ಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಾಗ ಸಮಾಜದಲ್ಲಿ ಗೌರವ ಪ್ರಾಪ್ತಿ-ಪಾವನರಾಮ್
ಪುತ್ತೂರು: ಅಂತರ್ರಾಷ್ಟ್ರೀಯ ಲಯನ್ಸ್ ಸಂಸ್ಥೆ ಇದರ ಜಿಲ್ಲೆ 317ಡಿ, ರೀಜನ್ 4, ವಲಯ 2ರ ಲಯನ್ಸ್ ಕ್ಲಬ್ ಪುತ್ತೂರ್ದ ಮುತ್ತು ಮತ್ತು ಲಿಯೋ ಕ್ಲಬ್ ಪುತ್ತೂರ್ದ ಮುತ್ತು ಇದಕ್ಕೆ ಲಯನ್ಸ್ ವಲಯ ಹಾಗೂ ಪ್ರಾಂತ್ಯ ಅಧ್ಯಕ್ಷರ ಅಧಿಕೃತ ಭೇಟಿ ಕಾರ್ಯಕ್ರಮ ನ.29ರಂದು ಸಂಜೆ ರೋಟರಿ ಮನೀಷಾ ಸಭಾಂಗಣದಲ್ಲಿ ಜರಗಿತು.
ಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಾಗ ಸಮಾಜದಲ್ಲಿ ಗೌರವ ಪ್ರಾಪ್ತಿ-ಪಾವನರಾಮ್:
ಮುಖ್ಯ ಅತಿಥಿ, ಲಯನ್ಸ್ ಪ್ರಾಂತ್ಯ 4ರ ಪ್ರಾಂತ್ಯ ಅಧ್ಯಕ್ಷ ಬಿ.ಪಾವನರಾಮ್ ಮಾತನಾಡಿ, ಅಂತರರಾಷ್ಟ್ರೀಯ ಸೇವಾ ಸಂಸ್ಥೆಯಾಗಿರುವ ಲಯನ್ಸ್ ಕ್ಲಬ್ನಲ್ಲಿ ಸೇವೆ ಸಲ್ಲಿಸುವ ಅವಕಾಶ ಸಿಕ್ಕಿರುವುದು ನಮ್ಮ ಭಾಗ್ಯವಾಗಿದೆ. ಲಯನ್ಸ್ ಸಂಸ್ಥೆಯಲ್ಲಿ ಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ನಮಗೆ ಸಮಾಜದಲ್ಲಿ ಗೌರವ ಪ್ರಾಪ್ತಿಯಾಗುತ್ತದೆ. ಲಯನ್ಸ್ ಸಂಸ್ಥೆಗೆ ನಾವು ಕೊಡುವ ದೇಣಿಗೆಯು ಎಂದಿಗೂ ನಿರರ್ಥಕ ಆಗೋದಿಲ್ಲ. ನಾವು ಕೊಡುವ ದೇಣಿಗೆಯು ಪ್ರಾಕೃತಿಕ ವಿಕೋಪ ಸಂದರ್ಭದಲ್ಲಿ ಅಥವಾ ಇನ್ನಿತರ ಸಂದರ್ಭದಲ್ಲಿ ಅದರ ವಿನಿಯೋಗ ಆಗುತ್ತದೆ. ಮುಂದಿನ ವರ್ಷ ಮಾರ್ಚ್ ತಿಂಗಳಲ್ಲಿ ಪುತ್ತೂರಿನಲ್ಲಿ ರೀಜನಲ್ ಕಾನ್ಫರೆನ್ಸ್ ನಡೆಯಲಿದೆ ಎಂದರು.
