ಪುಣಚ: ಪ್ರಾಕೃತಿಕ ವಿಕೋಪದಿಂದ ಸಂಕಷ್ಟದಲ್ಲಿದ್ದ ಕುಟುಂಬವೊಂದಕ್ಕೆ ಒಕ್ಕಲಿಗ ಗೌಡ ಸೇವಾ ವಾಹಿನಿಯಿಂದ ಕೆಂಪುಕಲ್ಲನ್ನು ಮನೆಯರಿಗೆ ನೀಡಿ ಮಾನವೀಯತೆ ಮೆರೆದು ಮಾದರಿಯಾಗಿದ್ದಾರೆ.
ಕಳೆದ ಮಳೆಗಾಲದಲ್ಲಿ ಸುರಿದ ಭಾರೀ ಮಳೆಗೆ ಪುಣಚ ಗ್ರಾಮದ ಬಾಳೆಕುಮೇರಿ ನಿವಾಸಿ ತೀರ್ಥಾನಂದ ಗೌಡರ ಮನೆ ಪಕ್ಕದಲ್ಲಿದ್ದ ಗುಡ್ಡ ಕುಸಿದು ಮನೆಯಲ್ಲಿ ವಾಸಿಸಲು ಸಾಧ್ಯವಿಲ್ಲದೆ ಸಂಕಷ್ಟದಲ್ಲಿದ್ದು ವಿಟ್ಲ ಮುಡ್ನೂರು ಗ್ರಾಮದ ಆಲಂಗಾರು ಎಂಬಲ್ಲಿ ಹೊಸ ಮನೆ ನಿರ್ಮಾಣ ಹಂತದಲ್ಲಿದೆ. ಮನೆಗೆ ಬೇಕಾಗುವ 2500 ಕೆಂಪುಕಲ್ಲನ್ನು ಒಕ್ಕಲಿಗ ಗೌಡ ಸೇವಾವಾಹಿನಿ ತಂಡದಿಂದ ಮನೆ ಯಜಮಾನರಿಗೆ ಹಸ್ತಾಂತರಿಸುವ ಕಾರ್ಯಕ್ರಮ ನ.16ರಂದು ನಡೆಯಿತು.
ಮಂಗಳೂರು ಆದಿಚುಂಚನಗಿರಿ ಶಾಖಾಮಠದ ಶ್ರೀ ಧರ್ಮಪಾಲನಾಥ ಸ್ವಾಮೀಜಿಯವರು ದೀಪ ಬೆಳಗಿಸಿ ನೂತನ ಒಕ್ಕಲಿಗ ಗೌಡ ಸೇವಾವಾಹಿನಿ ಸಂಸ್ಥೆಯ ಲೋಕಾರ್ಪಣೆ ಹಾಗೂ ತೀರ್ಥಾನಂದ ಗೌಡರ ಕುಟುಂಬಕ್ಕೆ ತೆಂಗಿನಗಿಡ ನೀಡುವ ಮೂಲಕ ಹಸ್ತಾಂತರ ನೆರವೇರಿಸಿದರು. ಯುವಕರ ಸೇವಾತಂಡ ಸಮಾಜದಲ್ಲಿ ಉತ್ತಮ ಸೇವೆಯನ್ನು ನೀಡಿ ಸಮುದಾಯದಲ್ಲಿ ಸೇವಾ ಸಂಸ್ಥೆಯಾಗಿ ನೊಂದವರ ಬಾಳಿಗೆ ದಾರಿ ದೀಪವಾಗಿ ಬೆಳೆಯಲಿ ಎಂದು ಶುಭ ಹಾರೈಸಿದರು.ವಿಟ್ಲ ಮುಡ್ನೂರು ಗ್ರಾ.ಪಂ.ಅಧ್ಯಕ್ಷ ಪುನೀತ್ ಮಾಡತ್ತಾರು,ಕ್ಯಾಂಪ್ಕೋನಿರ್ದೇಶಕ ಕೃಷ್ಣ ಪ್ರಸಾದ್ ಮಡ್ತಿಲ ಮಾತನಾಡಿ ಶುಭ ಹಾರೈಸಿದರು.ಹಿರಿಯರಾದ ಭೋಜಪ್ಪ ಗೌಡ ಮಾಡತ್ತಾರು,ಸಾಮಾಜಿಕ ಕಾರ್ಯಕರ್ತ ಕಿಶೋರ್ ಕುಮಾರ್ ಸಂಕೇಶ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಚಿತ್ರಕಲಾ ಬೊಳ್ಳಾಜೆ ಪ್ರಾರ್ಥಿಸಿ, ಸೇವಾವಾಹಿನಿ ತಂಡದ ಅನೂಪ್ ನರಿಯೂರು ಪ್ರಾಸ್ತಾವಿಕ ಮಾತನ್ನಾಡಿದರು. ಅನಿತಾ ಕಿರಣ್ ಸ್ವಾಗತಿಸಿ, ಜಯರಾಮ ಕಲ್ಲಾಜೆ ಕಾರ್ಯಕ್ರಮ ನಿರೂಪಿಸಿ, ಧನ್ಯವಾದ ಗೈದರು.
ಸೇವಾ ವಾಹಿನಿಯ ಪದಾಧಿಕಾರಿಗಳು, ಸದಸ್ಯರು, ಸಮಾಜ ಬಾಂಧವರು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು. ಮನೆ ಯಜಮಾನ ತೀರ್ಥಾನಂದ ಗೌಡ ಬಾಳೆಕುಮೇರಿ ಅವರ ಪತ್ನಿ ಅನಿತಾ, ಪುತ್ರ ವಂಶಿಕ್, ಪುತ್ರಿ ಲಿಖಿತಾ ಅತಿಥಿಗಳನ್ನು ಸತ್ಕರಿಸಿದರು.