ಉತ್ತಮ ವಿದ್ಯಾರ್ಜನೆಯೊಂದಿಗೆ ವಿದ್ಯಾರ್ಥಿಗಳು ಭವಿಷ್ಯ ರೂಪಿಸಿಕೊಳ್ಳಿ-ಮಧು ಮನೋಹರ್
ಪುತ್ತೂರು: ಸುದಾನ ವಿದ್ಯಾಸಂಸ್ಥೆಯು ಅನೇಕ ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗಿದೆ ಮಾತ್ರವಲ್ಲ ಹಲವಾರು ಕಾರ್ಯಕ್ರಮಗಳಿಗೆ ನಗರಸಭೆಯೊಂದಿಗೆ ಕೈಜೋಡಿಸಿದೆ. ವಿದ್ಯಾರ್ಥಿಗಳು ತಮ್ಮ ಉತ್ತಮ ವಿದ್ಯಾರ್ಜನೆಯೊಂದಿಗೆ ಭವಿಷ್ಯ ರೂಪಿಸಿಕೊಳ್ಳುವಂತಾಗಬೇಕು ಎಂದು ಪುತ್ತೂರು ನಗರಸಭೆಯ ಪೌರಾಯುಕ್ತರಾದ ಮಧು ಎಸ್.ಮನೋಹರ್‌ರವರು ಹೇಳಿದರು.
ಡಿ.4 ರಂದು ಸುದಾನ ಕ್ಯಾಂಪಸಿನಲ್ಲಿರುವ ಎಡ್ವರ್ಡ್ ಕಾನ್ಫರೆನ್ಸ್ ಸಭಾಂಗಣದಲ್ಲಿ ಜರಗಿದ ಸುದಾನ ಸಮೂಹ ಶಿಕ್ಷಣ ಸಂಸ್ಥೆಯ ಸುದಾನ ಪದವಿ ಪೂರ್ವ ಕಾಲೇಜಿನ ವತಿಯಿಂದ ‘ಸಂಪ್ರದಾಯಗಳ ಪುನರುಜ್ಜೀವನ, ಏಕತೆಯ ಅನಾವರಣ’ ಕಾರ್ಯಕ್ರಮವಾದ ‘ಔರಾ 2024-25’ ಅನ್ನು ಅವರು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು. ಹಲವು ವರ್ಷಗಳ ಹಿಂದೆ ಪ್ರಾರಂಭಗೊಂಡ ಸುದಾನ ಸಂಸ್ಥೆಗೆ ಮತ್ತೊಂದು ಕಿರೀಟವೆಂಬಂತೆ ಇದೀಗ ಪಿಯು ಕಾಲೇಜನ್ನು ಪ್ರಾರಂಭಿಸಿದೆ. ಯಾವುದೇ ಸಂಸ್ಥೆಯು ಉದಯಿಸಿದಾಗ ಆ ಸಂಸ್ಥೆಯ ಪ್ರಥಮ ಬ್ಯಾಚಿನ ವಿದ್ಯಾರ್ಥಿಗಳಿಗೆ ತಾವು ಪ್ರಥಮ ಬ್ಯಾಚ್ ವಿದ್ಯಾರ್ಥಿಗಳು ಎಂದು ಕರೆಯಿಸಿಕೊಳ್ಳಲು ಹೆಮ್ಮೆ ಎನಿಸುತ್ತದೆ. ವಿದ್ಯಾರ್ಥಿಗಳು ವಿದ್ಯಾಭ್ಯಾಸ ಪಡೆದುಕೊಂಡ ಮೇಲೆ ಸಂಸ್ಥೆಗೆ ಹಾಗೂ ನಗರಕ್ಕೆ ಏನಾದರೂ ಕೊಡುಗೆ ನೀಡಬೇಕು ಎನ್ನುವ ಮೈಂಡ್ ಸೆಟ್ ವಿದ್ಯಾರ್ಥಿಗಳದ್ದಾಗಲಿ ಎಂದರು.
