ಪುತ್ತೂರು: ಮರಾಟಿ ಸಮಾಜ ಸೇವಾ ಸಂಘ ಕೊಂಬೆಟ್ಟು ಪುತ್ತೂರು ಮತ್ತು ಮರಾಟಿ ಯುವ ವೇದಿಕೆ ಹಾಗು ಮಹಿಳಾ ವೇದಿಕೆಯ ಸಂಯುಕ್ತ ಆಶ್ರಯದಲ್ಲಿ ಅವಿಭಜಿತ ಪುತ್ತೂರು ತಾಲೂಕಿನ ಸಮಾಜ ಬಾಂಧವರಿಗೆ 2024-25ನೇ ಸಾಲಿನ ವಾರ್ಷಿಕ ಕ್ರೀಡಾಕೂಟವು ಡಿ.15ರಂದು ಪುತ್ತೂರು ಕೊಂಬೆಟ್ಟಿನಲ್ಲಿರುವ ತಾಲೂಕು ಕ್ರೀಡಾಂಗಣದಲ್ಲಿ ಜರುಗಲಿದೆ ಎಂದು ಮರಾಟಿ ಸಮಾಜ ಸೇವಾ ಸಂಘದ ಅಧ್ಯಕ್ಷ ಎನ್ ದುಗ್ಗಪ್ಪ ನಾಯ್ಕ ಬಡಾವು ಅವರು ಪತ್ರಿಕಾಗೋಷ್ಟಿಯಲ್ಲಿ ಹೇಳಿದರು.
ಮರಾಟಿ ಸಮಾಜದ ಬಾಂಧವರ ಮತ್ತು ಯುವ ಕ್ರೀಡಾ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಜೊತೆಗೆ ಸಮಾಜದ ಸಂಘಟನೆಯನ್ನು ಬಲವರ್ಧನೆ ಮಾಡುವುದಕ್ಕೆ ವಾರ್ಷಿಕ ಕ್ರೀಡಾಕೂಟವನ್ನು ಹಲವು ವರ್ಷಗಳಿಂದ ನಡೆಸುತ್ತಾ ಬಂದಿದ್ದೇವೆ. ಕ್ರೀಡಾಕೂಟದಲ್ಲಿ ಅವಿಭಜಿತ ಪುತ್ತೂರು ಕಡಬದಿಂದ 13 ಗ್ರಾಮ ಸಮಿತಿಯಲ್ಲಿ ಸುಮಾರು 750 ಕ್ರೀಡಾಪಟುಗಳು ಭಾಗವಹಿಸುವ ನಿರೀಕ್ಷೆಯಿದೆ.
ಕ್ರೀಡಾಕೂಟವನ್ನು ಬೆಳಿಗ್ಗೆ ಗಂಟೆ 9ಕ್ಕೆ ಪುತ್ತೂರು ಉಪವಿಭಾಗದ ಅರಣ್ಯ ಸಂರಕ್ಷಣಾಧಿಕಾರಿ ಬಿ.ಸುಬ್ಬಯ್ಯ ನಾಯ್ಕ ಅವರು ಉದ್ಘಾಟಿಸಲಿದ್ದಾರೆ. ನಗರಸಭೆ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ, ಮೂಡಬಿದಿರೆ ಮ.ಸ.ಸೇ.ಸಂಘದ ಸ್ಥಾಪಕ ಅಧ್ಯಕ್ಷ ರಾಮಚಂದ್ರ ನಾಯ್ಕ ಕೆಂಬಾರೆ, ಸಂತ ಪಿಲೋಮಿನಾ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಸದಾಶಿವ ನಾಯ್ಕ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಂಜೆ ನಡೆಯುವ ಸಮಾರೋಪ ಸಮಾರಂಭದಲ್ಲಿ ನಿವೃತ್ತ ಅಬಕಾರಿ ನಿರೀಕ್ಷಕ ಮಾಯಿಲಪ್ಪ ನಾಯ್ಕ ಜಿ, ಕೆನರಾ ಬ್ಯಾಂಕ್ ಪ್ರಾದೇಶಿಕ ಕಚೇರಿ ಪುತ್ತೂರು ಇದರ ಸೀನಿಯರ್ ಮ್ಯಾನೇಜರ್ ಬಾಲಕೃಷ್ಣ ನಾಯ್ಕ ಬಿ, ಬೆಂಗಳೂರಿನ ಉದ್ಯಮ ಪುಷ್ಪರಾಜ್ ಶೆಟ್ಟಿ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಕ್ರೀಡಾಕೂಟದಲ್ಲಿ ಅಂಗನವಾಡಿ ಪುಟಾಣಿಗಳಿಂದ ಹಿಡಿದು ಪದವಿ, ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ, ಬಾಲಕ, ಬಾಲಕಿಯರಿಗೆ ವಿವಿಧ ಕ್ರೀಡಾ ಸ್ಪರ್ಧೆಗಳು ನಡೆಯಲಿದೆ. ಹಿರಿಯರಿಗೂ ವಯೋಮಾನ ಮಿತಿಯಲ್ಲಿ ಸ್ಪರ್ಧೆ ನಡೆಯಲಿದೆ ಎಂದವರು ಹೇಳಿದರು. ಪತ್ರಿಕಾಗೋಷ್ಟಿಯಲ್ಲಿ ಸಂಘದ ಕಾರ್ಯದರ್ಶಿ ಶೀನಪ್ಪ ನಾಯ್ಕ ಎಸ್ ನೆಲ್ಯಾಡಿ, ಕೋಶಾಧಿಕಾರಿ ಮೋಹನ್ ನಾಯ್ಕ ಎಂ, ಕ್ರೀಡಾ ಸಂಚಾಲಕ ಪರಮೇಶ್ವರ ನಾಯ್ಕ ಪಾಂಗ್ಲಾಯಿ, ಸಹ ಸಂಚಾಲಕ ಆಶೋಕ್ ಕುಮಾರ್ ಬಲ್ನಾಡು ಅವರು ಉಪಸ್ಥಿತರಿದ್ದರು.