ನಾವೆಲ್ಲ ಹಿಂದೂ, ಒಂದು ಹಾಗೂ ಬಂಧುವಾಗಬೇಕಿದೆ-ರವೀಂದ್ರ ರೈ
ಪುತ್ತೂರು; ನಮ್ಮೊಳಗಿನ ಜಾತಿ ಬೇಧ ಎಂಬ ಕತ್ತಲೆಯನ್ನು ಹೋಗಲಾಡಿಸಲು ತುಡರ್(ದೀಪ) ಹೆಸರಿನಲ್ಲಿ ಸಾಮರಸ್ಯದ ದೀಪವನ್ನು ಬೆಳಗಿಸಲಾಗುತ್ತದೆ. ನಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ, ಸಂಸ್ಕಾರ ಕಲಿಸಬೇಕು, ದುಶ್ಚಟಗಳಿಂದ ದೂರವಾಗಿ ವ್ಯಸನಮುಕ್ತ ಸಮಾಜ ನಿರ್ಮಾಣವಾಗಬೇಕು. ಆದ್ದರಿಂದ ನಾವೆಲ್ಲ ಹಿಂದೂ, ನಾವೆಲ್ಲ ಒಂದು ಜೊತೆಗೆ ನಾವೆಲ್ಲ ಬಂಧುವಾಗಿಸುವುದೇ ಈ ಕಾರ್ಯಕ್ರಮದ ಮಹಾನ್ ಪರಿಕಲ್ಪನೆಯಾಗಿದೆ ಎಂದು ಆರ್ಎಸ್ಎಸ್ ಸಾಮರಸ್ಯ ವಿಭಾಗದ ಪ್ರಾಂತ್ಯ ಪ್ರಮುಖ್ ದಕ್ಷ ಕನ್ಸ್ಟ್ರಕ್ಷನ್ನ ರವೀಂದ್ರ ರೈರವರು ಹೇಳಿದರು.
ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರ್ಎಸ್ಎಸ್) ಇದರ ಸಾಮರಸ್ಯ ಪುತ್ತೂರು ವಿಭಾಗದ ವತಿಯಿಂದ ಬೆಳಕಿನ ಹಬ್ಬ ದೀಪಾವಳಿ ಹಬ್ಬದ ಅಂಗವಾಗಿ ಪುತ್ತೂರು ತಾಲೂಕಿನ ವಿವಿಧೆಡೆ ಸಾಮಾಜಿಕ ಸಾಮರಸ್ಯ ಮೆರೆಸುವ ‘ತುಡರ್’ ಸಾಮರಸ್ಯದ ಜ್ಯೋತಿ ಕಾರ್ಯಕ್ರಮ ನಡೆಯುತ್ತಿದ್ದು, ನ.3 ರಂದು ಮೊಟ್ಟೆತ್ತಡ್ಕದ ಮಣ್ಣಾಪು ಶ್ರೀ ಕೊರಗಜ್ಜ ಮತ್ತು ಶ್ರೀ ಆದಿ ನಾಗಬ್ರಹ್ಮ ಮೊಗೇರ್ಕಳ ದೈವಸ್ಥಾನದಲ್ಲಿ ನಡೆದ ತುಡರ್ ಕಾರ್ಯಕ್ರಮದಲ್ಲಿ ಅವರು ದೀಪ ಬೆಳಗಿಸಿ ಕ್ಷೇತ್ರದ ಭಕ್ತರಿಗೆ ಹಸ್ತಾಂತರಿಸುವ ಮೂಲಕ ಮಾತನಾಡಿದರು.
ಜಾತಿ ಪದ್ದತಿ ಮನೆಯೊಳಗಿರಲಿ, ಕಂಪೌಂಡಿನಿಂದ ಹೊರ ನಾವೆಲ್ಲ ಒಂದೇ-ಡಾ.ಸುರೇಶ್ ಪುತ್ತೂರಾಯ:
ಮುಖ್ಯ ಅತಿಥಿ, ಮಹಾವೀರ ಆಸ್ಪತ್ರೆಯ ವೈದ್ಯ ಡಾ.ಸುರೇಶ್ ಪುತ್ತೂರಾಯ ಮಾತನಾಡಿ, ಸಾಮರಸ್ಯದ ಭೀಜ ವಾಸ್ತವವಾಗಿ ಶೇ.ನೂರು ಸಾಮಾಜಿಕ ಜೀವನದಲ್ಲಿ ಅಳವಡಿಕೆಯಾಗಿಲ್ಲ. ರಾಷ್ಟ್ರೀಯ ಸ್ವಯಂಸೇವಕ ಸಂಘಟನೆಯು ಹಮ್ಮಿಕೊಂಡ ಈ ತುಡರ್ ಕಾರ್ಯಕ್ರಮಕ್ಕೆ ನಾವೆಲ್ಲ ಕೈಜೋಡಿಸೋಣ. ಹಿಂದು ಸಮಾಜದಲ್ಲಿ ಬೇರು ಬಿಟ್ಟಿರುವ ಜಾತಿ ಪದ್ಧತಿ, ಅಸ್ಪರ್ಶ್ಯತೆಯನ್ನು ಹೋಗಲಾಡಿಸಲು ಹಿರಿಯರು ಪ್ರಯತ್ನ ಪಟ್ಟಿದ್ದರು. ಇದನ್ನೇ ಮುಂದುವರಿದ ಭಾಗವೆಂಬಂತೆ ನಾವೂ ಕೂಡ ಮಾಡಿ ತೋರಿಸಬೇಕಾಗಿದೆ. ಜಾತಿ ಪದ್ದತಿ ಏನಿದ್ದರೂ ಅದು ಮನೆಯೊಳಗೆ ಮಾತ್ರವಿರಲಿ. ಕಂಪೌಂಡಿನಿಂದ ಹೊರ ಬಂದ ಮೇಲೆ ನಾವೆಲ್ಲ ಒಂದೇ. ಬಲಿಷ್ಟ ಭಾರತ, ಹಿಂದೂ ರಾಷ್ಟ್ರ ಕಟ್ಟಲು ಈ ತುಡರ್ ಕಾರ್ಯಕ್ರಮ ಮುನ್ನುಡಿಯಾಗಲಿ ಎಂದರು.
