ಉಪ್ಪಿನಂಗಡಿ: ಇಲ್ಲಿನ ಬಸ್ ನಿಲ್ದಾಣ ಬಳಿಯ ನಿರ್ಮಾಣ ಹಂತದ ಕಟ್ಟಡವೊಂದರಲ್ಲಿ ವ್ಯಕ್ತಿಯೋರ್ವನ ಕೊಲೆ ನಡೆದಿದ್ದು, ಡಿ.4ರಂದು ಬೆಳಗ್ಗೆ ಅರೆ ಬೆತ್ತಲೆ ಸ್ಥಿತಿಯಾಗಿ ಅಂಗಾಂತ ಮಲಗಿದ್ದ ಸ್ಥಿತಿಯಲ್ಲಿ ಈತನ ಮೃತದೇಹ ಪತ್ತೆಯಾಗಿದೆ. ತಲೆಯ ಹಿಂಭಾಗ ಮತ್ತು ಹಣೆಯಲ್ಲಿ ಕಲ್ಲಿನಿಂದ ಹೊಡೆದ ಗಾಯದ ಗುರುತುಗಳು ಕಂಡು ಬಂದಿವೆ.
ಮೃತ ದೇಹದ ಬಳಿ ಇದ್ದ ಚುನಾವಣಾ ಗುರುತು ಪತ್ರದ ಆಧಾರದಲ್ಲಿ ಮೃತನನ್ನು ಅಸ್ಸಾಂ ರಾಜ್ಯದ ಕರ್ಬಿ ಅಂಗ್ಲಾಂಗ್ ಜಿಲ್ಲೆಯ ಕ್ರಿಶ್ಚಿಯನ್ ಗ್ರಾಮದ ತಿಮ್ಮತಿ ಬೆಂಗರ ಎಂಬವರ ಮಗ ದೀಪಕ್ ಬೆಂಗರ (34) ಎಂದು ಗುರುತಿಸಲಾಗಿದೆ. ಈತ ಇಲ್ಲಿನ ಬಾರ್ ಆಂಡ್ ರೆಸ್ಟೋರೆಂಟ್‌ನಲ್ಲಿ ಈ ಹಿಂದೆ ಕೆಲಸಕ್ಕಿದ್ದರು. ಕಳೆದ ಒಂದು ತಿಂಗಳಿನಿಂದ ಕೆಲಸ ಬಿಟ್ಟಿದ್ದು, ಬಳಿಕ ಕಟ್ಟಡ ನಿರ್ಮಾಣ ಕಾರ್ಮಿಕನಾಗಿ ತೊಡಗಿಕೊಂಡಿದ್ದರು. ಘಟನೆ ನಡೆದ ಸ್ಥಳವು ಉಪ್ಪಿನಂಗಡಿ ಗ್ರಾ.ಪಂ.ಗೆ ಸೇರಿದ ಜಾಗವಾಗಿದ್ದು, ಇಲ್ಲಿ ಗ್ರಂಥಾಲಯದ ಬಹುಮಹಡಿ ಕಟ್ಟಡದ ನಿರ್ಮಾಣ ನಡೆಯುತ್ತಿದ್ದು, ಮೊದಲನೇ ಮಹಡಿಯಲ್ಲಿ ಇವರ ಮೃತದೇಹ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕಟ್ಟಡ ನಿರ್ಮಾಣ ಕಾಮಗಾರಿ ಕೆಲಸಗಾರರಿಗೆ ಆದಿತ್ಯವಾರ ರಜೆಯಿದ್ದು, ಸೋಮವಾರ ಮತ್ತು ಮಂಗಳವಾರ ಮಳೆಯ ಕಾರಣ ಇಲ್ಲಿನ ಕಟ್ಟಡ ನಿರ್ಮಾಣ ಕೆಲಸಗಾರರು ರಜೆ ಮಾಡಿದ್ದರು. ಬುಧವಾರ ಬೆಳಗ್ಗೆ ಕಟ್ಟಡಕ್ಕೆ ನೀರು ಹಾಕಲು ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ. ಈತನನ್ನು ಡಿ.3ರ ರಾತ್ರಿ ಕೊಲೆ ಮಾಡಿರಬಹುದೆಂದು ಶಂಕಿಸಲಾಗಿದೆ.
