ಕೆಎಸ್ಸಾರ್ಟಿಸಿ ಬಸ್ ಕೊರತೆ: ಪ್ರಯಾಣಿಕರ ಪರದಾಟ

0

ಉಪ್ಪಿನಂಗಡಿ: ಕೆಎಸ್ಸಾರ್ಟಿಸಿ ಬಸ್ಸಿನ ಕೊರತೆ ಗಣನೀಯವಾಗಿ ಹೆಚ್ಚಿದ್ದು, ಪ್ರಯಾಣಿಕರು ಬಸ್ಸಿಲ್ಲದೆ ಗಂಟೆಗಟ್ಟಲೆ ಕಾಯುವ ದುಸ್ಥಿತಿಗೆ ಸಿಲುಕಿದ್ದಾರೆ. ಇತ್ತ ಚಾಲಕರ ಕೊರತೆಯಿಂದ ಬಸ್ಸುಗಳು ಕಡಿಮೆ ಇದೆ ಸಹಕರಿಸಿ ಎಂದು ನೋಟಿಸ್ ಹಚ್ಚಿ ಸಾರಿಗೆ ಇಲಾಖೆಯವರು ಅಸಹಾಯಕತೆ ತೋರಿದ್ದಾರೆ.‌


ಕಳೆದ ಕೆಲ ತಿಂಗಳಿಂದ ಬಸ್ಸುಗಳ ಕೊರತೆ ಕಾಡುತ್ತಿದ್ದು, ವಿವಾಹದಂತಹ ಕಾರ್ಯಕ್ರಮಗಳು ಇದ್ದ ದಿನದಲ್ಲಿ ಪ್ರಯಾಣಿಕರು ಬಸ್ಸುಗಳಿಲ್ಲದೆ ದಿನವಿಡೀ ಬಸ್ಸಿಗಾಗಿ ಕಾಯುವ ದುಸ್ಥಿತಿಗೆ ಸಿಲುಕುತ್ತಿದ್ದಾರೆ. ಆದಿತ್ಯವಾರದಂದು ಮಂಗಳೂರಿನ ಸಮೀಪದ ಮದುವೆ ಕಾರ್ಯಕ್ರಮಕ್ಕೆ ತೆರಳಲೆಂದು ಹತ್ತು ಗಂಟೆಗೆ ಉಪ್ಪಿನಂಗಡಿ ಬಸ್ ನಿಲ್ದಾಣಕ್ಕೆ ಬಂದ ಮಹಿಳೆಯೋರ್ವರಿಗೆ 12.೦೦ ರ ವೇಳೆಗೆ ಬಸ್ಸು ಲಭಿಸಿತು. ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಹಿಂದಿರುಗುವಾಗಲೂ ಬಸ್ಸು ಸಿಗದೆ ಸಾಯಂಕಾಲ 4.30 ರ ವರೆಗೆ ರಸ್ತೆ ಬದಿಯಲ್ಲಿ ಕಾಯುತ್ತಾ ಇರಬೇಕಾದ ಸ್ಥಿತಿ ಉಂಟಾಗಿತ್ತು. ಇದು ಕೇವಲ ಓರ್ವ ಮಹಿಳೆಯ ಅಭಿಪ್ರಾಯವಲ್ಲ. ಆದಿತ್ಯವಾರದಂದು ಉಪ್ಪಿನಂಗಡಿ ಮಂಗಳೂರು ನಡುವಣ ಪ್ರಯಾಣಿಸಿದ ಎಲ್ಲರಿಗೂ ಅಲ್ಲಲ್ಲಿ ರಸ್ತೆ ಬದಿಯಲ್ಲಿ ಬಸ್ಸಿಗಾಗಿ ಕಾಯುತ್ತಿದ್ದ ಪ್ರಯಾಣೀಕರ ದೊಡ್ಡ ದೊಡ್ಡ ಗುಂಪು ಕಾಣಿಸುತ್ತಿತ್ತು.


ಸೋಮವಾರವೂ, ಮಂಗಳವಾರವೂ ಬಸ್ಸಿನ ಕೊರತೆ ಕಾಡಿದ್ದು, ಜನರ ಪ್ರಶ್ನೆಗಳಿಗೆ ಮತ್ತು ಆಕ್ರೋಶಕ್ಕೆ ಉತ್ತರಿಸಲಾಗದೆ ಉಪ್ಪಿನಂಗಡಿಯ ಸಂಚಾರ ನಿಯಂತ್ರಕರು ಚಾಲಕರ ಕೊರತೆಯಿಂದ ಬಸ್ಸುಗಳು ಕಡಿಮೆ ಇದೆ. ಸಹಕರಿಸಿ ಎಂದು ಸೂಚನಾ ಫಲಕವನ್ನು ಅಳವಡಿಸಿದ್ದಾರೆ.


