ನೆಲ್ಯಾಡಿ: ಕಡಬ ತಾಲೂಕಿನ ಕೌಕ್ರಾಡಿ ಗ್ರಾಮದ ಕಾಪಿನಬಾಗಿಲು ಎಂಬಲ್ಲಿ ಸರಕಾರಿ ಜಾಗದಲ್ಲಿದ್ದ ವೃದ್ಧ ಮುತ್ತುಸ್ವಾಮಿ ಎಂಬವರ ಮನೆಯನ್ನು ಕಡಬ ತಹಶೀಲ್ದಾರ್ ನೇತೃತ್ವದಲ್ಲಿ ಅಧಿಕಾರಿಗಳ ತಂಡ ನ.13ರಂದು ಬೆಳ್ಳಂಬೆಳಿಗ್ಗೆ ಬಿಗಿ ಪೊಲೀಸ್ ಬಂದೋಬಸ್ತ್‌ನಲ್ಲಿ ಕಾರ್ಯಾಚರಣೆ ನಡೆಸಿ ಜೆಸಿಬಿ ಮೂಲಕ ಸಂಪೂರ್ಣ ನೆಲಸಮಗೊಳಿಸಿದೆ.
ಮೂಲತ: ಚಿತ್ರದುರ್ಗ ನಿವಾಸಿಯಾಗಿರುವ ಮುತ್ತುಸ್ವಾಮಿಯವರು ಕೂಲಿ ಕೆಲಸಕ್ಕಾಗಿ ಬಂದವರು ಆರು ವರ್ಷದ ಹಿಂದೆ ಕೌಕ್ರಾಡಿ ಗ್ರಾಮದ ಕಾಪಿನಬಾಗಿಲು ಎಂಬಲ್ಲಿ ಸರ್ವೆ ನಂ.123/1ರಲ್ಲಿನ ಸರಕಾರಿ ಜಾಗದಲ್ಲಿ ಕಲ್ಲಿನ ಗೋಡೆ ಹಾಗೂ ಸಿಮೆಂಟ್ ಶೀಟ್‌ನ ಸಣ್ಣ ಮನೆ ನಿರ್ಮಿಸಿದ್ದು ಮನೆಯ ಪರಿಸರದಲ್ಲಿ ಬಾಳೆ ಹಾಗೂ ಇತರೇ ಕೃಷಿಯನ್ನೂ ಮಾಡಿದ್ದರು. ಈ ಮನೆಯಲ್ಲಿ ಮುತ್ತುಸ್ವಾಮಿ ಪತ್ನಿ ರಾಧಮ್ಮ ಜೊತೆಗೆ ವಾಸ್ತವ್ಯವಿದ್ದರು. ಹೈನುಗಾರಿಕೆಯೊಂದಿಗೆ ಈ ಜಾಗದ ಸಮೀಪವೇ ಮುತ್ತುಸ್ವಾಮಿ ಸಣ್ಣ ಅಂಗಡಿಯೊಂದನ್ನು ಇಟ್ಟು ವ್ಯಾಪರ ಮಾಡಿ ಜೀವನ ನಿರ್ವಹಣೆ ಮಾಡುತ್ತಿದ್ದರು. ಈ ಮಧ್ಯೆ ಸರಕಾರಿ ಜಾಗದಲ್ಲಿ ಮನೆ ನಿರ್ಮಾಣ ಮಾಡಿರುವುದನ್ನು ಪ್ರಶ್ನಿಸಿ ಸಾಮಾಜಿಕ ಕಾರ್ಯಕರ್ತ ಬೆಳ್ತಂಗಡಿ ತಾಲೂಕಿನ ಅಶೋಕ ಆಚಾರ್ಯ ಎಂಬವರು ಹೈಕೋರ‍್ಟ್‌ನಲ್ಲಿ ದಾವೆ ಹೂಡಿದ್ದರು. ಈ ಎಲ್ಲಾ ಬೆಳವಣಿಗೆಯ ಹಿನ್ನೆಲೆಯಲ್ಲಿ ಕಳೆದ ಫೆಬ್ರವರಿ ತಿಂಗಳಿನಲ್ಲಿ ಕಂದಾಯ ಇಲಾಖೆಯಿಂದ ಸರಕಾರಿ ಜಾಗದಲ್ಲಿ ನಿರ್ಮಿಸಿರುವ ಮನೆ ತೆರವುಗೊಳಿಸಲು