ಮಾಯ್ ದೆ ದೇವುಸ್ ಹಿ.ಪ್ರಾ. ಶಾಲಾ ವಾರ್ಷಿಕೋತ್ಸವ-“ಉಲ್ಲಾಸದ ಝೇಂಕಾರ”

0

ಮಕ್ಕಳು ಆವೆ ಮಣ್ಣಿನ ಮುದ್ದೆಯಂತೆ-ಜಯಶ್ರೀ ಶೆಣೈ
ಶಾಲೆ ಮಕ್ಕಳ ವ್ಯಕ್ತಿತ್ವ ರೂಪಿಸುವ ಮಂದಿರ-ವಂ.ಲಾರೆನ್ಸ್ ಮಸ್ಕರೇನಸ್

ಪುತ್ತೂರು: ಮಾಯ್ ದೇ ದೇವುಸ್ ಚರ್ಚ್ ವಠಾರದಲ್ಲಿರುವ ಮಾಯ್ ದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಗಳಿಗೆ ಸೇರಿದ ಮಾಯ್ ದೆ ದೇವುಸ್ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವದ ಸಭಾ ಕಾರ್ಯಕ್ರಮ ಮತ್ತು ಉಲ್ಲಾಸದ ಝೇಂಕಾರ ಸಾಂಸ್ಕೃತಿಕ ಕಾರ್ಯಕ್ರಮ ಡಿ.3ರಂದು ಶಾಲಾ ವಠಾರದಲ್ಲಿ ನಡೆಯಿತು.

ಮುಖ್ಯ ಅತಿಥಿ, ಬಂಟ್ವಾಳ ಎಸ್‌ವಿಎಸ್ ಪ್ರೌಢಶಾಲೆಯ ನಿವೃತ್ತ ಮುಖ್ಯಗುರು ಎಸ್.ಜಯಶ್ರೀ ಶೆಣೈ ಮಾತನಾಡಿ ಮಕ್ಕಳು ಆವೆ ಮಣ್ಣಿನ ಮುದ್ದೆಯಂತೆ. ಅದನ್ನು ಹೇಗೆ ಸುಂದರ ಬೊಂಬೆಗಳನ್ನು ಮಾಡಬಹುದೋ ಹಾಗೆ ಮಕ್ಕಳನ್ನು ಬೇಕಾದ ರೀತಿಯಲ್ಲಿ ರೂಪಿಸಬಹುದು. ಮನೆಯೇ ಮೊದಲ ಪಾಠ ಶಾಲೆ. ಜನನಿ ಮೊದಲ ಗುರು. ಜನನಿಯಿಂದ ಕಲಿತ ಮಕ್ಕಳು ಧನ್ಯರು. ಮನೆಯಲ್ಲಿ ತಾಯಿ ಮಕ್ಕಳನ್ನು ಚೆನ್ನಾಗಿ ನೋಡಬೇಕು. ತಂದೆ, ತಾಯಿ, ಗುರು ಹಾಗೂ ಅತಿಥಿಗಳಿಗೆ ದೇವರ ಸ್ಥಾನ ನೀಡಿದ ಉತ್ತಮ ಭೂಮಿ ನಮ್ಮದು ತಾಯಿಯೇ ಮಕ್ಕಳನ್ನು ಜಾಗೃತಿ ಮಾಡಬೇಕು. ಉತ್ತಮ ಸಂಸ್ಕಾರ ನೀಡಬೇಕು. ಮಕ್ಕಳನ್ನು ಇತರ ಮಕ್ಕಳೊಂದಿಗೆ ತುಲನೆ ಮಾಡಬಾರದು. ಮೊಬೈಲ್, ಟಿವಿ ಬಳಕೆ ಮಾಡುವುದನ್ನು ತಪ್ಪಿಸಿ ಎಂದರು. ಇಲ್ಲಿ ಭಾಗವಹಿಸಿರುವುದು ಸಂತೋಷ ತಂದಿದೆ. ನಾನು 66 ವರ್ಷದ ಹಿಂದೆ ಈ ಶಾಲೆಯಲ್ಲಿ ಕಲಿತವಳು. 2 ಮತ್ತು 3ನೇ ತರಗತಿಯಲ್ಲಿ ಕಲಿತಿದ್ದೇನೆ. ಆಗ ಬಹಳ ಸುಂದರವಾದ ವಾತಾವರಣ ಇತ್ತು. ಎಂದು ಹೇಳಿ ಶಾಲೆಯಲ್ಲಿ ಕಳೆದ ಹಿಂದಿನ ದಿನಗಳನ್ನು ತಿಳಿಸಿದರು.

