ಕ್ಯಾಂಪ್ಕೋ ಪುತ್ತೂರು ಶಾಖಾ ನವೀಕೃತ ಕಛೇರಿ ಉದ್ಘಾಟನೆ,ಸದಸ್ಯ ಬೆಳೆಗಾರರ ಸಭೆ

0

ಅಡಿಕೆ ಕ್ಯಾನ್ಸರ್ ಕಾರಕವೆಂಬ ವಾದ ಸತ್ಯಕ್ಕೆ ದೂರ-ಕಿಶೋರ್ ಕುಮಾರ್ ಕೊಡ್ಗಿ

ಪುತ್ತೂರು:ಅಡಿಕೆ ಕ್ಯಾನ್ಸರ್ ಕಾರಕವೆಂಬ ಡಬ್ಲೂಎಚ್‌ಒ ಅಂಗ ಸಂಸ್ಥೆಯ ವರದಿ ಬೆಳೆಗಾರರನ್ನು ಸಂಕಷ್ಟಕ್ಕೆ ಸಿಲುಕಿಸಿದೆ.ಅಡಿಕೆ ಕ್ಯಾನ್ಸರ್ ಕಾರಕ ಎಂಬ ಏಕಪಕ್ಷೀಯ ವಾದ ಸತ್ಯಕ್ಕೆ ದೂರವಾದುದಾಗಿದ್ದು ಅಡಿಕೆಯ ಕ್ಯಾನ್ಸರ್ ಕಾರಕ ಅಂಶಗಳ ಬಗ್ಗೆ ಪರಿಶೀಲಿಸಬೇಕು ಹಾಗೂ ಭಾರತೀಯ ಸಂಶೋಧನಾ ಸಂಸ್ಥೆಗಳಲ್ಲಿ ಸಂಶೋಧನೆ ನಡೆಸಲು ಸಹಕಾರ ನೀಡುವಂತೆ ಪ್ರಧಾನ ಮಂತ್ರಿ ಹಾಗೂ ಸಚಿವರಿಗೆ ಪತ್ರ ಬರೆಯಲಾಗಿದೆ.ಅಡಿಕೆಯಲ್ಲಿ ಕ್ಯಾನ್ಸರ್ ಕಾರಕ ಅಂಶ ಇದೆ ಎಂಬುದನ್ನು ಹೋಗಲಾಡಿಸಲು ಎಲ್ಲ ಸಹಕಾರ ಸಂಸ್ಥೆಗಳು ಹಾಗೂ ಕೃಷಿಕರೊಂದಿಗೆ ಸೇರಿಕೊಂಡು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದು ಕ್ಯಾಂಪ್ರೋ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ಹೇಳಿದರು.


ಪುತ್ತೂರು ಮಹಾಮಾಯಾ ದೇವಸ್ಥಾನದ ಸಮೀಪದಲ್ಲಿರುವ ಕ್ಯಾಂಪ್ರೋ ಶಾಖೆಯ ನವೀಕೃತ ಕಛೇರಿ ಉದ್ಘಾಟನೆ ಮತ್ತು ಮಹಾಮಾಯಾ ದೇವಸ್ಥಾನದ ಸಭಾಂಗಣದಲ್ಲಿ ನಡೆದ ಕ್ಯಾಂಪ್ಕೋ ಸದಸ್ಯ ಬೆಳೆಗಾರರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.


