ಬೆಟ್ಟಂಪಾಡಿ ಗ್ರಾ.ಪಂ. ಉದ್ಯೋಗ ಖಾತರಿ ಯೋಜನೆಯ ವಿಶೇಷ ಗ್ರಾಮ ಸಭೆ-ಹಲವು ಬೇಡಿಕೆ ಪೂರೈಸಲು ಗ್ರಾಮಸ್ಥರ ಆಗ್ರಹ

0

ನಿಡ್ಪಳ್ಳಿ; ಬೆಟ್ಟಂಪಾಡಿ ಗ್ರಾಮ ಪಂಚಾಯತ್ 2024-25 ನೇ ಸಾಲಿನ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯ ಹಾಗೂ 15  ನೇ ಹಣಕಾಸು ಯೋಜನೆಯ ಸಾಮಾಜಿಕ ಪರಿಶೋಧನೆಯ ವಿಶೇಷ ಗ್ರಾಮ ಸಭೆ ಡಿ.13 ರಂದು ಬೆಟ್ಟಂಪಾಡಿ ಸಮುದಾಯ ಭವನದಲ್ಲಿ ನಡೆಯಿತು.ಸಭೆಯಲ್ಲಿ ಅಧಿಕಾರಿಗಳು ಮಾಹಿತಿ ನೀಡುತ್ತಿದ್ದ ಸಂದರ್ಭದಲ್ಲಿ ಗ್ರಾಮಸ್ಥರು ಹಲವು ಬೇಡಿಕೆ ಪೂರೈಸಲು ಆಗ್ರಹಿಸಿದರು.

 ಅಂಗನವಾಡಿ ಕೇಂದ್ರಕ್ಕೂ ಕಾಂಪೌಂಡ್ ರಚನೆಗೆ ಅವಕಾಶ ನೀಡಲು ಮನವಿ
15 ನೇ ಹಣಕಾಸು ಯೋಜನೆಯ ಸಾಮಾಜಿಕ ಪರಿಶೋಧನೆಯ ಸಮಯದಲ್ಲಿ ಕಂಡು ಬಂದ ಅಂಶಗಳ ಬಗ್ಗೆ ತಾಲೂಕು ವ್ಯವಸ್ಥಾಪಕಿ ಕು. ಸೌಮ್ಯ ಮಾಹಿತಿ ನೀಡುತ್ತಿದ್ದ ಸಂದರ್ಭದಲ್ಲಿ ಮಾತನಾಡಿದ ಪಂಚಾಯತ್ ಸದಸ್ಯ ಪ್ರಕಾಶ್ ರೈ  ಶಾಲೆಗಳ ಕಾಂಪೌಂಡ್ ರಚನೆಗೆ ಅವಕಾಶ ನೀಡಿದ ಹಾಗೆ ಅಂಗನವಾಡಿ ಕೇಂದ್ರಗಳಿಗೂ ಕಾಂಪೌಂಡ್ ರಚನೆಗೆ ಅವಕಾಶ ನೀಡ ಬೇಕು.ಅಂಗನವಾಡಿ ಕೇಂದ್ರದಲ್ಲಿ ಸಣ್ಣ ಸಣ್ಣ ಮಕ್ಕಳು ಇದ್ದು ರಕ್ಷಣೆಗಾಗಿ ಕಾಂಪೌಂಡ್ ರಚನೆ ಅನಿವಾರ್ಯ ಎಂದು ಮನವಿ ಮಾಡಿದರು.

ಬಚ್ಚಲು ಗುಂಡಿ (ಸೋಫಿಟ್) ರಚನೆಗೆ ಹಿಂದಿನ  ಮೊತ್ತ ಇರಲಿ
ಬಚ್ಚಲು ಗುಂಡಿ ರಚನೆಗೆ ಹಿಂದೆ 17 ಸಾವಿರ ನಿಗದಿಯಾಗಿತ್ತು.ಆದರೆ ಈಗ ಅದನ್ನು ಕಡಿತ ಗೊಳಿಸಿ 10 ಸಾವಿರ ಮಾಡಿದ್ದು ಸರಿ ಅಲ್ಲ.ಅದರಲ್ಲಿ ಕಾಮಗಾರಿ ನಡೆಸಲು ಸಾಧ್ಯವಿಲ್ಲ ಎಂದು ಪ್ರಕಾಶ್ ರೈ ಹೇಳಿದರು. ಹಿಂದೆ ಫಲಾನುಭವಿಗೆ ಸಿಕ್ಕಿದ ಮೊತ್ತಕ್ಕಿಂತ ಈಗ ಕಡಿಮೆ ಮಾಡಿದ್ದರಿಂದ ಜನರು ಪಂಚಾಯತ್ ಮೇಲೆ ಸಂಶಯ ಪಡುತ್ತಾರೆ.ಅದುದರಿಂದ ಅದನ್ನು ಕನಿಷ್ಠ 15  ಸಾವಿರವಾದರೂ ನೀಡ ಬೇಕು ಎಂದು ಸದಸ್ಯ ಮೊಯಿದು ಕುಂಞ ಹೇಳಿದರು. ಇದಕ್ಕೆ ಉಪಾಧ್ಯಕ್ಷ ಮಹೇಶ್ ರವರು ಧ್ವನಿ ಗೂಡಿಸಿದರು.ಕಾಲು ದಾರಿ ಬದಿ ತಡೆಗೋಡೆ ನಿರ್ಮಾಣಕ್ಕೂ ಯೊಜನೆಯಲ್ಲಿ ಅವಕಾಶ ನೀಡ ಬೇಕು ಎಂದು ಸದಸ್ಯ ಪ್ರಕಾಶ್ ರೈ ಒತ್ತಾಯಿಸಿದರು.

