ಕ್ಷಾತ್ರ ತೇಜಸ್ಸಿನ ಮನೋಭಾವದೆಡೆಗೆ ಕೊಂಡೊಯ್ಯುವ ಕಾರ್ಯ ಶಿಕ್ಷಣದಿಂದಾಗಬೇಕಿದೆ: ಡಾ. ಕಲ್ಲಡ್ಕ ಪ್ರಭಾಕರ ಭಟ್
ಉಪ್ಪಿನಂಗಡಿ: ಮೆಕಾಲೆ ಶಿಕ್ಷಣದಿಂದ ನಿರ್ವೀಯತೆಯ ಮನೋಭಾವಕ್ಕೆ ಸಿಲುಕಿದ ಭಾರತೀಯರನ್ನು ಮತ್ತೆ ಕ್ಷಾತ್ರತೇಜಸ್ಸಿನ ಮನೋಭಾವದೆಡೆಗೆ ಕೊಂಡೊಯ್ಯುವ ಕಾರ್ಯ ಶಿಕ್ಷಣದಿಂದಾಗಬೇಕು. ವಿಶ್ವಶ್ರೇಷ್ಠ ಭಾರತೀಯ ಜೀವನ ಮೌಲ್ಯಗಳ ಮಹತ್ವವನ್ನು ತಿಳಿಸುವ ಮೂಲಕ ಮನುಷ್ಯನನ್ನು ನಿಜವಾದ ಮನುಷ್ಯನನ್ನಾಗಿಸುವ ಅನಿವಾರ್ಯತೆ ಇಂದು ಎದುರಾಗಿದೆ ಎಂದು ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಕಲ್ಲಡ್ಕ ಪ್ರಭಾಕರ ಭಟ್ ಪ್ರತಿಪಾದಿಸಿದರು.
ಉಪ್ಪಿನಂಗಡಿಯ ಇಂದ್ರಪ್ರಸ್ಥ ವಿದ್ಯಾಲಯದ ಇಂದ್ರಪ್ರಭ ಆಡಿಟೋರಿಯಮ್ ಹಾಗೂ ಇಂದ್ರಪ್ರಸ್ಥ ಪಿಯು ಕಾಲೇಜಿನ ವಾರ್ಷಿಕೋತ್ಸವವನ್ನು ನ.25ರಂದು ಉದ್ಘಾಟಿಸಿ ಅವರು ಮಾತನಾಡಿದರು.
ಅಂದು ಧರ್ಮದ ಸ್ಥಾಪನೆಗಾಗಿ ಇಂದ್ರಪ್ರಸ್ಥ ನಗರಿಯನ್ನು ಶ್ರೀ ಕೃಷ್ಣ ಪಾಂಡವರೊಂದಿಗೆ ಸೇರಿ ನಿರ್ಮಿಸಿದರೆ, ಇಂದು ರಾಷ್ಟ್ರಧರ್ಮ ಪ್ರಧಾನ ಶಿಕ್ಷಣಕ್ಕಾಗಿ ಇಂದ್ರಪ್ರಸ್ಥ ವಿದ್ಯಾಲಯವನ್ನು ಯು.ಎಸ್.ಎ. ನಾಯಕ್ ಸ್ಥಾಪಿಸಿದರು. ಸಾಮಾನ್ಯ ಕುಟುಂಬದ ವಿದ್ಯಾರ್ಥಿಗಳು ರಾಷ್ಟ್ರ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ತೋರಿ ದೇಶಕ್ಕೆ ಕೀರ್ತಿ ತರುವಲ್ಲಿ ಇಂದ್ರಪ್ರಸ್ಥ ವಿದ್ಯಾಲಯದ ಪ್ರೋತ್ಸಾಹ ಪ್ರೇರಣೆ ಶ್ಲಾಘನೀಯವಾಗಿದೆ ಎಂದರು.
