‘ಸರಕಾರಿ ಪಾವತಿಗಳನ್ನು ಸಕಾಲದಲ್ಲಿ ಪಾವತಿಸಿ ಗ್ರಾಮದ ಅಭಿವೃದ್ಧಿಗೆ ಸಹಕರಿಸಿ’ ಒಳಮೊಗ್ರು ಗ್ರಾ.ಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು ಮನವಿ

0

ಪುತ್ತೂರು: ಮನೆ ತೆರಿಗೆ, ಅಂಗಡಿ ಬಾಡಿಗೆ, ಕಟ್ಟಡ ತೆರಿಗೆ, ವ್ಯಾಪಾರ ಪರವಾನಗೆ ನವೀಕರಣ ಶುಲ್ಕ,ನೀರಿನ ಶುಲ್ಕ ಇತ್ಯಾದಿ ಸರಕಾರಿ ಪಾವತಿಗಳನ್ನು ಸಕಾಲದಲ್ಲಿ ಪಂಚಾಯತ್‌ಗೆ ಪಾವತಿಸುವ ಮೂಲಕ ಗ್ರಾಮದ ಅಭಿವೃದ್ಧಿಗೆ ಸಹಕರಿಸುವಂತೆ ಗ್ರಾಮಸ್ಥರಲ್ಲಿ ಒಳಮೊಗ್ರು ಗ್ರಾಮ ಪಂಚಾಯತ್ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು ಮನವಿ ಮಾಡಿಕೊಂಡಿದ್ದಾರೆ.

ಸರಕಾರಕ್ಕೆ ಪಾವತಿಸತಕ್ಕ ತೆರಿಗೆ ಸಂಗ್ರಹ ಅಭಿಯಾನ ಈಗಾಗಲೇ ತಾಲೂಕಿನಾದ್ಯಂತ ಆರಂಭಗೊಂಡಿದ್ದು ಆದ್ದರಿಂದ ಒಳಮೊಗ್ರು ಗ್ರಾಮ ಪಂಚಾಯತ್ ವ್ಯಾಪ್ತಿಯ ಸಾರ್ವಜನಿಕರು ತಮ್ಮ ಮನೆ ತೆರಿಗೆ, ಅಂಗಡಿ ಬಾಡಿಗೆ, ಕಟ್ಟಡ ತೆರಿಗೆ, ನೀರಿನ ಶುಲ್ಕ ಇತ್ಯಾದಿಗಳನ್ನು ಈ ಕೂಡಲೇ ಪಂಚಾಯತ್‌ಗೆ ಪಾವತಿಸುವ ಮೂಲಕ ಗ್ರಾಮದ ಅಭಿವೃದ್ಧಿಗೆ ಪಂಚಾಯತ್‌ನೊಂದಿಗೆ ಕೈಜೋಡಿಸುವಂತೆ ಅವರು ವಿನಂತಿಸಿಕೊಂಡಿದ್ದಾರೆ.


ಕುಡಿಯುವ ನೀರಿನ ಬಗ್ಗೆ ಜಾಗೃತೆ ಇರಲಿ
ಈಗಾಗಲೇ ತಾಲೂಕಿನಾದ್ಯಂತ ಅಂತರ್‌ಜಲ ಕುಸಿಯುತ್ತಿದ್ದು ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೆ ಬರ ಬರುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ ಆದ್ದರಿಂದ ಪಂಚಾಯತ್‌ನ ಕುಡಿಯುವ ನೀರಿನ ಬಳಕೆದಾರರು ಕುಡಿಯುವ ನೀರನ್ನು ಕೃಷಿ, ಹೂವಿನ ಗಿಡಗಳಿಗೆ ಹಾಗೇ ವಾಹನ ತೊಳೆಯಲು ಬಳಕೆ ಮಾಡದೆ ನೀರನ್ನು ಮಿತವಾಗಿ ಬಳಸುವಂತೆ,ಕುಡಿಯುವ ನೀರಿಗೆ ಪಂಚಾಯತ್ ವಿಧಿಸುವ ತಿಂಗಳ ಶುಲ್ಕವನ್ನು ಪಾವತಿಸುವುದು ಕಡ್ಡಾಯವಾಗಿದೆ. ಏಕೆಂದರೆ ಸಮರ್ಪಕ ನೀರಿನ ನಿರ್ವಹಣೆಗೆ ಇದು ಅಗತ್ಯವಾಗಿದೆ. ವಿದ್ಯುತ್ ಬಿಲ್, ಪಂಪು, ಪೈಪು ದುರಸ್ತಿ ಇತ್ಯಾದಿಗಳಿಗೆ ಹಣ ಸಂದಾಯ ಮಾಡಬೇಕಾಗಿರುವುದರಿಂದ ತಮ್ಮ ನೀರಿನ ಬಿಲ್ ಅನ್ನು ಸಕಾಲದಲ್ಲಿ ಪಾವತಿಸುವುದು ಕಡ್ಡಾಯ ಈಗಾಗಲೇ ನೀರಿನ ಬಿಲ್ ಪಾವತಿಸದವರು ಮುಂದಿನ 15 ದಿನದೊಳಗೆ ಪಾವತಿಸುವ ಮೂಲಕ ಪಂಚಾಯತ್‌ನೊಂದಿಗೆ ಸಹಕರಿಸಬೇಕು. ಇಲ್ಲದಿದ್ದಲ್ಲಿ ತಾತ್ಕಾಲಿಕವಾಗಿ ನೀರಿನ ಸಂಪರ್ಕವನ್ನು ಕಡಿತ ಮಾಡಬೇಕಾಗಬಹುದು. ಇದಕ್ಕೆ ಸಾರ್ವಜನಿಕರು ಆಸ್ಪದ ಕೊಡದೆ ಸಹಕರಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ.


