ಪುತ್ತೂರು: ಹಾಡಹಗಲೇ ಮನೆಯೊಂದಕ್ಕೆ ನುಗ್ಗಿದ ಕಳ್ಳರು ಲಕ್ಷಾಂತರ ರೂ ಮೌಲ್ಯದ ಚಿನ್ನಾಭರಣ ಹಾಗೂ ನಗದು ದೋಚಿದ ಘಟನೆ ಸರ್ವೆ ಗ್ರಾಮದ ಭಕ್ತಕೋಡಿಯಲ್ಲಿ ಡಿ.20ರಂದು ನಡೆದಿದೆ.
ಭಕ್ತಕೋಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ಬಳಿಯಿರುವ ಕಿಶೋರ್ ಪೂಜಾರಿ ಎಂಬವರ ಮನೆಯಲ್ಲಿ ಕಳ್ಳತನ ಕೃತ್ಯ ನಡೆದಿದೆ. ಕಿಶೋರ್ ಅವರು ಎಂದಿನಂತೆ ಕೆಲಸಕ್ಕೆ ಹೋಗಿದ್ದು ಕಿಶೋರ್ ಅವರ ಪತ್ನಿ ಚಂದ್ರಾವತಿ ಮತ್ತು ಪುತ್ರಿ ಬೆಳಿಗ್ಗೆ ಗಂಟೆ 10-30ಕ್ಕೆ ಪುತ್ತೂರಿಗೆ ಆಸ್ಪತ್ರೆಗೆ ಹೋಗಿದ್ದು ಮಧ್ಯಾಹ್ನದ ವೇಳೆಗೆ ಮನೆಗೆ ಬಂದಾಗ ಘಟನೆ ನಡೆದಿತ್ತು. ಕಿಶೋರ್ ಅವರ ಮನೆಯ ಮುಂಭಾಗದ ಒಂದು ಕೋಣೆಯಲ್ಲಿ ಅಂಗಡಿ ಮಾಡಿಕೊಂಡಿದ್ದು ಹಿಂಭಾಗದಲ್ಲಿ ಮನೆಮಂದಿ ವಾಸವಾಗಿದ್ದಾರೆ. ಮನೆಯ ಹಿಂಬಾಗಿಲನ್ನು ಯಾವುದೋ ಸಾಧನದಿಂದ ಮೀಟಿ ಒಳನುಗ್ಗಿರುವ ಕಳ್ಳರು ಕಳ್ಳತನ ನಡೆಸಿದ್ದಾರೆ.
ಗೋದ್ರೆಜ್ ಒಡೆದು ದೋಚಿದ ಕಳ್ಳರು:
ಮನೆಯೊಳಗಿದ್ದ ಗೋದ್ರೆಜ್ ಬಾಗಿಲನ್ನು ಮುರಿದ ಕಳ್ಳರು ಅದರೊಳಗಿದ್ದ 11 ಪವನ್ನಷ್ಟು ಚಿನ್ನಾಭರಣ ಹಾಗೂ ಅಲ್ಲೇ ಇಟ್ಟಿದ್ದ ರೂ.20 ಸಾವಿರ ನಗದು ದೋಚಿದ್ದಾರೆ. ಚಂದ್ರಾವತಿ ಅವರ ಚಿನ್ನದ ಆಭರಣ ಹಾಗೂ ಕಿಶೋರ್ ಧರಿಸುತ್ತಿದ್ದ ಚಿನ್ನದ ಚೈನ್ ಕಳ್ಳರ ಪಾಲಾಗಿದೆ. ಇತರ ಯಾವುದಾದರೂ ವಸ್ತುಗಳನ್ನು ಕದ್ದೊಯ್ದಿದ್ದಾರೆಯೇ ಎನ್ನುವುದು ಸದ್ಯಕ್ಕೆ ತಿಳಿದು ಬಂದಿಲ್ಲ.
ಪೊಲೀಸರಿಂದ ಪರಿಶೀಲನೆ:
ಘಟನಾ ಸ್ಥಳಕ್ಕೆ ಸಂಪ್ಯ ಪೊಲೀಸ್ ಠಾಣೆಯ ಎಸ್ಸೈ ಜಂಬೂರಾಜ್ ಮಹಾಜನ್, ಅಪರಾಧ ವಿಭಾಗದ ಎಸ್ಸೈ ಸುಶ್ಮಾ ಭಂಡಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಶ್ವಾನದಳ, ಬೆರಳಚ್ಚು ತಜ್ಞರ ಆಗಮನ:
ಸ್ಥಳಕ್ಕೆ ಶ್ವಾನದಳ ಹಾಗೂ ಬೆರಳಚ್ಚು ತಜ್ಞರನ್ನು ಕರೆಸಿಕೊಳ್ಳಲಾಗಿದ್ದು ಪರಿಶೀಲನೆ ನಡೆಸಲಾಗಿದೆ. ಶ್ವಾನ ಮನೆಯ ಒಳಗೆ ಹಾಗೂ ಭಕ್ತಕೋಡಿ ಕಡೆಗೆ ಓಡಿದ್ದು ಭಕ್ತಕೋಡಿ ಜಂಕ್ಷನ್ನ ಅನತಿ ದೂರದವರೆಗೆ ಓಡಿ ನಿಂತಿದೆ. ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ಸಿಸಿ ಕ್ಯಾಮರಾ ಇಲ್ಲ:
ಸ್ಥಳೀಯವಾಗಿ ಯಾವುದೇ ಸಿಸಿ ಕ್ಯಾಮರಾ ಇಲ್ಲದೇ ಇರುವುದು ಕೂಡಾ ಕಳ್ಳರಿಗೆ ವರದಾನವಾಗಿ ಪರಿಣಮಿಸಿದೆ.