ತಾ.ಪಂ ನಿಂದ ಕಾಮಗಾರಿ ನಡೆಸುವಾಗ ಪಂಚಾಯತ್ ಗೆ ತಿಳಿಸಬೇಕು
ಬೈಲಾಡಿ ಕಾಲನಿ ಬಳಿ ಆಗಬೇಕಾದ ಸೋಲಾರ್ ದೀಪವನ್ನು ಅಲ್ಲಿ ಹಾಕದೆ ಇರ್ದೆ ಜಂಕ್ಷನ್ ಬಳಿ ಹಾಕಲಾಗಿದೆ.ಕಾಮಗಾರಿ ನಡೆಸಲಾಗಿದೆ ಆದರೆ ಆಗಬೇಕಾದ ಜಾಗ ಬದಲಾಗಿದೆ ಎಂಬ ಬಗ್ಗೆ ಸಭೆಯಲ್ಲಿ ಚರ್ಚೆ ನಡೆದು ಅದು ತಾ.ಪಂ ಅನುದಾನದಲ್ಲಿ ನಡೆಸಲಾಗಿದೆ. ತಾ.ಪಂ ನಿಂದ ಆಗಲಿ ಜಿ.ಪಂ.ನಿಂದ ಆಗಲಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಯಾವುದೇ ಕಾಮಗಾರಿ ನಡೆಸುವಾಗ ಪಂಚಾಯತ್ ಗಮನಕ್ಕೆ ತರಬೇಕು ಎಂದು ಸದಸ್ಯ ಪ್ರಕಾಶ್ ರೈ ಮತ್ತು ಉಪಾಧ್ಯಕ್ಷ ಮಹೇಶ್ ಹೇಳಿದರು. ಕಾಮಗಾರಿ ಮುಕ್ತಾಯ ಆದ ಮೇಲೆ ಬಿಲ್ ಆಗಿ ಸಹಿ ಹಾಕಿಸಲು ಪಂಚಾಯತ್ ಗೆ ಬರುವಾಗ ಕಾಮಗಾರಿ ಆದ ಬಗ್ಗೆ ನಮಗೆ ತಿಳಿಯುತ್ತದೆ. ಆದುದರಿಂದ ಕಾಮಗಾರಿ ನಡೆಯುವ ಮೊದಲು ಪಂಚಾಯತ್ ಗಮನಕ್ಕೆ ತರಬೇಕು ಎಂದು ಹೇಳಿದರು.

 ಸಣ್ಣ ರೈತ ಕಾನೂನನ್ನು ರದ್ದು ಗೊಳಿಸಬೇಕು
ಉದ್ಯೋಗ ಖಾತರಿ ಯೋಜನೆಯಲ್ಲಿ ಕಾಮಗಾರಿ ನಡೆಸಲು ಸಣ್ಣ ರೈತ ಸರ್ಟಿಫಿಕೇಟ್ ಅಗತ್ಯ ಇರುವುದರಿಂದ ಅದೆಷ್ಟೋ ಜನರು ಯೋಜನೆಯಿಂದ ವಂಚಿತರಾಗುತ್ತಾರೆ.ಆದುದರಿಂದ ಸರಕಾರ ಈ ಸಣ್ಣ ರೈತ ಸರ್ಟಿಫಿಕೇಟ್ ಕೇಳುವ ಕಾನೂನು ರದ್ದುಗೊಳಿಸಬೇಕು. ಆಗ ಹೆಚ್ಚಿನವರಿಗೆ ಈ ಯೋಜನೆಯ ಪ್ರಯೋಜನ ಸಿಗುತ್ತದೆ ಎಂದು ಸದಸ್ಯ ಪ್ರಕಾಶ್ ರೈ ಹೇಳಿದರು.