ಸಮಾಜದಲ್ಲಿ ಗೌರವಾನ್ವಿತ ಸ್ಥಾನ, ಸೇವಾ ಮನೋಭಾವನೆಯನ್ನು ಮೈಗೂಡಿಸಿಕೊಳ್ಳುವುದು ಮುಖ್ಯ-ಸುದೇಶ್ ಭಂಡಾರಿ:
ಲಯನ್ಸ್ ವಲಯ 2ರ ವಲಯಾಧ್ಯಕ್ಷ ಸುದೇಶ್ ಭಂಡಾರಿ ಮಾತನಾಡಿ, ಸಮಾಜದಲ್ಲಿ ಗೌರವಾನ್ವಿತ ಸ್ಥಾನವನ್ನು ಪಡೆಯುವುದು ಹಾಗೂ ಸಮಾಜದಲ್ಲಿ ಸೇವಾ ಮನೋಭಾವನೆಯನ್ನು ಮೈಗೂಡಿಸಿಕೊಳ್ಳುವುದು ಲಯನ್ಸ್ ಕ್ಲಬ್ ಉದ್ದೇಶವಾಗಿದೆ. ಕೇವಲ ಸಂಪಾದಿಸುವುದು ಮುಖ್ಯವಲ್ಲ, ನೊಂದವರ ಬಾಳಿಗೆ ನೆರವನ್ನು ನೀಡುವುದು ಅತೀ ಮುಖ್ಯವಾಗಿದೆ. ಕ್ಲಬ್ ನ ವಾರ್ಷಿಕ ಶುಲ್ಕ ಕೊಟ್ರೆ ಸಾಲದು, ಸಮಾಜದಲ್ಲಿ ಸೇವೆಯೊಂದಿಗೆ ತೊಡಗಿಸಿಕೊಳ್ಳುವ ಮೂಲಕ ಲಯನ್ ಎನಿಸಿಕೊಳ್ಳಿ. ಕ್ಲಬ್ ಅಧ್ಯಕ್ಷೆ ವೇದಾವತಿರವರು ಎಲ್ಲರನ್ನು ಒಗ್ಗಟ್ಟಿನೊಂದಿಗೆ ಸೇರಿಸುತ್ತಾ ಕ್ಲಬ್ ಅನ್ನು ಉತ್ತಮವಾಗಿ ಮುನ್ನೆಡೆಸುತ್ತಿದ್ದಾರೆ ಎಂದರು.
ವ್ಯಕ್ತಿತ್ವವನ್ನು ಹೆಚ್ಚಿಸಿಕೊಳ್ಳಲು ಲಯನ್ಸ್ ಸಂಸ್ಥೆ ಪ್ರಮುಖ ಕಾರಣವಾಗಿದೆ-ಹೇಮನಾಥ ಶೆಟ್ಟಿ:
ಲಯನ್ಸ್ ಜಿಲ್ಲಾ ಜಂಟಿ ಸಾರ್ವಜನಿಕ ಸಂಪರ್ಕಾಧಿಕಾರಿ ಕಾವು ಹೇಮನಾಥ ಶೆಟ್ಟಿ ಮಾತನಾಡಿ, ಕ್ಲಬ್ ಸದಸ್ಯರು ಪರಸ್ಪರ ಕೈಜೋಡಿಸಿಕೊಂಡು ಕ್ಲಬ್ ಉನ್ನತಿಗಾಗಿ ಪ್ರಯತ್ನಿಸುತ್ತಿದ್ದಾರೆ. ಸಮಾಜಕ್ಕೆ ನಮ್ಮಿಂದ ಕಿಂಚಿತ್ ಉಪಯೋಗವಾಗಲೆಂದು ಕ್ಲಬ್ ಸದಸ್ಯರು ಸೇವಾ ಚಟುವಟಿಕೆಗಳನ್ನು ಹಮ್ಮಿಕೊಂಡು ಬರುತ್ತಿದೆ. ಪ್ರಾಂತ್ಯದಲ್ಲಿನ ಕ್ಲಬ್ಗಳು ನಿರೀಕ್ಷೆಗೂ ಮೀರಿ ಪೈಪೋಟಿಯಂತೆ ಕೆಲಸ ಕಾರ್ಯಗಳು ಮಾಡುತ್ತಿವೆ. ನಮ್ಮ ವ್ಯಕ್ತಿತ್ವವನ್ನು ಹೆಚ್ಚಿಸಿಕೊಳ್ಳಲು ಲಯನ್ಸ್ ಸಂಸ್ಥೆ ಪ್ರಮುಖ ಕಾರಣವಾಗುತ್ತದೆ ಎಂದರು.
