ಪುತ್ತೂರು ; ಕಡಬ ತಾಲೂಕಿನ ಆಲಂಕಾರು ಗ್ರಾಮ ಹಾಗೂ ಕುದ್ಮಾರು ಗ್ರಾಮವನ್ನು ಬೆಸೆಯುವ ಆಲಂಕಾರು-ಶಾಂತಿಮೊಗುರು ಜಿಲ್ಲಾ ಮುಖ್ಯ ರಸ್ತೆಯಲ್ಲಿ ಅಲ್ಲಲ್ಲಿ ಗುಂಡಿಗಳು ನಿರ್ಮಾಣವಾಗಿ, ಅಪಾಯಕಾರಿಯಾಗಿ ಪರಿಣಮಿಸಿ ವಾಹನ ಸಂಚಾರಕ್ಕೆ ಅಡಚಣೆಯಾಗುತ್ತಿದೆ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ.
ಆಲಂಕಾರು ಪೇಟೆಯ ಸಂತೆಕಟ್ಟೆಯ ಬಳಿಯ ಜಂಕ್ಷನ್, ಕೊಂಡಾಡಿ ಕೂಡೂರು ಫಾರ್ಮ್ ಬಳಿ ಹಾಗೂ ಕಲ್ಲೇರಿ ಬಳಿ ಗುಂಡಿಗಳು ನಿರ್ಮಾಣವಾಗಿವೆ, ಕಳೆದ ಮಳೆಗಾಲಕ್ಕೂ ಮುಂಚೆಯೆ ಗುಂಡಿಗಳು ನಿರ್ಮಾಣವಾಗಿದ್ದು ಇನ್ನೂ ಅದರ ದುರಸ್ತಿ ಕಾರ್ಯವಾಗಿಲ್ಲ ಎನ್ನುವ ಅಕ್ರೋಶ ಸಾರ್ವಜನಿಕರ ವಲಯದಲ್ಲಿ ಎದ್ದಿದೆ. ಕೂಡೂರು ಫಾರ್ಮ್ ಹಾಗೂ ಆಲಂಕಾರು ಸಂತೆಕಟ್ಟೆ ಬಳಿ ರಸ್ತೆ ವ್ಯಾಪಕ ಹಾನಿಯಾಗಿದ್ದು, ವಾಹನ ಸವಾರರು ಪರದಾಡುವಂತಾಗಿದೆ. ದ್ವಿಚಕ್ರ ವಾಹನ ಸವಾರರು ಗುಂಡಿಗೆ ಬಿದ್ದು ಗಾಯಮಾಡಿಕೊಂಡ ಘಟನೆಗಳು ಸಂಭವಿಸುತ್ತಲೇ ಇದೆ.
ಕುಮಾರಧಾರ ನದಿಗೆ ಶಾಂತಿಮೊಗರುವಿನಲ್ಲಿ ಅಂದಿನ ಶಾಸಕ ಎಸ್.ಅಂಗಾರ ಅವರ ಶಿಫಾರಸ್ಸಿನಲ್ಲಿ ಸುಮಾರು 15.5 ಕೋಟಿ ರೂ ವೆಚ್ಚದಲ್ಲಿ 2015 ರಿಂದ 2017 ರ ವರೆಗೆ ಕಾಮಗಾರಿ ನಡೆದು ಹೊಸ ಸರ್ವಋತು ಸೇತುವೆ ನಿಮಾಣವಾದ ಬಳಿಕ ಈ ಸೇತುವೆಗೆ ಸಂಪರ್ಕ ರಸ್ತೆಯಾದ ಆಲಂಕಾರಿನಿಂದ ಶಾಂತಿಮೊಗರು ವರೆಗೆ ಸುಮಾರು 3 ಕಿಲೋ ಮೀಟರ್ ರಸ್ತೆಯನ್ನು ಮರು ನಿರ್ಮಾಣ ಮಾಡಲಾಗಿತ್ತು. ಈ ರಸ್ತೆಯನ್ನು ಜಿಲ್ಲಾ ಮುಖ್ಯ ರಸ್ತೆಯಾಗಿ ಪರಿವರ್ತಿಸಿರುವ ಅಂಗಾರ ಅವರು 2016 ರಲ್ಲಿ ಜಿಲ್ಲಾ ಮುಖ್ಯ ರಸ್ತೆ ಲೆಕ್ಕ ಶಿರ್ಷಿಕೆಯಡಿ ಮೂರು ಕೋಟಿ ರೂ ಮಂಜೂರುಗೊಳಿಸಿ ರಸ್ತೆ ನಿರ್ಮಾಣವಾಗಿತ್ತು. ಅದಾದ ಎಂಟು ವರ್ಷದಲ್ಲಿ ರಸ್ತೆ ಅಧ್ವಾನಗೊಂಡಿದೆ. ಕಳೆದ ಎರಡು ವರ್ಷಗಳಿಂದ ಈ ದುರವಸ್ಥೆ ಇದ್ದರೂ ಇದಕ್ಕೆ ಶಾಶ್ವತ ಪರಿಹಾರ ದೊರಕಿಲ್ಲ. ಇದೀಗ ರಸ್ತೆಯ ಅಕ್ಕ ಪಕ್ಕದ ಪೊದರು ಹಾಗೂ ಕಳೆಗಳನ್ನು ತೆಗೆಯುತ್ತಿದ್ದು. ಒಂದು ಬದಿಯ ಕಳೆ ತೆಗೆದು ಇನ್ನೊಂದು ಬದಿಗೆ ಹಾಕಲಾಗುತ್ತಿದೆ. ರಸ್ತೆ ಬದಿಯ ಚರಂಡಿ ದುರಸ್ತಿ ಕೂಡಾ ಸಮರ್ಪಕವಾಗಿ ನಡೆಯುತ್ತಿಲ್ಲ ಎನ್ನುವ ಆರೋಪ ವ್ಯಕ್ತವಾಗಿದೆ.
