ಹಸಿರು ಉಸಿರಾಗಲಿ, ಮನೆಮನೆಯು ಕೃಷಿಯಾಗಲಿ – ಡಾ.ಯು.ಪಿ.ಶಿವಾನಂದ
- ಚೆಂಡೆಯ ಸದ್ದು, ಗೊಂಬೆಗಳ ಕುಣಿತ, ಹಸಿರಿನ ಮಹತ್ವವನ್ನು ಸಾರುವ ಫಲಕ
- ವಿವಿಧ ಶಿಕ್ಷಣ ಸಂಸ್ಥೆಗಳ ಸಾವಿರಾರು ವಿದ್ಯಾರ್ಥಿಗಳು, ಸಂಜೀವಿನಿ ಒಕ್ಕೂಟದ ಸದಸ್ಯರು, ಫಲಕ ಹೊತ್ತ ಆಟೋ ರಿಕ್ಷಾಗಳ ಸಾರಥಿ ಸಾಲು ಮೆರವಣಿಗೆ ವಿಶೇಷ ಮೆರುಗು
ಪುತ್ತೂರು: ಎರಡು ವರ್ಷದ ಹಿಂದೆ ಪುತ್ತೂರಿನಲ್ಲಿ ಸುದ್ದಿ ಮಾಹಿತಿ ಟ್ರಸ್ಟ್ (ರಿ.) ಪುತ್ತೂರು ಮತ್ತು ಅರಿವು ಕೃಷಿ ಮಾಹಿತಿ ಸೇವಾ ಕೇಂದ್ರದ ನೇತೃತ್ವದಲ್ಲಿ ಪುತ್ತೂರಿನಲ್ಲಿ ಯಶಸ್ವಿ ಕಂಡ ಸಸ್ಯ ಜಾತ್ರೆ ಇದೀಗ ಮತ್ತೊಮ್ಮೆ ಸುದ್ದಿ ಸಸ್ಯ ಜಾತ್ರೆ ಸೀಸನ್ 2.0 ಪುತ್ತೂರು ನಗರಸಭೆ ಮತ್ತು ತಾ.ಪಂ., ಜಿ.ಪಂ., ಮತ್ತು ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಪುತ್ತೂರು ಕಿಲ್ಲೆ ಮೈದಾನದಲ್ಲಿ ಜ.10ರಂದು ಆರಂಭಗೊಂಡಿದೆ. ಮೂರು ದಿವಸ ನಡೆಯುವ ಸಸ್ಯ ಜಾತ್ರೆಗೆ ಅದ್ದೂರಿಯ ಚಾಲನೆ ನೀಡಲಾಗಿದೆ.
ವೈಭವದ ಮೆರವಣಿಗೆ:
ಸಸ್ಯ ಜಾತ್ರೆಗೆ ಪೂರಕವಾಗಿ ಖಾಸಗಿ ಬಸ್ ನಿಲ್ದಾಣದಿಂದ ಕಿಲ್ಲೆಮೈದಾನದ ತನಕ ಆಕರ್ಷಕ ಮೆರವಣಿಗೆ ನಡೆಯಿತು. ನಗರಸಭೆ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ, ಉಪಾಧ್ಯಕ್ಷ ಬಾಲಚಂದ್ರ, ಸುದ್ದಿ ಸಮೂಹ ಶಿಕ್ಷಣ ಸಂಸ್ಥೆಗಳ ಅಡಳಿತ ನಿರ್ದೇಶಕ ಮತ್ತು ಅರಿವು ಕೇಂದ್ರದ ಅಧ್ಯಕ್ಷ ಡಾ. ಯು.ಪಿ.ಶಿವಾನಂದ ಮತ್ತು ಮೆರವಣಿಗೆಯ ನೇತೃತ್ವ ವಹಿಸಿಕೊಂಡ ಪುತ್ತೂರು ನಗರಸಭೆ ಮಾಜಿ ಅಧ್ಯಕ್ಷ ನೆಲ್ಲಿಕಟ್ಟೆ ಜಗದೀಶ್ ಶೆಟ್ಟಿ, ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಆಧ್ಯಕ್ಷ ವಾಮನ್ ಪೈ, ರಾಷ್ಟ್ರೀಯ ಕೃಷಿ ಪ್ರಶಸ್ತಿ ಪುರಸ್ಕೃತ ಕಡಮಜಲು ಸುಭಾಸ್ ರೈ, ಪ್ರಗತಿ ಸ್ಟಡಿ ಸೆಂಟರ್‌ನ ಅಧ್ಯಕ್ಷ ಗೋಕುಲ್‌ನಾಥ್, ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್, ವಲೇರಿಯನ್ ಡಯಾಸ್, ಮಲ್ಲಿಕಾ ಜೆ ರೈ ಅವರು ತೆಂಗಿನ ಕಾಯಿ ಒಡೆಯುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.