ಸ್ವಚ್ಚ, ಆರೋಗ್ಯ ಧಾಮ ನಮ್ಮ ಗ್ರಾಮವಾಗಲಿ
ಅಂಗಡಿಮುಂಗಟ್ಟು, ಬೀದಿ ಬದಿಗಳಲ್ಲಿ ಪ್ಲಾಸ್ಟಿಕ್ ಕಸಕಡ್ಡಿಗಳು, ಘನ ಮತ್ತು ದ್ರವ ತ್ಯಾಜ್ಯಗಳು, ಎಲೆಕ್ಟ್ರಾನಿಕ್ಸ್ ಉಪಕರಣಗಳು ಸೇರಿದಂತೆ ಅಪಾಯಕಾರಿ ತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ಎಸೆಯದೆ ಗ್ರಾಮ ಪಂಚಾಯತ್ ತ್ಯಾಜ್ಯ ಸಂಗ್ರಹ ವಾಹನಕ್ಕೆ ನೀಡಿ ಸಹಕರಿಸಬೇಕಾಗಿದೆ. ಸ್ವಚ್ಚ ಗ್ರಾಮ, ಆರೋಗ್ಯ ಧಾಮ, ವೈಯುಕ್ತಿಕ ಸ್ವಚ್ಛತೆ ಹಾಗೂ ಪರಿಸರ ಸ್ವಚ್ಚತೆ ನಮ್ಮೆಲ್ಲರ ಕರ್ತವ್ಯವಾಗಿದೆ.ಈಗಾಗಲೇ ಗ್ರಾಪಂ ಸ್ವಚ್ಚತಾ ವಾಹಿನಿ ವಾಹನವು ಗ್ರಾಮದ ಎಲ್ಲಾ ಕಡೆಗಳಿಗೂ ಸಂಚರಿಸುತ್ತಿದೆ. ವಾಹನವು ಬರದೇ ಇದ್ದರೆ ಅಥವಾ ವಾಹನ ಬರಬೇಕಿದ್ದರೆ ಪಂಚಾಯತ್ ಅಧಿಕಾರಿಗಳನ್ನು ಸಂಪರ್ಕಿಸಬಹುದಾಗಿದೆ. ಪೇಟೆಯ ಸುತ್ತಮುತ್ತ ಸ್ವಚ್ಛತೆ ಇಟ್ಟುಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಆದ್ದರಿಂದ ತಮ್ಮ ತಮ್ಮ ಅಂಗಡಿಮುಂಗಟ್ಟು, ವಾಣಿಜ್ಯ ಸಂಕೀರ್ಣಗಳ ಮುಂದೆ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು. ಸಾರ್ವಜನಿಕ ಬಸ್ಸು ತಂಗುದಾಣ, ಶಾಲಾ ಕಾಲೇಜು ಸುತ್ತಮುತ್ತ ಸ್ವಚ್ಚತೆಯನ್ನು ಕಾಪಾಡುವುದು ಪ್ರತಿಯೊಬ್ಬರ ಜವಬ್ದಾರಿಯಾಗಿದೆ. ಆದ್ದರಿಂದ ಸ್ವಚ್ಛ ಗ್ರಾಮವನ್ನಾಗಿ ನಿಟ್ಟಿನಲ್ಲಿ ಪ್ರತಿಯೊಬ್ಬರು ಪಂಚಾಯತ್ ಜೊತೆ ಕೈಜೋಡಿಸುವಂತೆ ಗ್ರಾಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು ವಿನಂತಿ ಮಾಡಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here