ಹೈಕೋರ‍್ಟ್ ಆದೇಶವಾಗಿದ್ದು ತೆರವುಗೊಳಿಸುವಂತೆ ಮುತ್ತುಸ್ವಾಮಿಯವರಿಗೆ ನೋಟಿಸ್ ನೀಡಲಾಗಿತ್ತು. ಅಲ್ಲದೇ ಮನೆ ತೆರವಿಗೂ ಕಂದಾಯ ಇಲಾಖೆ ಅಧಿಕಾರಿಗಳು ಮುಂದಾಗಿದ್ದು ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಪ್ರಕರಣ ತಣ್ಣಗಾಗಿತ್ತು.
ಬೆಳ್ಳಂಬೆಳಿಗ್ಗೆ ಕಾರ್ಯಾಚರಣೆ:
ನ.13ರಂದು ಬೆಳಿಗ್ಗೆ 7 ಗಂಟೆ ವೇಳೆಗೆ ಪೊಲೀಸ್ ಬಂದೋಬಸ್ತ್‌ನಲ್ಲಿ ಕಡಬ ತಹಶೀಲ್ದಾರ್ ಪ್ರಭಾಕರ ಖಜೂರೆ ನೇತೃತ್ವದ ತಂಡ ಕಾರ್ಯಾಚರಣೆ ಆರಂಭಿಸಿದ್ದು, ಮನೆಯೊಳಗಿದ್ದ ಸಾಮಾಗ್ರಿಗಳನ್ನು ಹೊರಹಾಕಿ ಜೆಸಿಬಿ ಮೂಲಕ ಮನೆಯನ್ನು ಸಂಪೂರ್ಣ ನೆಲಸಮಗೊಳಿಸಿದ್ದಾರೆ. ಮೆಸ್ಕಾಂನವರು ಉಪಸ್ಥಿತರಿದ್ದು ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿದರು. ಈ ಸಂದರ್ಭದಲ್ಲಿ ಕಡಬ ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಭಂಡಾರಿ, ಕಂದಾಯ ನಿರೀಕ್ಷಕ ಪೃಥ್ವಿರಾಜ್, ಕೌಕ್ರಾಡಿ ಗ್ರಾಮಕರಣಿಕ ಸಿದ್ದಲಿಂಗ ಜಂಗಮಶೆಟ್ಟಿ, ಕೌಕ್ರಾಡಿ ಪಿಡಿಒ ದೇವಿಕಾ, ಮೆಸ್ಕಾಂನ ಸಜಿಕುಮಾರ್, ಗ್ರಾಮ ಸಹಾಯಕರಾದ ಅನಿಲ್, ಕಿರಣ್, ಚರಣ್, ಆನಂದ, ಯುವರಾಜ್, ನವೀನ್ ಮತ್ತಿತರರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಉಪ್ಪಿನಂಗಡಿ ಪಿಎಸ್‌ಐ ಅವಿನಾಶ್ ಗೌಡ ಹಾಗೂ ಸಿಬ್ಬಂದಿಗಳು ಬಂದೋಬಸ್ತ್ ಒದಗಿಸಿದ್ದರು. ಆಂಬುಲೆನ್ಸ್, ಆರೋಗ್ಯ ಇಲಾಖೆ ಸಿಬ್ಬಂದಿಗಳನ್ನೂ ಸ್ಥಳಕ್ಕೆ ಕರೆಸಲಾಗಿತ್ತು.