ಎರಡು ವರ್ಷದ ಹಿಂದೆ ನಿಟ್ಟೆ ವಿಶ್ವವಿದ್ಯಾನಿಲಯ ಹಾಗೂ ಕ್ಯಾಂಪ್ರೋ ಸಹಯೋಗದೊಂದಿಗೆ ಸಂಶೋಧನೆ ನಡೆಸಿ ಅಡಿಕೆ ಕ್ಯಾನ್ಸರ್ ಕಾರಕ ಅಲ್ಲ ಎಂದು ವರದಿ ನೀಡಿದ್ದೇವೆ.1974ರಲ್ಲಿ ಭಾರತೀಯ ವಿಜ್ಞಾನ ಸಂಸ್ಥೆ ಬೆಂಗಳೂರು ಇದರ ವಿಜ್ಞಾನಿಗಳು ವೀಳ್ಯದೆಲೆ ಮತ್ತು ಅಡಿಕೆಯನ್ನು ತಿನ್ನುವುದರಿಂದ ಕ್ಯಾನ್ಸರ್ ಗುಣವನ್ನು ಕಡಿಮೆ ಮಾಡುತ್ತದೆ.ಅಲ್ಲದೆ ಕ್ಯಾನ್ಸರ್‌ಗಳನ್ನು ಬೆಳೆಯಲು ಬಿಡುವುದಿಲ್ಲ ಎಂದೂ ವರದಿ ನೀಡಿದ್ದಾರೆ.2016ರಲ್ಲಿ ಅಟ್ಲಾಂಟದಲ್ಲಿ ಹಾಗೂ 2023ರಲ್ಲಿ ಇಂಡೋನೇಷಿಯಾದಲ್ಲಿ ನಡೆದ ಸಂಶೋಧನೆಯಲ್ಲಿ ಕೂಡ, ಅಡಿಕೆಯಿಂದ ಕ್ಯಾನ್ಸರ್ ಬರುವುದಿಲ್ಲ ಎಂದು ವರದಿ ಬಂದಿದೆ.ಆದರೆ ಡಬ್ಲ್ಯೂಎಚ್‌ಒ ಸಂಸ್ಥೆಯ ಅಂಗ ಸಂಸ್ಥೆಗಳು ಮಾತ್ರ ಅಡಿಕೆಯನ್ನು ಕ್ಯಾನ್ಸರ್ ಕಾರಕ ಎಂದು ಗುರಿ ಮಾಡುತ್ತಿವೆ.ಅಡಿಕೆಯೊಂದಿಗೆ ತಂಬಾಕು ಸೇವಿಸಿದಾಗ ಮಾತ್ರ ಕ್ಯಾನ್ಸರ್ ಬರುವ ಸಾಧ್ಯತೆ ಇದೆ ಎಂದು ಹೇಳಿದ ಕ್ಯಾಂಪ್ಕೋ ಅಧ್ಯಕ್ಷರು, ಮುಂದಿನ ಡಿಸೆಂಬರ್ ತಿಂಗಳಿನಲ್ಲಿ ಸಾಗರದಲ್ಲಿ ಅಡಿಕೆ ಬೆಳೆಗಾರರ ಬೃಹತ್ ಸಮಾವೇಶ ನಡೆಯಲಿದೆ.ಸಮಾವೇಶದಲ್ಲಿ ಅಡಿಕೆ ಹಾನಿಕಾರಕ ಅಲ್ಲ ಎಂಬ ನಿರ್ಣಯವನ್ನು ಕೈಗೊಳ್ಳಲಿದ್ದೇವೆ.ಭೂತಾನ್‌ನಿಂದ ಆಮದಾದ ಅಡಿಕೆಯಿಂದ ರೈತರಿಗೆ ಯಾವುದೇ ತೊಂದರೆ ಇಲ್ಲ.ಇದರ ಬಗ್ಗೆ ರೈತರು ಹೆದರುವ ಅವಶ್ಯಕತೆ ಇಲ್ಲ.ಅಡಿಕೆಯ ದರವನ್ನು ಕಡಿಮೆ ಮಾಡಲು ಬಿಡುವುದಿಲ್ಲ.ಇದರ ಬಗ್ಗೆ ಆಡಳಿತ ಮಂಡಳಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತದೆ ಎಂದು ಹೇಳಿದರು.


ಕ್ಯಾಂಪ್ಕೋ ಉಪಾಧ್ಯಕ್ಷ ಶಂಕರನಾರಾಯಣ ಭಟ್ ಖಂಡಿಗೆ ಮಾತನಾಡಿ ಕ್ಯಾಂಪ್ಕೋ ಸಂಸ್ಥೆ ಹಾಗೂ ಬೆಳೆಗಾರರ ನಡುವೆ ವಿಚಾರ ವಿಮರ್ಶೆ ನಡೆಯಬೇಕು.ಬೆಳೆಗಾರರೇ ಸಂಸ್ಥೆಯ ಆಧಾರಸ್ತಂಭ ಹಾಗೂ ರಾಯಭಾರಿಗಳು.ಸಂಸ್ಥೆ ಮತ್ತು ಬೆಳೆಗಾರರು ಬೆಳೆಯಬೇಕು ಎಂದು ಹೆಳಿದರು.


