ಪುತ್ತೂರು: ಅಯೋಡಿನ್ ಮತ್ತು ಪೋಷಕಾಂಶಗಳ ಬಗ್ಗೆ ಜನ ಜಾಗೃತಿ ಮೂಡಿಸುವ ಬೀದಿ ನಾಟಕವು ಕುಂಬ್ರ ಜಂಕ್ಷನ್ನಲ್ಲಿ ಜ.10 ರಂದು ನಡೆಯಿತು.
ಸಂಸಾರ ಕಲಾ ತಂಡದ ವತಿಯಿಂದ ಈ ಬೀದಿ ನಾಟಕದಲ್ಲಿ ಮನುಷ್ಯನ ದೇಹದಲ್ಲಿ ಅಯೋಡಿನ್ ಕೊರತೆಯಿಂದ ಉಂಟಾಗುವ ವಿವಿಧ ಖಾಯಿಲೆಗಳ ಬಗ್ಗೆ ಹಾಗೂ ಅದಕ್ಕೆ ಪರಿಹಾರಗಳನ್ನು ತಿಳಿಸಿಕೊಡಲಾಯಿತು. ಬೀದಿ ನಾಟಕವನ್ನು ಒಳಮೊಗ್ರು ಗ್ರಾಮ ಪಂಚಾಯತ್ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರುರವರು ತಮಟೆ ಬಾರಿಸುವ ಮೂಲಕ ಉದ್ಘಾಟಿಸಿ ಮಾತನಾಡಿ, ಮನುಷ್ಯನಿಗೆ ಆರೋಗ್ಯವೇ ಭಾಗ್ಯ, ಆರೋಗ್ಯವನ್ನು ಕಾಪಾಡಿಕೊಳ್ಳುವುದು ಅತ್ಯಂತ ಅಗತ್ಯ ಈ ನಿಟ್ಟಿನಲ್ಲಿ ಸಂಸಾರ ತಂಡದವರು ನಡೆಸಿಕೊಟ್ಟ ಬೀದಿ ನಾಟಕ ಬಹಳ ಅರ್ಥಪೂರ್ಣವಾಗಿತ್ತು ಎಂದು ಹೇಳಿ ಶುಭ ಹಾರೈಸಿದರು. ಗ್ರಾಪಂ ಅಭಿವೃದ್ಧಿ ಅಧಿಕಾರಿ ಮನ್ಮಥ ಅಜಿರಂಗಳರವರು ಮಾತನಾಡಿ, ಶುದ್ಧ ನೀರು, ಶುದ್ಧ ಗಾಳಿ, ಪೋಷಕಾಂಶಗಳಿಂದ ಕೂಡಿದ ಆಹಾರವನ್ನು ಸೇವಿಸಬೇಕಾದರೆ ನಮ್ಮ ಪರಿಸರ ಶುದ್ಧ,ಸ್ವಚ್ಛವಾಗಿರಬೇಕು ಎಂದು ಹೇಳಿದರು.
ಸಂಸಾರ ತಂಡದ ಮುಖ್ಯಸ್ಥ, ಪತ್ರಕರ್ತ ಸಂಶುದ್ದೀನ್ ಸಂಪ್ಯರವರು ಅಯೋಡಿನ್ ಕೊರತೆಯಿಂದ ಉಂಟಾಗುವ ಸಮಸ್ಯೆಗಳ ಬಗ್ಗೆ ವಿವರಿಸಿದರು. ಈ ಸಂದರ್ಭದಲ್ಲಿ ಗ್ರಾಪಂ ಕಾರ್ಯದರ್ಶಿ ಜಯಂತಿ, ಸದಸ್ಯರು, ಅಂಗನವಾಡಿ ಕಾರ್ಯಕರ್ತೆಯರು, ಆರೋಗ್ಯ ಇಲಾಖೆಯ ಅಧಿಕಾರಿಗಳು, ಸಂಜೀವಿನಿ ತಂಡದ ಸದಸ್ಯರು, ಗ್ರಾಮಸ್ಥರು ಭಾಗವಹಿಸಿದ್ದರು. ಸಂಸಾರ ತಂಡದ ಕಲಾವಿದ ಕೃಷ್ಣಪ್ಪ ಬಂಬಿಲ ವಂದಿಸಿದರು.