ಭಯ ಕಾಡುತ್ತಿದೆ:
ಅಲ್ಲಲ್ಲಿ ನಿರಂತರ ಕಳ್ಳತನ ಪ್ರಕರಣಗಳು ನಡೆಯುತ್ತಿರುವ ಸುದ್ದಿ ಕೇಳುವಾಗ ಭಯವಾಗುತ್ತಿದೆ, ಇನ್ನು ಯಾವ ಧೈರ್ಯದಿಂದ ಮನೆ ಬಿಟ್ಟು ಹೊರಗೆ ಹೋಗಲಿ ಎಂದು ಸ್ಥಳದಲ್ಲಿದ್ದವರು ಮಾತನಾಡಿಕೊಳ್ಳುತ್ತಿದ್ದರು. ಪೊಲೀಸರು ಈ ಪ್ರಕರಣವನ್ನು ಸವಾಲಾಗಿ ಸ್ವೀಕರಿಸಿ ಕಳ್ಳರನ್ನು ಶೀಘ್ರದಲ್ಲಿ ಬಂಽಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಗ್ರಾ.ಪಂ ಅಧ್ಯಕ್ಷ, ಸದಸ್ಯ ಭೇಟಿ:
ಸ್ಥಳಕ್ಕೆ ಮುಂಡೂರು ಗ್ರಾ.ಪಂ ಅಧ್ಯಕ್ಷ ಚಂದ್ರಶೇಖರ ಎನ್ಎಸ್ಡಿ ಹಾಗೂ ಸದಸ್ಯ ಕಮಲೇಶ್ ಸರ್ವೆದೋಳಗುತ್ತು ಭೇಟಿ ನೀಡಿದ್ದಾರೆ.
ಸರ್ವೆ ಗ್ರಾಮದಲ್ಲಿ ನಿರಂತರ ಕಳ್ಳತನ
ಸರ್ವೆ ಗ್ರಾಮದಲ್ಲಿ ಇತ್ತೀಚಿನ ದಿನಗಳಲ್ಲಿ ಕಳ್ಳತನ ಪ್ರಕರಣ ನಿರಂತರವಾಗಿ ನಡೆಯುತ್ತಿದ್ದು ಕಳ್ಳರು ತಮ್ಮ ಕರಾಮತ್ತು ತೋರಿಸುತ್ತಲೇ ಇದ್ದಾರೆ. ಕೆಲವೇ ತಿಂಗಳ ಹಿಂದೆ ಸರ್ವೆ ಗ್ರಾಮದ ಕಾಡಬಾಗಿಲು ಎಂಬಲ್ಲಿ ಸಾರಮ್ಮ ಎಂಬವರ ಮನೆಯಲ್ಲಿ ಯಾರೂ ಇಲ್ಲದ ವೇಳೆ ರಾತ್ರಿ ಮನೆಯ ಕಿಟಕಿಗಳನ್ನು ಮುರಿದು ಒಳನುಗ್ಗಿದ್ದ ಕಳ್ಳರು ಚಿನ್ನ, ಹಣ ಹಾಗೂ ಇನ್ನಿತರ ವಸ್ತುಗಳನ್ನು ಕದ್ದೊಯ್ದಿದ್ದರು. ಆದರೆ ಕಳ್ಳರು ಮಾತ್ರ ಇದುವರೆಗೂ ಪತ್ತೆಯಾಗಿಲ್ಲ. ಇತ್ತೀಚೆಗೆ ಭಕ್ತಕೋಡಿ ಪಶು ಆರೋಗ್ಯ ಕೇಂದ್ರದ ಬಳಿಯಿರುವ ಅಶೋಕ್ ಎಸ್.ಡಿ ಎಂಬವರಿಗೆ ಸೇರಿದ ಅಂಗಡಿಯಿಂದ ಎರಡು ಬಾರಿ ಕಳ್ಳತನ ನಡೆದಿತ್ತು.