ಕ್ಯಾಂಪ್ಕೋ ವ್ಯವಸ್ಥಾಪಕ ನಿರ್ದೇಶಕ ಬಿ.ವಿ.ಸತ್ಯನಾರಾಯಣ ಮಾತನಾಡಿ ಕೆಲವು ದಿನಗಳಿಂದ ‘ಅಡಿಕೆ ಕ್ಯಾನ್ಸರ್ ಕಾರಕ’ ವಿಚಾರ ರೈತರಲ್ಲಿ ಗಲಿಬಿಲಿ ಉಂಟು ಮಾಡಿದೆ.ಇದಕ್ಕೆ ಸೂಕ್ತವಾದ ಪರಿಹಾರ ದೊರಕಲಿದೆ ಎಂಬ ಆಶಾಭಾವವಿದೆ.ಕಳೆದ ಏಪ್ರಿಲ್‌ನಿಂದ ಸೆಪ್ಟೆಂಬರ್ ತಿಂಗಳಿನವರೆಗೆ ಕ್ಯಾಂಪ್ಕೋ 1700 ಕೋ.ರೂ.ವ್ಯವಹಾರ ನಡೆಸಿದೆ.ಇದರ ಜೊತೆಗೆ ಶೇ.3ರಷ್ಟು ಪ್ರಗತಿ ಸಾಧಿಸಿದೆ ಎಂದರು.ಬೆಳೆಗಾರರಿಗೆ ಉತ್ತಮ ದರ ಸಿಗಬೇಕೆನ್ನುವ ಉದ್ದೇಶವನ್ನು ಕ್ಯಾಂಪ್ಕೋ ಹೊಂದಿದೆ ಎಂದವರು ಹೇಳಿದರು.ಕೃಷಿ ಅಧಿಕಾರಿ ಕೃಷ್ಣ ಅವರು ಸಾವಯವ ಗೊಬ್ಬರದ ಮಾಹಿತಿ ನೀಡಿದರು.ಕರ್ಣಾಟಕ ಬ್ಯಾಂಕ್ ಅಧಿಕಾರಿ ಅಜಿತ್ ಕೃಷಿಕರಿಗೆ ಬ್ಯಾಂಕ್‌ನಿಂದ ಸಿಗುವ ಸಾಲ ಸೌಲಭ್ಯದ ಮಾಹಿತಿ ನೀಡಿದರು.


ನವೀಕೃತ ಕಚೇರಿ ಉದ್ಘಾಟನೆ:
ಮಹಾಮಾಯ ದೇವಸ್ಥಾನದ ಸಮೀಪವಿರುವ ಕ್ಯಾಂಪ್ಕೋ ಪುತ್ತೂರು ಶಾಖೆಯ ನವೀಕೃತ ಕಛೇರಿಯ ಉದ್ಘಾಟನೆ ನಡೆಯಿತು.ಹಿರಿಯ ಸದಸ್ಯ ಬೆಳೆಗಾರ ಎನ್.ಎಸ್.ಹರಿಹರ ರಾವ್ ಕೊಡಿಪ್ಪಾಡಿ ಅವರು ಕಛೇರಿಯನ್ನು ದೀಪ ಬೆಳಗಿಸಿ ಉದ್ಘಾಟಿಸಿದರು.


ಸದಸ್ಯ ಬೆಳೆಗಾರರಾದ ಮೋಹನ್ ರೈ, ಶಂಕರ ಭಟ್ ಬಲ್ನಾಡು, ಶ್ರೀರಾಮ ಪ್ರಸಾದ್, ಉಷಾರವರು ಸಭಾ ಕಾರ್ಯಕ್ರಮ ಉದ್ಘಾಟಿಸಿದರು.ಕ್ಯಾಂಪ್ಕೋ ಆಡಳಿತ ಮಂಡಳಿ ನಿರ್ದೇಶಕರಾದ ಎಸ್.ಆರ್.ಸತೀಶ್ಚಂದ್ರ, ಕೃಷ್ಣಪ್ರಸಾದ್ ಮಡ್ತಿಲ, ಕೆ.ಬಾಲಕೃಷ್ಣ ರೈ, ಜಯರಾಮ ಸರಳಾಯ, ಜಯಪ್ರಕಾಶ್ ನಾರಾಯಣ ಟಿ.ಕೆ., ರಾಧಾಕೃಷ್ಣನ್ ಕೆ., ಸತ್ಯನಾರಾಯಣ ಪ್ರಸಾದ್, ಸುರೇಶ್ ಕುಮಾರ್ ಶೆಟ್ಟಿ ಪಿ., ಜನರಲ್ ಮ್ಯಾನೇಜರ್ ರೇಶ್ಮಾ ಮಲ್ಯ, ಡಿಜಿಎಂ ಪರಮೇಶ್ವರ್, ಸಿಪಿಸಿಆರ್‌ಐ ವಿಜ್ಞಾನಿ ಕೇಶವ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಕ್ಯಾಂಪ್ರೋ ಪುತ್ತೂರು ಶಾಖೆಯ ಸಿಬಂದಿ ಚೇತನಾ ಆಳ್ವ ಪ್ರಾರ್ಥಿಸಿ, ಕ್ಯಾಂಪ್ಕೋ ನಿರ್ದೇಶಕ ರಾಘವೇಂದ್ರ ಭಟ್ ಸ್ವಾಗತಿಸಿದರು. ಮಾರುಕಟ್ಟೆ ವಿಭಾಗದ ಮುಖ್ಯಸ್ಥ ಗೋವಿಂದ ಭಟ್ ವಂದಿಸಿ ಸಿಬ್ಬಂದಿ ನಿತಿನ್ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರು.

ಅಡಿಕೆ ಹಾಳಾಗದಂತೆ ಮಾತ್ರೆ ಬದಲು ಕಾಳುಮೆಣಸು
ಮೋಹನ್ ರೈ ನರಿಮೊಗರು ಮಾತನಾಡಿ ಅಡಿಕೆ ಹಾಳಾಗದಂತೆ ಮಾತ್ರೆ ಹಾಕುವ ಬದಲು ಅಡಿಕೆ ದಾಸ್ತಾನು ಗೋಣಿಗೆ 12 ಗ್ರಾಂ.ನಷ್ಟು ಕಾಳುಮೆಣಸನ್ನು ಬಟ್ಟೆಯಲ್ಲಿ ಕಟ್ಟಿ ಹಾಕಿದರೆ ಅಡಿಕೆಯನ್ನು 2 ವರ್ಷ ಕೆಡದಂತೆ ಇಡಬಹುದು ಎಂದು ಸಲಹೆ ನೀಡಿದರು.

ಪುತ್ತೂರಿನಲ್ಲಿ ಮಣ್ಣು ಪರೀಕ್ಷಾ ಕೇಂದ್ರದ ವ್ಯವಸ್ಥೆಯಾಗಬೇಕು
ಸದಸ್ಯ ಬೆಳೆಗಾರರು ವಿವಿಧ ಸಲಹೆಗಳನ್ನು ನೀಡಿ ಪ್ರಶ್ನೋತ್ತರ ನಡೆಸಿದರು.ಸದಸ್ಯರಾದ ಶಂಕರ ನಾರಾಯಣ ಭಟ್ ಮಾತನಾಡಿ ಪುತ್ತೂರಿನಲ್ಲಿ ಮಣ್ಣು ಪರೀಕ್ಷಾ ಕೇಂದ್ರದ ವ್ಯವಸ್ಥೆ ಆಗಬೇಕು ಎಂದು ಹೇಳಿದರು.ಸುರೇಶ್ ಬಲ್ನಾಡು ಮಾತನಾಡಿ ಅಡಿಕೆ ಹಾಗೂ ಇತರ ಬೆಳೆಗಳಿಗೆ ಬಾಧಿಸುವ ರೋಗದ ಮಾಹಿತಿಯನ್ನು ನೀಡಬೇಕು ಎಂದರು.ಎ.ಪಿ.ಸದಾಶಿವ ಮಾತನಾಡಿ ತೆಂಗಿನಕಾಯಿಯನ್ನು ಕ್ಯಾಂಪ್ರೋ ಖರೀದಿ ಮಾಡಬೇಕು.ಕ್ಯಾನ್ಸರ್ ಕಾರಕ ವರದಿಯ ಬಗ್ಗೆ ಕೈಗೊಂಡ ಕ್ರಮಗಳನ್ನು ತಿಳಿಸಬೇಕು ಎಂದು ಹೇಳಿದರು.

