ಮಾನಸಿಕ ಆರೋಗ್ಯಕ್ಕೆ ಧ್ಯಾನ ಅವಶ್ಯಕ : ಶರಾವತಿ ರವಿನಾರಾಯಣ
ಪುತ್ತೂರು: ಸಾವಧಾನತೆ, ಶಾಂತಿ ಮತ್ತು ಆರೋಗ್ಯದ ಉತ್ತೇಜನ, ಒತ್ತಡ ನಿಭಾವಣೆ ಹಾಗೂ ಮಾನಸಿಕ ಸ್ಪಷ್ಟತೆಯ ಬೆಳೆಸುವಿಕೆಗೆ ಧ್ಯಾನವನ್ನು ಒಂದು ಸಾಧನವಾಗಿ ಅಭ್ಯಾಸ ಮಾಡಬೇಕು ಎಂದು ಆರ್ಟ್ ಆಫ್ ಲಿವಿಂಗ್‌ನ ಪುತ್ತೂರು ಘಟಕದ ಯೋಗ ಶಿಕ್ಷಕಿ ಶರಾವತಿ ಹೇಳಿದರು.
ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯಲ್ಲಿ ವಿಶ್ವಧ್ಯಾನ ದಿನದ ಪ್ರಯುಕ್ತ ಶನಿವಾರ ಮಾತನಾಡಿದರು.
ಇಂದಿನ ವೇಗದ ಹಾಗೂ ಒತ್ತಡದ ಜಗತ್ತಿನಲ್ಲಿ ಧ್ಯಾನವು ಅಪಾರ ಪ್ರಾಮುಖ್ಯತೆಯನ್ನು ಹೊಂದಿದೆ. ಇದರಿಂದ ಮಾನಸಿಕ ಸ್ಪಷ್ಟತೆ, ಭಾವನಾತ್ಮಕ ಸಮತೋಲನ, ಶಾಂತಿ ಮತ್ತು ಕ್ಷೇಮ, ಆಧ್ಯಾತ್ಮಿಕ ಬೆಳವಣಿಗೆ ಸಾಧ್ಯವಾಗುತ್ತದೆ ಎಂದು ತಿಳಿಸಿದರು. ಶಾಲಾ ಪ್ರಾಂಶುಪಾಲೆ ಮಾಲತಿ ಡಿ ಮಾತನಾಡಿ ಮೊಬೈಲ್‌ಗೆ ಹೇಗೆ ನಾವು ಪ್ರಾಮುಖ್ಯತೆಯನ್ನು ನೀಡುತ್ತೇವೂ ಹಾಗೆಯೇ ನಮ್ಮ ಮನಸ್ಸಿಗೂ ಪ್ರಾಮುಖ್ಯತೆಯನ್ನು ಕೊಡಬೇಕು. ನಮ್ಮ ಮನಸ್ಸನ್ನು ಆರೋಗ್ಯಪೂರ್ಣವಾಗಿ ಇಟ್ಟುಕೊಳ್ಳಲು ಧ್ಯಾನದ ಅವಶ್ಯತೆ ಇದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪದವಿ ಪೂರ್ವ ವಿದ್ಯಾರ್ಥಿಗಳು ಹಾಗೂ ಹೈಸ್ಕೂಲ್ ವಿದ್ಯಾರ್ಥಿಗಳು ಭಾಗವಹಿಸಿ ಶರಾವತಿ ಹಾಗೂ ಅವರ ತಂಡದವರು ನಿರ್ದೇಶನದಂತೆ ಧ್ಯಾನವನ್ನು ಕೈಗೊಂಡರು. ಬಪ್ಪಳಿಗೆಯ ಅಂಬಿಕಾ ಪದವಿಪೂರ್ವ ವಿದ್ಯಾಳಯದ ಪ್ರಾಚಾರ್ಯೆ ಸುಚಿತ್ರಾ ಪ್ರಭು ಸ್ವಾಗತಿಸಿದರು. ಮಾಲತಿ ಡಿ ವಂದಿಸಿದರು.