ಪುಣಚ: ಕೋಟಿ-ಚೆನ್ನಯ ಬಿಲ್ಲವ ಸಂಘ ಪುಣಚ ಇವರ ಆಶ್ರಯದಲ್ಲಿ ಸಂಘದ ಗುರುಪೂಜೆ ಹಾಗೂ ಸಮಿತಿಯ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಡಿ.8ರಂದು ಪುಣಚ ಮಹಿಷಮರ್ದಿನಿ ದೇವಸ್ಥಾನದ ವಠಾರದಲ್ಲಿ ನಡೆಯಿತು. ಅರ್ಕೆಚ್ಚಾರು ಸುರೇಶ್ ಶಾಂತಿಯವರ ನೇತೃತ್ವದಲ್ಲಿ ಬೆಳಿಗ್ಗೆ ಪ್ರಾರ್ಥನೆ, ದೀಪ ಬೆಳಗಿಸಿ ಗುರುಪೂಜಾ ಕಾರ್ಯಕ್ರಮ ನೆರವೇರಿತು.
ಪೂಜಾ ಕಾರ್ಯಕ್ರಮದ ಬಳಿಕ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದ ನಾರಾಯಣಗುರು ವಿಚಾರ ವೇದಿಕೆಯ ರಾಜ್ಯಾಧ್ಯಕ್ಷ ಸತ್ಯಜಿತ್ ಸುರತ್ಕಲ್ ಮಾತನಾಡಿ, ನಾರಾಯಣ ಗುರುಗಳ ತತ್ವ, ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಬದುಕಬೇಕೆಂಬ ಯೋಚನೆ ನಮ್ಮ ಸಮಾಜದ್ದಾಗಿದೆ. ಜಗತ್ತಿಗೆ ಮಾರ್ಗದರ್ಶನ ನೀಡಿದ ಗುರುಗಳ ಸಂದೇಶ ನಮ್ಮ ಜೀವನದಲ್ಲಿ ಸಾರ್ಥಕತೆ ಕಾಣಬೇಕು ಎಂಬ ಯೋಜನೆಯ ಮುಖಾಂತರ ನಮ್ಮ ಸಮಾಜದ ಮುನ್ನಡೆಗೆ ನಾವು ಪರಿಪೂರ್ಣವಾಗಿ ಸಂಘಟಿತರಾಗಬೇಕು. ಉತ್ತಮ ಚಿಂತನೆಯಿಂದ ಮುಂದುವರೆದರೆ ಜೀವನ ಸಾರ್ಥಕವಾಗಲಿದೆ ಎಂದರು.
ದೈವಪಾತ್ರಿ, ಪತ್ರಕರ್ತ ಸನ್ನಿಧ್ ಪೂಜಾರಿ ಮಾತನಾಡಿ, ಸಂಘದ ಬೆಳವಣಿಗೆಯಲ್ಲಿ ನಾವು ಗುರು ಹಿರಿಯರ ಮಾರ್ಗದರ್ಶನ ಪಡೆದುಕೊಂಡು ಮುಂದುವರಿದರೆ ಕೋಟಿ ಚೆನ್ನಯ ಬಿಲ್ಲವ ಸಂಘ ಖಂಡಿತವಾಗಿಯೂ ಸೂರ್ಯ-ಚಂದ್ರರಿರುವಷ್ಟು ಕಾಲ ಬೆಳೆದು ಬರಲಿದೆ ಎಂದರು.
ಸಜಿಪಮುಡ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಸಂಜೀವ ಪೂಜಾರಿ ಮಾತನಾಡಿ, ನಮ್ಮ ಸಮಾಜದ ಪ್ರತಿಯೊಬ್ಬರು ಒಟ್ಟಾಗಿ ಸಹಕರಿಸಿಕೊಂಡು ಮುಂದುವರಿದರೆ ಸಂಘಟನೆ ಯಶಸ್ವಿಯಾಗಿ ಬೆಳೆಯಲು ಪೂರಕವಾಗಿರುತ್ತದೆ. ಎಲ್ಲರ ಸಹಕಾರದಿಂದ ಸಂಘಟನೆ ಯಶಸ್ವಿಯಾಗಿ ಬೆಳೆಯಲಿ ಎಂದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಯೋಜನಾಧಿಕಾರಿ ಶ್ವೇತಾ ಎನ್. ಮಾತನಾಡಿ, ಮಕ್ಕಳ ಬೆಳವಣಿಗೆಯಲ್ಲಿ ಮಹಿಳೆಯರ ಪಾತ್ರ ಪ್ರಮುಖವಾದುದು. ಮಕ್ಕಳ ಸರ್ವತೋಮುಖ ಅಭಿವೃದ್ಧಿಯಲ್ಲಿ ಭಾಗಿಯಾಗುವ ಮೂಲಕ ಮಕ್ಕಳ ಭವಿಷ್ಯ ಉತ್ತಮ ರೀತಿಯಲ್ಲಿ ಸಾಗುವಲ್ಲಿ ಪ್ರಮುಖ ಪಾತ್ರವಹಿಸಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಕೋಟಿ-ಚೆನ್ನಯ ಬಿಲ್ಲವ ಸಂಘದ ನಿಕಟಪೂರ್ವ ಅಧ್ಯಕ್ಷ ರಾಮಕೃಷ್ಣ ಮೂಡಂಬೈಲು ಮಾತನಾಡಿ, ಸಂಘದ ಅವಧಿಯಲ್ಲಿ ಸಹಕರಿಸಿದ ಎಲ್ಲಾ ಸದಸ್ಯರಿಗೆ ಅಭಿನಂದನೆಗಳನ್ನು ತಿಳಿಸುತ್ತಾ ಮುಂದಿನ ಅವಧಿಯಲ್ಲಿ ಸಂಘವು ಎಲ್ಲರ ಸಹಕಾರದಲ್ಲಿ ಇನ್ನಷ್ಟು ಉತ್ತಮವಾಗಿ ಬೆಳೆಯಲಿ ಎಂದು ಶುಭ ಹಾರೈಸಿದರು. ಮಹಿಳಾ ಸಂಘದ ನಿಕಟಪೂರ್ವ ಅಧ್ಯಕ್ಷೆ ನಳಿನಿ ಚಂದ್ರಶೇಖರ ಮಾತನಾಡಿ ನಮ್ಮೆಲ್ಲರ ಸಹಕಾರ ಪ್ರೋತ್ಸಾಹದಿಂದ ಸಂಘವು ಮುಂದಿನ ಅವಧಿಯಲ್ಲಿ ಬಲಿಷ್ಠ ಸಂಘಟನೆಯಾಗಿ ಬೆಳೆಯಲಿ ಎಂದು ಹಾರೈಸಿದರು. ವಿಟ್ಲ ರೋಟರಿ ಕ್ಲಬ್ ಅಧ್ಯಕ್ಷ ಹರೀಶ್ ಸಿ.ಎಚ್., ಸಂಘದ ನಿಕಟಪೂರ್ವ ಗೌರವಾಧ್ಯಕ್ಷ ಶಿವಪ್ಪ ಪೂಜಾರಿ ನಾಟೆಕಲ್ಲು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಗೌರವ ಸಮರ್ಪಣೆ:
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಂಜೀವ ಪೂಜಾರಿ, ಸ್ಥಳೀಯರಾದ ಹಿರಿಯ ದೈವಪಾತ್ರಿ ಅಣ್ಣು ಪೂಜಾರಿ ದಲ್ಕಾಜೆಗುತ್ತು, ಹಿರಿಯ ಮೂರ್ತೆದಾರ ಸಾಂತಪ್ಪ ಪೂಜಾರಿ ಹಿತ್ತಿಲು, ಬಹುಮುಖ ಸಾಧನೆಯ ಕಾಂತಪ್ಪ ಬಂಗೇರ ಬಳಂತಿಮೊಗರುರವರನ್ನು ಶಾಲು, ಹಾರ, ಪೇಟ, ಫಲಪುಷ್ಪ, ಸ್ಮರಣಿಕೆ ನೀಡಿ ಸನ್ಮಾನಿಸಿ ಗೌರವಿಸಲಾಯಿತು.
ಪದಗ್ರಹಣ:
ಸಂಘದ ಮುಂದಿನ ಎರಡು ವರ್ಷದ ಅವಧಿಯ ಅಧ್ಯಕ್ಷ ರಮೇಶ್ ಕೋಡಂದೂರು, ಪ್ರಧಾನ ಕಾರ್ಯದರ್ಶಿ ಜಗನ್ನಾಥ ಸಂಕೇಶ, ಗೌರವಾಧ್ಯಕ್ಷ ನಾರಾಯಣ ಪೂಜಾರಿ ನೀರುಮಜಲು ಗರಡಿ, ಕೋಶಾಧಿಕಾರಿ ಲೋಹಿತ್ ಅಜ್ಜಿನಡ್ಕ, ಉಪಾಧ್ಯಕ್ಷ ಹರೀಶ್ ಪೂಜಾರಿ ಪೊಯ್ಯಮೂಲೆ, ಜೊತೆ ಕಾರ್ಯದರ್ಶಿ ಚಂದ್ರಶೇಖರ ಪೂಜಾರಿ ಮಲ್ಲಿಕಟ್ಟೆ, ಸಂಘಟನಾ ಕಾರ್ಯದರ್ಶಿಗಳಾದ ಸುಜನ್ ಅಜ್ಜಿನಡ್ಕ, ಲೋಕೇಶ್ ಕುಟ್ಟಿತ್ತಡ್ಕ, ನಾಗೇಶ ಕಲ್ಲಾಜೆ, ಅವಿನಾಶ್ ಬಳಂತಿಮೊಗರು, ದಯಾನಂದ ಮೂಡಾಯಿಬೆಟ್ಟು, ಜಗದೀಶ ಪಾದೆಕಟ್ಟ, ಸುರೇಶ್ ದಲ್ಕಾಜೆ, ಹರಿಶ್ಚಂದ್ರ ಬಳಂತಿಮೊಗರು, ಜಯಂತ ಮೂಡಾಯಿಬೆಟ್ಟು ಹಾಗೂ ಮಹಿಳಾ ಸಮಿತಿಯ ಅಧ್ಯಕ್ಷೆ ಭವ್ಯ ಮೋಹನ ಹಿತ್ತಿಲು, ಪ್ರಧಾನ ಕಾರ್ಯದರ್ಶಿ ದಿವ್ಯ ಬಳಂತಿಮೊಗರು, ಕೋಶಾಧಿಕಾರಿ ರೇಖಾ ಅಶೋಕ ಬೈಲು,ದರ್ಖಾಸು, ಉಪಾಧ್ಯಕ್ಷೆ ವೇದಾವತಿ ಕೂರೇಲು, ಜೊತೆ ಕಾರ್ಯದರ್ಶಿ ಶಿವಂತಿ ಹಿತ್ತಿಲು, ಸಂಘಟನಾ ಕಾರ್ಯದರ್ಶಿಗಳಾದ ಹೇಮಾವತಿ ರವೀಂದ್ರ ದಲ್ಕಾಜೆ, ಸರೋಜಿನಿ ಮಾರಿಕಲ್ಲು ಇವರುಗಳಿಗೆ ಶಾಲು, ಹೂ ಹಾಗೂ ತಾಂಬೂಲ ನೀಡಿ ಸಮಿತಿ ಅಧಿಕಾರ ಹಸ್ತಾಂತರಿಸಲಾಯಿತು.
ಬಹುಮಾನ ವಿತರಣೆ:
ಗುರುಪೂಜೆಯ ಪ್ರಯುಕ್ತ ಬಿಲ್ಲವ ಸ್ವಜಾತಿ ಬಾಂಧವರಿಗೆ ನಡೆಸಲಾದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಹರಿಶ್ಚಂದ್ರ ಬಳಂತಿಮೊಗರು ಸ್ಪರ್ಧಾ ವಿಜೇತರ ಪಟ್ಟಿ ವಾಚಿಸಿದರು. ದಿವ್ಯ ಬಳಂತಿಮೊಗರು ಸನ್ಮಾನಿತರ ಪರಿಚಯ ಮಾಡಿದರು. ರವೀಂದ್ರ ದಲ್ಕಾಜೆ ಸಮಿತಿ ಪದಗ್ರಹಣದ ಪಟ್ಟಿ ವಾಚಿಸಿದರು. ಸಂಘದ ಅಧ್ಯಕ್ಷ ರಮೇಶ್ ಕೋಡಂದೂರು ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಲೋಕೇಶ್ ಕುಟ್ಟಿತ್ತಡ್ಕ, ಹರೀಶ್ ಪೂಜಾರಿ, ನಳಿನಿ ಚಂದ್ರಶೇಖರ, ಭವ್ಯ ಮೋಹನ, ಸುರೇಶ್ ಪೂಜಾರಿ, ಮನೋಹರ, ಜಯಂತ, ರೇಖಾ ಅಶೋಕ ಅತಿಥಿಗಳನ್ನು ಹೂ ನೀಡಿ ಸ್ವಾಗತಿಸಿದರು. ಅತಿಥಿಗಳಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ರಿದ್ವಿತ ಪ್ರಾರ್ಥಿಸಿ, ಭವ್ಯ ಮೋಹನ ವಂದಿಸಿದರು. ಜಗನ್ನಾಥ ಎಸ್.ಕಾರ್ಯಕ್ರಮ ನಿರೂಪಿಸಿದರು.
ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು. ಸಂಘದ ಪದಾಧಿಕಾರಿಗಳು, ಮಹಿಳಾ ಸಮಿತಿ ಪದಾಧಿಕಾರಿಗಳು ವಿವಿಧ ರೀತಿಯಲ್ಲಿ ಸಹಕರಿಸಿದರು.
ಸಮಾಜ ಬಾಂಧವರೆಲ್ಲರ ಸಹಕಾರದಲ್ಲಿ ಸಂಘವು ಯಶಸ್ವಿಯಾಗಿ ನಡೆದುಕೊಂಡು ಬಂದಿದೆ. ಮುಂದಿನ ದಿನಗಳಲ್ಲಿ ಸಂಘದ ಎಲ್ಲಾ ಸದಸ್ಯರು ಪೂರ್ಣ ಸಹಕಾರ ಪ್ರೋತ್ಸಾಹ ನೀಡಿ ಎಲ್ಲಾ ರೀತಿಯ ಸಂಘದ ಬೆಳವಣಿಗೆಯಲ್ಲಿ ನಮ್ಮೊಂದಿಗೆ ಕೈಜೋಡಿಸುವಂತೆ ಸಂಘದ ನೂತನ ಅಧ್ಯಕ್ಷ ರಮೇಶ್ ಕೋಡಂದೂರು ವಿನಂತಿಸಿದರು.