ದಿನವಹಿ ನೂರಾರು ವಾಹನಗಳು ಸಂಚರಿಸುತ್ತಿರುವ ಈ ಜಿಲ್ಲಾ ಮುಖ್ಯ ರಸ್ತೆಯಲ್ಲಿರುವ ಗುಂಡಿಗಳನ್ನು ಮುಚ್ಚಿ ದುರಸ್ತಿ ಮಾಡುವ ಕಾರ್ಯಕ್ಕೆ ಸಂಬಂಧಪಟ್ಟವರು ಮುಂದಾಗುತ್ತಿಲ್ಲ ಎನ್ನುವ ಅಕ್ರೋಶ ವ್ಯಕ್ತವಾಗುತ್ತಿದೆ. ಶೀಘ್ರದಲ್ಲಿ ಗುಂಡಿ ಮುಚ್ಚುವ ಕಾರ್ಯ ಮಾಡದಿದ್ದರೆ ಹೋರಾಟದ ಎಚ್ಚರಿಕೆಯನ್ನು ಸಾರ್ವಜನಿಕರು ನೀಡಿದ್ದಾರೆ.
ರಸ್ತೆಯಲ್ಲಿ ಗುಂಡಿ ನಿರ್ಮಾಣವಾಗಿರುವುದು ಇಲಾಖೆಯ ಗಮನಕ್ಕೆ ಬಂದಿದೆ. ತೇಪೆ ಕಾರ್ಯ ಮಾಡುವುದು ಸ್ವಲ್ಪ ತಡವಾಗಿದೆ, ಈಗಾಗಲೇ ರಸ್ತೆ ಬದಿಯ ಕಳೆ ಕೀಳುವ ಕೆಲಸ ಪ್ರಾರಂಭಿಸಲಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಗುಂಡಿ ಮುಚ್ಚುವ ಕಾರ್ಯ ಮಾಡಲಾಗುವುದು. ಸಾರ್ವಜನಿಕರು ಸಹಕರಿಸಬೇಕು.
ಎಲ್.ಸಿ.ಸಕ್ವೇರಾ, ಕಿರಿಯ ಅಭಿಯಂತರು,
ಲೋಕೋಪಯೋಗಿ ಇಲಾಖೆ, ಪುತ್ತೂರು ಉಪವಿಭಾಗ
ಆಲಂಕಾರಿನಿಂದ ಶಾಂತಿಮೊಗರು ಸೇತುವೆ ತನಕದ ಜಿಲ್ಲಾ ಮುಖ್ಯ ರಸ್ತೆ ಅಲ್ಲಲ್ಲಿ ಗುಂಡಿ ಬಿದ್ದಿರುವುದರಿಂದ ವಾಹನ ಸವಾರರು ಸಂಕಷ್ಟಕ್ಕೆ ಈಡಾಗಿದ್ದಾರೆ. ಪುತ್ತೂರು ಸುಳ್ಯ, ಸವಣೂರು, ಧರ್ಮಸ್ಥಳಕ್ಕೆ ಸುಲಭ ಸಂಪರ್ಕ ಕಲ್ಪಿಸುವ ಈ ರಸ್ತೆಯಲ್ಲಿ ದಿನದಿಂದ ದಿನಕ್ಕೆ ವಾಹನಗಳ ಸಂಖ್ಯೆ ಅಧಿಕವಾಗುತ್ತಲೇ ಹೋಗುತ್ತಿವೆ. ಕಳೆದ ಒಂದೂವರೆ ವರ್ಷದಿಂದ ಈ ರಸ್ತೆ ಅದ್ವಾನಗೊಂಡಿದ್ದರೂ ದುರಸ್ತಿ ಮಾಡದಿರುವುದು ದುರಂತವಾಗಿದೆ. ಸಂಬಂಧಪಟ್ಟ ಇಲಾಖೆಯವರು ತಕ್ಷಣ ಕ್ರಮ ಕೈಗೊಂಡು ದುರಸ್ತಿ ಕಾರ್ಯ ಮಾಡಬೇಕು ತಪ್ಪಿದ್ದಲ್ಲಿ ಹೋರಾಟ ಅನಿವಾರ್ಯವಾದೀತು.
ಜನಾರ್ಧನ ಗೌಡ ಕಯ್ಯಪೆ,
ಸಾಮಾಜಿಕ ಕಾರ್ಯಕರ್ತರು , ಆಲಂಕಾರು.