ನೆಲ್ಯಾಡಿ: 8 ದಿನಗಳ ಹಿಂದೆ ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಕಾಲೇಜು ವಿದ್ಯಾರ್ಥಿನಿ ಚಿಕಿತ್ಸೆಗೆ ಸ್ಪಂದಿಸದೆ ಮಂಗಳೂರಿನ ವೆನ್ಲಾಕ್ ಜಿಲ್ಲಾಸ್ಪತ್ರೆಯಲ್ಲಿ ನ.5ರಂದು ಬೆಳಿಗ್ಗೆ ಮೃತಪಟ್ಟಿದ್ದಾರೆ.
ಕೊಕ್ಕಡ ಹಳ್ಳಿಂಗೇರಿ ನಿವಾಸಿ ಪೌಲ್ ಡಿ’ಸೋಜ-ಗ್ರೇಸಿ ಡಿ’ಸೋಜ ದಂಪತಿ ಪುತ್ರಿ ಪ್ರಿಯಾಂಕಾ ಡಿ’ಸೋಜ(19ವ.) ಮೃತಪಟ್ಟ ದುರ್ದೈವಿಯಾಗಿದ್ದಾರೆ. ಉಪ್ಪಿನಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಥಮ ಬಿ.ಎಸ್ಸಿ ವಿದ್ಯಾರ್ಥಿನಿಯಾಗಿದ್ದ ಈಕೆ ವಿದ್ಯಾಭ್ಯಾಸದ ಮಧ್ಯೆಯೇ ಮನೆಯಿಂದ ಬೆಂಗಳೂರಿಗೆ ಕೆಲಸಕ್ಕೆಂದು ತೆರಳಿದ್ದವರು. ಅಲ್ಲಿ ಕೆಲ ದಿನ ಸಂಬಂಧಿಕರ ಮನೆಯಲ್ಲಿದ್ದು ನಂತರ ಕೊಕ್ಕಡಕ್ಕೆ ವಾಪಸ್ ಬಂದಿದ್ದರು. ಊರಿಗೆ ಬಂದವರು ಮದುವೆಯಾಗಬೇಕಿದ್ದ ಯುವಕನಿಗೆ ಕರೆ ಮಾಡಿ ಆತನಿಗೆ ತಿಳಿಸಿ ಮುದ್ದಿಗೆ ಎಂಬಲ್ಲಿಗೆ ತೆರಳಿ ಇಲಿ ಪಾಷಾಣ ಸೇವಿಸಿ ಹೊಳೆಗೆ ಬಿದ್ದಿದ್ದರು. ಆಕೆಯ ಕರೆಯಂತೆ ಸ್ಥಳಕ್ಕೆ ತೆರಳಿದ್ದ ಯುವಕ ಅಸ್ವಸ್ಥಳಾಗಿ ಬಿದ್ದಿದ್ದ ಪ್ರಿಯಾಂಕಾಳನ್ನು ಕೊಕ್ಕಡ ಸರಕಾರಿ ಆಸ್ಪತ್ರೆಗೆ ಕರೆದೊಯ್ದು ಅಲ್ಲಿಂದ ಪುತ್ತೂರು, ನಂತರ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ನ.5ರಂದು ಮೃತಪಟ್ಟಿದ್ದಾರೆ.
ಮೃತರು ತಂದೆ,ತಾಯಿ, ಸಹೋದರಿ ಪ್ರೀತಿಕಾ ಡಿ.ಸೋಜ, ಅಜ್ಜಿ ಕ್ರಿಸ್ತಿನಾ ಮೊಂತೆರೋ ಅವರನ್ನು ಅಗಲಿದ್ದಾರೆ. ವಿದ್ಯಾರ್ಥಿನಿ ಮೃತಪಟ್ಟ ಹಿನ್ನೆಲೆಯಲ್ಲಿ ನ.5ರಂದು ಉಪ್ಪಿನಂಗಡಿ ಪ್ರಥಮ ದರ್ಜೆ ಕಾಲೇಜಿಗೆ ರಜೆ ಘೋಷಿಸಲಾಗಿತ್ತು. ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.