ರಾಮ ಭಟ್ ಬಂಗಾರಡ್ಕ ಮಾತನಾಡಿ ಕೋಕೋಗೆ ರೂ.125 ದರ ಸಾಕಾಗುವುದಿಲ್ಲ.ಕನಿಷ್ಟ 250 ರೂ. ದರ ನಿಗದಿ ಮಾಡಬೇಕು ಎಂದು ಹೇಳಿದರು.ವಾಸುದೇವ ಮಯ್ಯ ಮಾತನಾಡಿ ಎಲೆಚುಕ್ಕಿ ರೋಗ ನಿವಾರಣೆಗೆ ಕ್ಯಾಂಪ್ರೋ ಪ್ರಯತ್ನ ಮಾಡಬೇಕು ಎಂದರು.ಕೃಷ್ಣಪ್ರಸಾದ್ ಕೆದಿಲಾಯ ಮಾತನಾಡಿ ದರವನ್ನು ಕ್ಯಾಂಪ್ರೋ ನಿಯಂತ್ರಿಸಬೇಕು ಎಂದರು.ಮೋಹನ್ ರೈ ನರಿಮೊಗ್ರು ಮಾತನಾಡಿ ಬೇಸಿಗೆ ಕಾಲದಲ್ಲಿ ಸಣ್ಣ ಅಡಿಕೆ ಬೀಳಲು ಕಾರಣ ಏನು ಎಂಬುದನ್ನು ವಿಜ್ಞಾನಿಗಳು ತಿಳಿಸಬೇಕು ಎಂದರು.ಕೊಕ್ಕೋ ಬೆಳೆಗೆ ಮಂಗನ ಉಪಟಳ ಇದೆ.ಇದರ ಬಗ್ಗೆ ಅರಣ್ಯ ಇಲಾಖೆಯವರೊಂದಿಗೆ ಮಾತನಾಡಿ ಕ್ರಮಕೈಗೊಳ್ಳಬೇಕು.ಅಡಿಕೆಯನ್ನೇ ನಂಬುವ ಬದಲು ತಾಳೆ ಕೃಷಿಯನ್ನು ಮಿಶ್ರ ಬೆಳೆಯಾಗಿ ಮಾಡಬೇಕು ಎಂದು ಸದಸ್ಯರು ಹೇಳಿದರು.


ಅಡಿಕೆ-ವೀಳ್ಯದೆಲೆ ತಿನ್ನುವ
ಹವ್ಯಾಸ ಬೆಳೆಸಬೇಕುಸದಸ್ಯರ ಪ್ರಶ್ನೆಗಳಿಗೆ ಅಧ್ಯಕ್ಷರು ಉತ್ತರಿಸಿ ಮನೆಯಲ್ಲಿ ಅಡಿಕೆ ಮತ್ತು ವೀಳ್ಯದೆಲೆ ತಿನ್ನುವ ಹವ್ಯಾಸ ಬೆಳೆಸಬೇಕು.ಇದರಿಂದ ಅಡಿಕೆಗೆ ಬೇಡಿಕೆ ಬರುತ್ತದೆ.ಈಗಾಗಲೇ ಸಣ್ಣ ಪ್ರಮಾಣದ ಮಣ್ಣು ಪರೀಕ್ಷಾ ಯಂತ್ರ ಖರೀದಿ ಮಾಡಿದ್ದೇವೆ.ಇದರಲ್ಲಿ ಶೇ.95ರಿಂದ 99ರವರೆಗೆ ಪರೀಕ್ಷಾ ಫಲಿತಾಂಶ ಲಭಿಸುತ್ತದೆ.ಸಾಗರದಲ್ಲಿ ಸ್ವಂತ ಸಾವಯವ ಗೊಬ್ಬರ ಕಾರ್ಖಾನೆ ಆರಂಭಿಸುವ ಚಿಂತನೆ ಇದೆ.ತೆಂಗಿನ ಕಾಯಿಯನ್ನು ಈಗಾಗಲೇ ಕೆಲವು ಕೇಂದ್ರಗಳಲ್ಲಿ ಖರೀದಿ ಮಾಡಿದ್ದೇವೆ.ಮಾರುಕಟ್ಟೆಯಲ್ಲಿ ಬೇಡಿಕೆ ಹಾಗೂ ಪೂರೈಕೆಯ ಮೇಲೆ ದರ ನಿಲ್ಲುತ್ತದೆ.ಈ ವರ್ಷಾಂತ್ಯಕ್ಕೆ ಅಡಿಕೆಯಲ್ಲಿ 40ರಿಂದ 50ಕೋಟಿ ರೂ. ಲಾಭ ಬರುತ್ತದೆ.ಮಂಗನ ಹಾವಳಿ ಬಗ್ಗೆ ಅರಣ್ಯ ಇಲಾಖೆಯವರಲ್ಲಿ ಮಾತನಾಡಿ ಮಂಗಗಳನ್ನು ಅಂಡಮಾನ್‌ಗೆ ಬಿಡುವ ಬಗ್ಗೆ ಚರ್ಚಿಸಲಾಗಿದೆ ಎಂದರು.

LEAVE A REPLY

Please enter your comment!
Please enter your name here