ರೋಟರಿ ಪುತ್ತೂರು ಸ್ವರ್ಣದಿಂದ ಸ್ವರ್ಣ ಝೋನಲ್ ಸ್ಪೋರ್ಟ್ಸ್ ಉದ್ಘಾಟನೆ

0

ಪುತ್ತೂರು: ರೋಟರಿ ಅಂತರಾಷ್ಟ್ರೀಯ ಜಿಲ್ಲೆ 3181, ವಲಯ ಐದರ ಹೊರಾಂಗಣ ಕ್ರೀಡಾಕೂಟ “ಸ್ವರ್ಣ ಝೋನಲ್ ಸ್ಪೋರ್ಟ್ಸ್” ಇದರ ಉದ್ಘಾಟನೆಯು ನ.17 ರಂದು ಕೊಂಬೆಟ್ಟು ಕ್ರೀಡಾಂಗಣದಲ್ಲಿ ನೆರವೇರಿತು.

ನಿವೃತ್ತ ರೈಲ್ವೆ ಅಧಿಕಾರಿ ಹಾಗೂ ಕರ್ನಾಟಕ ಅಥ್ಲೆಟಿಕ್ ಅಸೋಸಿಯೇಶನ್ ಬೆಂಗಳೂರು ಇದರ ಮಾಜಿ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ರೈಯವರು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ವೇದಿಕೆಯಲ್ಲಿ ನಿರರ್ಗಳವಾಗಿ ಮಾತನಾಡುವಷ್ಟು ಸುಲಭವಲ್ಲ ಕ್ರೀಡಾಂಗಣದಲ್ಲಿ ಕ್ರೀಡೆಯಲ್ಲಿ ಭಾಗವಹಿಸುವುದು. ನಮ್ಮ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ಕ್ರೀಡೆ ಪೂರಕವೆನಿಸುತ್ತದ. ರೋಟರಿ ಸಂಸ್ಥೆಯು ಸಾಮಾಜಿಕ ಚಟುವಟಿಕೆಗಳ ಮಧ್ಯೆ ಕ್ರೀಡೆಯನ್ನು ಹಮ್ಮಿಕೊಂಡು ರೋಟರಿ ಸದಸ್ಯರ‌ ಮುಖದಲ್ಲಿ ಮಂದಹಾಸ ಮೂಡಿಸುವಲ್ಲಿ ಸಫಲರಾಗಿದ್ದಾರೆ ಎಂದರು.

ಗೌರವ ಉಪಸ್ಥಿತಿಯಾಗಿ ಭಾಗವಹಿಸಿದ ಬೆಳ್ಳಾರೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರು ಹಾಗೂ ಅಥ್ಲೆಟಿಕ್ ಫೆಡರೇಷನ್ ಆಫ್ ಇಂಡಿಯಾದ ರಾಷ್ಟ್ರೀಯ ಉದ್ಘೋಷಕರಾದ ಡಾ|ರಾಮಚಂದ್ರ ಕೆ. ಮಾತನಾಡಿ, ರೋಟರಿ ಕ್ಲಬ್ ನಲ್ಲಿ ವಿವಿಧ ವೃತ್ತಿ ಬದುಕಿನಲ್ಲಿ ತೊಡಗಿಸಿಕೊಂಡಿರುವ ಸದಸ್ಯರಿದ್ದಾರೆ. ವ್ಯಕ್ತಿಯು ಸಂಪೂರ್ಣರೆನಿಸಿಕೊಳ್ಳಬೇಕಾದರೆ ಸಾಮಾಜಿಕ ಬದುಕಿನ ನಡುವೆ ಕ್ರೀಡೆಯಲ್ಲಿ ತೊಡಗಿಸಿಕೊಂಡಾಗ ಮನೋಲ್ಲಾಸ ಮೂಡಿಸುತ್ತದೆ ಎಂದರು.