ಸಮಾಜ ಸೇವೆ ಮಾಡಿದಾಗ ಸಮಾಜ ನಮ್ಮನ್ನು ಗುರುತಿಸುತ್ತದೆ-ಲ್ಯಾನ್ಸಿ ಮಸ್ಕರೇನ್ಹಸ್:
ಲಯನ್ಸ್ ವಲಯ ಅಂಬಾಸಿಡರ್ ಹಾಗೂ ಲಯನ್ಸ್ ಪುತ್ತೂರ್ದ ಮುತ್ತು ಸ್ಥಾಪಕಾಧ್ಯಕ್ಷ ಲ್ಯಾನ್ಸಿ ಮಸ್ಕರೇನ್ಹಸ್ ಮಾತನಾಡಿ, ಕ್ಲಬ್ ಪ್ರಾರಂಭವಾಗಿ ನಾಲ್ಕು ವರ್ಷ ದಾಟಿದೆ. ಪ್ರಸ್ತುತ ವರ್ಷ ಅಧ್ಯಕ್ಷೆ ವೇದಾವತಿ, ಕಾರ್ಯದರ್ಶಿ ಭಾಗ್ಯೇಶ್ ರೈ, ಕೋಶಾಧಿಕಾರಿ ವತ್ಸಲ ಶೆಟ್ಟಿರವರು ಎಲ್ಲರನ್ನು ಒಟ್ಟಾಗಿ ಸೇರಿಸಿಕೊಂಡು ಉತ್ತಮವಾದ ಸಮಾಜಮುಖಿ ಕಾರ್ಯಗಳನ್ನು ಹಮ್ಮಿಕೊಂಡು ಮಾದರಿ ಎನಿಸಿದ್ದಾರೆ. ಚಕ್ರವು ಸರಾಗವಾಗಿ ತಿರುಗುತ್ತಿದ್ದರೆ ಮಾತ್ರ ಕ್ಲಬ್ ಗಟ್ಟಿತನ ಕಂಡುಕೊಳ್ಳುತ್ತದೆ ಮತ್ತು ಉನ್ನತಿಯನ್ನು ಹೊಂದುತ್ತದೆ. ಲಯನ್ಸ್ ಬ್ಯಾನರ್ ನಡಿಯಲ್ಲಿ ಸೇವಾ ಕೈಂಕರ್ಯ ಮಾಡಿದಾಗ ಸಮಾಜ ನಮ್ಮನ್ನು ಗುರುತಿಸುತ್ತದೆ ಜೊತೆಗೆ ಪ್ರೀತಿಯನ್ನು ಸಂಪಾದಿಸುವಲ್ಲಿ ಕಾರಣವಾಗುತ್ತದೆ ಎಂದರು.
ನಮ್ಮ ಸಮಾಜಮುಖಿ ಕಾರ್ಯವು ಹೃದಯಕ್ಕೆ, ಆತ್ಮಕ್ಕೆ ತೃಪ್ತಿ ತಂದಿದೆ-ಎ.ವೇದಾವತಿ:
ಅಧ್ಯಕ್ಷತೆ ವಹಿಸಿದ ಲಯನ್ಸ್ ಕ್ಲಬ್ ಪುತ್ತೂರ್ದ ಮುತ್ತು ಅಧ್ಯಕ್ಷೆ ಎ.ವೇದಾವತಿರವರು ಸ್ವಾಗತಿಸಿ ಮಾತನಾಡಿ, ಲಯನ್ಸ್ನಲ್ಲಿ ಸೇವಾ ಚಟುವಟಿಕೆ ನಿರ್ವಹಿಸಲು ನನಗೆ ಹೆಮ್ಮೆ ಎನಿಸುತ್ತದೆ. ಕೇವಲ ಒಬ್ಬರಿಂದ ಕಾರ್ಯಕ್ರಮ ಯಶಸ್ವಿಗೊಳಿಸಲು ಸಾಧ್ಯವಿಲ್ಲ, ಒಗ್ಗಟ್ಟಿನಲ್ಲಿ ಬಲವಿದೆ ಎಂಬಂತೆ ಕ್ಲಬ್ ಸದಸ್ಯರ ಸಹಕಾರದಿಂದ ಸೇವಾ ಚಟುವಟಿಕೆ ಮಾಡಲು ಸಾಧ್ಯವಾಗಿದೆ. ದೊಡ್ಡ ದೊಡ್ಡ ಸೇವಾ ಚಟುವಟಿಕೆಗಳನ್ನು ಮಾಡುವುದರ ಬದಲು ಸಣ್ಣ ಸಣ್ಣ ಸಮಾಜಮುಖಿ ಚಟುವಟಿಕೆಗಳನ್ನು ಮಾಡುವ ಮೂಲಕ ಬಡವರ ಮುಖದಲ್ಲಿ ನಗು ತರುವ ಕಾರ್ಯ ಮಾಡಿದ್ದೇವೆ ಮಾತ್ರವಲ್ಲ ನಮ್ಮ ಕಾರ್ಯವು ಹೃದಯಕ್ಕೆ ಹಾಗೂ ಆತ್ಮಕ್ಕೆ ತೃಪ್ತಿ ತಂದಿದೆ ಎಂದರು.
