ಪುತ್ತೂರು: ಬೆಟ್ಟಂಪಾಡಿ ಗ್ರಾಮದ ವೇದಮೂರ್ತಿ ಮಂಜುಳಗಿರಿ ವೆಂಕಟರಮಣ ಭಟ್ಟರನ್ನು ‘ಹವ್ಯಕ ವೇದರತ್ನ’ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.ಡಿಸೆಂಬರ್ 27ರಿಂದ 29ರವರೆಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿರುವ ತೃತೀಯ ವಿಶ್ವ ಹವ್ಯಕ ಸಮ್ಮೇಳನದಲ್ಲಿ ‘ಹವ್ಯಕ ವೇದರತ್ನ’ ಪ್ರಶಸ್ತಿ ಪ್ರದಾನ ನಡೆಯಲಿದೆ.
ವೇದಮೂರ್ತಿ ಮಂಜುಳಗಿರಿ ವೆಂಕಟರಮಣ ಭಟ್ಟರು ಶೃಂಗೇರಿಯಲ್ಲಿ ಸಮಗ್ರ ಯಜುರ್ವೇದ ಪಾಠದೊಡನೆ ಸಂಸ್ಕೃತಾಧ್ಯಯನವನ್ನು ಪೂರೈಸಿ, ತದನಂತರ ಉಚ್ಚ ಶಿಕ್ಷಣವನ್ನು ಪಡೆದು, ಬಳಿಕ ಬೆಟ್ಟಂಪಾಡಿಯ ನವೋದಯ ಪ್ರೌಢಶಾಲೆಯಲ್ಲಿ ಸಂಸ್ಕೃತ ಅಧ್ಯಾಪಕರಾಗಿ, ಮುಖ್ಯಗುರುಗಳಾಗಿ ಜನಮೆಚ್ಚಿದ ಶಿಕ್ಷಕ ಪ್ರಶಸ್ತಿಯನ್ನು ಪಡೆದು ಬಳಿಕ ನಿವೃತ್ತರಾದರು.
ನಿವೃತ್ತಿಯ ಬಳಿಕವೂ ವೇದ ಶಿಕ್ಷಣವನ್ನು ತಮ್ಮ ಶಿಷ್ಯ ವೃಂದಕ್ಕೆ ನೀಡುತ್ತಾ, ಸಂಸ್ಕೃತ ಹಾಗೂ ಧಾರ್ಮಿಕ ಚಟುವಟಿಕೆಯಲ್ಲಿ ಕ್ರಿಯಾಶೀಲರಾಗಿದ್ದಾರೆ. ಶ್ರೀ ಸತ್ಯನಾರಾಯಣ ಪೂಜಾ ವಿಧಿ, ಸತ್ಯಗಣಪತಿ ವ್ರತ ವಿಧಿ, ವರದಶಂಕರ ಪೂಜಾ ವಿಧಿ, ಅಶ್ವತ್ಥಾರಾಧನಂ ಸೇರಿದಂತೆ ಅನೇಕ ಧಾರ್ಮಿಕ ಗ್ರಂಥ ಸಂಪಾದನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಇವರು ಕರ್ನಾಟಕ ಸರಕಾರದ ಧಾರ್ಮಿಕ ದತ್ತಿ ಇಲಾಖೆಯ ಹಿಂದೂ ಧಾರ್ಮಿಕ ಶಿಕ್ಷಣದ ಪಠ್ಯಪುಸ್ತಕವಾದ ಸುಜ್ಞಾನದೀಪಿಕೆ ರಚನೆಯ ಸಂಪನ್ಮೂಲ ವ್ಯಕ್ತಿಯಾಗಿಯೂ ಕಾರ್ಯನಿರ್ವಹಿಸಿರುತ್ತಾರೆ.