ಸರ್ಕಾರಿ ಶಾಲೆ ಬಗ್ಗೆ ತಾತ್ಸರ ಸಲ್ಲದು-ಲೋಕೇಶ್
ರಾಮಕುಂಜ: ಸರ್ಕಾರಿ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಒತ್ತು ಕೊಡುತ್ತಿದ್ದು, ಕನ್ನಡದ ಜೊತೆಗೆ ಇಂಗ್ಲೀಷ್ ಕಲಿಸಲಾಗುತ್ತದೆ, ಜೊತೆಗೆ ಮಕ್ಕಳ ಪೌಷ್ಟಿಕಾಂಶ ಬೆಳವಣಿಗೆ ಸಲುವಾಗಿ ಬಿಸಿಯೂಟ, ಮೊಟ್ಟೆ ಮೊದಲಾದ ಯೋಜನೆಗಳನ್ನು ರೂಪಿಸಿದೆ. ಶಿಕ್ಷಣದ ಜೊತೆಗೆ ಆರೋಗ್ಯದ ಕಡೆಯೂ ಆದ್ಯತೆ ನೀಡುತ್ತಿದ್ದು, ಹೀಗಿರುವಾಗ ಸರ್ಕಾರಿ ಶಾಲೆಯ ಬಗ್ಗೆ ತಾತ್ಸರ ಸಲ್ಲದು ಎಂದು ಶಿಕ್ಷಣ ಇಲಾಖೆಯ ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್. ಹೇಳಿದರು.
ಅವರು ಡಿ.21ರಂದು ಗಂಡಿಬಾಗಿಲು ದ.ಕ.ಜಿ.ಪ. ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಚಿಣ್ಣರ ಉತ್ಸವ-ಪ್ರತಿಭಾ ಪುರಸ್ಕಾರ ಕಾರ‍್ಯಕ್ರಮ ಉದ್ಘಾಟಿಸಿ ಮಾತನಾಡಿ ತಾಯಂದಿರು ಕನಿಷ್ಠ 1 ಗಂಟೆಯಾದರೂ ಮಕ್ಕಳ ಓದು, ಬರಹ, ಇತರೇ ಚಟುವಟಿಕೆಗಳ ಬಗ್ಗೆ ಗಮನ ಹರಿಸಬೇಕು, ಅವರ ಕಲಿಕೆಯ ಗುರಿಯ ಕನಸು ಕಟ್ಟಬೇಕು ಮತ್ತು ಅದಕ್ಕೆ ಪೂರಕವಾಗಿ ಯೋಚನೆ ಮಾಡಬೇಕು, ಆಗಾದಾಗ ಮಾತ್ರ ತಮ್ಮ ಮಕ್ಕಳಲ್ಲಿ ಸಾಧನೆಯನ್ನು ಕಾಣಬಹುದಾಗಿದೆ ಎಂದರು.
ಕೊಯಿಲ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ಪುಷ್ಪಾ ಸುಭಾಷ್ ರೈ ಅಧ್ಯಕ್ಷತೆ ವಹಿಸಿ ಮಾತನಾಡಿ ಶಾಲೆಯ ಕಾರ‍್ಯಚಟುವಟಿಕೆ ಬಗ್ಗೆ ಹೆಮ್ಮೆ ಅನಿಸುತ್ತಿದೆ. ಶಾಲೆಯ ಬೇಡಿಕೆಗೆ ಅನುಗುಣವಾಗಿ ಪಂಚಾಯಿತಿ ವತಿಯಿಂದ ಸಹಕಾರ ನೀಡಲು ಬದ್ಧರಾಗಿರುವುದಾಗಿ ತಿಳಿಸಿದರು.
ನಿವೃತ್ತ ಶಿಕ್ಷಕ ಕುಶಾಲಪ್ಪ ಗೌಡ ಮಾತನಾಡಿ ಈ ಶಾಲೆ ಬಹಳಷ್ಟು ಪ್ರಥಮಗಳನ್ನು ತನ್ನದಾಗಿಸಿಕೊಂಡಿದೆ. ಇದರ ಬೆಳವಣಿಗೆಗೆ ಸ್ಥಳೀಯರ ಸಹಕಾರ ಬಹಳವಾಗಿದೆ. ಶಾಲೆ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದರು.
ಕೊಯಿಲ ಗ್ರಾಮ ಪಂಚಾಯಿತಿ ಸದಸ್ಯ ಚಂದ್ರಶೇಖರ ಮಾಳ, ಸಾಮಾಜಿಕ ಕಾರ‍್ಯಕರ್ತ ಬಡಿಲ ಹುಸೇನ್, ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಬಾಬು ಅಗರಿ, ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ತುಳಸಿ ಮಾತನಾಡಿದರು.
ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯೆ ಜಯಂತಿ ಆರ್. ಗೌಡ, ಕೊಯಿಲ ಗ್ರಾಮ ಪಂಚಾಯಿತಿ ಸದಸ್ಯರಾದ ನಝೀರ್ ಕೆ., ಕಮಲಾಕ್ಷಿ ಪಾಜಲಿಕೆ, ಶ್ರೀಮತಿ ಲತಾ ನವೀನ್ ಪೂಜಾರಿ, ಸೀತಾರಾಮ ಬಲ್ತಕುಮೇರು, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪಿ. ಲತೀಫ್, ನಿವೃತ್ತ ಶಿಕ್ಷಕ ವಿಶ್ವೇಶ್ವರ ಭಟ್ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಕೊಯಿಲ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಬಾಲಕೃಷ್ಣ ಗೌಡ, ಶಾಲಾಭಿವೃದ್ಧಿ ಸಮಿತಿ ಮಾಜಿ ಅಧ್ಯಕ್ಷರಾದ ಸಿದ್ದಿಕ್ ನೀರಾಜೆ, ಅಬ್ದುಲ್ ರಶೀದ್ ಬಡ್ಡಮೆ, ಗಂಡಿಬಾಗಿಲು ಮಸೀದಿ ಅಧ್ಯಕ್ಷ ಎಸ್. ಅಬ್ದುಲ್ ರಹಿಮಾನ್, ಉಪಾಧ್ಯಕ್ಷ ಜಿ. ಮಹಮ್ಮದ್ ರಫೀಕ್, ಹಳೆ ವಿದ್ಯಾರ್ಥಿ ಸಂಘದ ಕಾರ‍್ಯದರ್ಶಿ ಝಿಯಾದ್, ಆಶಾ ಕಾರ‍್ಯಕರ್ತೆ ದಿವ್ಯಾ ರವಿ, ಅಂಗನವಾಡಿ ಕಾರ‍್ಯಕರ್ತೆ ಶ್ರೀಮತಿ ಮೋಹಿನಿ, ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷೆ ಶ್ರೀಮತಿ ಸಪ್ನ, ಸದಸ್ಯರಾದ ಎಸ್.ಪಿ. ಕಲಂದರ್, ಪೆರ್ನು, ಯಮುನಾ, ಹಮೀದ್, ಇಬ್ರಾಹಿಂ, ಸಲೀಂ, ನಸೀಮಾ, ಹಬೀಬ, ರಂಸೀನಾ ಮತ್ತಿತರರು ಉಪಸ್ಥಿತರಿದ್ದರು.