ಪುತ್ತೂರು: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅರಿವು ಮೂಡಿಸುವ ನಿಟ್ಟಿನಲ್ಲಿ ಹಮ್ಮಿಕೊಂಡ ಕನ್ನಡ ಭುವನೇಶ್ವರಿಯ ರಥವನ್ನು ಪುತ್ತೂರು ತಾಲೂಕು ಆಡಳಿತ ಸೌಧದ ಬಳಿ ಸಕಲ ಸರಕಾರಿ ಗೌರವಗಳೊಂದಿಗೆ ಸ್ವಾಗತಿಸಲಾಯಿತು.
ಸಹಾಯಕ ಆಯುಕ್ತ ಜುಬಿನ್ ಮೊಹಪಾತ್ರ ಅವರು ತೆಂಗಿನ ಕಾಯಿ ಒಡೆಯುವ ಮೂಲಕ ಕನ್ನಡ ಭುವನೇಶ್ವರಿಗೆ ಪುಷ್ಪಾರ್ಚನೆಯನ್ನು ಮಾಡಿ ಅಧಿಕೃತ ಚಾಲನೆಯನ್ನು ನೀಡಿದರು. ಇದೇ ಸಂದರ್ಭ ಅವರು ಮಾತನಾಡಿ ಪ್ರಪಂಚದಲ್ಲೇ ಅತೀ ಶ್ರೀಮಂತ ಭಾಷೆ ಕನ್ನಡ. ಇದರ ಹಬ್ಬ ಅಥವಾ ಆಚರಣೆಯಿಂದ ಭಾಷೆಯ ಶ್ರೀಮಂತಿಕೆ ಮುಂದಿನ ಪೀಳಿಗೆಗೆ ತಲುಪುತ್ತದೆ ಎಂದರು.
ಕಸಾಪ ಜಿಲ್ಲಾಧ್ಯಕ್ಷ ಎಂ.ಪಿ. ಶ್ರೀನಾಥ್ ಪ್ರಾಸ್ತಾವಿಕವಾಗಿ ಮಾತನಾಡಿ, ಕನ್ನಡ ಜ್ಯೋತಿ ಹೊತ್ತ ರಥ ಸಿದ್ಧಾಪುರದ ಭುವನಗಿರಿಯಿಂದ ಹೊರಟಿದ್ದು, ಇದೀಗ ಪುತ್ತೂರು ತಲುಪಿದೆ. ಕನ್ನಡ ನಾಡು ನುಡಿ ರಕ್ಷಿಸುವ ಹಿನ್ನೆಲೆಯಲ್ಲಿ ಪ್ರತಿ ಗ್ರಾಮಕ್ಕೆ ರಥ ಬರುತ್ತಿದೆ. ನಾಳೆ ಬೆಳಿಗ್ಗೆ ಬೆಳ್ತಂಗಡಿ, ಸಂಜೆ ಸುಳ್ಯ, ಬಳಿಕ ಕೊಡಗು ಪ್ರವೇಶಿಸಲಿದೆ. ಬಳಿಕ ಸಕ್ಕರೆ ನಗರಿ ಮಂಡ್ಯದಲ್ಲಿ ಅದ್ದೂರಿ ಸಮಾವೇಶ ಜರುಗಲಿಕ್ಕಿದೆ ಎಂದರು. ತಹಸಿಲ್ದಾರ್ ಪುರಂದರ ಹೆಗ್ಡೆ, ತಾಲೂಕ್ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ನವೀನ ಭಂಡಾರಿ, ಪೌರಾಯುಕ್ತ ಮದುಮನೋಹರ್, ಉಪತಹಶೀಲ್ದಾರ್ ದಯಾನಂದ ಹಾಗೂ ಸುಲೋಚನಾ, ನಗರಸಭಾ ಉಪಾಧ್ಯಕ್ಷ ಬಾಲಚಂದ್ರ, ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್ ಆರ್, ನಿವೃತ್ತ ನೌಕರರ ಸಂಘದ ಅಧ್ಯಕ್ಷ ಬಿ.ಐತ್ತಪ್ಪ ನಾಯ್ಕ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ, ಅಕ್ರಮ ಸಕ್ರಮ ಸಮಿತಿ ಸದಸ್ಯ ಮಹಮ್ಮದ್ ಬಡಗನ್ನೂರು, ತಿಮ್ಮಪ್ಪ ಪೂಜಾರಿ, ಸುಬ್ಬಪ್ಪ ಕೈಕಂಭ, ಹರಿಣಾಕ್ಷಿ ಕೇವಳ, ರಫೀಕ್ ಎಂ.ಜಿ, ರಜಾಕ್ ಬಪ್ಪಳಿಗೆ, ಉಲ್ಲಾಸ್ ಕೋಟ್ಯಾನ್, ಅಶೋಕ್ ಬಲ್ನಾಡು ಮತ್ತಿತರರು ಉಪಸ್ಥಿತರಿದ್ದರು. ಕಸಾಪ ಪುತ್ತೂರು ಅಧ್ಯಕ್ಷ ಉಮೇಶ್ ನಾಯಕ್ ಪುತ್ತೂರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.