ಆಯ್ಕೆ ಮಾಡಿದ ಕೋರ್ಸ್‌ಗಳಲ್ಲಿ ಆಸಕ್ತಿ ವಹಿಸಿ ಭವಿಷ್ಯ ರೂಪಿಸಿಕೊಳ್ಳಿ-ಡಾ.ದೀಪಕ್ ರೈ:
ಪುತ್ತೂರು ತಾಲೂಕು ಆರೋಗ್ಯಾಧಿಕಾರಿ ಡಾ.ದೀಪಕ್ ರೈ ಮಾತನಾಡಿ, ವಿದ್ಯಾರ್ಥಿಗಳು ಇಂಜಿನಿಯರ್, ವೈದ್ಯ ಕೋರ್ಸ್‌ಗಳಿಗೆ ಅವಲಂಭಿತರಾಗಬಾರದು. ಸರಕಾರಿ ಉದ್ಯೋಗ ಆಯ್ಕೆಗೆ ವಿವಿಧ ವಿಭಾಗಗಳಲ್ಲಿ ಕೋರ್ಸ್‌ಗಳಿದ್ದು, ಆಯ್ಕೆ ಮಾಡಿದ ಕೋರ್ಸ್‌ಗಳನ್ನು ಆಸಕ್ತಿ ವಹಿಸಿ ತಮ್ಮ ಭವಿಷ್ಯ ರೂಪಿಸಿಕೊಳ್ಳಬೇಕು. ದೇಶಕ್ಕೋಸ್ಕರ ಕೆಲಸ ಮಾಡುವಾಗ ಭೃಷ್ಟಾಚಾರರಹಿತವಾಗಿ ಕಾರ್ಯ ನಿರ್ವಹಿಸಬೇಕು. ವಿದ್ಯಾರ್ಥಿಗಳು ದೇಶದ ಬೆನ್ನೆಲುಬಾಗಿದ್ದು ಶಿಸ್ತುಬದ್ಧವಾಗಿ ವ್ಯಕ್ತಿತ್ವ ವಿಕಸನದೊಂದಿಗೆ ಮುಂದೆ ಸಾಗಿ ಎಂದರು.
ಪ್ರತಿಭೆಗೆ ಪ್ರಯತ್ನ ಸೇರಿಸಿದಾಗ ಪ್ರತಿಫಲ-ಶೋಭಾ ನಾಗಾರಾಜ್:
ಸುದಾನ ವಸತಿಯುತ ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ಶೋಭಾ ನಾಗಾರಾಜ್ ಮಾತನಾಡಿ, ಪ್ರತಿಯೋರ್ವರಲ್ಲೂ ಪ್ರತಿಭೆಯಿದೆ. ಆದರೆ ಆ ಪ್ರತಿಭೆಯ ಅನಾವರಣಗೊಳ್ಳಬೇಕಾದರೆ ನಮ್ಮಲ್ಲಿ ಇಚ್ಛಾಶಕ್ತಿಯಿರಬೇಕಾಗುತ್ತದೆ. ಸಕಾರಾತ್ಮಕ ಯೋಚನೆಗಳೊಂದಿಗೆ ಮತ್ತು ಕಠಿಣ ಪರಿಶ್ರಮದೊಂದಿಗೆ ಪ್ರಯತ್ನಪಟ್ಟಾಗ ದೇವರು ಪ್ರತಿಫಲ ಖಂಡಿತಾ ಕರುಣಿಸುತ್ತಾನೆ. ಆದ್ದರಿಂದ ಪ್ರತಿಭೆಗೆ ಪ್ರಯತ್ನ ಸೇರಿಸಿದಾಗ ಪ್ರತಿಫಲ ಸಿಗಬಲ್ಲುದ್ದು ಎಂದರು.
