ಪುತ್ತೂರು: ಪುತ್ತೂರು ಸಬ್ ರಿಜಿಸ್ಟರ್ ಕಚೇರಿಯಲ್ಲಿನ ಸರ್ವರ್ ಸಮಸ್ಯೆ ಹಾಗೂ ಇನ್ನಿತರ ಕೆಲವು ತಾಂತ್ರಿಕ ಸಮಸ್ಯೆಗಳನ್ನು ಸರಿಪಡಿಸುವಲ್ಲಿ ಕ್ರಮ ಕೈಗೊಳ್ಳುವಂತೆ ಹಾಗೂ ಇ-ಖಾತೆ ವಿಳಂಬವಾಗುತ್ತಿರುವುದರ ಬಗ್ಗೆ ಕ್ರಮ ವಹಿಸುವಂತೆ ಮುಖ್ಯಮಂತ್ರಿಗಳ ಕಾರ್ಯದರ್ಶಿ ಅತೀಕ್ ರವರಿಗೆ ಶಾಸಕ ಅಶೋಕ್ ರೈ ಅವರು ಮನವಿ ಮಾಡಿ ಸಮಸ್ಯೆಯ ಬಗ್ಗೆ ಚರ್ಚೆ ನಡೆಸಿದರು.
ಗುರುವಾರ ವಿಧಾನ ಸೌಧ ಕಚೇರಿಯಲ್ಲಿ ಅವರನ್ನು ಭೇಟಿಯಾದ ಶಾಸಕರು ಸಬ್ ರಿಜಿಸ್ಟರ್ ಕಚೇರಿಯಲ್ಲಿನ ತಾಂತ್ರಿಕ ಸಮಸ್ಯೆ ಹಾಗೂ ಸರ್ವರ್ ಸಮಸ್ಯೆಯಿಂದಾಗಿ ಕಂದಾಯಕ್ಕೆ ದೊಡ್ಡ ಹೊಡೆತ ಬಿದ್ದಿದೆ. ಯಾವುದೇ ರಿಜಿಸ್ಟರ್ ಮಾಡಬೇಕಾದಲ್ಲಿ ಕಚೇರಿಯಲ್ಲೇ ಕುಳಿತು ಕಾಲ ಕಳೆಯಬೇಕಾದ ಪರಿಸ್ಥಿತಿ ಇದೆ. ಸರಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಇ-ಖಾತೆ ನೀಡುವಲ್ಲಿಯೂ ವಿಳಂಬವಾಗುತ್ತಿರುವ ಕಾರಣ ಗ್ರಾಮೀಣ ಭಾಗದ ಜನತೆ ಸಂಕಷ್ಟ ಎದುರಿಸುವಂತಾಗಿದೆ. ಈ ಸಮಸ್ಯೆ ಪುತ್ತೂರು, ಮಂಗಳೂರು ಹಾಗೂ ಮೈಸೂರು ವಿಭಾಗ ವ್ಯಾಪ್ತಿಯಲ್ಲಿ ಹೆಚ್ಚಾಗಿದ್ದು ಸರಕಾರ ತಕ್ಷಣ ಎಚ್ಚೆತ್ತು ಇದರಲ್ಲಿನ ಲೋಪದೋಷಗಳನ್ನು ಸರಿಪಡಿಸುವಂತೆ ಮನವಿ ಮಾಡಿದ್ದಾರೆ.
ಬಜೆಟ್ನಲ್ಲಿ ಮೆಡಿಕಲ್ ಕಾಲೇಜು ಸೇರಿಸಿ
ಮುಂದಿನ ಬಜೆಟ್ ನಲ್ಲಿ ಪುತ್ತೂರಿನಲ್ಲಿ ಆಗಬೇಕಾದ ಮೆಡಿಕಲ್ ಕಾಲೇಜಿನ ಬಗ್ಗೆ ಪ್ರಸ್ತಾಪ ಇಡುವಂತೆ ಮತ್ತು ಅದಕ್ಕೆ ಅನುದಾನ ಇಡುವಲ್ಲಿಯೂ ಮುತುವರ್ಜಿ ವಹಿಸುವಂತೆ ಕಾರ್ಯದರ್ಶಿ ಅತೀಕ್ ರವರಿಗೆ ಶಾಸಕರು ಮನವಿ ಸಲ್ಲಿಸಿದರು. ಪುತ್ತೂರಿನಲ್ಲಿ ಮೆಡಿಕಲ್ ಕಾಲೇಜು ನಿರ್ಮಾಣಕ್ಕೆ ಆಗ್ರಹಿಸಿ ಹೋರಾಟ ಪ್ರಾರಂಭವಾಗಿದ್ದು, ಪುತ್ತೂರಿಗೆ ಭೇಟಿ ನೀಡಿದ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರಲ್ಲಿ ಪುತ್ತೂರಿನ ಜನತೆ ಮನವಿ ಮಾಡಿರುವುದನ್ನು ಕಾರ್ಯದರ್ಶಿ ಅವರ ಗಮನಕ್ಕೆ ತರಲಾಗಿದೆ.