ರೋಟರಿ ಕ್ಲಬ್ ಪುತ್ತೂರು ಸ್ವರ್ಣ ಇದರ ಜಿ.ಎಸ್.ಆರ್ ಚಿದಾನಂದ ಬೈಲಾಡಿ ಮಾತನಾಡಿ, ಹತ್ತು ವರ್ಷದ ಹಿಂದೆ ರೋಟರಿ ಪುತ್ತೂರು ಇದರ ಸ್ವರ್ಣೋತ್ಸವದ ಸಂದರ್ಭದಲ್ಲಿ ಅಂದು ಅಧ್ಯಕ್ಷರಾಗಿದ್ದ ಆಸ್ಕರ್ ಆನಂದ್ ರವರ ಅಧ್ಯಕ್ಷತೆಯಲ್ಲಿ ರೋಟರಿ ಸ್ವರ್ಣವನ್ನು ಸ್ಥಾಪಿಸಲಾಗಿತ್ತು. ಪ್ರಸ್ತುತ ಕ್ಲಬ್ ಅಧ್ಯಕ್ಷರಾಗಿರುವ ಸುರೇಶ್ ರವರ ನೇತೃತ್ವದಲ್ಲಿ ಪ್ರಥಮ ಬಾರಿ ಝೋನಲ್ ಕ್ರೀಡೆಯನ್ನು ಹಮ್ಮಿಕೊಳ್ಳಲಾಗಿದ್ದು ಪ್ರತಿಭೆ ಪ್ರದರ್ಶಿಸಲು ವೇದಿಕೆಯಾಗಿದೆ ಎಂದರು.

ರೋಟರಿ ಕ್ಲಬ್ ಪುತ್ತೂರು ಬಿರುಮಲೆ ಹಿಲ್ಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ ಮಾತನಾಡಿ, ನಮ್ಮ ನೂತನ ಬಿರುಮಲೆ ಹಿಲ್ಸ್ ಕ್ಲಬ್ ಆರಂಭಗೊಂಡ ಸಂದರ್ಭದಲ್ಲಿ ರೋಟರಿ ಎಂಟು ಕ್ಲಬ್ ಸದಸ್ಯರನ್ನು ಸೇರಿಸಿಕೊಂಡು ಕ್ರೀಡಾಕೂಟ ಹಮ್ಮಿಕೊಳ್ಳುವ ಯೋಜನೆ ಹಾಕಲಾಗಿತ್ತು. ಕ್ರೀಡಾಕೂಟಗಳು ಅಂದರೆ ಪ್ರತಿಭೆಗಳು ಬೆಳಗಲು ಅವಕಾಶವಾಗಿದೆ ಎಂದರು.

ರೋಟರಿ ಕ್ಲಬ್ ಪುತ್ತೂರು ಈಸ್ಟ್ ಕಾರ್ಯದರ್ಶಿ ವಸಂತ ಜಾಲಾಡಿ, ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್ ಸ್ಥಾಪಕಾಧ್ಯಕ್ಷ ಸಂತೋಷ್ ಶೆಟ್ಟಿ, ಮಾಜಿ ಅಸಿಸ್ಟೆಂಟ್ ಗವರ್ನರ್ ಗಳಾದ ಆಸ್ಕರ್ ಆನಂದ್, ಸಚ್ಚಿದಾನಂದ, ರೋಟರಿ ವಲಯ ಸೇನಾನಿ ವೆಂಕಟ್ರಮಣ ಗೌಡ ಕಳುವಾಜೆ, ರಾಷ್ಟ್ರೀಯ ಖೋಖೊ ತರಬೇತುದಾರ ಮಾಧವ ಗೌಡ, ರೋಟರಿ ಈಸ್ಟ್ ಮಾಜಿ ಅಧ್ಯಕ್ಷ ಶರತ್ ಕುಮಾರ್ ರೈ, ವಲಯ ಐದರ ಝೋನಲ್ ಸ್ಪೋರ್ಟ್ಸ್ ಕೋಆರ್ಡಿನೇಟರ್ ವಿಜಯ್ ವಿಲ್ಫ್ರೆಡ್‌ ಡಿ’ಸೋಜ ಸಹಿತ ಹಲವರು ಉಪಸ್ಥಿತರಿದ್ದರು. ರೋಟರಿ ಕ್ಲಬ್ ಪುತ್ತೂರು ಸ್ವರ್ಣ ಅಧ್ಯಕ್ಷ ಸುರೇಶ್ ಪಿ ಸ್ವಾಗತಿಸಿ, ಕಾರ್ಯದರ್ಶಿ ಸೆನೋರಿಟಾ ಆನಂದ್ ವಂದಿಸಿದರು. ರೋಟರಿ ಸ್ಬರ್ಣ ಸದಸ್ಯ ರಾಮಣ್ಣ ರೈ ಕೈಕಾರ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here