 ವಸತಿ ಯೋಜನೆಯ ಅನುದಾನ ಹೆಚ್ಚಿಸಬೇಕು
ಮನೆ ನಿರ್ಮಾಣ ಉದ್ದೇಶಕ್ಕಾಗಿ ಸರಕಾರ ನೀಡುತ್ತಿರುವ ಅನುದಾನ ಏನೇನೂ ಸಾಲದು.ಕೇವಲ ರೂ. 1,20,000 ದಲ್ಲಿ ಹೊಯಿಗೆ ಕಲ್ಲು ತರಲೂ ಸಾಕಾಗುವುದಿಲ್ಲ. ಕೇರಳದಲ್ಲಿ ರೂ. 5 ಲಕ್ಷ ನೀಡುತ್ತಿದ್ದು ಅಷ್ಟೇ ಅನುದಾನ ನೀಡಬೇಕು. ಈಗ ನೀಡುತ್ತಿರುವ ಹಣದಲ್ಲಿ ಒಂದು ಕೋಳಿ ಶೆಡ್ ನಿರ್ಮಾಣ ಮಾಡಲೂ ಆಗುವುದಿಲ್ಲ. ಆದುದರಿಂದ ಇನ್ನಾದರೂ ಸರಕಾರ ಮನೆ ನಿರ್ಮಾಣ ಮಾಡಲು ಕನಿಷ್ಠ 5 ಲಕ್ಷವಾದರೂ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಸದಸ್ಯ ಪ್ರಕಾಶ್ ರೈ ಹೇಳಿದಾಗ ಇಡೀ ಸಭೆ ಅದಕ್ಕೆ ಧ್ವನಿಗೂಡಿಸಿತು.ನರೇಗಾ ತಾಲೂಕು ವ್ಯವಸ್ಥಾಪಕಿ ಕು.ಸೌಮ್ಯ ಯೋಜನೆಯ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿ ಲಭ್ಯವಾಗಿರುವ ಮತ್ತು ವೆಚ್ಚವಾಗಿರುವ ಅನುದಾನದ ಬಗ್ಗೆ ವಿವರ ನೀಡಿದರು.

 ಹಿಂದಿನ ಸಾಮಾಜಿಕ ಪರಿಶೋಧನಾ ಗ್ರಾಮ ಸಭೆಯಲ್ಲಿ ಕಂಡು ಬಂದ ಅಂಶಗಳಿಗೆ ಕೈಗೊಂಡ ಅನುಪಾಲನಾ ಕ್ರಮಗಳ ವಿವರವನ್ನು ಪಂಚಾಯತ್ ಕಾರ್ಯದರ್ಶಿ ಬಾಬು ನಾಯ್ಕ ವಾಚಿಸಿದರು. ನರೇಗಾ ತಾಂತ್ರಿಕ ಸಂಯೋಜಕಿ ಚಂಚಲಾಕ್ಷಿ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯ ಉದ್ದೇಶ ಹಾಗೂ ಅರಿವು ಮೂಡಿಸುವ ಬಗ್ಗೆ ಮಾತನಾಡಿದರು.ಸಹಾಯಕಿ ರೋಹಿಣಿ 15 ನೇ ಹಣಕಾಸು ಯೋಜನೆಯ ಕಾಮಗಾರಿಗಳ ವಿವರ ನೀಡಿದರು.ಪುತ್ತೂರು ಮೀನುಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕಿ ಶ್ರೀ ದೇವಿ ಅಧ್ಯಕ್ಷತೆ ವಹಿಸಿದ್ದರು. ಪಂಚಾಯತ್ ಉಪಾಧ್ಯಕ್ಷ ಮಹೇಶ್. ಕೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಪಿಡಿಒ ಸೌಮ್ಯ ಸ್ವಾಗತಿಸಿ, ವಂದಿಸಿದರು.

  ಪಂಚಾಯತ್ ಸದಸ್ಯರಾದ ಪ್ರಕಾಶ್ ರೈ, ಪಾರ್ವತಿ.ಎಂ, ರಮ್ಯ, ಲಲಿತ, ಚಂದ್ರಶೇಖರ ರೈ, ಮೊಯಿದು ಕುಂಞ, ಲಲಿತ, ಸಂಜೀವಿನಿ ಒಕ್ಕೂಟದ ಸದಸ್ಯರು, ಹಾಗೂ ಸಾರ್ವಜನಿಕರು ಪಾಲ್ಗೊಂಡರು.ಸಾಮಾಜಿಕ ಪರಿಶೋಧನಾ ತಂಡದ ಸದಸ್ಯರಾದ ರಮೇಶ್ ಪೂಜಾರಿ, ಚಂಚಲ, ಶ್ರೀವಿದ್ಯಾ, ಶೃತಿಶ್ರೀ ಉಪಸ್ಥಿತರಿದ್ದರು.ಪಂಚಾಯತ್ ಸಿಬ್ಬಂದಿಗಳಾದ ಸಂದೀಪ್, ಚಂದ್ರಾವತಿ, ಗ್ರಂಥಪಾಲಕಿ ಪ್ರೇಮಲತಾ ಸಹಕರಿಸಿದರು.

LEAVE A REPLY

Please enter your comment!
Please enter your name here