ಆತೂರು ಜಂಕ್ಷನ್‌ನಲ್ಲಿ ಟಾಟಾ ಏಸ್ ಡಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಮೃತಪಟ್ಟ ಪ್ರಕರಣ

0

ಆರೋಪಿ ಟಾಟಾ ಏಸ್ ಚಾಲಕ ದೋಷಮುಕ್ತ

ರಾಮಕುಂಜ: ಮೂರುವರೆ ವರ್ಷದ ಹಿಂದೆ ಕಡಬ ತಾಲೂಕಿನ ರಾಮಕುಂಜ ಗ್ರಾಮದ ಆತೂರಿನಲ್ಲಿ ಟಾಟಾ ಏಸ್ ಟೆಂಪೋ ಡಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಮೃತಪಟ್ಟ ಪ್ರಕರಣದ ಆರೋಪಿಯಾಗಿ ವಿಚಾರಣೆ ಎದುರಿಸುತ್ತಿದ್ದ ಟಾಟಾ ಎಸ್ ಟೆಂಪೋ ವಾಹನ ಚಾಲಕ ಮಹಮ್ಮದ್ ಶರೀಫ್ ಎಂಬಾತನನ್ನು ದೋಷಮುಕ್ತಗೊಳಿಸಿ ಪುತ್ತೂರು 2ನೇ ಹೆಚ್ಚುವರಿ ನ್ಯಾಯಾಲಯ ಆದೇಶಿಸಿದೆ.


29-6-2021ರಂದು ಬೆಳಿಗ್ಗೆ 11.45ಕ್ಕೆ ಆತೂರು ಜಂಕ್ಷನ್‌ನಲ್ಲಿ ಕಡಬ ಪೊಲೀಸರು ಚೆಕ್ ಪೋಸ್ಟ್ ಹಾಕಿದ್ದ ತಾತ್ಕಾಲಿಕ ಶೆಡ್ ಕಡೆಯಿಂದ ಅಂಚೆ ಕಚೇರಿ ಕಡೆಗೆಂದು ಕೊಯಿಲ ನಿವಾಸಿ ಹ್ಯಾರೀಸ್ ಎಂಬವರು ರಸ್ತೆ ದಾಟಿ ರಸ್ತೆಯ ಅಂಚಿಗೆ ಬರುವಷ್ಟರಲ್ಲಿ ಕೊಯಿಲ ಕಡೆಯಿಂದ ಮಹಮ್ಮದ್ ಶರೀಫ್ ಎಂಬವರು ಚಲಾಯಿಸಿಕೊಂಡು ಬರುತ್ತಿದ್ದ ಟಾಟಾ ಎಸ್ ಟೆಂಪೋ ಡಿಕ್ಕಿಯಾಗಿತ್ತು.

ಇದರ ಪರಿಣಾಮ ಗಂಭೀರ ಗಾಯಗೊಂಡಿದ್ದ ಹ್ಯಾರೀಸ್ ಅವರನ್ನು ಚೆಕ್ ಪಾಯಿಂಟ್ ಕರ್ತವ್ಯದಲ್ಲಿದ್ದ ಪೊಲೀಸರು ಹಾಗೂ ಇತರರು ಸೇರಿ ಉಪ್ಪಿನಂಗಡಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದ ವೇಳೆ ಹ್ಯಾರಿಸ್ ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಆರೋಪಿ ಮಹಮ್ಮದ್ ಶರೀಫ್ ವಿರುದ್ಧ ಕಡಬ ಪೊಲೀಸರು ಭಾರತೀಯ ದಂಡ ಸಂಹಿತೆಯ ಕಲಂ 279, 304(ಎ) ಯಂತೆ ಪ್ರಕರಣ ದಾಖಲಿಸಿ ಪುತ್ತೂರು 2ನೇ ಹೆಚ್ಚುವರಿ ನ್ಯಾಯಾಲಯಕ್ಕೆ ಆರೋಪಿ ವಿರುದ್ಧ ದೋಷರೋಪಣಾ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಪುತ್ತೂರಿನ 2ನೇ ಹೆಚ್ಚುವರಿ ವ್ಯವಹಾರಿಕ ನ್ಯಾಯಾಧೀಶರು ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಯಾದ ಯೋಗೇಂದ್ರ ಶೆಟ್ಟಿಯವರು ಪ್ರಕರಣವನ್ನು ಸಾಬೀತುಪಡಿಸಲು ಅಭಿಯೋಜನೆಯು ವಿಫಲಗೊಂಡಿದೆ ಎಂದು ಅಭಿಪ್ರಾಯಿಸಿ ಆರೋಪಿಯನ್ನು ನಿರ್ದೋಷಿ ಎಂದು ಡಿ.18ರಂದು ತೀರ್ಪು ನೀಡಿ ಬಿಡುಗಡೆಗೆ ಆದೇಶಿಸಿದ್ದಾರೆ. ಆರೋಪಿಯ ಪರ ಸುಳ್ಯದ ವಕೀಲರಾದ ಎಂ.ವೆಂಕಪ್ಪ ಗೌಡ, ಚಂಪಾ ವಿ.ಗೌಡ, ರಾಜೇಶ್ ಬಿ.ಜಿ.,ಹಾಗೂ ಶ್ಯಾಮ್ ಪ್ರಸಾದ್ ವಾದಿಸಿದ್ದರು.

LEAVE A REPLY

Please enter your comment!
Please enter your name here