ವೃದ್ಧ ದಂಪತಿ ಕಣ್ಣೀರು:
94ಸಿ, ಅಕ್ರಮ ಸಕ್ರಮದಲ್ಲಿ ಅರ್ಜಿ ನೀಡಿದ್ದರೂ ತಿರಸ್ಕಾರ ಮಾಡಿದ್ದಾರೆ. ರೇಷನ್ ಕಾರ್ಡ್, ಆಧಾರ್‌ಕಾರ್ಡ್ ಆಗಿದೆ. ಈಗ ಏಕಾಏಕಿ ಬಂದು ನಮ್ಮನ್ನು ಮನೆಯಿಂದ ಹೊರಗೆ ಎಳೆದುಕೊಂಡು ಬಂದು ಸಾಮಾನುಗಳನ್ನು ಹೊರಗೆಸೆದು ಮನೆ ನೆಲಸಮಗೊಳಿಸಿದ್ದಾರೆ ಎಂದು ವೃದ್ಧ ದಂಪತಿ ಮುತ್ತುಸ್ವಾಮಿ ಹಾಗೂ ರಾಧಮ್ಮ ಕಣ್ಣೀರು ಹಾಕಿದ್ದಾರೆ. ಮುತ್ತುಸ್ವಾಮಿ ದಂಪತಿಗೆ ವಾಸ್ತವ್ಯಕ್ಕೆ ಬೇರೆ ಮನೆ ಇಲ್ಲದೇ ಇರುವುದರಿಂದ ಈ ದಂಪತಿ ಈಗ ಕಂಗಲಾಗಿದ್ದಾರೆ.
ದಯಾಮರಣ ಕೋರಿ ರಾಷ್ಟ್ರಪತಿಗೆ ಅರ್ಜಿ ಸಲ್ಲಿಸಿದ್ದರು:
ಈ ಹಿಂದೆ ಮನೆ ತೆರವುಗೊಳಿಸುವಂತೆ ಕಂದಾಯ ಇಲಾಖೆ ಅಧಿಕಾರಿಗಳಿಂದ ಸೂಚನೆ ಬಂದ ಹಿನ್ನೆಲೆಯಲ್ಲಿ ದಯಾಮರಣ ಕೋರಿ ಫೆಬ್ರವರಿ 2024ರಲ್ಲಿ ಮುತ್ತುಸ್ವಾಮಿ ಹಾಗೂ ರಾಧಮ್ಮ ದಂಪತಿ ರಾಷ್ಟ್ರಪತಿಗಳಿಗೆ ಪತ್ರ ಬರೆದಿದ್ದರು. ಮುತ್ತುಸ್ವಾಮಿ ಅವರು ಖಾಸಗಿ ವ್ಯಕ್ತಿಯೋರ್ವರಿಗೆ ಹಣ ನೀಡಿ ಈ ಸರಕಾರಿ ಜಾಗ ಖರೀದಿಸಿದ್ದರು ಎಂದು ಹೇಳಲಾಗಿದೆ. ಇದರಲ್ಲಿ ಅಂದಾಜು 20 ಸೆಂಟ್ಸ್ ಜಾಗವಿದೆ. ಮನೆ ಸಮೀಪವೇ ಸಣ್ಣ ಅಂಗಡಿ, ಹೈನುಗಾರಿಕೆ ಮಾಡಿ ಜೀವನ ನಡೆಸುತ್ತಿದ್ದಾರೆ. ಸರ್ಕಾರಿ ಜಾಗದಲ್ಲಿ ನಿರ್ಮಿಸಿರುವ ಮನೆಯಲ್ಲಿ ಜೀವನ ನಡೆಸಲು ಅವಕಾಶ ಕಲ್ಪಿಸಿಕೊಡಿ. ಇಲ್ಲವೇ ದಯಾಮರಣ ಅಥವಾ ಇನ್ಯಾವುದೇ ರೀತಿಯಲ್ಲಿ ಒಳ್ಳೆಯ ಮರಣಕ್ಕೆ ಅವಕಾಶವನ್ನು ನೀಡಬೇಕು ಎಂದು ಮುತ್ತುಸ್ವಾಮಿ ಅವರು ಕಳೆದ ಫೆಬ್ರವರಿಯಲ್ಲಿ ರಾಷ್ಟ್ರಪತಿಯವರಿಗೆ ಅರ್ಜಿ ಸಲ್ಲಿಸಿದ್ದರು.