ಜನಪ್ರತಿನಿಧಿಗಳು ಪ್ರಯಾಣೀಕರ ನೈಜ ಸಮಸ್ಯೆಯ ಬಗ್ಗೆ ಗಮನ ಹರಿಸುತ್ತಿಲ್ಲ. ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ನೀಡಿದೆ ಎನ್ನುತ್ತಾ , ಬಸ್ಸುಗಳನ್ನೇ ಬೀದಿಗಿಳಿಸದಿದ್ದರೆ ಪ್ರಯಾಣಿಸುವುದಾದರೂ ಹೇಗೆ ? ಉಚಿತ ಪ್ರಯಾಣದ ಯೋಜನೆಯನ್ನು ವಾಪಸು ಪಡೆದುಕೊಳ್ಳಿ ಅದರ ಬದಲು ಸಮರ್ಪಕ ಬಸ್ ಸೌಲಭ್ಯಗಳನ್ನು ಒದಗಿಸಿ ಬೀದಿಯಲ್ಲಿ ಗಂಟೆಗಟ್ಟಲೆ ಕಾಯುವ ದುಸ್ಥಿತಿಯಿಂದ ಪಾರುಮಾಡಿ. ಹಿಂದೆಲ್ಲಾ ಮೂರ್ನಾಲ್ಕು ಗಂಟೆಯೊಳಗೆ ಮಂಗಳೂರಿಗೆ ಹೋಗಿ ಬರಲಾಗುತ್ತಿದ್ದರೆ ಇಂದು ಇಡೀ ದಿನವನ್ನು ಮೀಸಲಿಡಬೇಕಾಗುತ್ತದೆ. ಜನರ ಸಮಯಕ್ಕೆ ಬೆಲೆ ಇಲ್ಲದಾಗೆ ಆಗಿದೆ. ರಾಜಕೀಯದ ಯಾವ ಪಕ್ಷವೂ ಈ ಅವ್ಯವಸ್ಥೆಯ ಬಗ್ಗೆ ಧ್ವನಿ ಎತ್ತದಿರುವುದು ವಿಸ್ಮಯ ತಂದಿದೆ ಎಂದು ಆದಿತ್ಯವಾರವಿಡೀ ಬಸ್ಸಿಗಾಗಿ ಕಾಯುತ್ತಾ ದಿನವನ್ನು ವ್ಯಯಿಸಿ ಕಂಗಾಲಾಗಿರುವ ಉಪ್ಪಿನಂಗಡಿ ನಿವಾಸಿಯೋರ್ವರು ಅಸಮಾಧಾನವನ್ನು ಮಾಧ್ಯಮದ ಮುಂದೆ ವ್ಯಕ್ತಪಡಿಸಿದ್ದಾರೆ.


ಗುತ್ತಿಗೆ ಆಧಾರದಲ್ಲಿ ಚಾಲಕರ ನೇಮಕಾತಿಗೆ ಚಾಲನೆ:
ಈ ಬಗ್ಗೆ ಪ್ರತಿಕ್ರಿಯಿಸಿದ ಪುತ್ತೂರು ವಿಭಾಗದ ಸಂಚಾರ ವಿಭಾಗಾಧಿಕಾರಿ ಜೈಶಾಂತ್ ಕುಮಾರ್ ರವರು ಕಳೆದ ವರ್ಷ ಗುತ್ತಿಗೆ ಆಧಾರದಲ್ಲಿ ನೇಮಕಾತಿಯಾಗಿದ್ದ ಚಾಲಕರ ಗುತ್ತಿಗೆ ಅವಧಿ ಪೂರ್ಣಗೊಂಡ ಕಾರಣದಿಂದಾಗಿ ಗುತ್ತಿಗೆ ಆಧಾರದಿಂದ ನೇಮಕಾತಿಯಾಗಿದ್ದ ಚಾಲಕರೆಲ್ಲರೂ ನಿರ್ಗಮಿಸಿದ್ದರು. ಇದರಿಂದಾಗಿ ಪುತ್ತೂರು ವಿಭಾಗದಲ್ಲಿ 170 ಚಾಲಕರ ಕೊರತೆ ಕಾಡಿತ್ತು. ಈ ಮಧ್ಯೆ ಇಲಾಖೆಯ ಖಾಯಂ ಸಿಬ್ಬಂದಿ ನೆಲೆಯಲ್ಲಿ ಚಾಲಕರ ನೇಮಕಾತಿ ಪ್ರಕ್ರಿಯೆಯು ನಡೆಯುತ್ತಿದ್ದ ನಡುವೆಯೂ ಇದೀಗ ಸರಕಾರ ಕೊರತೆಯಲ್ಲಿದ್ದ 170 ಚಾಲಕರ ಪೈಕಿ 110 ಚಾಲಕರ ಗುತ್ತಿಗೆ ಆಧಾರದಲ್ಲಿ ನೇಮಕಾತಿ ಪ್ರಕ್ರಿಯೆ ನಡೆಸಿದ್ದು, ಮುಂಬರುವ ದಿನಗಳಲ್ಲಿ ಉಳಿದ 60 ಚಾಲಕರನ್ನು ಒದಗಿಸಿದ್ದಲ್ಲಿ ಈ ವಾರಾಂತ್ಯದೊಳಗೆ ಎಲ್ಲಾ ಕೊರತೆಗಳು ನೀಗಿ ಸಮರ್ಪಕ ಪ್ರಯಾಣಿಕ ಸೇವೆ ಒದಗಿಸಲು ಸಾಧ್ಯವಾಗುವುದೆಂದು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here