ಮೆರವಣಿಗೆಯು ಖಾಸಗಿ ಬಸ್ ನಿಲ್ದಾಣದಿಂದ ಹೊರಟು ಆದರ್ಶ ಆಸ್ಪತ್ರೆಯ ರಸ್ತೆಯಾಗಿ ಎಂಪಿಎಂಸಿ ರಸ್ತೆ, ಅರುಣಾ ಕಲಾಮಂದಿರ ಬಳಿಯಿಂದ ಮುಖ್ಯರಸ್ತೆಯಾಗಿ ಮಹಾತ್ಮ ಗಾಂಧಿ ಕಟ್ಟೆಯ ಬಳಿ ಸಾಗಿ ಶ್ರೀಧರ್ ಭಟ್ ಅಂಗಡಿಯ ಬಳಿಯಿಂದ ಮಾರ್ಕೆಟ್ ರಸ್ತೆಯಾಗಿ ಕಿಲ್ಲೆ ಮೈದಾನಕ್ಕೆ ತೆರಳಿ ಅಲ್ಲಿ ಸಸ್ಯ ಜಾತ್ರೆಯ ಮಳಿಗೆಗಳಿಗೆ ಚಾಲನೆ ನೀಡಲಾಯಿತು.
ಮೆರವಣಿಗೆಯಲ್ಲಿ ವಿಶೇಷ ಆಕರ್ಷಣೆ;
ಸಸ್ಯ ಜಾತ್ರೆ ಸಿಸನ್ 2.0 ಇದರ ಅದ್ದೂರಿಯ ಮೆರವಣಿಗೆ ನೆಲ್ಲಿಕಟ್ಟೆ ಖಾಸಗಿ ಬಸ್ ನಿಲ್ದಾಣದಿಂದ ಬೆಳಿಗ್ಗೆ ಗಂಟೆ 9ಕ್ಕೆ ಆರಂಭಗೊಂಡಿತ್ತು. ಮೆರವಣಿಗೆಯಲ್ಲಿ ವಿಶೇಷ ಆಕರ್ಷಣೆಯಾಗಿ ಆರಂಭದಲ್ಲಿ ತೆರೆದ ವಾಹನದಲ್ಲಿ ಸಸ್ಯ ಜಾತ್ರೆಯ ಮಾಹಿತಿಯನ್ನೊಳಗೊಂಡ ಧ್ವನಿವರ್ಧಕ, ಅದರ ಹಿಂದೆ ಸಸ್ಯ ಜಾತ್ರೆಯ ಧ್ವಜ ಪ್ರದರ್ಶನ ಮಾಡಿದ ಸ್ನೇಹಸಂಗಮ ಆಟೋ ರಿಕ್ಷಾಗಳು ನಡುವೆ ಫಲಕ ಹಿಡಿದುಕೊಂಡು ವಿದ್ಯಾರ್ಥಿಗಳು, ಬ್ಯಾಂಡ್ ಸೆಟ್ ಅದರ ಹಿಂದೆ ಮತ್ತೆ ಆಟೋ ರಿಕ್ಷಾಗಳು, ಮಹಿಳಾ ಸ್ವಸಹಾಯ ಗುಂಪುಗಳು, ಚೆಂಡೆಗಳ ಸದ್ದು, ಗೊಂಬೆಕುಣಿತ, ಬಣ್ಣದ ಕೊಡೆಗಳು ವಿಶೇಷ ಆಕರ್ಷಣೆಯಾಗಿತ್ತು. ಲಿಟ್ಲ್‌ಪ್ಲವರ್ ಶಾಲೆಯ ಸ್ಕೌಟ್ಸ್ ಗೈಡ್ಸ್ ಸಹಿತ 80 ವಿದ್ಯಾರ್ಥಿಗಳು, ಸುದ್ದಿ ಸಸ್ಯ ಜಾತ್ರೆಯಲ್ಲಿ ಮಾಹಿತಿ ನೀಡುವಲ್ಲಿ ಸಹಿತ 150 ಮಂದಿ ವಿದ್ಯಾರ್ಥಿಗಳು, ಪ್ರಗತಿ ಸ್ಟಡಿ ಸೆಂಟರ್‌ನ ವಿದ್ಯಾರ್ಥಿಗಳು, ನೆಲ್ಲಿಕಟ್ಟೆ ಅಂಬಿಕಾ ವಿದ್ಯಾಲಯದ ವಿದ್ಯಾರ್ಥಿಗಳು, ಸಂತ ವಿಕ್ಟರನ ಬಾಲಿಕ ಪ್ರೌಢಶಾಲೆಯ ವಿದ್ಯಾರ್ಥಿಗಳು, ಅಕ್ಷಯ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಿದ್ಯಾರ್ಥಿಗಳು, ಉಪ್ಪಿನಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ವಿದ್ಯಾರ್ಥಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡರು.
ಶಿಕ್ಷಕ ಬಾಲಕೃಷ್ಣ ಪೊರ್ದಾಲ್ ಮೆರವಣಿಗೆಯ ಉದ್ಘೋಷಕರಾಗಿ ಸಹಕರಿಸಿದರು. ಸಂತ ಫಿಲೋಮಿನಾ ಕಾಲೇಜು ಮತ್ತು ಶ್ರೀ ರಾಮಕೃಷ್ಣ ಪ್ರೌಢಶಾಲೆಯ ಶಾಲೆಯಿಂದ ಬ್ಯಾಂಡ್ ಸೆಟ್, ಬೆಟ್ಟಂಪಾಡಿಯ ಮಣಿಕಂಠ ತಂಡದ ಚೆಂಡೆ ತಂಡ, ಗೊಂಬೆ ಕುಣಿತ ವಿಶೇಷ ಅಕರ್ಷಣೆಯಾಗಿತ್ತು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸ್ಯಾಕ್ಸೋಪೋನ್ ವಾದಕ ಪಿ.ಕೆ.ಗಣೇಶ್, ಸುದ್ದಿ ಸಮೂಹ ಸಂಸ್ಥೆಗಳ ಸಿಇಒ ಸೃಜನ್ ಊರುಬೈಲು, ಸಿಂಚನಾ ಊರುಬೈಲು, ಶೋಭಾ ಶಿವಾನಂದ, ಸುಳ್ಯ ಸುದ್ದಿ ಬಿಡುಗಡೆ ಪ್ರಧಾನ ಸಂಪಾದಕ ಹರೀಶ್ ಬಂಟ್ವಾಳ್ ಸಹಿತ ಪುತ್ತೂರು ಸುದ್ದಿ ಬಿಡುಗಡೆಯ ಪ್ರಧಾನ ಸಂಪಾದಕ ಕರುಣಾಕರ ರೈ ಸಿ.ಎಚ್ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.
ಗಾಂಧಿಕಟ್ಟೆಯಲ್ಲಿ ಮಾಲಾರ್ಪಣೆ
ಮೆರವಣಿಗೆಯು ಗಾಂಧಿಕಟ್ಟೆಯ ಬಳಿ ತಲುಪಿದಾಗ ಗಾಂಧಿಕಟ್ಟೆಯಲ್ಲಿ ಮಹಾತ್ಮ ಗಾಂಧಿ ಪ್ರತಿಮೆಗೆ ಡಾ. ಯು.ಪಿ.ಶಿವಾನಂದ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ ಮತ್ತು ನೆಲ್ಲಿಕಟ್ಟೆ ಜಗದೀಶ್ ಶೆಟ್ಟಿಯವರು ಮಾಲಾರ್ಪಣೆ ಮಾಡಿದರು.
