ಪುತ್ತೂರು: ಬ್ಯಾಂಕಿಗೆ ವಂಚನೆ ಪ್ರಕರಣವೊಂದರಲ್ಲಿ ತಲೆಮರೆಸಿಕೊಂಡಿದ್ದ ಸಂಪ್ಯ ಮೂಲದ ವಾರಂಟ್ ಆರೋಪಿಯೋರ್ವನನ್ನು ಬಂಟ್ವಾಳ ನಗರ ಪೊಲೀಸರು ಮುಂಬೈನಲ್ಲಿ ಬಂಧಿಸಿದ್ದಾರೆ.ಆರ್ಯಾಪು ಗ್ರಾಮದ ಸಂಪ್ಯ ದಿ.ಮಹಮ್ಮದ್ ಎಂಬವರ ಮಗ ಅಬ್ದುಲ್ ಅಜೀಜ್ ಬಂಧಿತ ಆರೋಪಿ.
ಸುಳ್ಳು ದಾಖಲೆಗಳ ಆಧಾರದಲ್ಲಿ ಕಾರು ಖರೀದಿಗೆಂದು ಸಾಲ ಪಡೆದುಕೊಂಡು ಬ್ಯಾಂಕಿಗೆ ವಂಚಿಸಿ ಹಣ ದುರುಪಯೋಗ ಮಾಡಿದ ಆರೋಪದಲ್ಲಿ ಪ್ರಕರಣ ದಾಖಲಾಗಿತ್ತು.2020ರಲ್ಲಿ ಘಟನೆ ನಡೆದಿತ್ತು.ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕಿನ ಕಲ್ಲಡ್ಕ ಶಾಖೆಯ ಮಾರಾಟಾಧಿಕಾರಿ ಸವಿತಾನಾಗರಾಜ್ ಎಂಬವರು ಈ ಕುರಿತು ಬಂಟ್ವಾಳ ನಗರ ಪೊಲೀಸರಿಗೆ ದೂರು ನೀಡಿದ್ದರು.ಮೊಹಮ್ಮದ್ ಅಶ್ರಫ್ ವೀರಕಂಬ, ಅಬ್ದುಲ್ ರಝಾಕ್ ಸಜಿಪ ಮುನ್ನೂರು,ಹಾಜಿರಮ್ಮ ಪೆರ್ನೆ ಮತ್ತು ಅಬ್ದುಲ್ ಅಝೀಝ್ ಸಂಪ್ಯ ಎಂಬವರ ವಿರುದ್ಧ ಅವರು ದೂರು ನೀಡಿದ್ದರು.ಆರೋಪಿ ಮೊಹಮ್ಮದ್ ಅಶ್ರಫ್ ಕಾರು ತೆಗೆಯಲೆಂದು 8 ಲಕ್ಷ ರೂ.ಸಾಲ ತೆಗೆದುಕೊಂಡಿದ್ದು ಅಬ್ದುಲ್ ರಝಾಕ್ ಮತ್ತು ಹಾಜಿರಮ್ಮ ಪೆರ್ನೆ ಇವರು ಸಾಲಕ್ಕೆ ಜಾಮೀನುದಾರರಾಗಿದ್ದಾರೆ.ಸಾಲ ಮರುಪಾವತಿಸದೆ ಇದ್ದುದರಿಂದ ಕಾರು ಹಿಂತಿರುಗಿಸಲು ಹೇಳಿದಾಗ ಕಾರನ್ನು ಹಿಂತಿರುಗಿಸದೆ,ಯಾವುದೇ ದಾಖಲೆಗಳನ್ನೂ ಹಾಜರುಪಡಿಸದೆ ಉದ್ದೇಶಪೂರ್ವಕವಾಗಿ ತಪ್ಪಿಸಿಕೊಂಡು, ಕಾರು ಹೊಸಪೇಟೆಯಲ್ಲಿ ಅಪಘಾತವಾಯಿತು ಎಂದು ಸುಳ್ಳು ಹೇಳಿದ್ದಾರೆ.
ಆರೋಪಿ ಅಬ್ದುಲ್ ಅಝೀಝ್ ಮತ್ತು ಒಂದನೇ ಆರೋಪಿ ಮೊಹಮ್ಮದ್ ಅಶ್ರಫ್ ಸೇರಿಕೊಂಡು ಪಡುಕೋಡಿಯ ಎಕ್ಸೆಲ್ಸಿಯರ್ ನಿಸಾನ್ ಅಟೋಮೊಬೈಲ್ಸ್ನ ಮಾಲಕರೆಂದು ನಂಬಿಸಿ ವಿಜಯಾ ಬ್ಯಾಂಕ್ ಖಾತೆ ರಚಿಸಿ 8 ಲಕ್ಷ ರೂ.ಗಳನ್ನು 11-2-2019ರಂದು ವರ್ಗಾವಣೆ ಮಾಡಿಕೊಂಡು ವಿದ್ಡ್ರಾ ಮಾಡಿ ಬ್ಯಾಂಕಿಗೆ ಮೋಸ ಮಾಡಿದ್ದಾಗಿ ದೂರಿನಲ್ಲಿ ಆರೋಪಿಸಲಾಗಿತ್ತು.
ಪೊಲೀಸರು ನಾಲ್ವರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರು.ಪ್ರಕರಣದಲ್ಲಿ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿ ಅಬ್ದುಲ್ ಅಝೀಜ್ ಬಂಧನಕ್ಕೆ ವಾರಂಟ್ ಹೊರಡಿಸಲಾಗಿತ್ತು.ಬಂಟ್ವಾಳ ಉಪವಿಭಾಗದ ಉಪಾಧಿಕ್ಷಕ ವಿಜಯಪ್ರಸಾದ್ ಅವರ ಮಾರ್ಗದರ್ಶನದಲ್ಲಿ ಪೊಲೀಸ್ ನಿರೀಕ್ಷಕ ಅನಂತ ಪದ್ಮನಾಭ ಹಾಗೂ ಉಪನಿರೀಕ್ಷಕರಾದ ರಾಮಕೃಷ್ಣ ಕಲೈಮಾರ್, ದುರ್ಗಪ್ಪ,ಗೋಪಾಲ ನೇತೃತ್ವದಲ್ಲಿ ಸಿಬ್ಬಂದಿಗಳಾದ ಎಎಸ್ಐ ಸುಜು, ಹೆಡ್ಕಾನ್ಸ್ಟೇಬಲ್ ಜಗದೀಶ್ರವರು ಮುಂಬಯಿಯಲ್ಲಿ ಆರೋಪಿಯನ್ನು ಬಂಧಿಸಿ ಕರೆತಂದು ದ.13ರಂದು ಬಂಟ್ವಾಳ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.