ಮಾಯ್ ದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ವಂ.ಲಾರೆನ್ಸ್ ಮಸ್ಕರೇನಸ್ ಅಧ್ಯಕ್ಷತೆ ವಹಿಸಿ ಮಾತನಾಡಿ ಮಾಯ್ ದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಗಳಲ್ಲಿ 82 ವರ್ಷಗಳ ಹಿರಿಯ ಸಂಸ್ಥೆ ಮಾಯ್ ದೆ ದೇವುಸ್ ಹಿರಿಯ ಪ್ರಾಥಮಿಕ ಶಾಲೆ. ಪುತ್ತೂರು ಪರಿಸರದಲ್ಲಿ ಮಕ್ಕಳಿಗೆ ವಿದ್ಯಾಭ್ಯಾಸ ನೀಡುತ್ತಿದೆ. ನಿಮ್ಮ ಮಕ್ಕಳ ಭವಿಷ್ಯ ರೂಪಿಸುವುದಕ್ಕಾಗಿ ಈ ಸಂಸ್ಥೆಗೆ ಸೇರಿಸಿದ್ದೀರಿ. ಸಂಸ್ಥೆಯ ಮೇಲಿನ ಪ್ರೀತಿಗೆ ಅಭಿನಂದನೆ ಎಂದರು. ಜೀವನದಲ್ಲಿ ಮನೆಯ ನಂತರ ವಿಶೇಷವಾದ ಜಾಗ ಅಂದರೆ ಅದು ಶಾಲೆ. ಶಾಲೆಯಲ್ಲಿ ಓದಿಗಾಗಿ ಸಮಯ ಕೊಡುವಾಗ ನಮ್ಮ ವ್ಯಕ್ತಿತ್ವ ರೂಪಿಸಲು, ಒಳ್ಳೆಯ ವ್ಯಕ್ತಿಗಳಾಗೆ ಬೆಳೆಯಲು ಶಾಲೆ ಕಾರಣಕರ್ತವಾಗುತ್ತದೆ. ಅಲ್ಲದೆ ಸಂಸ್ಕಾರ, ಒಳ್ಳೆಯ ವಿಚಾರಗಳು ನಮಗೆ ಸಿಗುತ್ತದೆ. ಆದುದರಿಂದ ಶಾಲೆ ಒಂದು ಮಂದಿರವಾಗಿದೆ ಎಂದರು. ಮಕ್ಕಳನ್ನು ಬೆಳೆಸುವ ಜವಾಬ್ದಾರಿ ನಮ್ಮ ಮೇಲಿದೆ. ಎಚ್ಚರಿಕೆಯಿಂದ ಬೆಳೆಸಬೇಕು. ಮಕ್ಕಳ ಮನಸ್ಸು, ಹೃದಯ ಸೂಕ್ಷ್ಮವಾದುದು. ಮನೆಯಲ್ಲಿ, ಶಾಲೆಯಲ್ಲಿ ಒಳ್ಳೆಯ ವಾತಾವರಣ ಇರಬೇಕು. ಜೀವನದಲ್ಲಿ ಒಳ್ಳೆಯ ಸಾಧನೆ ಮಾಡುವ ಛಲ ಇರಬೇಕು ಎಂದರು.

ದತ್ತಿನಿಧಿ ಹಸ್ತಾಂತರ:
ಶಾಲಾ ಹಿರಿಯ ವಿದ್ಯಾರ್ಥಿ ಪುತ್ತೂರು ಉಮೇಶ್ ನಾಯಕ್‌ರವರ ಸಹೋದರ, ಲಿಮ್ಕಾ ಬುಕ್ ಆಫ್ ರೆಕಾರ್ಡ್‌ನಲ್ಲಿ ದಾಖಲೆ ಹೊಂದಿದ ಸುರೇಶ್ ನಾಯಕ್‌ರವರು ನೀಡಿದ್ದ ನಗದಿನ ಬಡ್ಡಿಯನ್ನು ದತ್ತಿನಿಧಿಯಾಗಿ ಪ್ರತಿಭಾವಂತ 7ನೇ ತರಗತಿಯ ವಿದ್ಯಾರ್ಥಿನಿ ಶಿವಾನಿಯವರಿಗೆ ಹಸ್ತಾಂತರಿಸಲಾಯಿತು.

