ರಿಕ್ಷಾದಲ್ಲಿ ನಿಷೇಧಿತ ಎಂಡಿಎಂಎ ಮಾದಕ ವಸ್ತು ಸಾಗಾಟ ಪತ್ತೆ-ಆರೋಪಿಗೆ ಜಾಮೀನು

0

ಪುತ್ತೂರು: ರಿಕ್ಷಾವೊಂದರಲ್ಲಿ ನಿಷೇಧಿತ ಮಾದಕ ವಸ್ತು ಎಂಡಿಎಂಎ ಸಾಗಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಆರೋಪಿಯೋರ್ವನಿಗೆ ಪುತ್ತೂರಿನ ಐದನೇ ಹೆಚ್ಚುವರಿ ಸತ್ರ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ


9.08.2024 ರಂದು ಉಪ್ಪಿನಂಗಡಿ ಠಾಣಾ ಪೊಲೀಸ್ ಉಪ ನಿರೀಕ್ಷಕ ಅವಿನಾಶ್ ಹಾಗೂ ಸಿಬ್ಬಂದಿಗಳು ನೆಕ್ಕಿಲಾಡಿ ಎಂಬಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಬಂಟ್ವಾಳ ಕಡೆಯಿಂದ ಉಪ್ಪಿನಂಗಡಿ ಕಡೆಗೆ ಬರುತ್ತಿದ್ದ ರಿಕ್ಷಾವೊಂದನ್ನು ನಿಲ್ಲಿಸಲು ಸೂಚಿಸಿದಾಗ ರಿಕ್ಷಾ ಚಾಲಕನು ರಿಕ್ಷಾವನ್ನು ನಿಲ್ಲಿಸದೆ ಮುಂದಕ್ಕೆ ಚಲಾಯಿಸಿ ಸ್ವಲ್ಪ ದೂರ ರಿಕ್ಷಾವನ್ನು ನಿಲ್ಲಿಸಿ, ರಿಕ್ಷಾ ಚಾಲಕ ಹಾಗೂ ರಿಕ್ಷಾದಲ್ಲಿದ್ದ ಇನ್ನೋರ್ವ ಓಡಲು ಪ್ರಯತ್ನಿಸಿದಾಗ ಪೊಲೀಸರು ಅವರನ್ನು ಹಿಡಿದು ವಿಚಾರಣೆ ನಡೆಸಿದ್ದರು. ರಿಕ್ಷಾದಲ್ಲಿ ನಿಷೇಧಿತ ಎಂಡಿ ಎಂಎಯ ಮಾದಕ ವಸ್ತು ಸಾಗಾಟ ಮಾಡುತ್ತಿರುವುದಾಗಿ ಒಪ್ಪಿಕೊಂಡಿದ್ದು ಇದನ್ನು ಸಿನಾನ್ ಎಂಬಾತ ತಮಗೆ ನೀಡಿರುವುದಾಗಿ ರಿಕ್ಷಾ ಚಾಲಕ ಹಾಗು ರಿಕ್ಷಾದಲ್ಲಿದ್ದ ಇನ್ನೋರ್ವ ಆರೋಪಿ ತಿಳಿಸಿದ ಮೇರೆಗೆ ಪೊಲೀಸರು ರಿಕ್ಷಾದಲ್ಲಿದ್ದ 18 ಸಾವಿರ ರೂಪಾಯಿ ಮೌಲ್ಯದ 9.36 ಗ್ರಾಂ ನಿಷೇಧಿತ ಎಂ ಡಿ ಎಂ ಎ ಯನ್ನು ಹಾಗೂ ರಿಕ್ಷಾವನ್ನು ವಶಪಡಿಸಿಕೊಂಡು ಆರೋಪಿಗಳಿಬ್ಬರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಮೂರನೇ ಆರೋಪಿ ಸಿನಾನ್ ತಲೆಮಾರಿಸಿಕೊಂಡಿದ್ದು ಆತನನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿನಾನ್‌ಗೆ ಪುತ್ತೂರು ಜಿಲ್ಲಾ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಆರೋಪಿಯ ಪರವಾಗಿ ನ್ಯಾಯವಾದಿ ರಮ್ಲತ್‌ಎಂ ಶಾಂತಿನಗರ ರವರು ವಾದಿಸಿದ್ದರು.

LEAVE A REPLY

Please enter your comment!
Please enter your name here