ಪ್ರತಿಭೆಯನ್ನು ಪ್ರದರ್ಶಿಸಲು ಸುದಾನ ವೇದಿಕೆ ಒದಗಿಸಿಕೊಡುತ್ತಿದೆ-ಡಾ.ಪೀಟರ್ ಪ್ರಭಾಕರ್:
ಅಧ್ಯಕ್ಷತೆ ವಹಿಸಿದ ಸುದಾನ ಪದವಿ ಪೂರ್ವ ಕಾಲೇಜಿನ ಸಂಚಾಲಕ ಡಾ.ಪೀಟರ್ ವಿಲ್ಸನ್ ಪ್ರಭಾಕರ್ ಮಾತನಾಡಿ, 136 ವರ್ಷಗಳ ಹಿಂದೆಯೇ ಸುದಾನ ವಿದ್ಯಾಸಂಸ್ಥೆಯು ಶಿಕ್ಷಣ ಕೇಂದ್ರವನ್ನು ಆರಂಭಿಸಿದೆ. ಕಲಿಕೆಯೊಂದಿಗೆ ಸಾಂಸ್ಕೃತಿಕ, ಕ್ರೀಡಾಕ್ಷೇತ್ರದಲ್ಲೂ ಪ್ರತಿಭೆಯನ್ನು ಪ್ರದರ್ಶಿಸಬೇಕು. ಸುದಾನ ವಿದ್ಯಾಸಂಸ್ಥೆಯು ಈ ಕ್ಷೇತ್ರಗಳಲ್ಲಿ ಪ್ರತಿಭೆಯನ್ನು ಪ್ರದರ್ಶಿಸಲು ವೇದಿಕೆ ಒದಗಿಸಿಕೊಡುತ್ತಿದೆ. ವ್ಯಕ್ತಿಯು ಬೆಳೆಯುವುದರೊಂದಿಗೆ ಗುರು-ಹಿರಿಯರಿಗೆ, ಹೆತ್ತವರಿಗೆ, ಸಂಸ್ಥೆಗೆ, ದೇಶ ಬೆಳೆಯಲು ಕೊಡುಗೆ ನೀಡುವವರಾಗಬೇಕು ಎಂದರು.
ಈ ಸಂದರ್ಭದಲ್ಲಿ ಕಾಲೇಜು ವತಿಯಿಂದ ಕಾಲೇಜಿನ ವಿದ್ಯಾರ್ಥಿಗಳಿಗೆ ಏರ್ಪಡಿಸಲಾದ ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ, ಇತರ ಪ್ರೌಢಶಿಕ್ಷಣ ಸಂಸ್ಥೆಗಳಿಗೆ ಏರ್ಪಡಿಸಲಾದ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಿ ಗೌರವಿಸಲಾಯಿತು. ಸುದಾನ ಸಮೂಹ ಶಿಕ್ಷಣ ಸಂಸ್ಥೆಗಳ ಕೋಶಾಧಿಕಾರಿ ಆಸ್ಕರ್ ಆನಂದ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾಲೇಜು ಪ್ರಾಂಶುಪಾಲ ಸುಪ್ರೀತ್ ಕೆ.ಸಿ ಕಾಲೇಜು ವರದಿ ವಾಚಿಸಿದರು. ಉಪನ್ಯಾಸಕ ಮುಕುಂದಕೃಷ್ಣರವರು ಮುಖ್ಯ ಅತಿಥಿ ಮಧು ಎಸ್.ಮನೋಹರ್‌ರವರ ಪರಿಚಯ ಮಾಡಿದರು. ಉಪನ್ಯಾಸಕರಾದ ಧನ್ಯ, ರಮ್ಯಶ್ರೀ, ಕಸ್ತೂರಿ, ಜೀವಿತಾರವರು ವಿವಿಧ ಕಾರ್ಯಕ್ರಮಗಳನ್ನು ನಿರ್ವಹಿಸಿದರು. ಉಪನ್ಯಾಸಕಿ ಕ್ಯಾರಲ್ ಫೆರ್ನಾಂಡೀಸ್ ಕಾರ್ಯಕ್ರಮ ನಿರೂಪಿಸಿದರು.
ದೇಶದ 2ನೇ ಬಯೋ ಸಿಎನ್‌ಜಿ ಘಟಕ..