ಪ್ರಸ್ತುತ ಶೈಕ್ಷಣಿಕ ಸಾಲಿನಲ್ಲಿ ಶೈಕ್ಷಣಿಕ, ಕ್ರೀಡಾ ಹಾಗೂ ಇತರ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿ ಪ್ರೋತ್ಸಾಹಿಸಲಾಯಿತು. ಮುಖ್ಯ ಅತಿಥಿಯಾಗಿದ್ದ ಜಯಶ್ರೀ ಶೆಣೈರವರು ವಿದ್ಯಾರ್ಥಿಗಳಿಗೆ ಪುತ್ತೂರು ತಾಲೂಕಿಗೆ ಸಂಬಂಧಿಸಿದ ಕ್ವಿಜ್ ಕಾರ್ಯಕ್ರಮ ನಡೆಸಿಕೊಟ್ಟು ಬಹುಮಾನವಾಗಿ ಪುಸ್ತಕ ನೀಡಿ ಪ್ರೋತ್ಸಾಹಿಸಿದರು.

ಚರ್ಚ್‌ನ ಸಹಾಯಕ ಧರ್ಮಗುರು ವಂ.ಲೋಹಿತ್ ಅಜಯ್ ಮಸ್ಕರೇನಸ್, ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ಜೆರಾಲ್ಡ್ ಡಿಕೋಸ್ತ, ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷ ಜಯಂತ್ ಉರ್ಲಾಂಡಿ, ವಿದ್ಯಾರ್ಥಿ ನಾಯಕ ಕ್ರಿಸ್ ಲಿಯಾನೊ ಲಸ್ರದೋ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮುಖ್ಯಶಿಕ್ಷಕಿ ಜಾನೆಟ್ ಡಿಸೋಜ 2024-25ನೇ ಸಾಲಿನ ಶೈಕ್ಷಣಿಕ ವರದಿ ವಾಚಿಸಿದರು. ಸಹಶಿಕ್ಷಕಿ ಅಕ್ಷತಾ, ಪ್ಲಾವಿಯ ಅಲ್ಬುಕರ್ಕ್ ಬಹುಮಾನ ಪಟ್ಟಿ ವಾಚಿಸಿದರು. ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಶಿಕ್ಷಕಿಯರಾದ ಜಾಯ್ಸ್ ಸಿಕ್ವೇರಾ ಸ್ವಾಗತಿಸಿ ಶಿಕ್ಷಕ ಸುಬ್ಬರಾಜ್ ಶಾಸ್ತ್ರಿ ವಂದಿಸಿದರು. ಸಭಾ ಕಾರ್ಯಕ್ರಮ ಬಳಿಕ ವಿದ್ಯಾರ್ಥಿಗಳಿಂದ ಉಲ್ಲಾಸದ ಝೇಂಕಾರ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಮುಖ್ಯ ಅತಿಥಿ, ಶಾಲಾ ಹಿರಿಯ ವಿದ್ಯಾರ್ಥಿ ಜಯಶ್ರೀ ಶೆಣೈರವರಿಗೆ ಗೌರವಾರ್ಪಣೆ
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಶಾಲಾ ಹಿರಿಯ ವಿದ್ಯಾರ್ಥಿ ಬಂಟ್ವಾಳ ಎಸ್‌ವಿಎಸ್ ಪ್ರೌಢಶಾಲೆಯ ನಿವೃತ್ತ ಮುಖ್ಯಗುರು ಎಸ್.ಜಯಶ್ರೀ ಶೆಣೈರವರಿಗೆ ಸಂಸ್ಥೆಯ ಪರವಾಗಿ ಶಾಲು, ಹಾರ, ಸ್ಮರಣಿಕೆ, ಫಲಪುಷ್ಪ ನೀಡಿ ಗೌರವಾರ್ಪಣೆ ಸಲ್ಲಿಸಲಾಯಿತು.

LEAVE A REPLY

Please enter your comment!
Please enter your name here