ಹಸಿರು ಉಸಿರಾಗಲಿ, ಮನೆಮನೆಯು ಕೃಷಿಯಾಗಲಿ
ಸುದ್ದಿ ಸಮೂಹ ಸಂಸ್ಥೆಗಳ ಅಡಳಿ ನಿರ್ದೇಶಕರಾಗಿರುವ ಸುದ್ದಿ ಮಾಹಿತಿ ಟ್ರಸ್ಟ್‌ನ ಅಧ್ಯಕ್ಷ ಡಾ. ಯು.ಪಿ.ಶಿವಾನಂದ ಅವರು ಮಾತನಾಡಿ ಸಸ್ಯ ಜಾತ್ರೆಯು ಹಸಿರೇ ಉಸಿರು, ಮನೆ ಮನೆಯಲ್ಲಿ ಕೃಷಿ ಎಂಬ ಕಲ್ಪಣೆಯ ಅಡಿಯಲ್ಲಿ ಮೂಡಿ ಬಂದಿದೆ. ಇದು ಎರಡು ವರ್ಷದ ಹಿಂದೆಯೂ ಮಾಡಿದ್ದೆವು. ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಸಾರ್ವಜನಿಕರು ಭಾಗವಹಿಸಿದ್ದಾರೆ. ಎಲ್ಲರ ಮನೆಯಲ್ಲೂ ಸಣ್ಣ ಕೃಷಿ ಆರಂಭಗೊಳ್ಳಬೇಕು. ಕೃಷಿಗೆ ಉತ್ತಮ ಪ್ರೋತ್ಸಾಹ ಸಿಗಬೇಕು. ಯಾಕೆಂದರೆ ನಮಗೆ ಆಕ್ಸಿಜನ್ ಹಸಿರಿನಿಂದಲೇ ಸಿಗಬೇಕಾಗಿದೆ. ಹಸಿರೇ ಇವತ್ತು ಉಸಿರು ಎಂದರು.
ಭಾಗವಹಿಸುವುದೇ ನಮ್ಮ ಭಾಗ್ಯ:
ನಗರಸಭೆ ಮಾಜಿ ಅಧ್ಯಕ್ಷ ನೆಲ್ಲಿಕಟ್ಟೆ ಜಗದೀಶ್ ಶೆಟ್ಟಿಯವರು ಮಾತನಾಡಿ ಸುದ್ದಿಯ ಡಾ.ಯು.ಪಿ ಶಿವಾನಂದ ಅವರು ಬಹಳ ಪ್ರಯತ್ನ ಪಟ್ಟು ಹಲವು ತಿಂಗಳಿಂದ ಯೋಜನೆ ರೂಪಿಸಿದ್ದಾರೆ. ಒಂದು ಮನೆಯಲ್ಲಿ ಒಂದು ಔಷಧಿ ನೆಡುವುದರಿಂದ ಹತ್ತು ಮನೆಗೆ ಪ್ರಯೋಜನ, ಮನೆಯಲ್ಲಿ ತರಕಾರಿ ಬೆಳೆಯುವುದರಿಂದ ಆ ಮನೆಗೆ ಪ್ರಯೋಜನ ಆಗುತ್ತದೆ. ಈಗಿನ ಪರಿಸರದಲ್ಲಿ ಮರಗಳನ್ನು ಕಡಿಯುತ್ತಿದ್ದಾರೆ. ಯಾವ ಮರದಲ್ಲಿ ಯಾವ ಹಣ್ಣು ಆಗುತ್ತದೆ, ಅದರ ಪ್ರಯೋಜನ ಕುರಿತು ಮಕ್ಕಳಿಗೆ ಅರಿವೇ ಇಲ್ಲ. ಆ ಅರಿವು ಮೂಡಲು ನಾವು ಪರಿಸರ ಉಳಿಸಬೇಕು. ಸಸ್ಯ ಜಾತ್ರೆಯ ಮೂಲಕ ಊರಿಗೆ ಊರು ಸೇರಿ ಎಲ್ಲಾ ಕೃಷಿಗಳ ಮಾಹಿತಿ ಪಡೆಯಬಹುದು. ಸುದ್ದಿ ಮಾಹಿತಿ ಟ್ರಸ್ಟ್‌ಗೆ ಧನ್ಯವಾದ ಅರ್ಪಿಸುತ್ತೇನೆ ಎಂದರು.