ಗೋಡೆಗಳಲ್ಲಿ ರಕ್ತದ ಕಲೆ:
ಕಟ್ಟಡದ ಗೋಡೆಗಳಲ್ಲಿ, ನೆಲದ ಮೇಲಿದ್ದ ಕೆಂಪು ಕಲ್ಲುಗಳಲ್ಲಿ ರಕ್ತದ ಕಲೆ ಕಂಡು ಬಂದಿದ್ದು, ಹೊಡೆದಾಟ ನಡೆದು ಈತನ ತಲೆಗೆ ಯಾರೋ ಕಲ್ಲಿನಿಂದ ಹೊಡೆದು ಕೊಲೆ ಮಾಡಿರಬಹುದೆಂದು ಶಂಕಿಸಲಾಗಿದೆ. ಈ ಕೊಲೆಯಾದ ಜಾಗದಲ್ಲಿ ಚಾಪೆಗಳು, ಕಂಬಳಿಗಳು, ಪ್ಯಾಂಟ್, ಶರ್ಟ್, ಬ್ಯಾಗ್ ಕೂಡಾ ಕಂಡು ಬಂದಿದ್ದು, ಈ ಕಟ್ಟಡದಲ್ಲಿ ಅಲೆಮಾರಿಗಳು ರಾತ್ರಿ ತಂಗುತ್ತಿದ್ದರೆನ್ನುವುದಕ್ಕೆ ಸಾಕ್ಷಿಯನ್ನೊದಗಿಸುತ್ತಿವೆ.
ಸಿಮ್ ಇಲ್ಲದ ಮೊಬೈಲ್ ಪತ್ತೆ:
ಮೃತದೇಹದ ಸ್ವಲ್ಪ ದೂರದಲ್ಲಿ ಮೊಬೈಲೊಂದು ಪತ್ತೆಯಾಗಿದ್ದು, ಆದರೆ ಅದರ ಸಿಮ್ ನಾಪತ್ತೆಯಾಗಿದೆ. ಇವರನ್ನು ಕೊಲೆ ನಡೆಸಿದವರು ಸಿಮ್ ಅನ್ನು ತೆಗೆದುಕೊಂಡು ಮೊಬೈಲ್ ಅನ್ನು ಅಲ್ಲೇ ಬಿಸಾಡಿರಬಹುದೆಂದು ಶಂಕಿಸಲಾಗಿದೆ. ಪೊಲೀಸ್ ತನಿಖೆಗೆ ಅಡಚಣೆಯಾಗುವ ತಂತ್ರವನ್ನು ನಡೆಸಿರುವುದು ಈ ಮೂಲಕ ಕೊಲೆಯಲ್ಲಿ ಪೂರ್ವಯೋಜಿತ ಕೃತ್ಯವನ್ನು ಶಂಕಿಸುವಂತೆ ಮಾಡಿದ್ದು, ಮೃತನೊಂದಿಗೆ ಒಡನಾಟವಿರುವವರೇ ಈ ಕೃತ್ಯ ನಡೆಸಿರಬಹುದಾದ ಶಂಕೆಯೂ ವ್ಯಕ್ತವಾಗಿದೆ. ನಿರ್ಮಾಣ ಹಂತದಲ್ಲಿರುವ ಕಟ್ಟಡದಲ್ಲಿ ವಲಸೆ ಕಾರ್ಮಿಕರು ಠಿಕಾಣಿ ಹೂಡುತ್ತಾ ರಾತ್ರಿ ವೇಳೆ ಮದ್ಯ ಸೇವಿಸಿ ಸಂಘರ್ಷ ಮಾಡುತ್ತಿರುವುದು ಇಲ್ಲಿ ಸರ್ವೆ ಸಾಮಾನ್ಯವಾಗಿದ್ದು, ಮಾದಕ ದ್ರವ್ಯದ ಅಮಲಿನಲ್ಲಿ ಜೊತೆಗಿದ್ದವರೇ ಕಲ್ಲಿನಿಂದ ತಲೆಯನ್ನು ಜಜ್ಜಿ ಕೊಲೆಗೈದಿರಬಹುದೆಂದು ಪ್ರಾಥಮಿಕವಾಗಿ ಅಂದಾಜಿಸಲಾಗಿದೆ.
