ಉಪ್ಪಿನಂಗಡಿ: ಇಲ್ಲಿನ ಶ್ರೀ ಮಹಾಲಕ್ಷ್ಮೀ ಟ್ರೇಡಿಂಗ್ ಕಂಪೆನಿಯೆಂಬ ಹೆಸರಿನ ಸ್ಯಾನಿಟರಿ ಐಟಂಗಳ ಮಳಿಗೆಗೆ ನುಗ್ಗಿದ ಕಳ್ಳರು ಸುಮಾರು ನಾಲ್ಕು ಲಕ್ಷದಷ್ಟು ಸ್ಯಾನಿಟರಿ ಐಟಂಗಳೊಂದಿಗೆ ಸಿಸಿ ಕ್ಯಾಮರಾದ ಡಿವಿಆರ್ ಅನ್ನು ಕಳವು ಮಾಡಿದ ಪ್ರಕರಣ ಶನಿವಾರ ಬೆಳಗ್ಗೆ ವರದಿಯಾಗಿದೆ. ಶುಕ್ರವಾರ ಸಂಜೆ ಗ್ರಾಹಕರ ಸೋಗಿನಲ್ಲಿ ಬಂದು ಅಂಗಡಿಯಲ್ಲಿರುವ ಐಟಂಗಳನ್ನೆಲ್ಲಾ ಪರಿಶೀಲಿಸಿ ತೆರಳಿದವರದ್ದೇ ಕೃತ್ಯ ಇದಾಗೆಂದು ಶಂಕಿಸಲಾಗಿದೆ.
ರಾಷ್ಟ್ರೀಯ ಹೆದ್ದಾರಿ 75ರ ಗಾಂಧಿಪಾರ್ಕ್‌ನ ಹಿರೇಬಂಡಾಡಿ ಕ್ರಾಸ್ ಬಳಿಯಿರುವ ಮಳಿಗೆಗೆ ನಸುಕಿನ ಜಾವ ಮಳಿಗೆಯ ಎದುರಿನ ಬಾಗಿಲಿನ ಬೀಗ ಮುರಿದು ಒಳನುಗ್ಗಿರುವ ಪ್ರೆಶ್ ವಾಲ್ಸ್, ಗ್ಲಾಸ್ ಫಿಟ್ಟಿಂಗ್ಸ್, ಬೆಲೆಬಾಳುವ ಹಿತ್ತಾಳೆಯ ಪೈಪ್‌ಗಳು ಸೇರಿದಂತೆ ಕಳವುಗೈದಿದ್ದು, ಅಲ್ಲಿನ ಕ್ಯಾಷ್ ಡ್ರಾವರ್‌ಅನ್ನು ತೆರೆದು ಅದನ್ನು ಚೆಲ್ಲಾಪಿಲ್ಲಿಗೊಳಿಸಿ, ಚಿಲ್ಲರೆ ನಗದಿನೊಂದಿಗೆ ಸಿಸಿ ಕ್ಯಾಮರಾದ ಡಿವಿಆರ್ ಅನ್ನು ಕೂಡಾ ಕಳವು ಮಾಡಿ ಪರಾರಿಯಾಗಿದ್ದಾರೆ.
ಗ್ರಾಹಕರ ಸೋಗಿನಲ್ಲಿ ಬಂದವರ ಕೃತ್ಯ?:
ಶುಕ್ರವಾರ ಸಂಜೆ ಈ ಮಳಿಗೆಗೆ ಇಬ್ಬರು ಗ್ರಾಹಕರ ಸೋಗಿನಲ್ಲಿ ಬಂದಿದ್ದು, ತಮಗೆ ಕೆಲವೊಂದು ಬೆಲೆಬಾಳುವ ವಸ್ತುಗಳು ಬೇಕು ಎಂದು ತಿಳಿಸಿ, ಅದನ್ನು ನೋಡುವ ನೆಪದಲ್ಲಿ ಮಳಿಗೆಯನ್ನೆಲ್ಲಾ ಸುತ್ತಾಡಿ, ಬೆಲೆ ಬಾಳುವ ಸೊತ್ತುಗಳು ಯಾವುದೆಂದು ಕೇಳಿ ತಿಳಿದು, ವಸ್ತುಗಳ ಗುಣಮಟ್ಟವನ್ನು ಪರೀಕ್ಷಿಸಿ, ಏನನ್ನೂ ಖರೀದಿಸದೇ ಮತ್ತೆ ಬರುವುದಾಗಿ ಹೇಳಿ ಹಿಂದುರಿಗಿದ್ದರು. ಶನಿವಾರ ನಸುಕಿನ ಜಾವ ಮಳಿಗೆಗೆ ನುಗ್ಗಿದ ಕಳ್ಳರು ಶುಕ್ರವಾರ ಸಂಜೆ ಗ್ರಾಹಕರ ಸೋಗಿನಲ್ಲಿ ಬಂದು ನೋಡಿದ ಬೆಲೆಬಾಳುವ ವಸ್ತುಗಳೇ ಕಳವಾಗಿದೆ. ಇದರಿಂದ ಗ್ರಾಹಕರಂತೆ ಬಂದವರೇ ಈ ಕೃತ್ಯವೆಸಗಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಕತ್ತಲೆಯಲ್ಲಿ ಹುಡುಕಾಡುವುದನ್ನು ತಪ್ಪಿಸಲು ಅವರು ಹಗಲಿನಲ್ಲಿಯೇ ಯಾವ ವಸ್ತುಗಳು ಎಲ್ಲಿವೆಯೆಂದು ತಿಳಿಯಲು ಗ್ರಾಹಕರ ಸೋಗಿನಲ್ಲಿ ಬಂದಿರಬಹುದೆಂದು ಶಂಕಿಸಲಾಗಿದೆ.
ಸಂಸ್ಥೆಯ ಮಾಲಕ ಜಗದೀಶ್ ನಾಯಕ್ ನೀಡಿದ ದೂರಿನ ಮೇರೆಗೆ ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಹಾಗೂ ಕಳವುಗೀಡಾದ ವಸ್ತುಗಳು ಕಟ್ಟಡ ನಿರ್ಮಾಣ ಕಾರ್ಯಕ್ಕೆ ಬಳಕೆಯಾಗುವುದರಿಂದ ನಿರ್ಮಾಣ ಕಾಮಗಾರಿ ನಿರತರು ಈ ಬಗ್ಗೆ ಗಮನ ಹರಿಸಿ ಕಳ್ಳರ ಪತ್ತೆ ಕಾರ್ಯಕ್ಕೆ ನೆರವಾಗಬೇಕೆಂದು ಸಾಮಾಜಿಕ ಜಾಲತಾಣಗಳಲ್ಲಿ ಜಗದೀಶ್ ನಾಯಕ್ ಮನವಿ ಮಾಡಿ ವಿಡಿಯೋ ಹರಿಯಬಿಟ್ಟಿದ್ದಾರೆ.