ಕೃಷಿ, ಹಸಿರಿನ ಮಾಹಿತಿ ಅಗತ್ಯ:
ಅಕ್ಷಯ ಕಾಲೇಜಿನ ಸಂಚಾಲಕ ಜಯಂತ ನಡುಬೈಲು ಅವರು ಮಾತನಾಡಿ ಡಾ. ಶಿವಾನಂದ ಪ್ರಯತ್ನದಲ್ಲಿ ಈ ಸಸ್ಯ ಜಾತ್ರೆ ಮೂಡಿ ಬಂದಿದೆ. ಇವತ್ತಿನ ಕಾಲಗಟ್ಟದಲ್ಲಿ ಕೃಷಿಯ ಮಾಹಿತಿ ನೀಡುವಲ್ಲಿ ದೊಡ್ಡ ಮಾದ್ಯಮವಾಗಿ ಸುದ್ದಿ ಪತ್ರಿಕೆ ಮೂಡಿ ಬಂದಿದೆ. ನಮ್ಮ ಕಾಲೇಜಿನ ಎಲ್ಲಾ ಮಕ್ಕಳನ್ನು ಕರೆಸಿದ್ದೇವೆ. ಯಾಕೆಂದರೆ ಅವರಿಗೆ ಕೃಷಿಯ ಹಸಿರಿನ ಬಗ್ಗೆ ಮಾಹಿತಿ ಅಗತ್ಯ. ಮುಂದಿನ ದಿನದಲ್ಲಿ ಅವರಿಂದ ಹಸಿರು ಉಳಿಯಬೇಕಾಗಿದೆ. ಮೂರು ದಿನ ಕಾರ್ಯಕ್ರಮದಲ್ಲಿ ನಾವು ಪೂರ್ಣ ಭಾಗವಹಿಸುತ್ತೇವೆ ಎಂದರು.
ಸ್ನೇಹ ಸಂಗಮದಿಂದ ಪೂರ್ಣ ಸಹಕಾರ:
ಸ್ನೇಹ ಸಂಗಮ ಆಟೋ ರಿಕ್ಷಾ ಚಾಲಕ ಮಾಲಕರ ಸಂಘದ ಮಾಜಿ ಅಧ್ಯಕ್ಷ ಅರವಿಂದ ಪೆರಿಗೇರಿ, ಕಾರ್ಯಧ್ಯಕ್ಷ ಚನಿಯಪ್ಪ, ಕಾರ್ಯದರ್ಶಿ ಹರೀಶ್ ಕುಮಾರ್ ತೆಂಕಿಲ, ಮಾಜಿ ಅಧ್ಯಕ್ಷ ಸಿಲ್ವೇಸ್ಟಾರ್ ಡಿಸೋಜ ಅವರು ಮಾತನಾಡಿ ನಮ್ಮ ಸಂಘದ ಸದಸ್ಯರು 2ನೇ ಬಾರಿ ಭಾಗವಹಿಸುತ್ತಿರುವುದು. ಇದು ನಮಗೆ ಖುಷಿಯಾಗುತ್ತಿದೆ. ಪುತ್ತೂರಿನಲ್ಲಿ ಆಟೋ ರಿಕ್ಷಾ ಚಾಲಕರನ್ನು ಸುದ್ದಿ ಸಂಸ್ಥೆ ಪೂರ್ಣ ಸಹಕಾರ ನೀಡುತ್ತಿದೆ. ಸ್ನೇಹ ಸಂಗಮ ಸದಾ ಸುದ್ದಿಯೊಂದಿಗೆ ಇದೆ. ಇಂತಹ ಕಾರ್ಯಕ್ರಮ ಮುಂದೆಯೂ ನಡೆಯಲಿ. ಆಟೋ ರಿಕ್ಷಾಗಳಿಗೆ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಿದ ಸುದ್ದಿಗೆ ಧನ್ಯವಾದ ಹೇಳುತ್ತಿದ್ದೇನೆ. ಇನ್ನೂ ಅವರ ಜೊತೆ ಭಾಗವಹಿಸುತ್ತೇವೆ. ಸುಮಾರು ನಮ್ಮ 50 ಅಟೋ ರಿಕ್ಷಾಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದೆ ಎಂದರು.
ಖುಷಿ ಅನಿಸುತ್ತಿದೆ.
ನಮ್ಮ ಮಕ್ಕಳಿಗೂ ಇದರ ಅನುಭವ ಇರಬೇ. ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ನಮ್ಮ ಮಕ್ಕಳು ಪ್ರಾಥಮಿಕ ಶಿಕ್ಷಣದಲ್ಲಿರುವಾಗ ಅವರಿಗೆ ಸಸ್ಯದ ಮಾಹಿತಿ ಅಗತ್ಯವಿದೆ ಎಂದು ಲಿಟ್ಲ್‌ಪ್ಲವರ್ ಶಾಲೆಯ ಶಿಕ್ಷಕಿ ನಳಿನಾಕ್ಷಿ ಅವರು ಹೇಳಿದರು.
ಮಕ್ಕಳಿಗೆ ಉತ್ತಮ ಜಾಗೃತಿ ಮೂಡುತ್ತದೆ:
ಸಸ್ಯ ಜಾತ್ರೆ ಮಕ್ಕಳಿಗೆ ಮಾತ್ರವಲ್ಲ ಊರಿನವರಿಗೆ ಎಲ್ಲರಿಗೂ ಸಸ್ಯಗಳ ಬಗ್ಗೆ ಜಾಗೃತಿ ಮೂಡುತ್ತೆ ಎಂದು ನೆಲ್ಲಿಕಟ್ಟೆ ಅಂಬಿಕಾ ವಿದ್ಯಾಸಂಸ್ಥೆಯ ಶಿಕ್ಷಕಿ ಅಕ್ಷತಾ ಅವರು ನುಡಿದರು.
ಮಹಿಳೆಯರಿಗೆ ಮೇಲ್ಪಂತಿ ಹಾಕಿಕೊಟ್ಟಿದ್ದಾರೆ:
ದೀನ್ ದಯಾಳ್ ಅಂತ್ಯೋದಯ ರಾಷ್ಟ್ರೀಯ ಜೀವನೋಪಾಯ ಅಭಿಯಾನ ಇದರ ತಾಲೂಕ ಕಾರ್ಯಕ್ರಮ ವ್ಯವಸ್ಥಾಪಕನ ಜಗತ್ ಅವರು ಮಾತನಾಡಿ ಸಂಜೀವಿನ ಒಕ್ಕೂಟದ ಸದಸ್ಯರು ಉತ್ತಮ ಉತ್ಪನ್ನಗಳನ್ನು ಮಾಡುತ್ತಿದ್ದಾರೆ. ಅವರ ಉತ್ಪನ್ನಗಳಿಗೆ ಪ್ರದರ್ಶನ ಮತ್ತು ಮಾರುಕಟ್ಟೆಯ ವ್ಯವಸ್ಥೆಯೂ ಆಗಿದೆ. ನಮ್ಮಲ್ಲಿನ ಸ್ವಸಹಾಯ ಸಂಘಗಗಳು ಸಸ್ಯ ಬೆಳೆಯುವುದು ನರ್ಸರಿ ಮಾಡುತ್ತಾರೆ. ಉತ್ತಮ ಸಾವಯವ ಕೃಷಿ ಮೌಲ್ಯವರ್ಧನ ಮಾಡುತ್ತಿದ್ದಾರೆ. ಇವರಿಗೆ ಸುದ್ದಿಯ ಡಾ. ಯು.ಪಿ.ಶಿವಾನಂದ ಅವರು ಸಸ್ಯ ಜಾತ್ರೆಯಲ್ಲಿ ಉತ್ತಮ ಅವಕಾಶ ಕಲ್ಪಿಸಿದ್ದಾರೆ. ಕಡಬ ತಾಲೂಕಿನ 6 ಮಂದಿ ಮತ್ತು ಪುತ್ತೂರಿನ 5 ಮಂದಿ ಸ್ವಸಹಾಯ ಸಂಘದ ಮಹಿಳೆಯರನ್ನು ಕಾರ್ಯಕ್ರಮದಲ್ಲಿ ಗುರುತಿಸಲಾಗುತ್ತಿದೆ ಎಂದವರು ಹೇಳಿದರು. ಸಂಜೀವಿನಿ ಒಕ್ಕೂಟದ ಜ್ಞಾನಸೆಲ್ವಿ, ಬಲ್ನಾಡಿನ ಉಮಾವತಿ ಸಹಿತ ಕೌಕ್ರಾಡಿಯ ಒಕ್ಕಟದ ಸದಸ್ಯರು ತಮ್ಮ ಸಂಘದ ಉತ್ಪನ್ನಗಳ ಕುರಿತು ಮಾಹಿತಿ ನೀಡಿದರು.