ಅರೆಬೆತ್ತಲೆ ಸ್ಥಿತಿ ಯಾಕೆ? :
ಈತನ ಹಣೆ ಹಾಗೂ ತಲೆಯ ಹಿಂಭಾಗ ಗಾಯದ ಗುರುತುಗಳು ಕಂಡು ಬಂದಿದ್ದು, ಕಾಲಿನಲ್ಲೂ ತರಚಿದ ಗಾಯಗಳಿವೆ. ಆದರೆ ಈತನ ಮೃತದೇಹದಲ್ಲಿ ಟೀ ಶರ್ಟ್ ಬಿಟ್ಟರೆ, ಉಳಿದ ಯಾವುದೇ ಭಾಗದಲ್ಲಿ ಬಟ್ಟೆಗಳಿರದೇ ಬೆತ್ತಲಾಗಿತ್ತು. ಕುಡಿದ ಮತ್ತಿನಲ್ಲಿ ಜಗಳ ಮಾಡುವಾಗ ಇದು ಕಳಚಿ ಬಿತ್ತೆ?ಅಥವಾ ಹೆಣ್ಣಿನ ವಿಷಯಕ್ಕೆ ಜಗಳವಾಗಿ ಈ ಕೊಲೆ ನಡೆಯಿದೇ ಎಂಬುದು ಪ್ರಶ್ನಾರ್ಥಕವಾಗಿ ಉಳಿದಿದ್ದು, ಪೊಲೀಸ್ ತನಿಖೆಯಿಂದಷ್ಟೇ ಇದು ಬಯಲುಗೊಳ್ಳಬೇಕಿದೆ.
ಏಳೂವರೆಗೆ ಮೃತದೇಹ ಶಿಫ್ಟ್:
ಬೆಳಗ್ಗೆ ಪ್ರಕರಣ ಬೆಳಕಿಗೆ ಬಂದಿದ್ದರೂ, ಘಟನಾ ಸ್ಥಳದಲ್ಲಿ ಪೊಲೀಸರ ಮಹಜರು ಪ್ರಕ್ರಿಯೆಗಳು ಮುಗಿದು ರಾತ್ರಿ 7.30ಕ್ಕೆ ಮೃತದೇಹವನ್ನು ಘಟನಾ ಸ್ಥಳದಿಂದ ಮರಣೋತ್ತರ ಪರೀಕ್ಷೆಗಾಗಿ ದೇರಳಕಟ್ಟೆಯ ಕೆ.ಎಸ್. ಹೆಗ್ಡೆ ಆಸ್ಪತ್ರೆಗೆ ಸಾಗಿಸಲಾಯಿತು. ಸ್ಥಳಕ್ಕೆ ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಯತೀಶ್ ಎನ್., ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ರಾಜೇಂದ್ರ, ಉಪ್ಪಿನಂಗಡಿ ಪೊಲೀಸ್ ಠಾಣಾ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ, ಪರಿಶೀಲನೆ ನಡೆಸಿದ್ದು, ತನಿಖೆ ಮುಂದುವರಿಸಿದ್ದಾರೆ.
