ಪುತ್ತೂರು: ವಿಟ್ಲದಲ್ಲಿ ಮಂಜೂರುಗೊಂಡಿರುವ ಡಾ. ಬಿ.ಆರ್ ಅಂಬೇಡ್ಕರ್ ಭವನಕ್ಕೆ ರೂ.2 ಕೋಟಿ ಅನುದಾನ ಮಂಜೂರುಗೊಳಿಸಲು ವಿಳಂಬ ಮಾಡಿರುವ ಸರಕಾರದ ವಿರುದ್ಧ ಪ್ರತಿಭಟಿಸಲು ಡಿ.30ರಂದು ಕಬಕದಿಂದ ಪುತ್ತೂರು ಶಾಸಕರ ಕಚೇರಿ ತನಕ ಕಾಲ್ನಡಿಗೆ ಜಾಥ ನಡೆಸಲಾಗುವುದು ಎಂದು ದ.ಕ.ಜಿಲ್ಲಾ ದಲಿತ್ ಸೇವಾ ಸಮಿತಿ ಜಿಲ್ಲಾ ಸ್ಥಾಪಕ ಅಧ್ಯಕ್ಷ ಬಿ.ಕೆ.ಸೇಸಪ್ಪ ಬೆದ್ರಕಾಡು ಅವರು ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದ್ದಾರೆ.
ವಿಟ್ಲದ ಅಂಬೇಡ್ಕರ್ ಭವನಕ್ಕೆ ಹೋರಾಟದ ಮೂಲಕ ಜಮೀನು ಖಾದಿರಿಸಿದ್ದೇವೆ. ಆದರೆ ಅಲ್ಲೊಂದು ಅಂಬೇಡ್ಕರ್ ಭವನ ನಿರ್ಮಾಣ ಮಾಡಲು ಅನುದಾನ ಕೊಡಿಸುವಂತೆ ಬಹಳ ಹಿಂದಿನಿಂದಲೇ ಮನವಿ ಸಲ್ಲಿಸುತ್ತಾ ಬಂದಿದ್ದೇವೆ. ಹಿಂದಿನ ಶಾಸಕರು ಅನುದಾನ ಕೊಡಿಸುವ ಭರವಸೆ ನೀಡಿದ್ದರು. ಕೊನೆಗೆ ಚುನಾವಣೆ ಬಂದ ಹಿನ್ನಲೆಯಲ್ಲಿ ಅದು ಬಾಕಿ ಆಗಿತ್ತು. ಈಗಿನ ಸರಕಾರಕ್ಕೂ ಶಾಸಕರ ಮೂಲಕ ಸಮಾಜ ಕಲ್ಯಾಣ ಸಚಿವ ಮಹಾದೇವಪ್ಪ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದಾಗ ತುರ್ತಾಗಿ ರೂ.1 ಕೋಟಿ ಮಂಜೂರು ಮಾಡುವುದಾಗಿ ಭರವಸೆ ನೀಡಿದ್ದರು. ಆದರೆ ಇದುವರೆಗೆ ಅನುದಾನ ಮಂಜೂರುಗೊಂಡಿಲ್ಲ. ಇಲ್ಲಿ ಅಶೋಕ್ ಕುಮಾರ್ ರೈ ಅವರ ಪ್ರಯತ್ನ ಇದೆ. ಅದರೆ ಸರಕಾರ ಸ್ಪಂದಿಸುತ್ತಿಲ್ಲ. ಇದನ್ನು ನೋಡಿದಾಗ ಸರಕಾರದಲ್ಲಿ ಒಂದು ರೂಪಾಯಿ ಹಣ ಇಲ್ಲವೆಂಬ ಭಾವನೆ ಮೂಡಿದೆ. ಈಗ ಇನ್ನೊಮ್ಮೆ ಸರಕಾರವನ್ನು ಎಚ್ಚರಿಸುವ ಸಲುವಾಗಿ ಕಾಲ್ನಡಿಗೆ ಜಾಥದ ಮೂಲಕ ಮನವಿ ಸಲ್ಲಿಸುತ್ತಿದ್ದೇವೆ. ಈ ಮನವಿ ನೀಡಿ ಒಂದು ತಿಂಗಳ ಕಾಲಾವಕಾಶ ನೀಡುತ್ತೇವೆ. ನಮ್ಮ ಮನವಿಗೆ ಸ್ಪಂದನೆ ಇಲ್ಲದಿದ್ದಲ್ಲಿ ಶಾಕರ ಕಚೇರಿ ಎದುರು ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ಹೇಳಿದರು. ಪತ್ರಿಕಾಗೋಷ್ಟಿಯಲ್ಲಿ ದ.ಕ.ಜಿಲ್ಲಾ ದಲಿತ್ ಸೇವಾ ಸಮಿತಿ ಜಿಲ್ಲಾಧ್ಯಕ್ಷ ಸೋಮಪ್ಪ ನಾಯ್ಕ, ಜಿಲ್ಲಾ ಉಪಾಧ್ಯಕ್ಷ ಪ್ರಸಾದ್ ಬೊಲ್ಮಾನ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಲೋಕೇಶ್ ತೆಂಕಿಲ, ಪುತ್ತೂರು ತಾಲೂಕು ಅಧ್ಯಕ್ಷ ಅಣ್ಣಪ್ಪ ಕಾರೆಕ್ಕಾಡು ಉಪಸ್ಥಿತರಿದ್ದರು.