ಪುತ್ತೂರು: ಕಾವು- ಅಶ್ವತ್ತಡಿ-ಸಸ್ಪೆಟ್ಟಿ-ಪಳನೀರು- ಸಾಂತ್ಯ ಮೂಲಕ ಈಶ್ವರಮಂಗಲವನ್ನು ಸಂಪರ್ಕಿಸುವ ಕಚ್ಚಾರಸ್ತೆಯ ಕಾಂಕ್ರೀಟಿಕರಣಕ್ಕೆ ಸ್ಥಳೀಯರು ಒತ್ತಾಯಿಸಿದ್ದಾರೆ. ಕಳೆದ ಹತ್ತು ವರ್ಷಗಳಿಂದ ಈ ರಸ್ತೆಯನ್ನು ಮೇಲ್ದರ್ಜೆಗೇರಿಸಲು ಸ್ಥಳೀಯ ಜನಪ್ರತಿನಿಧಿಗಳಿಂದ ಹಿಡಿದು ಶಾಸಕರವರೆಗೂ ಬೇಡಿಕೆ ಸಲ್ಲಿಕೆಯಾಗಿದೆಯಾದರೂ, ಇದುವರೆಗೆ ಯಾವುದೇ ಪ್ರಯೋಜನ ಇಲ್ಲದಾಗಿದೆ. ದುರಸ್ಥಿ ಕಾಣದ ಈ ರಸ್ತೆಯಲ್ಲಿ ಸಂಚರಿಸುವುದು ದುಸ್ತರವಾಗಿದ್ದು, ಸ್ಥಳೀಯರ ಬೇಡಿಕೆಗೆ ಮನ್ನಣೆ ಸಿಗದೇ ಹೋದಲ್ಲಿ ಮುಂದಿನ ದಿನಗಳಲ್ಲಿ ನಡೆಯುವ ಎಲ್ಲಾ ಚುನಾವಣೆಗಳನ್ನು ಬಹಿಸ್ಕರಿಸುವುದಾಗಿ ಹೇಳಿರುವ ಸ್ಥಳೀಯ ಜನತೆ ಬ್ಯಾನರ್ ಅಳವಡಿಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನ.23ರಂದು ಅರಿಯಡ್ಕ ಗ್ರಾಮ ಪಂಚಾಯತ್ ವ್ಯಾಪ್ತಿಗೊಳಪಟ್ಟ ಮಾಡ್ನೂರು ಗ್ರಾಮದ 2ನೇ ವಾರ್ಡ್ ಗೆ ನಡೆಯುವ ಉಪಚುನಾವಣೆಯನ್ನು ಬಹಿಷ್ಕರಿಸುವುದಾಗಿ ಬ್ಯಾನರ್ ನಲ್ಲಿ ಬರೆಯಲಾಗಿದೆ. ಮುಂದಿನ ದಿನಗಳಲ್ಲಿ ಈ ರಸ್ತೆಗೆ ಕಾಯಕಲ್ಪ ನೀಡುವ ವ್ಯಕ್ತಿ ಅಥವಾ ಪಕ್ಷವನ್ನು ನಾವು ಬೆಂಬಲಿಸಲಿದ್ದೇವೆ ಎಂದು ಸ್ಥಳೀಯರು ಹೇಳಿದ್ದಾರೆ.