ಪೊಲೀಸ್ ದೂರು:
ಘಟನೆಯ ಬಗ್ಗೆ ಉಪ್ಪಿನಂಗಡಿ ಗ್ರಾ.ಪಂ. ಕಾರ್ಯದರ್ಶಿ ಗೀತಾ ಬಿ. ಅವರು ಪೊಲೀಸರಿಗೆ ದೂರು ನೀಡಿದ್ದು, ಡಿ.4ರಂದು ನಾನು ಕಚೇರಿಗೆ ಬಂದು ಕರ್ತವ್ಯ ನಿರ್ವಹಿಸುತ್ತಿರುವಾಗ ಬೆಳಗ್ಗೆ 10.30ಕ್ಕೆ ಉಪ್ಪಿನಂಗಡಿ ಗ್ರಾ.ಪಂ.ಗೆ ಸಂಬಂಧಿಸಿದ ನಿರ್ಮಾಣ ಹಂತದ ಗ್ರಂಥಾಲಯ ಕಟ್ಟಡದ ಒಂದನೇ ಮಹಡಿಯಲ್ಲಿ ಗಂಡಸಿನ ಮೃತದೇಹ ಇರುವುದಾಗಿ ಕಟ್ಟಡ ಕಾಮಗಾರಿ ಕೆಲಸದ ಚಾರ್ಲಿ ಡಿಸೋಜರವರು ತಿಳಿಸಿದರು. ಅದರಂತೆ ಕಚೇರಿ ಸಿಬ್ಬಂದಿ ಹೇಮಾವತಿ ಅವರೊಂದಿಗೆ ಬಂದು ನೋಡಿದಾಗ ಕಟ್ಟಡದ ಒಂದನೇ ಮಹಡಿಯಲ್ಲಿ ಸುಮಾರು 30-35 ವರ್ಷ ಪ್ರಾಯದ ಗಂಡಸಿನ ಮೃತದೇಹ ಬಿದ್ದುಕೊಂಡಿತ್ತು. ಮೃತದೇಹದ ಹಣೆ ಮತ್ತು ತಲೆಯಲ್ಲಿ ರಕ್ತಗಾಯಗಳು ಕಂಡು ಬರುತ್ತಿದ್ದು, ಯಾರೋ ವ್ಯಕ್ತಿಗಳು ಈತನನ್ನು ಕೊಲೆ ಮಾಡಿರುವುದು ಮೇಲ್ನೋಟಕ್ಕೆ ಕಂಡು ಬರುತ್ತದೆ. ಮೃತ ವ್ಯಕ್ತಿಯು ಅಸ್ಸಾಂ ಮೂಲದ ದೀಪಕ್ ಎಂಬ ಹೆಸರಿನವನೆಂದು ತಿಳಿದು ಬಂದಿರುತ್ತದೆ. ಈ ಘಟನೆಯು ಡಿ.3ರಂದು ನಡೆದಿರಬಹುದು ಎಂದು ದೂರಿನಲ್ಲಿ ತಿಳಿಸಿದ್ದಾರೆ. ಇವರು ನೀಡಿದ ದೂರಿನಂತೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅ.ಕ್ರ: 129/2024 ಕಲಂ: 103(1) ಬಿಎನ್‌ಎಸ್‌ನಡಿ ಪ್ರಕರಣ ದಾಖಲಾಗಿದೆ.
