ಪುತ್ತೂರು:ರೋಟರಿ ಕ್ಲಬ್ ಪುತ್ತೂರು ಸ್ವರ್ಣ ಇದರ ವತಿಯಿಂದ ಡಿ.5ರಂದು ವಕೀಲರ ದಿನಾಚರಣೆಯನ್ನು ಕ್ಲಬ್ ಅಧ್ಯಕ್ಷರಾದ ಸುರೇಶ್ ಪಿ ಇವರ ಅಧ್ಯಕ್ಷತೆಯಲ್ಲಿ ರೋಟರಿ ಮನಿಷಾ ಹಾಲ್ ನಲ್ಲಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ರೋಟರಿ ಅಂತರ್‌ರಾಷ್ಟ್ರೀಯ ಜಿಲ್ಲೆ 3181 ವಲಯ 5ರ ರೋಟರಿ ಸಹಾಯಕ ಗವರ್ನರ್ ಸೂರ್ಯನಾಥ ಆಳ್ವರವರು ಮಾತನಾಡಿ, ಡಿ.3ರಂದು ಸ್ವತಂತ್ರ ಭಾರತದ ಮೊದಲ ರಾಷ್ಟ್ರಪತಿ ಹಾಗೂ ಗೌರವಾನ್ವಿತ ವಕೀಲರಾದ ಡಾ. ರಾಜೇಂದ್ರ ಪ್ರಸಾದ್ ಇವರ ಹುಟ್ಟು ಹಬ್ಬವನ್ನು ವಕೀಲರ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ. ತ್ವರಿತಗತಿಯಲ್ಲಿ ನ್ಯಾಯ ವಂಚಿತರಿಗೆ ನ್ಯಾಯ ಒದಗಿಸುವಲ್ಲಿ ವಕೀಲರು ರಾತ್ರಿ ಹಗಲು ಶ್ರಮಿಸುತ್ತಿದ್ದು, ಆಳವಾದ ಕಾನೂನಿನ ಅಧ್ಯಯನದ ಮೂಲಕ ಒಬ್ಬ ಉತ್ತಮ ವಕೀಲನಾಗಲು ಸಾಧ್ಯ ಎಂದು ತಿಳಿಸಿದರು. ರೋಟರಿ ಸ್ವರ್ಣ ಇದರಲ್ಲಿ ಅತೀ ಹೆಚ್ಚು ಹಿರಿಯ ವಕೀಲರನ್ನು ಸದಸ್ಯರನ್ನಾಗಿ ಹೊಂದಿರುವುದು ಸ್ವರ್ಣ ಕ್ಲಬ್‌ಗೆ ಹೆಮ್ಮೆ ಎಂದು ಹೇಳಿ ವಕೀಲರ ದಿನದ ಶುಭವನ್ನು ಹಾರೈಸಿದರು.
ಇನ್ನೋರ್ವ ಮುಖ್ಯ ಅತಿಥಿ ನಿವೃತ್ತ ಅರಣ್ಯ ಅಧಿಕಾರಿ ರೋಟರಿ ಕ್ಲಬ್ ಪುತ್ತೂರು ಎಲೈಟ್ ಇದರ ಸದಸ್ಯರಾದ ಕೃಷ್ಣಪ್ಪ ಕೆ ಇವರು ಸಂದರ್ಭೋಚಿತವಾಗಿ ಮಾತನಾಡಿ ಶುಭ ಹಾರೈಸಿದರು. ವಕೀಲರ ದಿನಾಚರಣೆಯ ಪ್ರಯುಕ್ತ ಕ್ಲಬ್‌ನ ಎಲ್ಲಾ ವಕೀಲ ಸದಸ್ಯರಿಗೆ ಶಾಲು ಹೊದಿಸಿ ಗೌರವಿಸಲಾಯಿತು. ಉಮೇಶ್ ಮನವೇಲು ಪ್ರಾರ್ಥಿಸಿದರು. ವಾರದ ವರದಿಯನ್ನು ಕ್ಲಬ್ ಕಾರ್ಯದರ್ಶಿ ಸೆನೋರಿಟಾ ಆನಂದ್ ಮಂಡಿಸಿದರು. ಕ್ಲಬ್ ಜೊತೆ ಕಾರ್ಯದರ್ಶಿ ಮಿನಾಕ್ಷಿ ಇವರ ವಿವಾಹ ವಾರ್ಷಿಕೋತ್ಸವವನ್ನು ಕ್ಲಬ್‌ನಲ್ಲಿ ಕೇಕ್ ಕತ್ತರಿಸುವ ಮೂಲಕ ಆಚರಿಸಲಾಯಿತು. ನಿಕಟಪೂರ್ವ ಅಧ್ಯಕ್ಷ ಸುಂದರ ರೈ ಬಲ್ಕಾಡಿ ವಂದಿಸಿದರು. ಕಾರ್ಯಕ್ರಮದಲ್ಲಿ ಕ್ಲಬ್‌ನ ಎಲ್ಲಾ ಸದಸ್ಯರು ಹಾಜರಿದ್ದರು.