ಲಯನ್ಸ್ ಪುತ್ತೂರ್ದ ಮುತ್ತು ಕ್ಲಬ್ನಲ್ಲಿಯೇ ಮುತ್ತು ಅಡಗಿದೆ-ಸದಾಶಿವ ನಾಯ್ಕ್:
ಲಯನ್ಸ್ ಕ್ಲಬ್ ಪುತ್ತೂರು ಮಾಜಿ ಅಧ್ಯಕ್ಷ, ವಲಯ ಅಂಬಾಸಿಡರ್ ಸದಾಶಿವ ನಾಯ್ಕ್ ಮಾತನಾಡಿ, ಲಯನ್ಸ್ ಕ್ಲಬ್ ಪುತ್ತೂರ್ದ ಮುತ್ತು ಕ್ಲಬ್ನಲ್ಲಿಯೇ ಮುತ್ತು ಅಡಗಿದೆ. ಈ ಕ್ಲಬ್ ಅನ್ನು ವೇದಾವತಿ ಮೇಡಂರವರು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವುದು ಹೆಮ್ಮೆಯ ವಿಚಾರವಾಗಿದ್ದು ಪುತ್ತೂರಿನ ಹಿರಿಯ ಕ್ಲಬ್ ವತಿಯಿಂದ ಕೃತಜ್ಞತೆ ಸಲ್ಲಿಸುತ್ತಿದ್ದೇನೆ ಎಂದರು.
ಪ್ರಾಂತ್ಯ ಅಧ್ಯಕ್ಷ ಪಾವನರಾಮ್ರವರು ಜಿಲ್ಲಾ ರಾಜ್ಯಪಾಲರಾಗಲಿ-ದಿವ್ಯನಾಥ ಶೆಟ್ಟಿ:
ಲಯನ್ಸ್ ವಲಯ ಒಂದರ ಅಂಬಾಸಿಡರ್ ದಿವ್ಯನಾಥ ಶೆಟ್ಟಿ ಮಾತನಾಡಿ, ಈ ಲಯನ್ಸ್ ಪುತ್ತೂರ್ದ ಮುತ್ತು ಸಂಸ್ಥೆಯನ್ನು ಲಯನ್ಸ್ ಕಾವು ಪ್ರಾಯೋಜಿಸಿದೆ. ಪ್ರಾಂತ್ಯ ಅಧ್ಯಕ್ಷ ಪಾವನರಾಮ್ರವರು ಮುಂದಿನ ದಿನಗಳಲ್ಲಿ ಜಿಲ್ಲಾ ರಾಜ್ಯಪಾಲರಾಗುವ ಯೋಗ ಬರಲಿ. ಕ್ಲಬ್ ಅಧ್ಯಕ್ಷೆ ವೇದಾವತಿರವರು ಈಗಾಗಲೇ ಉತ್ತಮ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಇದು ಮುಂದಿನ ದಿನಗಳಲ್ಲಿ ಮುಂದುವರೆಯಲ್ಲಿ ಎಂದರು.
ಲಿಯೋ ಕ್ಲಬ್ ಪುತ್ತೂರ್ದ ಮುತ್ತು ಅಧ್ಯಕ್ಷ ಲ್ಯಾನ್ಸನ್ ಮಸ್ಕರೇನ್ಹಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪದ್ಮಪ್ರಸಾದ್ ಜೈನ್ ಲಯನ್ಸ್ ಪ್ರಾರ್ಥನೆ ಮಾಡಿದರು. ಲಯನ್ಸ್ ಕ್ಲಬ್ ಪುತ್ತೂರ್ದ ಮುತ್ತು ಮಾಜಿ ಕಾರ್ಯದರ್ಶಿ ರವಿಪ್ರಸಾದ್ ಶೆಟ್ಟಿ ಧ್ವಜವಂದನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ವಿಶ್ವಶಾಂತಿಗಾಗಿ ಒಂದು ನಿಮಿಷದ ಮೌನ ಪ್ರಾರ್ಥನೆಯನ್ನು ಸಲ್ಲಿಸಲಾಯಿತು. ಲಯನ್ಸ್ ಕ್ಲಬ್ ಪುತ್ತೂರ್ದ ಮುತ್ತು ಕಾರ್ಯದರ್ಶಿ ಭಾಗ್ಯೇಶ್ ರೈ ವರದಿ ಮಂಡಿಸಿ ದರು. ಕ್ಲಬ್ ಸದಸ್ಯ ಸಂತೋಷ್, ಚಂದ್ರಶೇಖರ್, ರವಿಪ್ರಸಾದ್ ಶೆಟ್ಟಿರವರು ಅತಿಥಿಗಳ ಪರಿಚಯ ಹಾಗೂ ಸನ್ಮಾನಿತರ ಪರಿಚಯ ಮಾಡಿದರು. ಕ್ಲಬ್ ಕೋಶಾಧಿಕಾರಿ ವತ್ಸಲಾ ಪಿ.ಶೆಟ್ಟಿ ವಂದಿಸಿದರು.
ಪ್ರಜ್ಞಾ ಆಶ್ರಮದ ಅಣ್ಣಪ್ಪರವರಿಗೆ ಸನ್ಮಾನ..
ಪುತ್ತೂರಿನ ಬೀರಮಲೆ ಇಲ್ಲಿ 15 ಮಂದಿ ವಿಶೇಷ ಚೇತನರನ್ನು ಸಾಕಿ ಸಲಹುತ್ತಿರುವ ಪ್ರಜ್ಞಾ ಆಶ್ರಮ ಕೇಂದ್ರದ ಅಣ್ಣಪ್ಪರವರನ್ನು ಗುರುತಿಸಿ ಶಾಲು ಹೊದಿಸಿ ಸನ್ಮಾನಿಸಲಾಯಿತು ಜೊತೆಗೆ ಕ್ಲಬ್ ವತಿಯಿಂದ ರೂ.5 ಸಾವಿರ ಮೊತ್ತದ ದಿನಸಿ ಸಾಮಾಗ್ರಿಗಳನ್ನು ಲಯನ್ಸ್ ಜಿಲ್ಲಾ ಜಂಟಿ ಸಾರ್ವಜನಿಕ ಸಂಪರ್ಕಾಧಿಕಾರಿ ಕಾವು ಹೇಮನಾಥ ಶೆಟ್ಟಿರವರು ಅಣ್ಣಪ್ಪರವರಿಗೆ ಹಸ್ತಾಂತರಿಸಿದರು.
ಸನ್ಮಾನ..
ಲಯನ್ಸ್ ಪ್ರಾಂತ್ಯ 4ರ ಪ್ರಾಂತ್ಯ ಅಧ್ಯಕ್ಷ ಬಿ.ಪಾವನರಾಮ್, ಲಯನ್ಸ್ ವಲಯ 2ರ ವಲಯಾಧ್ಯಕ್ಷ ಸುದೇಶ್ ಭಂಡಾರಿ, ಕ್ಲಬ್ ನಿರ್ಗಮನ ಅಧ್ಯಕ್ಷ ಎನ್.ರವೀಂದ್ರ ಪೈ, ಲಿಯೋ ಕ್ಲಬ್ ಪುತ್ತೂರ್ದ ಮುತ್ತು ಇದರ ಸ್ಥಾಪಕಾಧ್ಯಕ್ಷರಾಗಿ, ಜಿಲ್ಲಾ ಲಿಯೋ ಅಧ್ಯಕ್ಷೆಯಾಗಿ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿ, ಇದೀಗ ಜಿಲ್ಲಾ ರಾಜ್ಯಪಾಲರ ಜಂಟಿ ಸಂಯೋಜಕರಾಗಿ ಸೇವೆ ಸಲ್ಲಿಸುತ್ತಿದ್ದು ಏಷ್ಯಾ ಖಂಡದ ಪ್ರತಿನಿಧಿಯಾಗಿ ಥಾಯ್ಲೆಂಡಿನಲ್ಲಿ ನಡೆದ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಭಾಗವಹಿಸಿದ ಡಾ.ರಂಜಿತಾ ಶೆಟ್ಟಿರವರುಗಳನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿದ ಡಾ.ರಂಜಿತಾ ಶೆಟ್ಟಿಯವರು ಅನಿಸಿಕೆ ವ್ಯಕ್ತಪಡಿಸಿದರು.
ಗೌರವ..
ಕ್ರೀಡಾ ಕ್ಷೇತ್ರದ ಸಾಧನೆಗೆ ತಾಲೂಕು ರಾಜ್ಯೋತ್ಸವ ಪ್ರಶಸ್ತಿಗೆ ಪುರಸ್ಕೃತರಾದ ಕ್ಲಬ್ ಅಧ್ಯಕ್ಷೆ ಎ.ವೇದಾವತಿ ಹಾಗೂ ಪ್ರತಿಷ್ಠಿತ 2025-26ನೇ ಸಾಲಿನ ಅಧ್ಯಕ್ಷರಾಗಿ ಆಯ್ಕೆಯಾದ ವಿದ್ಯಾಮಾತಾ ಅಕಾಡೆಮಿ ಮುಖ್ಯಸ್ಥ, ಕ್ಲಬ್ ಪ್ರಧಾನ ಕಾರ್ಯದರ್ಶಿ ಭಾಗ್ಯೇಶ್ ರೈಯವರಿಗೆ ಶಾಲು ಹೊದಿಸಿ ಗೌರವಿಸಲಾಯಿತು.