ಹೈಕೋರ‍್ಟ್ ಆದೇಶ:
ಹೈಕೋರ‍್ಟ್ ಆದೇಶ ಹಾಗೂ ಜಿಲ್ಲಾಧಿಕಾರಿಯವರಿಂದ ಬಂದ ನಿರ್ದೇಶನದ ಮೇರೆಗೆ ಸರಕಾರಿ ಜಾಗದಲ್ಲಿದ್ದ ಮನೆ ತೆರವುಗೊಳಿಸಲಾಗಿದೆ. ಮನೆ ತೆರವುಗೊಳಿಸುವಂತೆ ಮುತ್ತುಸ್ವಾಮಿಯವರಿಗೆ ಈ ಹಿಂದೆಯೇ ನೋಟಿಸ್ ನೀಡಿ ಸೂಚನೆ ನೀಡಲಾಗಿತ್ತು. ಇದೀಗ ಮನೆ ತೆರವುಗೊಳಿಸಿದ್ದು ಮುತ್ತುಸ್ವಾಮಿಯವರಿಗೆ ಮನೆ ನಿವೇಶನ ನೀಡುವ ಸಂಬಂಧ ಕ್ರಮ ಕೈಗೊಳ್ಳಲು ಕೌಕ್ರಾಡಿ ಗ್ರಾಮ ಪಂಚಾಯಿತಿಗೆ ಸೂಚನೆ ನೀಡಲಾಗಿದೆ ಎಂದು ಕಡಬ ತಹಶೀಲ್ದಾರ್ ಪ್ರಭಾಕರ ಖಜೂರೆ ತಿಳಿಸಿದ್ದಾರೆ.
ನ್ಯಾಯ ಕೊಡಿ:
ನೋಟಿಸ್‌ನಲ್ಲಿ ನನ್ನ ಹೆಸರು ಹಾಕಿ ನನ್ನ ತಂದೆ, ತಾಯಿಯ ಮನೆ ತೆರವು ಮಾಡಿದ್ದಾರೆ. ನನ್ನ ಹೆಸರಲ್ಲಿ ಈ ಜಾಗವಿಲ್ಲ, ನಾನು ವಾಸವಿರುವುದು ಶಿಬಾಜೆಯಲ್ಲಿ. 2019ರಲ್ಲಿ ತಂದೆ ಮುತ್ತುಸ್ವಾಮಿ ಅವರು ಈ ಜಾಗ ಖರೀದಿ ಮಾಡಿ ಮನೆ ನಿರ್ಮಿಸಿ ತಾಯಿ ರಾಧಮ್ಮ ಅವರೊಂದಿಗೆ ವಾಸ್ತವ್ಯವಿದ್ದಾರೆ. ಅವರಿಗೆ ವಿದ್ಯುತ್, ರೇಷನ್‌ಕಾರ್ಡ್, ಆಧಾರ್, ಮತದಾನ ಗುರುತುಪತ್ರ ಈ ವಿಳಾಸದಲ್ಲಿ ಆಗಿದೆ. ಮನೆ ನೆಲಸಮಗೊಳಿಸಿರುವುದರಿಂದ ತಂದೆ, ತಾಯಿ ಬೀದಿಗೆ ಬಂದಿದ್ದಾರೆ. ತಂದೆ, ತಾಯಿಗೆ ನ್ಯಾಯಕೊಡಿಸಬೇಕು. ಇಲ್ಲದೇ ಇದ್ದಲ್ಲಿ ನಾವು ಇಲ್ಲೇ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ. ದೂರುದಾರ ಅಶೋಕ ಆಚಾರ್ಯ ಅವರನ್ನು ಈ ತನಕವೂ ನಾವು ನೋಡಿಲ್ಲ. ಅವರಿಗೆ ನಮ್ಮ ಮೇಲೆ ದ್ವೇಷ ಯಾಕೆ ಎಂದೂ ಗೊತ್ತಿಲ್ಲ ಎಂದು ಮುತ್ತುಸ್ವಾಮಿ ಪುತ್ರಿ ರೇಣುಕಾವಿಶ್ವನಾಥ ಕಣ್ಣೀರಿಟ್ಟಿದ್ದಾರೆ.
