ಪುತ್ತೂರು: ಶಿಕ್ಷಣ ಕ್ಷೇತ್ರದಲ್ಲಿ ಪುತ್ತೂರು ಹಾಗೂ ಆಸುಪಾಸಿನ ತಾಲೂಕಿನಲ್ಲಿ ಗ್ಲೋರಿಯಾ ಫ್ಯಾಷನ್ ಡಿಸೈನ್ ಕಾಲೇಜನ್ನು ಪ್ರಥಮವಾಗಿ ಪರಿಚಯಿಸಿದ ಎಸ್.ಆನಂದ ಆಚಾರ್ಯ (67ವ.) ರವರು ಅಸೌಖ್ಯದಿಂದ ಡಿ.23 ರಂದು ಹುಟ್ಟೂರಾದ ಮಂಡ್ಯ ಜಿಲ್ಲೆಯ ಕೆ.ಆರ್ ಪೇಟೆ ನಿವಾಸದಲ್ಲಿ ನಿಧನ ಹೊಂದಿದರು.
ಎಸ್.ಆನಂದ ಆಚಾರ್ಯ ರವರು ಸ್ಥಾಪಿಸಿದ ಫ್ಯಾಷನ್ ಡಿಸೈನಿಂಗ್ ಕಾಲೇಜು ಇದೀಗ ಪುತ್ತೂರು ಬಿಲ್ಲವ ಸಂಘದ ಮಾಜಿ ಅಧ್ಯಕ್ಷ ಜಯಂತ್ ನಡುಬೈಲು ರವರು ಅಕ್ಷಯ ಕಾಲೇಜು ಎಂಬ ಹೆಸರಿನಲ್ಲಿ ಮುನ್ನಡೆಸುತ್ತಿದ್ದಾರೆ. ಗ್ರಾಮೀಣ ಪ್ರದೇಶಕ್ಕೆ ಸೇವೆ ಸಲ್ಲಿಸುವ ದೃಷ್ಟಿಕೋನವನ್ನು ಹೊಂದಿದ್ದ ಆನಂದ ಆಚಾರ್ಯರವರು ಮೈಸೂರು ವಿಶ್ವವಿದ್ಯಾನಿಲಯದಿಂದ ವಾಣಿಜ್ಯ ಪದವಿ ಪಡೆದವರು. ಬಡತನವನ್ನು ತಳಮಟ್ಟದಿಂದ ನಿರ್ಮೂಲನೆ ಮಾಡುವ ಅಗತ್ಯತೆಯನ್ನು ಕಂಡುಕೊಂಡಿದ್ದ ಅವರು ಮಂಗಳೂರು ವಿಶ್ವವಿದ್ಯಾನಿಲಯದಿಂದ ಸ್ವಯಂ ನಿವೃತ್ತಿ ಹೊಂದಿ ದಕ್ಷಿಣ ಏಷ್ಯಾದಲ್ಲಿಯೇ ವಿಶ್ವವಿದ್ಯಾನಿಲಯದ ಸಂಯೋಜನೆಯೊಂದಿಗೆ ದಿ. ಎಚ್.ಸುಶೀಲ ಆನಂದ ಆಚಾರ್ಯ ರವರ ನೆನಪಿಗೆ ಸುಶೀಲ ಮೆಮೋರಿಯಲ್ ಟ್ರಸ್ಟ್ ಹೆಸರಿನಲ್ಲಿ 2004ರಲ್ಲಿ ಫ್ಯಾಷನ್ ಡಿಸೈನ್ ಪದವಿಯ ಗ್ಲೋರಿಯ ಕಾಲೇಜು ಪ್ರಾರಂಭಿಸಿದ್ದರು.
ಮೃತರು ಪತ್ನಿ ಭಾರತಿ, ಪುತ್ರಿ ಶಿವಾನಿ ರವರನ್ನು ಅಗಲಿದ್ದಾರೆ.
ಅಂತ್ಯಕ್ರಿಯೆ:
ಮೃತರ ಅಂತ್ಯಕ್ರಿಯೆಯು ಹುಟ್ಟೂರಾದ ಕೆ.ಆರ್ ಪೇಟೆಯಲ್ಲಿ ನೆರವೇರಿಸಲಾಯಿತು ಎಂದು ಮೃತರ ಕುಟುಂಬ ಮೂಲಗಳು ತಿಳಿಸಿದೆ.
ಸಂತಾಪ
ಪ್ರಸ್ತುತ ಅಕ್ಷಯ ಕಾಲೇಜನ್ನು ಮುನ್ನೆಡೆಸುತ್ತಿರುವ ಅಕ್ಷಯ ಕಾಲೇಜು ಚೇರ್ಮನ್ ಜಯಂತ್ ನಡುಬೈಲು ರವರು ಗ್ಲೋರಿಯಾ ಫ್ಯಾಷನ್ ಡಿಸೈನ್ ಕಾಲೇಜಿನ ಸಂಸ್ಥಾಪಕ ಎಸ್.ಆನಂದ ಆಚಾರ್ಯ ರವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.