ಸುದಾನ ಶಾಲೆ ಆರಂಭವಾದಾಗ ನಾನು ಇಲ್ಲಿ ಎಂಟನೇ ತರಗತಿ ಓದುತ್ತಿದ್ದೆ. ಅಂದು ನಾನು ಪುತ್ತೂರಿಗೆ ಹೊಸಬ ಹಾಗೂ ಭಾಷೆಯು ಹೊಸದು. ಪುತ್ತೂರಿನಲ್ಲಿ ಪಿಯು ವಿದ್ಯಾಭ್ಯಾಸ ಮುಗಿಸಿ ಇಂಜಿನಿಯರಿಂಗ್ ವಿದ್ಯಾಭ್ಯಾಸ ಪೂರೈಸಿದೆ. ಬಳಿಕ ಎಂಟೆಕ್ ವಿದ್ಯಾಭ್ಯಾಸ ಮಾಡುವ ಸಂದರ್ಭದಲ್ಲಿ ಕೆಪಿಎಸ್ಸಿ ಪರೀಕ್ಷೆ ಬರೆದು ಸರಕಾರದ ಗೌರವಾನ್ವಿತ ಹುದ್ದೆಯಲ್ಲಿ ಮುಂದುವರೆದೆ. ಪುತ್ತೂರಿನಲ್ಲಿ ಇದ್ದ ಸಂದರ್ಭದಲ್ಲಿ ಇಲ್ಲಿನ ಪುರಸಭೆ ಹಂಚಿನ ಮಾಡು ಒಳಗೊಂಡ ಕಛೇರಿಗೆ ಭೇಟಿ ನೀಡಿದ್ದಾಗ ಮುಂದೊಂದು ದಿನ ಪುತ್ತೂರಿಗೆ ಅಧಿಕಾರಿಯಾಗಿ ಆಗಮಿಸಿ ಪುತ್ತೂರಿನ ಅಭಿವೃದ್ಧಿಗೆ ದುಡಿಯಲಿದ್ದೇನೆ ಎಂಬ ಭಾವನೆ ನನ್ನಲ್ಲಿತ್ತು ಕಾಕತಾಳೀಯ ಎಂಬಂತೆ ನಾನು ಪುತ್ತೂರಿಗೆ ಪೌರಾಯುಕ್ತರಾಗಿ ಆಗಮಿಸಿದೆ. ಪ್ರಸ್ತುತ ವಿವಿಧ ಸಂಘಸಂಸ್ಥೆಗಳ ಸಹಕಾರದೊಂದಿಗೆ ದೇಶದ ಎರಡನೇ ಬಹು ದೊಡ್ಡ ತ್ಯಾಜ್ಯ ವಸ್ತುಗಳ ಮರು ನಿರ್ವಹಣಾ ಬಯೋ ಸಿ.ಎನ್.ಜಿ ಘಟಕ ಆರಂಭಗೊಂಡಿದ್ದು, ರಾಜ್ಯದ ಎಲ್ಲಾ ನಗರದವರು ಪುತ್ತೂರಿನತ್ತ ಮುಖ ಮಾಡುತ್ತಿರುವುದು ಹೆಗ್ಗಳಿಕೆಯಾಗಿದೆ.
-ಮಧು ಎಸ್.ಮನೋಹರ್, ಪೌರಾಯುಕ್ತರು, ಪುತ್ತೂರು ನಗರಸಭೆ
ಸನ್ಮಾನ/ಗೌರವಾರ್ಪಣೆ..
ಈ ಸಂದರ್ಭದಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಿದ ಪುತ್ತೂರು ನಗರಸಭೆ ಪೌರಾಯುಕ್ತರಾದ ಮಧು ಎಸ್.ಮನೋಹರ್‌ರವರ ಸೇವೆಯನ್ನು ಪರಿಗಣಿಸಿ ಕಾಲೇಜು ವತಿಯಿಂದ ಶಾಲು ಹೊದಿಸಿ ಸನ್ಮಾನಿಸಲಾಯಿತು. ಅತಿಥಿಗಳಾಗಿ ಭಾಗವಹಿಸಿದ ತಾಲೂಕು ಆರೋಗ್ಯಾಧಿಕಾರಿ ಡಾ.ದೀಪಕ್ ರೈ, ಸುದಾನ ವಸತಿಯುತ ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ಶೋಭಾ ನಾಗಾರಾಜ್‌ರವರಿಗೆ ಗೌರವಾರ್ಪಣೆ ಸಲ್ಲಿಸಲಾಯಿತು.