ಪುತ್ತೂರು: ಸಹಕಾರ ಕ್ಷೇತ್ರದ ಸಾಧನೆಗಾಗಿ ನೀಡಲಾಗುವ ರಾಜ್ಯ `ಸಹಕಾರ ರತ್ನ’ ಪುರಸ್ಕೃತರಾದ ಭಾರತೀಯ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಉತ್ತರ ವಲಯದ ಮಾಜಿ ನಿರ್ದೇಶಕ ಹಾಗೂ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಮಾಜಿ ಪ್ರಧಾನ ಕಾರ್ಯದರ್ಶಿಯಾಗಿರುವ ಪುತ್ತೂರು ಮೂಲದ ಹಿರಿಯ ಸಮಾಜ ಸೇವಕ ಡಾ. ಅಗರಿ ನವೀನ್ ಭಂಡಾರಿರವರಿಗೆ ನ. 17 ರಂದು ಬಾಗಲಕೋಟೆಯಲ್ಲಿ ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ಸಹಕಾರ ಸಚಿವ ಕೆ.ಎನ್. ರಾಜಣ್ಣರವರು ಪ್ರಶಸ್ತಿ ಪ್ರದಾನ ಮಾಡಿದರು.
ಅಗರಿ ನವೀನ್ ಭಂಡಾರಿಯವರು ಈಗಾಗಲೇ ಬೆಂಗಳೂರು ನಗರದ ಬೊಮ್ಮನಹಳ್ಳಿಯಲ್ಲಿ 111 ಎಕ್ರೆ ಪ್ರದೇಶದಲ್ಲಿ ಸುಸಜ್ಜಿತವಾದ ಮೂಲ್ಕಿ ಸುಂದರರಾಮ್ ಶೆಟ್ಟಿ ಬಡಾವಣೆ ನಿರ್ಮಾಣಕ್ಕೆ ಕಾರಣರಾಗಿದ್ದಾರೆ. ಇಲ್ಲಿ 535 ಅಪಾರ್ಟ್ಮೆಂಟ್ನ್ನು ಇವರ ನೇತೃತ್ವದಲ್ಲಿ ನಿರ್ಮಿಸಲಾಗಿದೆ. ಇದು ಬೆಂಗಳೂರಿನಲ್ಲೇ ಮಾದರಿ ಬಡಾವಣೆಯಾಗಿ ಬೆಳೆದಿದೆ. ಇದರ ಬೆಳವಣಿಗೆ. ಅಭಿವೃದ್ಧಿ ಹಿಂದೆ ಅಗರಿ ನವೀನ್ ಭಂಡಾರಿಯವರ ಪರಿಶ್ರಮವಿದೆ.
ಅಗರಿ ನವೀನ್ ಭಂಡಾರಿಯವರು ಮೂಲ್ಕಿ ಸುಂದರರಾಮ್ ಶೆಟ್ಟಿ ನಗರ ಸೌಹಾರ್ದ ಸಹಕಾರಿ ಸಂಘದಲ್ಲಿ ಕಳೆದ 19 ವರ್ಷಗಳಿಂದ ಅಧ್ಯಕ್ಷರಾಗಿ, ಸಹಕಾರ ಸಂಘವನ್ನು ಮಾದರಿಯಾಗಿ ಬೆಳೆಸಿದ್ದಾರೆ. ಸಹಕಾರ ಕ್ಷೇತ್ರಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡಿರುವ ನವೀನ್ ಭಂಡಾರಿಯವರು ಮೂಲ್ಕಿ ಸುಂದರರಾಮ್ ಶೆಟ್ಟಿ ನಗರ ಕ್ಷೇಮಾಭಿವೃದ್ಧಿ ಸಂಘದ ಸ್ಥಾಪಕಾಧ್ಯಕ್ಷರಾಗಿರುತ್ತಾರೆ. ಪ್ರಸ್ತುತ ಸುಂದರರಾಮ್ ಶೆಟ್ಟಿ ನಗರ ಕ್ಲಬ್ ಸಮಿತಿಯ ಅಧ್ಯಕ್ಷರಾಗಿದ್ದಾರೆ.