ಮುಂದಿನ ವರ್ಷ ಒಂದು ವಾರ ಮಾಡಿ- ಡಾ.ಪ್ರಭಾಕರ ಭಟ್ ಕಲ್ಲಡ್ಕ
ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪ್ರಭಾಕರ ಭಟ್ ಕಲ್ಲಡ್ಕ ಅವರು ಸಸ್ಯ ಜಾತ್ರೆಗೆ ಆಗಮಿಸಿ ವಿವಿಧ ಸ್ಟಾಲ್‌ಗಳನ್ನು ವೀಕ್ಷಣೆ ಮಾಡಿದರು. ಇದೇ ವೇಳೆ ಅವರು ಸುದ್ದಿ ಬೆಳ್ತಂಗಡಿ ತಾಲೂಕಿನ ಪತ್ರಿಕೆಯ ಪ್ರಧಾನ ವರದಿಗಾರ ಸಂತೋಷ್ ಕುಮಾರ್ ಶಾಂತಿನಗರ ಅವರಲ್ಲಿ ಮಾತನಾಡಿ ಈ ಬಾರಿ ಮೂರು ದಿನದ ಸಸ್ಯ ಜಾತ್ರೆಯ ಕುರಿತು ಮಾಹಿತಿ ಪಡೆದು ಮುಂದಿನ ವರ್ಷ ಒಂದು ವಾರ ಮಾಡಿ ಎಂದರು. ಬಳಿಕ ಅವರು ವಿವಿಧ ಸ್ಟಾಲ್‌ಗಳನ್ನು ವೀಕ್ಷಣೆ ಮಾಡಿ ಡ್ರೋನ್ ಬಳಸಿ ಔಷಧಿ ಸಿಂಪಡಿಕೆಯ ಮಾಹಿತಿ ಪಡೆದು ವಿವಿಧ ಕೃಷಿ ಉತ್ಪನ್ನಗಳ, ಕೃಷಿ ಸಸಿಗಳ ವೀಕ್ಷಣೆ ಮಾಡಿದರು. ಸುದ್ದಿಯೊಂದಿಗೆ ಮಾತನಾಡಿದ ಅವರು ಸಸ್ಯ ಜಾತ್ರೆಗೆ ಶುಭ ಹಾರೈಸಿದರು.
ಈ ಸಂದರ್ಭ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ. ಕೃಷ್ಣ ಭಟ್, ಉಪಾಧ್ಯಕ್ಷ ಸತೀಶ್ ರಾವ್, ಕೋಶಾಧಿಕಾರಿ ರೂಪಲೇಖ, ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ.ಮಹೇಶ್ ಪ್ರಸನ್ನ, ವಿವೇಕಾನಂದ ಕಾಲೇಜಿನ ಲಕ್ಷ್ಮೀಪ್ರಸಾದ್ ಬೊಟ್ಯಾಡಿ ಜೊತೆಗಿದ್ದರು. ಸುದ್ದಿ ಬೆಳ್ತಂಗಡಿಯ ನಿರೂಪಕಿ ಶ್ರೇಯಾ ಪಿ. ಶೆಟ್ಟಿ ಮತ್ತು ದಾಮೋದರ್ ದುಂಡೋಲೆ ಅವರು ಮೆರವಣಿಗೆಯಲ್ಲಿ ಭಾಗವಹಿಸಿದವರ ಸಂದರ್ಶನ ಮಾಡಿದರು.