ಬಪ್ಪಳಿಗೆ ಬೈಪಾಸ್ ಬಳಿ ಖಾಸಗಿ ಕಂಪೆನಿ ಟವರ್ ನಿರ್ಮಾಣಕ್ಕೆ ಸ್ಥಳೀಯರ ವಿರೋಧ – ಕಾಮಗಾರಿ ಸ್ಥಗಿತ

0

ಪುತ್ತೂರು: ಪುತ್ತೂರು ಬೈಪಾಸ್ ರಸ್ತೆಯ ಬಪ್ಪಳಿಗೆಯ ಗುಡ್ಡದ ಮೇಲಿನ ಖಾಸಗಿ ಸ್ಥಳವೊಂದರಲ್ಲಿ ಖಾಸಗಿ ಕಂಪೆನಿಯೊಂದರಿಂದ ಮೊಬೈಲ್ ಟವರ್ ಕಾಮಗಾರಿ ನಡೆಯುತ್ತಿರುವುದನ್ನು ಸ್ಥಳೀಯರು ವಿರೋಧಿಸಿದ್ದಲ್ಲದೆ ನಗರಸಭೆಯಿಂದ ನಿರಾಪೇಕ್ಷಣ ಪತ್ರ ಪಡೆಯದೇ ಟವರ್ ನಿರ್ಮಾಣ ಮಾಡುತ್ತಿದ್ದಾರೆ. ಜನರ ಆರೋಗ್ಯದ ಹಿತದೃಷ್ಟಿಯಿಂದ ಜನವಸತಿ ಪ್ರದೇಶದಲ್ಲಿ ಮೊಬೈಲ್ ಟವರ್ ನಿರ್ಮಾಣ ಮಾಡಬಾರದು. ಜೊತೆಗೆ ಮಳೆಗಾದಲ್ಲಿ ಪದೇ ಪದೇ ಕುಸಿಯುತ್ತಿರುವ ಬೈಪಾಸ್ ರಸ್ತೆಯ ಗುಡ್ಡದಲ್ಲಿ ಈ ಟವರ್ ನಿರ್ಮಾಣ ಆದರೆ ಅಪಾಯ ತಪ್ಪಿದಲ್ಲ ಎಂದು ಆರೋಪಿಸಿ ಟವರ್ ವಿರೋಧಿಸಿ ಸ್ಥಳೀಯರು ಸ್ಥಳದಲ್ಲಿ ಜಮಾಯಿಸಿದ ಘಟನೆ ಡಿ.10ರಂದು ನಡೆದಿದೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಟವರ್ ನಿರ್ಮಾಣ ಕಾರ್ಯವನ್ನು ಸ್ಥಗಿತಗೊಳಿಸುವಂತೆ ಕಾರ್ಮಿಕರಿಗೆ ಸೂಚನೆ ನೀಡಿದ ಘಟನೆಯೂ ನಡೆದಿದೆ.


ಬೈಪಾಸ್ ರಸ್ತೆಯ ಬಪ್ಪಳಿಗೆಯ ಅನಂತ ಕಾಮತ್ ಮತ್ತು ರಾಧಾಕೃಷ್ಣ ಕಾಮತ್ ಎಂಬವರ ಎತ್ತರದ ಸ್ಥಳದಲ್ಲಿರುವ ಖಾಸಗಿ ಸ್ಥಳದಲ್ಲಿ ಬೆಂಗಳೂರಿನ ಇಂಡಸ್ ಟವರ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯಿಂದ ಮೊಬೈಲ್ ಟವರ್ ನಿರ್ಮಾಣ ಕಾರ್ಯ ನಡೆಯುತ್ತಿದೆ. ಜನರ ಆರೋಗ್ಯದ ಹಿತದೃಷ್ಟಿಯಿಂದ ಜನವಸತಿ ಪ್ರದೇಶದಲ್ಲಿ ಮೊಬೈಲ್ ಟವರ್ ನಿರ್ಮಾಣ ಮಾಡಬಾರದು ಎಂಬ ಸೂಚನೆ ಇದ್ದರೂ ಮೊಬೈಲ್ ಟವರ್ ಕಾಮಗಾರಿ ನಡೆಯುತ್ತಿದೆ ಎಂದು ಈ ಹಿಂದೆಯೇ ನಗರಸಭೆ ಸ್ಥಳೀಯರು ದೂರು ನೀಡಿದ್ದರು.