ದೀಪವು ನಮ್ಮಲ್ಲಿನ ಮೂಡನಂಭಿಕೆಯನ್ನು ತೊಡೆದು ಹಾಕುವುದಾಗಿದೆ-ರವೀಂದ್ರ ಶೆಟ್ಟಿ ನುಳಿಯಾಲು:
ಅಧ್ಯಕ್ಷತೆ ವಹಿಸಿದ ಶ್ರೀ ಕೊರಗಜ್ಜ ಕ್ಷೇತ್ರದ ಗೌರವಾಧ್ಯಕ್ಷ ರವೀಂದ್ರ ಶೆಟ್ಟಿ ನುಳಿಯಾಲು ಮಾತನಾಡಿ, ಸಾಮರಸ್ಯದಲ್ಲಿ ಯಾವುದೇ ಜಾತಿ, ಮತ, ಧರ್ಮ ಬರಕೂಡದು. ದೀಪ ಉರಿಸುವ ಕಾರ್ಯಕ್ರಮವು ನಮ್ಮಲ್ಲಿನ ಮೂಡನಂಭಿಕೆಯನ್ನು ತೊಡೆದು ಹಾಕುವ ಕಾರ್ಯಕ್ರಮವಾಗಿದೆ. ಶ್ರೀ ಮಣ್ಣಾಪು ಕ್ಷೇತ್ರದ ಯುವಕರು ಹೃದಯಶ್ರೀಮಂತರು. ನಾವು ಯಾವುದೇ ಕಾರ್ಯಕ್ರಮ ಹಮ್ಮಿಕೊಂಡಾಗ ಅದು ಸಮಾಜಕ್ಕೆ ಒಳ್ಳೆಯ ಸಂದೇಶವನ್ನು ಕೊಡುವಂತಾಗಬೇಕು. ಶ್ರೀ ಕ್ಷೇತ್ರದ ಅಭಿವೃದ್ಧಿ ಹಿಂದೆ ಕೊರಗಜ್ಜರ ಆಶೀರ್ವಾದ ಖಂಡಿತಾ ಇದೆ ಎಂದರು.
ಸಾಮರಸ್ಯದ ದೀಪ ಪ್ರತಿ ಮನೆಯಲ್ಲಿ ಬೆಳಗಬೇಕು-ದಾಮೋದರ್ ಪಾಟಾಳಿ:
ವಿಶ್ವ ಹಿಂದು ಪರಿಷತ್ ಪುತ್ತೂರು ಪ್ರಖಂಡ ದಾಮೋದರ್ ಪಾಟಾಳಿ ಪ್ರಾಸ್ತಾವಿಕವಾಗಿ ಮಾತನಾಡಿ, ನಮ್ಮೊಳಗಿನ ಸಾಮರಸ್ಯದ ದೀಪ ಪ್ರತಿ ಮನೆಯಲ್ಲಿ ಬೆಳಗಬೇಕು. ನಾವೆಲ್ಲ ಒಂದೇ ತಾಯಿಯ ಮಕ್ಕಳು. ಜಾತಿ-ಬೇಧ ಮರೆತು ನಾವು ಒಗ್ಗಟ್ಟಿನಿಂದ ಬದುಕಬೇಕಾಗಿದೆ. ಒಬ್ಬಿಬ್ಬರು ಹಣ ಹಾಕಿ ಕಾರ್ಯಕ್ರಮ ಮಾಡುವುದಲ್ಲ, ಎಲ್ಲರೂ ಕನಿಷ್ಟ ರೂ.ಹತ್ತು ನೀಡುವ ಮೂಲಕ ಒಗ್ಗಟ್ಟಿನಲ್ಲಿ ಬಲವಿದೆ ಎಂದು ತೋರ್ಪಡಿಸಬೇಕಾಗಿದೆ ಎಂದು ಹೇಳಿ ತುಡರ್ ಕಾರ್ಯಕ್ರಮದ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು.