ಕೆಲವು ವರ್ಷಗಳ ಹಿಂದೆ ಭಕ್ತಕೋಡಿ ಶ್ರೀ ರಾಮ ಭಜನಾ ಮಂದಿರದ ಬಳಿಯ ಅಡಿಕೆ ಅಂಗಡಿಯೊಂದರಿಂದ ಹಾಡಹಗಲೇ ರೂ.50 ಸಾವಿರ ನಗದು ಕಳ್ಳತನವಾಗಿತ್ತು. ಕೆಲವು ವರ್ಷಗಳ ಹಿಂದೆ ಭಕ್ತಕೋಡಿಯಲ್ಲಿರುವ ಶೀನಪ್ಪ ಪೂಜಾರಿ ಎಂಬವರ ಅಂಗಡಿಯಿಂದ ಸಿಸಿ ಟಿವಿಯ ಡಿವಿಆರ್ ಸಮೇತ ನಗದು ಕಳ್ಳತನವಾಗಿತ್ತು. ಹೀಗೇ ಸರ್ವೆ ಗ್ರಾಮದಲ್ಲಿ ಕಳ್ಳತನದ ಸರಮಾಲೆಯೇ ನಡೆದರೂ ಕಳ್ಳರು ಮಾತ್ರ ಪೊಲೀಸರ ಬಲೆಗೆ ಬೀಳದೇ ಇರುವುದು ಮತ್ತಷ್ಟು ಕಳ್ಳತನಕ್ಕೆ ಕಾರಣವಾಗುತ್ತಿದೆ ಎನ್ನವುವುದು ಸಾರ್ವಜನಿಕರ ಆತಂಕ.
ಸ್ಥಳೀಯರ ಕೈವಾಡ ಶಂಕೆ
ಕಳ್ಳತನ ನಡೆದ ದಿನ ಚಂದ್ರಾವತಿಯವರು ಬೆಳಿಗ್ಗೆ ಗಂಟೆ 10-30ಕ್ಕೆ ತನ್ನ ಪುತ್ರಿಯೊಂದಿಗೆ ಪುತ್ತೂರಿಗೆ ಹೋಗಿದ್ದು ಮಧ್ಯಾಹ್ನ ಗಂಟೆ 1.30ಕ್ಕೆ ವಾಪಸ್ ಮನೆಗೆ ಬಂದಿದ್ದರು. ಅದರ ಮಧ್ಯೆ ಈ ಕಳ್ಳತನ ನಡೆದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಚಂದ್ರಾವತಿಯವರು ಪುತ್ತೂರಿಗೆ ಹೋಗುವುದನ್ನು ತಿಳಿದುಕೊಂಡ ಯಾರೋ ಮನೆಗೆ ನುಗ್ಗಿ ಕಳ್ಳತನ ನಡೆಸಿರಬಹುದು ಅಥವಾ ಹೊರಗಿನಿಂದ ಇನ್ಯಾರನ್ನೋ ಕರೆಸಿ ಕಳ್ಳತನ ಮಾಡಿರಬಹುದೇ ಎನ್ನುವ ಕುರಿತು ಸಾರ್ವಜನಿಕ ವಲಯದಲ್ಲಿ ಸಂಶಯ ಹುಟ್ಟು ಹಾಕಿದೆ. ಹಾಡ ಹಗಲೇ ಇಂತಹ ಕೃತ್ಯ ನಡೆಸುವುದೆಂದರೆ ಅದು ಮನೆಯ ಬಗ್ಗೆ ಪೂರ್ವಾಪರ ಗೊತ್ತಿರುವವರ ಕೈವಾಡ ಇರಬಹುದು ಎನ್ನುವ ಅನುಮಾನ ಪ್ರಬಲವಾಗಿ ಕೇಳಿ ಬಂದಿದೆ. ಪೊಲೀಸರು ಸಮಗ್ರ ತನಿಖೆ ಮಾಡುವ ಮೂಲಕ ಕಳ್ಳರ ಹೆಡೆಮುರಿ ಕಟ್ಟಬೇಕು ಎನ್ನುವ ಆಗ್ರಹ ಸಾರ್ವಜನಿಕ ವಲಯದಿಂದ ಕೇಳಿ ಬಂದಿದೆ.
ಹೊರರಾಜ್ಯದವರ ಬಗ್ಗೆಯೂ ನಿಗಾ ಅಗತ್ಯ
ಸ್ಥಳೀಯವಾಗಿ ಹೊರರಾಜ್ಯದ ಕಾರ್ಮಿಕರು ವಿವಿಧ ಕಡೆಗಳಲ್ಲಿ ಕೆಲಸ ಮಾಡುತ್ತಿದ್ದು ಅವರ ಬಗ್ಗೆಯೂ ನಿಗಾ ವಹಿಸುವುದು ಸೂಕ್ತ ಎನ್ನುವ ಅಭಿಪ್ರಾಯ ಸಾರ್ವಜನಿಕ ವಲಯದಿಂದ ಕೇಳಿ ಬಂದಿದೆ. ಹೊರ ರಾಜ್ಯದ ಕಾರ್ಮಿಕರು ಸ್ಥಳೀಯ ಗ್ರಾ.ಪಂ ಅಥವಾ ಇನ್ನಿತರ ಸಂಬಂಧಪಟ್ಟ ಇಲಾಖೆಗಳಿಂದ ಅನುಮತಿ ಅಥವಾ ಗುರುತುಪತ್ರ ಪಡೆದುಕೊಳ್ಳುವ ವ್ಯವಸ್ಥೆಯಾಗಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.