ಪುತ್ತೂರು: ಮಂಗಳೂರು ವಿವಿಯ ಅಡಿಯಲ್ಲಿ ಬರುವ ಸರ್ಕಾರಿ ಕಾಲೇಜುಗಳಲ್ಲಿ ಇರುವಂತಹ ಸ್ನಾತಕೋತ್ತರ ಪದವಿಯಾದ ದ್ವಿತೀಯ ಎಂ ಎಸ್ ಡಬ್ಲ್ಯೂ ಸ್ಪೆಷಲೈಝೇಷನ್ ವಿಷಯಗಳ ಆಯ್ಕೆಗೆ ಅವಕಾಶ ನಿರಾಕರಣೆ ಮಾಡುತ್ತಿದ್ದು ಇದರ ಕುರಿತು ಉಡುಪಿ ಹಾಗೂ ದ ಕ ಜಿಲ್ಲೆಯ ವಿದ್ಯಾರ್ಥಿಗಳು ಪುತ್ತೂರು ಶಾಸಕ ಅಶೋಕ್ ರೈಯವರ ಬಳಿ ಸಮಸ್ಯೆ ಹೇಳಿಕೊಂಡಿದ್ದು ಬೆಂಗಳೂರಿನ ಶಿಕ್ಷಣ ಆಯುಕ್ತರಿಗೆ ದೂರವಾಣಿ ಕರೆ ಮಾಡಿ ಸಮಸ್ಯೆ ಇತ್ಯರ್ಥಪಡಿಸುವ ಮೂಲಕ ನೂರಾರು ವಿದ್ಯಾರ್ಥಿಗಳಿಗೆ ನೆರವಾಗಿದ್ದಾರೆ.
ವಿದ್ಯಾರ್ಥಿಗಳ ದೂರಿನಲ್ಲೇನಿತ್ತು….
ಮಂಗಳೂರು ವಿವಿಯ ವ್ಯಾಪ್ತಿಯ ಬೇರೆ ಬೇರೆ ಸರ್ಕಾರಿ ಕಾಲೇಜುಗಳಲ್ಲಿ ಎಂ.ಎಸ್.ಡಬ್ಲೂ. ಸ್ನಾತಕೋತರ ಪದವಿಯನ್ನು ಮಾಡುತ್ತಿದ್ದು ಪ್ರಥಮ ವರ್ಷದ ಎಂ ಎಸ್ ಡಬ್ಲ್ಯೂವನ್ನು ಮುಗಿಸಿರುತ್ತೇವೆ. ಪ್ರಸ್ತುತ ದ್ವಿತೀಯ ಎಂ ಎಸ್ ಡಬ್ಲ್ಯೂ ತರಗತಿಗಳು ಆರಂಭಗೊಂಡಿದ್ದು ಸ್ನಾತಕೋತರ ಸಮಾಜಕಾರ್ಯದ ಬಹುಮುಖ್ಯ ಆಯ್ಕೆಗಳಾದ ಸ್ಪೆಷಲೈಝೇಷನ್ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳಲು ನಮಗೆ ಅವಕಾಶ ನೀಡುತ್ತಿಲ್ಲ . ಎಮ್ ಎಸ್ ಡಬ್ಲ್ಯೂಕೋರ್ಸ್ ನಲ್ಲಿ ಕಮ್ಯೂನಿಟಿ ಡೆವಲಪ್ಮೆಂಟ್ , ಹ್ಯೂಮನ್ ರಿಸೋರ್ಸ್ ಮ್ಯಾನೇಜ್ಮೆಂಟ್ ಮತ್ತು ಮೆಡಿಕಲ್ ಸೈಕಾಟ್ರಿಕ್ ಸೋಶಿಯಲ್ ವರ್ಕ್ ಎನ್ನುವ ಮೂರು ವಿಭಿನ್ನವಿಷಯ ಆಧಾರಿತ ಆಯ್ಕೆಗಳಿದ್ದು ಯಾವುದೇ ವಿದ್ಯಾರ್ಥಿ ಅವರ ಆಸಕ್ತಿಯ ಯಾವುದೇ ವಿಷಯವನ್ನು ಆಯ್ಕೆ ಮಾಡಿಕೊಳ್ಳಬಹುದು ಎಂಬುದನ್ನು ಮಂಗಳೂರು ವಿವಿಯ ಎಂ ಎಸ್ ಡಬ್ಲ್ಯೂ ಪಠ್ಯಕ್ರಮದಲ್ಲಿ ತಿಳಿಸಲಾಗಿರುತ್ತದೆ. ಹೀಗಿದ್ದರೂ ಕೂಡ, ನಮ್ಮ ಆಸಕ್ತಿಯ ವಿಷಯವನ್ನು ಓದಲು ನಮಗೆ ಅವಕಾಶ ನೀಡುತ್ತಿಲ್ಲ ಎನ್ನುವಂತಹ ವಿಚಾರ ನಮಗೆ ಬಹಳ ಬೇಸರವನ್ನು ಉಂಟುಮಾಡಿದೆ. ಈ ಬಗ್ಗೆ ಆಯಾ ಕಾಲೇಜಿನ ಪ್ರಾಂಶುಪಾಲರಲ್ಲಿ ವಿನಂತಿಸಿದಾಗ ಒಂದು ಸ್ಪೆಷಲೈಝೇಷನ್ ವಿಷಯವನ್ನು ನೀಡಬೇಕಾದರೆ ಕನಿಷ್ಠ 15 ವಿದ್ಯಾರ್ಥಿಗಳು ಇರಬೇಕು ಎನ್ನುವುದಾಗಿ ಕಾಲೇಜು ಶಿಕ್ಷಣ ಇಲಾಖೆಯ ಮಂಗಳೂರು ಪ್ರಾದೇಶಿಕ ಕಚೇರಿ ಇದರ ಜಂಟಿ ನಿರ್ದೇಶಕರ ಸೂಚನೆ ಇದೆ, ಆದುದರಿಂದ ಸ್ಪೆಷಲೈಝೇಷನ್ ನೀಡುವುದಕ್ಕೆ ಸಾಧ್ಯವಿಲ್ಲ ಎಂದು ತಿಳಿಸಿರುತ್ತಾರೆ. ಅದೂ ಅಲ್ಲದೆ ಕೇವಲ ಒಂದೇ ಸ್ಪೆಷಲೈಝೇಷನ್ ವಿಷಯವನ್ನು ಒತ್ತಾಯ ಪೂರಕವಾಗಿ ನಮ್ಮ ಮೇಲೆ ಹೇರಲಾಗುತ್ತಿದೆ. ಈ ರೀತಿ ಮಾಡಿದರೆ ವಿದ್ಯಾರ್ಥಿಗಳಿಗೆ ಬೇರೆ ಬೇರೆ ಕ್ಷೇತ್ರದಲ್ಲಿರುವ ಉದ್ಯೋಗಾವಕಾಶಗಳನ್ನು ಕೂಡ ತಡೆದಂತಾಗುತ್ತದೆ. ಅದೂ ಅಲ್ಲದೆ ಕರ್ನಾಟಕ ರಾಜ್ಯದ ಯಾವುದೇ ವಿಶ್ವವಿದ್ಯಾನಿಲಯಕ್ಕೆ ಸಂಬಂಧಪಟ್ಟ ಸರ್ಕಾರಿ ಕಾಲೇಜುಗಳಲ್ಲಿ ಸ್ಪೆಷಲೈಝೇಷನ್ ಆಯ್ಕೆಯಲ್ಲಿ ಯಾವುದೇ ಸಂಖ್ಯೆಯ ಮಿತಿ ಇಲ್ಲ ಎನುವುದನ್ನು ತಮ್ಮ ಗಮನಕ್ಕೆ ತರಬಯಸುತ್ತೇವೆ. ಹಾಗೂ ಮಂಗಳೂರು ವಿವಿಗೆ ಸಂಬಂಧಪಟ್ಟಂತಹ ಸರ್ಕಾರಿ ಕಾಲೇಜುಗಳಲ್ಲಿ ಸ್ಪೆಷಲೈಝೇಷನ್ ಆಯ್ಕೆ ವಿಚಾರದಲ್ಲಿ ಇಲ್ಲಿಯವರೆಗೆ ಇರದ ಈ ಸಂಖ್ಯೆಯ ಮಿತಿಯ ನಿಯಮವನ್ನು ಈ ಬಾರಿ ನಮ್ಮ ಮೇಲೆ ಹೇರಲಾಗುತ್ತಿದೆ. ಈಗಾಗಲೇ ಪಥಮ ವರ್ಷವನ್ನು ಮುಗಿಸಿ ದ್ವಿತೀಯ ವರ್ಷದ ಆರಂಭದಲ್ಲಿ ಈ ರೀತಿಯಾಗಿ ಹೇಳಿದರೆ, ನಮ್ಮ ಪರಿಸ್ಥಿತಿ ಏನು , ನಮ್ಮ ಹಿರಿಯ ವಿದ್ಯಾರ್ಥಿಗಳಿಗೆ ಇದ್ದಂತಹ ಆಯ್ಕೆಯ ಹಕ್ಕು ಇದೀಗ ನಮಗೆ ನೀಡದಿರುವುದು ಎಷ್ಟರ ಮಟ್ಟಿಗೆ ನ್ಯಾಯ? ಅದೂ ಅಲ್ಲದೆ ಬಡ ವಿದ್ಯಾರ್ಥಿಗಳಾದ ನಾವು ಸ್ನಾತಕೋತರ ಪದವಿಯಲ್ಲಿ ನಮ್ಮ ಆಸಕ್ತಿಯ ವಿಷಯವನ್ನು ಓದಲು ಸರ್ಕಾರಿ ಕಾಲೇಜುಗಳನ್ನು ಆಯ್ಕೆ ಮಾಡಿದ್ದೇ ತಪ್ಪೇ ಎನ್ನುವಂತಹ ಗೊಂದಲ ಸೃಷ್ಟಿಯಾಗುತ್ತಿದೆ. ಆದುದರಿಂದ ತಾವು ನಮ್ಮ ಆಯ್ಕೆಯ ಸ್ಪೆಷಲೈಝೇಷನ್ ವಿಷಯವನ್ನು ಓದಲು ನಮಗೆ ಅವಕಾಶ ಮಾಡಿಕೊಡಬೇಕಾಗಿ ಹಾಗೂ ನಮಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಶೀಘ್ರವಾಗಿ ಪರಿಹಾರ ನೀಡಬೇಕಾಗಿ ಈ ಮೂಲಕ ವಿನಂತಿಸಿಕೊಳ್ಳುತ್ತಿದ್ದೇವೆ.
ದ.ಕ ಹಾಗೂ ಉಡುಪಿ ಜಿಲ್ಲೆಯ ಎಂಎಸ್‌ಡಬ್ಲ್ಯು ದ್ವಿತೀಯ ಸ್ನಾತಕ್ಕೋತ್ತರ ಪದವಿ ವಿದ್ಯಾರ್ಥಿಗಳ ನಿಯೋಗ ಕಲಿಕೆಯಲ್ಲಿ ಆಗುತ್ತಿರುವ ಸಮಸ್ಯೆಯನ್ನು ನನ್ನ ಗಮನಕ್ಕೆ ತಂದಿದ್ದರು. ಸ್ಪೆಷಲ್ ಸಬ್ಜೆಕ್ಟ್ ವಿಚಾರದಲ್ಲಿ ಇದ್ದ ಗೊಂದಲವನ್ನು ಪರಿಹರಿಸುವ ನಿಟ್ಟಿನಲ್ಲಿ ಬೆಂಗಳೂರಿನ ಶಿಕ್ಷಣ ಆಯುಕ್ತರಿಗೆ ಮನವರಿಕೆ ಮಾಡಿ ಒಬ್ಬನೇ ಒಬ್ಬ ವಿದ್ಯಾರ್ಥಿಗೆ ಈ ವಿಚಾರದಲ್ಲಿ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಮತ್ತು ವಿದ್ಯಾರ್ಥಿಗಳ ಇಷ್ಟದ ಕಲಿಕೆಗೂ ಅವಕಾಶ ನೀಡಬೇಕು ಎಂದು ಸೂಚನೆಯನ್ನು ನೀಡಿದ್ದೆ ಅದರಂತೆ ಶಿಕ್ಷಣ ಇಲಾಖೆ ಅವಕಾಶ ಕಲ್ಪಿಸಿದೆ, ಇದರಿಂದ ಎಲ್ಲಾ ವಿದ್ಯಾರ್ಥಿಗಳಿಗೂ ನೆರವು ನೀಡಿದ್ದೇನೆ.
ಅಶೋಕ್ ರೈ, ಶಾಸಕರು, ಪುತ್ತೂರು