ಸ್ಥಳೀಯರ ಆಕ್ಷೇಪಣೆಯ ಹಿನ್ನಲೆಯಲ್ಲಿ ಮೊಬೈಲ್ ಟವರ್ ನಿರ್ಮಾಣ ಕಾರ್ಯ ಮುಂದುವರಿಸದಂತೆ ನಗರಸಭೆಯಿಂದ ಸೆ.5ಕ್ಕೆ ಮೊಬೈಲ್ ಟವರ್ ಸಂಸ್ಥೆಗೆ ನೋಟೀಸ್ ನೀಡಲಾಗಿತ್ತು. ಆದರೆ ಇದೀಗ ಮತ್ತೆ ಮೊಬೈಲ್ ಟವರ್ ಕಾಮಗಾರಿ ಆರಂಭಗೊಂಡಿರುವ ಕುರಿತು ತಿಳಿದ ಸ್ಥಳೀಯರು ಸ್ಥಳಕ್ಕೆ ಆಗಮಿಸಿ ಪ್ರತಿಭಟಿಸಿದ್ದಾರೆ. ಇದೇ ವೇಳೆ ಪೊಲೀಸರು ಬಂದು ನಗರಸಭೆಯ ನೋಟೀಸ್ ಮಾಹಿತಿ ಪಡೆದು ಟವರ್ ಕಾಮಗಾರಿ ಸ್ಥಗಿತಗೊಳಿಸಿ ಯಥಾಸ್ಥಿತಿ ಕಾಪಾಡುವಂತೆ ತಿಳಿಸಿದ್ದಾರೆ. ಅದರಂತೆ ಟವರ್ ಕಾಮಗಾರಿ ನಡೆಸುವ ಕಾರ್ಮಿಕರು ಸದ್ಯ ಕಾಮಗಾರಿ ನಿಲ್ಲಿಸಿದ್ದಾರೆ. ಈ ಸಂದರ್ಭ ಮೊಬೈಲ್ ಟವರ್ ಪಕ್ಕದ ಜಾಗದ ಮಾಲಕ ಮನೋಜ್, ಮನೋಜ್ ಗೌಡ ಬಪ್ಪಳಿಗೆ, ವಿನಯ ಕುಮಾರ್ ಮಾಲ್ತೊಟ್ಟು, ಶ್ವೇತಾ, ನಗರಸಭೆ ನಾಮನಿರ್ದೇಶಿತ ಸದಸ್ಯ ರೋಶನ್ ರೈ ಬನ್ನೂರು, ಕೃಷ್ಣ ನಾಯ್ಕ್ ಉಪಸ್ಥಿತರಿದ್ದರು.

ವಸತಿ ಪ್ರದೇಶವಾದರೂ ಆನ್‌ಲೈನ್ ಮೂಲಕವೇ ಅನುಮತಿ !
ನಗರಸಭೆಯಿಂದ ಅನುಮತಿ ಪಡೆಯದೆ ಅಕ್ರಮವಾಗಿ ಮೊಬೈಲ್ ಟವರ ನಿರ್ಮಾಣ ಮಾಡುತ್ತಿದ್ದಾರೆ. ಬೆಂಗಳೂರಿನಿಂದಲೇ ಜಿಪಿಎಸ್ ಆಧಾರದಲ್ಲಿ ಸ್ಥಳ ಗುರುತಿಸಿ ಸುತ್ತಮುತ್ತ ಯಾವುದೇ ಮನೆ ಇಲ್ಲವೆಂದು ಟವರ್ ನಿರ್ಮಾಣಕ್ಕೆ ಆನ್‌ಲೈನ್ ಮೂಲಕವೇ ಅನುಮತಿ ಪಡೆದಿದ್ದಾರೆ. ಆದರೆ ಇದು ವಸತಿ ಪ್ರದೇಶ. ಇಲ್ಲಿ ಸುತ್ತಮುತ್ತ ಮನೆ ನಿರ್ಮಾಣ ಆಗುತ್ತಿದೆ. ಜೊತೆಗೆ ಮಳೆಗಾಲದಲ್ಲಿ ಇದರ ಮಣ್ಣು ಕುಸಿಯುತ್ತಿದೆ. ಕುಸಿಯುತ್ತಿರುವ ಮಣ್ಣಿನಲ್ಲಿ ಟವರ್ ನಿರ್ಮಾಣ ಸಾಧ್ಯವೇ ಮತ್ತು ಮುಂದೆ ಇದು ಅಪಾಯಕ್ಕೆ ಎಡೆ ಮಾಡಿಕೊಡಬಹುದಾಗಿದೆ.
ಮನೋಜ್ ಪುತ್ತೂರು

ಕುಸಿಯುತ್ತಿರುವ ಗುಡ್ಡದಲ್ಲಿ ಮೊಬೈಲ್ ಟವರ್ ಅಪಾಯ
ಕಳೆದ ಸಲ ಬೈಪಾಸ್‌ನಲ್ಲಿ ಗುಡ್ಡಕುಸಿತದಿಂದಾಗಿ ರಸ್ತೆ ವಾರಗಟ್ಟಲೆ ಬಂದ್ ಆಗಿತ್ತು. ಈಗ ಅದೆ ಗುಡ್ಡದಲ್ಲಿ ಟವರ್ ನಿರ್ಮಾಣ ಮಾಡುತ್ತಿದ್ದಾರೆ. ಅದನ್ನು ನಿಲ್ಲಿಸುವ ಕುರಿತು ಈಗಾಗಲೇ ನಗರಸಭೆಗೆ ಮನವಿ ಮಾಡಿದ್ದೇವೆ. ಆದರೂ ಮೊಬೈಲ್ ಟವರ್ ನಿರ್ಮಾಣದ ಖಾಸಗಿ ಸಂಸ್ಥೆ ಟವರ್ ನಿರ್ಮಾಣ ಕಾರ್ಯವನ್ನು ರಾತ್ರೋ ರಾತ್ರಿ ಮಾಡುತ್ತಿದ್ದಾರೆ. ಮುಂದೆ ಮಳೆಗಾಲದಲ್ಲಿ ಭಾರಿ ತೊಂದರೆ ಆಗುವ ಸಾಧ್ಯತೆ ಇದೆ.
ವಿನಯ್ ಕುಮಾರ್ ಮಾಲ್ತೊಟ್ಟು

LEAVE A REPLY

Please enter your comment!
Please enter your name here