ವೇದಿಕೆಯಲ್ಲಿ ಶ್ರೀ ಕ್ಷೇತ್ರದ ಅರ್ಚಕ ಕುಂಡ ಮೊಗೇರ ಮಣ್ಣಾಪು, ಅಧ್ಯಕ್ಷ ವಿಶ್ವನಾಥ ಮಣ್ಣಾಪು ಉಪಸ್ಥಿತರಿದ್ದರು. ಸವಿತಾ ಪಂಜ ಸ್ವಾಗತಿಸಿ, ಕ್ಷೇತ್ರದ ಗೌರವ ಸಲಹೆಗಾರ ಗಂಗಾಧರ ಮಣ್ಣಾಪು ವಂದಿಸಿದರು. ಉಪಾಧ್ಯಕ್ಷ ವಿಶ್ವನಾಥ ಪೂಜಾರಿ ಮೊಟ್ಟೆತ್ತಡ್ಕ ಕಾರ್ಯಕ್ರಮ ನಿರೂಪಿಸಿದರು.
ಹಿಂದುತ್ವಕ್ಕೆ ಧಕ್ಕೆಯಾದಾಗ ಒಗ್ಗಟ್ಟಿನಿಂದ ಹೋರಾಡಬೇಕು..
ನಾವು ರಾಜಕಾರಣಿಗಳ ಮೋಡಿಯ ಮಾತಿಗೆ ಮರುಳಾಗಬಾರದು. ಅವರ ಲಾಭಕ್ಕೆ ಮುಗ್ಧ ಜನರನ್ನು ಬಳಸುವುದು ನೋಡಿದ್ದೇವೆ. ಜನರು ಯಾವುದೇ ಪಕ್ಷಕ್ಕೆ ಬೇಕಾದರೆ ಮತ ನೀಡಿ. ಆದರೆ ದೇವಸ್ಥಾನ, ದೈವಸ್ಥಾನ, ಕೇಸರಿ ಬಣ್ಣಕ್ಕೆ ಯಾರಾದರೂ ಧಕ್ಕೆಯನ್ನುಂಟು ಮಾಡಿದರೆ ನಾವು ಹಿಂದುತ್ವಕ್ಕೆ ಬೆಲೆ ಕೊಟ್ಟು ಹೋರಾಡಬೇಕಿದೆ. ಹಿಂದು ಸಮಾಜದಲ್ಲಿ ಜಾತಿ ಹೆಸರಲ್ಲಿ ಅನೇಕ ತಪ್ಪು ಕಲ್ಪನೆಗಳಿವೆ. ಅವನ್ನು ಹೋಗಲಾಡಿಸಿ ನಾವು ಪರಸ್ಪರ ಬಂಧುಗಳಾಗಬೇಕು.
-ರವೀಂದ್ರ ರೈ, ಸಾಮರಸ್ಯ ವಿಭಾಗದ ಪ್ರಾಂತ್ಯ ಪ್ರಮುಖ್
ಮಳೆ ಶುಭಸೂಚನೆ..
ಸಂಜೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಿಂದ ದೀಪ ಜ್ಯೋತಿಯು ಮಣ್ಣಾಪು ಶ್ರೀ ಕೊರಗಜ್ಜ ಕ್ಷೇತ್ರಕ್ಕೆ ಆಗಮಿಸಿದ್ದು ಬಳಿಕ ಮಣ್ಣಾಪು ಪರಿಸರದ ಮನೆಗಳಲ್ಲಿ ದೀಪವನ್ನು ಪ್ರಜ್ವಲಿಸಲಾಯಿತು. ಯಾರೂ ಮೇಲು-ಕೀಳು ಇಲ್ಲ. ಹಿಂದುಗಳು ಎಲ್ಲರೂ ಸಮಾನರು ಎಂಬಂತೆ ಈ ತುಡರ್ ಕಾರ್ಯಕ್ರಮವು ಕಳೆದ ಮೂರು ವರ್ಷಗಳಿಂದ ಒಗ್ಗಟ್ಟಿನೊಂದಿಗೆ ಆಯೋಜಿಸಲಾಗುತ್ತಿದೆ. ವಿಶೇಷ ಏನೆಂದರೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಿಂದ ಆಗಮಿಸಿದ ದೀಪವು ಮಣ್ಣಾಪು ಶ್ರೀ ಕೊರಗಜ್ಜ ಕ್ಷೇತ್ರ ಪ್ರವೇಶಿಸಿದಾಗ ಧಾರಾಕಾರ ಮಳೆ ಸುರಿಯಲಾರಂಭಿಸಿದ್ದು ಇದು ಶುಭಸೂಚನೆ ಎಂದು ಸ್ಥಳೀಯರು ಆಡಿಕೊಳ್ಳುತ್ತಿದ್ದರು.