ಮುಖ್ಯ ಅತಿಥಿ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ. ಮಹೇಶ್ ಪ್ರಸಾದ್, ಜಗತ್ತಿನ ಬಹುತೇಕ ಸಂಶೋಧನೆಗಳು ಭಾರತೀಯರಿಂದಲೇ ಆಗಿದ್ದರೂ, ವಿದೇಶಿ ವಿಜ್ಞಾನಿಗಳು ಮೊತ್ತ ಮೊದಲು ಕಂಡು ಹುಡುಕಿದ ಪ್ರಶಂಸೆಗೆ ಒಳಗಾಗಿದ್ದಾರೆ. ನಮ್ಮತನದ ಬಗ್ಗೆ ನಮಗೆ ಅಭಿಮಾನವಿರಿಸಿ ನಮ್ಮ ನಮ್ಮ ಪೂರ್ಣ ಪ್ರಮಾಣದ ಸಾಮರ್ಥ್ಯವನ್ನು ಬಳಸಿ ಯಶಸ್ಸಿನತ್ತ ಸಾಗುವಲ್ಲಿ ಪ್ರಯತ್ನಶೀಲರಾಗಬೇಕೆಂದರು.
ವಿವಿಧ ಕ್ಷೇತ್ರದಲ್ಲಿ ಸಾಧನೆ ತೋರಿದ ವಿದ್ಯಾರ್ಥಿಗಳನ್ನು, ಸರ್ವಾಂಗೀಣ ಸಾಧನೆ ತೋರಿದ ವಿದ್ಯಾರ್ಥಿ ಸುಮಂತ್ ಶೆಟ್ಟಿಯನ್ನು ಇಂದ್ರ ಧನುಷ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಇಂದ್ರಪ್ರಸ್ಥ ವಿದ್ಯಾ ಸಂಸ್ಥೆಯ ಅಧ್ಯಕ್ಷ ಕರುಣಾಕರ ಸುವರ್ಣ , ಸಂಚಾಲಕ ಸುಬ್ರಹ್ಮಣ್ಯ ಭಟ್, ವಿವೇಕಾನಂದ ವಿದ್ಯಾವರ್ಧಕ ಸಂಘದ ಆಡಳಿತ ಮಂಡಳಿ ಸದಸ್ಯೆ ಡಾ. ಸುಧಾ ರಾವ್, ಇಂದ್ರಪ್ರಸ್ಥ ಪಿಯು ಕಾಲೇಜಿನ ಪ್ರಾಂಶುಪಾಲ ಪ್ರೊ. ಎಚ್.ಕೆ. ಪ್ರಕಾಶ್, ಕಾಲೇಜು ವಿದ್ಯಾರ್ಥಿ ನಾಯಕ ಯಶ್ವಿತ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಗಣ್ಯರಾದ ಡಾ ನಿರಂಜನ್ ರೈ, ಡಾ. ಸುಪ್ರಿತಾ ರೈ, ಸುದರ್ಶನ್, ಹರಿರಾಮಚಂದ್ರ, ಸುಂದರ ಗೌಡ , ಐ. ಚಿದಾನಂದ ನಾಯಕ್, ರಾಜೇಶ್ ರೈ , ಸುನಿಲ್ ಅನಾವು, ಧನ್ಯಕುಮಾರ್ ರೈ, ಯು.ಜಿ. ರಾಧಾ , ಸುಧಾಕರ ಶೆಟ್ಟಿ, ವಿದ್ಯಾಧರ ಜೈನ್ , ಯು. ರಾಜೇಶ್ ಪೈ, ಸುರೇಶ್ ಜಿ., ಕೆ.ವಿ. ಪ್ರಸಾದ, ಜಯಂತ ಪೊರೋಳಿ, ರವಿ ಇಳಂತಿಲ, ಜನಾರ್ದನ ಗೌಡ ಅಣ್ಣಾಜೆ, ಗುಣಕರ ಅಗ್ನಾಡಿ , ಜಯಪ್ರಕಾಶ್ ಕಡಮ್ಮಾಜೆ, ವಂದನಾ ಶರತ್, ಆದೇಶ್ ಶೆಟ್ಟಿ ಮೊದಲಾದವರು ಭಾಗವಹಿಸಿದ್ದರು.
ಇಂದ್ರಪ್ರಸ್ಥ ವಿದ್ಯಾಲಯದ ಮುಖ್ಯೋಪಾಧ್ಯಾಯಿನಿ ವೀಣಾ ಆರ್. ಪ್ರಸಾದ್ ಸ್ವಾಗತಿಸಿದರು. ಯಶ್ವಿತ್ ವಂದಿಸಿದರು. ಉಪನ್ಯಾಸಕಿಯರಾದ ಸ್ವಾತಿ, ಸುಂದರಿ ಕಾರ್ಯಕ್ರಮ ನಿರೂಪಿಸಿದರು. ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.