಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ. ತಮ್ಮ ಪ್ರಾಥಮಿಕ ಶಿಕ್ಷಣವನ್ನು ಕೃಷ್ಣನಗರ ಶಾಲೆ ಪುತ್ತೂರು, ಪ್ರೌಢಶಾಲಾ ಶಿಕ್ಷಣವನ್ನು ಸರಕಾರಿ ಜೂನಿಯರ್ ಕಾಲೇಜು ಕೊಂಬೆಟ್ಟು, ಪುತ್ತೂರು ಮತ್ತು ಪದವಿಯನ್ನು ವಿವೇಕಾನಂದ ಮಹಾವಿದ್ಯಾಲಯ ನೆಹರುನಗರ ಪುತ್ತೂರು ಇಲ್ಲಿ ಮಾಡಿರುತ್ತಾರೆ.
ಇವರ ತಂದೆ ಉಮೇಶ್ ದೇವಾಡಿಗ(ಸ್ಯಾಕ್ಸೋಫೋನ್ ಮತ್ತು ಜಾನಪದ ನಾಗಸ್ವರ ಕಲಾವಿದರು) ತಾಯಿ ಸರಸ್ವತಿ, ಪತ್ನಿ ಹರ್ಷಿತ ದೇವಾಡಿಗ ಮತ್ತು ಮಗಳು ತಿಯಾಂಶಿ. ವಿ. ದೇವಾಡಿಗ ಇವರೊಂದಿಗೆ ಬನ್ನೂರು ಮೇಲ್ಮಜಲಿನಲ್ಲಿರುವ ಶ್ರೀ ಮಹಾ ನಿಲಯದಲ್ಲಿ ವಾಸವಾಗಿದ್ದಾರೆ.

ಸ್ಯಾಕ್ಸೋಫೋನ್ ಕಛೇರಿ ನಡೆಸಿ ಸ್ವೀಕರಿಸಿದ ಸನ್ಮಾನಗಳು :
ಪುತ್ತೂರು ತಾಲೂಕು ಎರಡನೇ ಮಕ್ಕಳ ಸಾಹಿತ್ಯ ಸಮ್ಮೇಳನದಲ್ಲಿ , ಕನ್ನಡ ಸಂಸ್ಕೃತಿ ಇಲಾಖೆ ಮಡಿಕೇರಿ ಸಾಂಸ್ಕೃತಿಕ ಸೌರಭ ಶಾಸ್ತ್ರೀಯ ವಾದ್ಯ- ಸಂಗೀತ ಕಛೇರಿ, ಸ್ಪೂರ್ತಿ ಯುವಕ-ಯುವತಿ ಮಂಡಲ(ರಿ) ಬನ್ನೂರು, ಪುತ್ತೂರು ತಾಲೂಕು ಯುವಜನ ಒಕ್ಕೂಟ, ಕನ್ನಡ ಸಾಹಿತ್ಯ ಸಂಭ್ರಮದಲ್ಲಿ, ಪಾಂಚಜನ್ಯದಲ್ಲಿ ,ಕರ್ನಾಟಕ ರಾಜ್ಯ ದೇವಾಡಿಗರ ಸಂಘ(ರಿ) ಮಂಗಳೂರಿನಲ್ಲಿ, ಶ್ರೀ ಏಕನಾಥೇಶ್ವರಿ ದೇವಸ್ಥಾನ ಬಾರ್ಕೂರು, ಕಲಾಶ್ರಯ ದಾಸಕೋಡಿ ಕಲೋತ್ಸವದಲ್ಲಿ, ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು, ಕದ್ರಿ ಸಂಗೀತ ಸೌರಭ ದಲ್ಲಿ , ರೋಟರಿ ಕ್ಲಬ್ ಪುತ್ತೂರು ಇನ್ನೂ ಹಲವಾರು ಕಡೆ ಸ್ಯಾಕ್ಸೋಫೋನ್ ಕಛೇರಿ ನಡೆಸಿ ಸನ್ಮಾನಗಳನ್ನು ಪಡೆದಿರುತ್ತಾರೆ.

LEAVE A REPLY

Please enter your comment!
Please enter your name here