ಊರು- ಹಿನ್ನೆಲೆ ತಿಳಿದಿಲ್ಲ
ಗುರುತು ಖಚಿತತೆಯ ದಾಖಲೆಗಳೂ ಇಲ್ಲ
ಕಾರ್ಮಿಕ- ಮಾಲೀಕನ ನಡುವೆ ಸಂಬಂಧವೇ ಇಲ್ಲ
ಉಪ್ಪಿನಂಗಡಿಯಲ್ಲಿ ಕಟ್ಟಡ ಕಾಮಗಾರಿ, ಹೊಟೇಲ್ ಸೇರಿದಂತೆ ಹಲವು ಕಡೆಗಳಲ್ಲಿ ಒರಿಸ್ಸಾ, ಬಿಹಾರ, ಅಸ್ಸಾಂ ಸೇರಿದಂತೆ ಉತ್ತರ ಭಾರತ, ಈಶಾನ್ಯ ರಾಜ್ಯಗಳ ಕಾರ್ಮಿಕರನ್ನು ಹೆಚ್ಚಾಗಿ ಬಳಸಿಕೊಳ್ಳಲಾಗುತ್ತಿದೆ. ಹೊಟೇಲ್, ಅಂಗಡಿಗಳಲ್ಲಿ ಕೆಲಸ ಮಾಡುವವರಾದರೂ ನಿತ್ಯ ಅಲ್ಲೇ ಕೆಲಸ ಮಾಡುವುದರಿಂದ ಯಜಮಾನನೊಂದಿಗೆ ಬಾಂಧವ್ಯ ಬೆಳೆಸಿಕೊಂಡಿರುತ್ತಾರೆಯಾದರೂ, ಕಟ್ಟಡ ಕಾಮಗಾರಿಯಲ್ಲಿ ಸಹಾಯಕರಾಗಿ ಕೆಲಸಕ್ಕೆ ಹೋಗುವ ಹೆಚ್ಚಿನವರಲ್ಲಿ ಕಾರ್ಮಿಕ- ಮಾಲೀಕನ ನಡುವೆ ಬಾಂಧವ್ಯನೇ ಇರುವುದಿಲ್ಲ. ಇವರಿಗೆ ದಿನಕ್ಕೊಂದು ಯಜಮಾನ, ದಿನಕ್ಕೊಂದು ಕಡೆ ಕೆಲಸಗಳು ಬದಲಾಗುತ್ತಿರುತ್ತದೆ. ದಿನಾ ಬೆಳಗ್ಗಿನ ಹೊತ್ತು ಉಪ್ಪಿನಂಗಡಿ ಬಸ್ ನಿಲ್ದಾಣದ ಬಳಿ ಈ ಕಾರ್ಮಿಕರ ದೊಡ್ಡ ಸಮೂಹವೇ ನೆರೆದಿರುತ್ತದೆ. ಅಲ್ಲಿಗೆ ಬರುವ ಕೆಲಸ ಮಾಡಿಸುವವರು ತನಗೆ ಎಷ್ಟು ಜನ ಬೇಕು ಅಷ್ಟು ಜನ ಕೆಲಸಗಾರರನ್ನು ಕರೆದುಕೊಂಡು ಹೋಗುತ್ತಾರೆ. ದಿನದ ಕೆಲಸ ಮುಗಿದು ಸಂಬಳ ಕೊಟ್ಟರೇ ಮುಗಿಯಿತು. ಮತ್ತೆ ಕೆಲಸ ಮಾಡಿಸುವವರ- ಕಾರ್ಮಿಕರ ಸಂಬಂಧ ನೀನ್ಯಾರೋ, ನಾನ್ಯಾರೋ ಎಂಬಂತಿರುತ್ತದೆ. ಈ ಕಾರ್ಮಿಕರೂ ಅಷ್ಟೇ ನಾಳೆ ಈ ಇವನಲ್ಲದಿದ್ದರೆ ಬೇರೊಬ್ಬ ಕೆಲಸಕ್ಕೆ ಕರೆದರೆ ಅವರೊಂದಿಗೆ ಹೋಗುತ್ತಾರೆ. ಈ ಕೆಲಸಗಾರರ ವಾಸ್ತವ್ಯಕ್ಕಾಗಿಯೇ ರೂಂ, ಹಾಲ್‌ಗಳನ್ನು ನೀಡುವವರೂ ಇಲ್ಲಿದ್ದಾರೆ. ಇದೇನೂ ಉತ್ತಮ ಸೌಕರ್ಯವನ್ನೊಳಗೊಂಡ ರೂಂ ಆಗಬೇಕಂತಿಲ್ಲ. ಒಂದು ಸಾಧಾರಣ ರೂಂ, ಒಂದು ಶೌಚಾಲಯ ಇದ್ದರೆ ಮುಗಿಯಿತು. ಇದರಲ್ಲಿ 10 ಜನರಿಗೂ ಬೇಕಾದರೂ ಅವಕಾಶ ನೀಡಲಾಗುತ್ತದೆ. ದಿನಕ್ಕೆ ಒಬ್ಬನಿಗೆ 60 ರೂಪಾಯಿ ಬಾಡಿಗೆ. ಅದನ್ನು ಕೂಡಾ ದಿನ ವಸೂಲಾತಿ ಮಾಡಲಾಗುತ್ತದೆ. ಕೆಲಸ ಮುಗಿಸಿ ಸಂಜೆ ರೂಮ್‌ನೊಳಗೆ ನುಗ್ಗಬೇಕಾದರೆ 60 ರೂಪಾಯಿ ನೀಡಬೇಕು. ಮತ್ತೆ ಬೆಳಗ್ಗೆದ್ದು ಆತ ಕೆಲಸಕ್ಕೆ ಹೋದರೆ ಸಂಜೆ ರೂಂನೊಳಗೆ ಪ್ರವೇಶಿಸುವಾಗ 60 ರೂ. ನೀಡಿಯೇ ಪ್ರವೇಶಿಸಬೇಕು. 30-40 ಕಾರ್ಮಿಕರಿಗೆ ರಾತ್ರಿ ಆಶ್ರಯ ನೀಡುವ ಹಾಲ್‌ಗಳು ಉಪ್ಪಿನಂಗಡಿಯಲ್ಲಿವೆ. ಕೆಲವು ಕಡೆಗಳಲ್ಲಿ ಅಡುಗೆ ಮಾಡಿಕೊಳ್ಳಲು ಸ್ಥಳಾವಕಾಶವಿದ್ದರೆ, ಇನ್ನು ಕೆಲವೆಡೇ ಮಲಗಲು ಮಾತ್ರ. ಅದರೆ ಹೀಗೆ ಬರುವವರು ಯಾರು? ಇವರೆಲ್ಲಾ ಎಲ್ಲಿಯವರು? ಎಂಬ ಅವರ ಗುರುತು ಖಚಿತಪಡಿಸುವಿಕೆಗೆ ಬೇಕಾದ ದಾಖಲೆಗಳು ಹೀಗೆ ರೂಂ ನೀಡುವವರಲ್ಲೂ ಇರುವುದಿಲ್ಲ. ಇವರನ್ನು ಕೆಲಸಕ್ಕೆ ಕರೆದೊಯ್ಯುವವರಲ್ಲೂ ಇರೋದಿಲ್ಲ. ಸ್ಥಳೀಯ ಗ್ರಾ.ಪಂ., ಪೊಲೀಸ್ ಠಾಣೆಯಲ್ಲೂ ಇರುವುದಿಲ್ಲ. ಇದರಿಂದ ಇವರು ಏನಾದರೂ ಅಪರಾಧ ಚಟುವಟಿಕೆಗಳನ್ನು ಮಾಡಿ ಓಡಿ ಹೋದರೆ ಇವರನ್ನು ಹಿಡಿಯಲು ಅಷ್ಟು ಸುಲಭದಲ್ಲಿ ಸಾಧ್ಯವಾಗುವುದಿಲ್ಲ. ಆದ್ದರಿಂದ ಗ್ರಾ.ಪಂ. ಹಾಗೂ ಪೊಲೀಸ್ ಇಲಾಖೆ ಈ ಬಗ್ಗೆ ಎಚ್ಚೆತ್ತುಕೊಳ್ಳದಿದ್ದರೆ ಇದರ ದುಷ್ಪರಿಣಾಮ ಸಮಾಜ ಎದುರಿಸಬೇಕಾಗಬಹುದು ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.