ಪಂಚಾಯತ್ ಗಮನಕ್ಕೇ ತಂದಿಲ್ಲ:
ಅಧಿಕಾರಿಗಳೇ ರಾತ್ರೋರಾತ್ರಿ ನಿರ್ಧಾರ ಕೈಗೊಂಡು ಬೆಳ್ಳಂಬೆಳ್ಳಿಗೆ ಕಾರ್ಯಾಚರಣೆ ನಡೆಸಿದ್ದಾರೆ. ಗ್ರಾಮ ಪಂಚಾಯಿತಿಯ ಚುನಾಯಿತ ಆಡಳಿತ ಮಂಡಳಿಯ ಗಮನಕ್ಕೆ ತಂದಿಲ್ಲ. ನನಗೆ ಮಾಹಿತಿ ಸಿಕ್ಕ ತಕ್ಷಣ ಸ್ಥಳಕ್ಕೆ ಹೋಗಿದ್ದೇನೆ. ಆ ವೇಳೆಗೆ ಮನೆ ನೆಲಸಮ ಆಗಿತ್ತು. ಗ್ರಾಮ ಪಂಚಾಯಿತಿ ವತಿಯಿಂದ ಇಚ್ಲಂಪಾಡಿ, ಸೌತಡ್ಕದಲ್ಲಿ ಸರಕಾರಿ ಜಾಗ ಗುರುತಿಸಿ ಮನೆ ನಿವೇಶನಕ್ಕೆ ಮಂಜೂರು ಮಾಡುವಂತೆ ಕಂದಾಯ ಇಲಾಖೆಗೆ ಮನವಿ ಮಾಡಿದ್ದೇವೆ. ಆದರೆ ಈ ತನಕ ಮಂಜೂರು ಮಾಡಿಲ್ಲ. ನಿವೇಶನ ಕೋರಿ ಹಲವು ಅರ್ಜಿಗಳು ಬಂದಿವೆ. ಜಾಗ ಮಂಜೂರಾದ ತಕ್ಷಣ ಅರ್ಜಿದಾರರಿಗೆ ಮನೆ ನಿವೇಶನ ನೀಡುತ್ತೇವೆ. ಮುತ್ತುಸ್ವಾಮಿ ಮನೆ ತೆರವುಗೊಳಿಸಿರುವ ಸರಕಾರಿ ಜಾಗವನ್ನೂ ಪಂಚಾಯತ್‌ಗೆ ನೀಡಲಿ. ಮನೆ ನಿವೇಶನ ಮಂಜೂರಾತಿಗೆ ಕ್ರಮ ಕೈಗೊಳ್ಳುತ್ತೇವೆ ಎಂದು ಕೌಕ್ರಾಡಿ ಗ್ರಾ.ಪಂ.
ಅಧ್ಯಕ್ಷ ಲೋಕೇಶ್ ಬಾಣಜಾಲು ತಿಳಿಸಿದ್ದಾರೆ.