ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ಪುತ್ತೂರು ತಾಲೂಕು ವತಿಯಿಂದ ನೋಂದಾವಣೆ ಬಾಕಿ ತಿರಸ್ಕೃತ ಅರ್ಜಿಗಳ ವಿಲೇವಾರಿ ಶಿಬಿರ ಹಾಗೂ ಯುವನಿಧಿ ವಿಶೇಷ ನೋಂದಣಿ ಅಭಿಯಾನ

0

ಪಂಚ ಗ್ಯಾರಂಟಿಗಳಿಂದ ಜನರಿಗೆ ಶಕ್ತಿ ತುಂಬುವ ಕೆಲಸ: ಭರತ್ ಮುಂಡೋಡಿ

ಉಪ್ಪಿನಂಗಡಿ: ರಾಜ್ಯ ಕಾಂಗ್ರೆಸ್ ಸರಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಆರು ತಿಂಗಳೊಳಗೆ ಪಂಚ ಗ್ಯಾರಂಟಿ ಯೋಜನೆಗಳ ಭರವಸೆಯನ್ನು ಯಶಸ್ವಿಯಾಗಿ ಜಾರಿಗೊಳಿಸಿದ್ದು, ಅದಕ್ಕಾಗಿ 56,೦೦೦ ಕೋಟಿ ರೂ.ವನ್ನು ಬಜೆಟ್‌ನಲ್ಲಿ ಮೀಸಲಿಟ್ಟಿದೆ. ಈ ಪಂಚ ಗ್ಯಾರಂಟಿಯಿಂದ ಅದೆಷ್ಟೋ ಜನರಿಗೆ ಶಕ್ತಿ ತುಂಬುವ ಕೆಲಸ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಮಾಡಿದೆ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ದ.ಕ. ಜಿಲ್ಲಾಧ್ಯಕ್ಷರಾದ ಭರತ್ ಮುಂಡೋಡಿ ತಿಳಿಸಿದರು.


ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ಪುತ್ತೂರು ತಾಲೂಕು ಇದರ ವತಿಯಿಂದ ಉಪ್ಪಿನಂಗಡಿ ಗ್ರಾ.ಪಂ. ಸಭಾಂಗಣದಲ್ಲಿ ಜ.13ರಂದು ನಡೆದ ನೋಂದಾವಣೆ ಬಾಕಿ ಇರುವ ಮತ್ತು ತಿರಸ್ಕೃತ ಅರ್ಜಿಗಳ ವಿಲೇವಾರಿ ಶಿಬಿರ ಹಾಗೂ ಯುವ ನಿಧಿ ವಿಶೇಷ ನೋಂದಣಿ ಅಭಿಯಾನವನ್ನು ಉದ್ಘಾಟಿಸಿ ಮಾತನಾಡಿದರು.


ಈ ಯೋಜನೆಗಳಿಂದಾಗಿ ಅದೆಷ್ಟೋ ಕುಟುಂಬಗಳು ಉತ್ತಮ ಜೀವನ ನಡೆಸಲು ಸಾಧ್ಯವಾಗುತ್ತಿದೆ. ಮಹಿಳೆಯರು ಬೇಕಾಬಿಟ್ಟಿ ಖರ್ಚು ಮಾಡುವವರಲ್ಲ. ಗೃಹ ಲಕ್ಷ್ಮೀ ಯೋಜನೆಯ ಮೂಲಕ ಮಹಿಳೆಯರ ಖಾತೆಗೆ ನೇರವಾಗಿ ಹಣ ವರ್ಗಾವಣೆಯಾಗುತ್ತಿರುವುದರಿಂದ ಇದು ಉತ್ತಮ ಕಾರ್ಯಕ್ಕೆ ವಿನಿಯೋಗವಾಗುತ್ತಿದೆ. ಈ ಯೋಜನೆಗಳನ್ನು ಜಾರಿಗೆ ತರುವುದರಿಂದ ಅಭಿವೃದ್ಧಿಗೆ ಹಿನ್ನಡೆಯಾಗುತ್ತಿದೆ ಎಂಬ ಟೀಕೆಗಳು ಸರಿಯಲ್ಲ. ಅಭಿವೃದ್ಧಿಗೆಂದೇ 3 ಲಕ್ಷದ 22 ಸಾವಿರ ಕೋ. ರೂ.ವನ್ನು ಮೀಸಲಿಡಲಾಗಿದೆ. ಆದ್ದರಿಂದ ಪಂಚ ಗ್ಯಾರಂಟಿ ಯೋಜನೆಗಳೊಂದಿಗೆ ರಾಜ್ಯದ ಅಭಿವೃದ್ಧಿಯೂ ನಡೆಯುತ್ತಿದೆ ಎಂದರಲ್ಲದೆ, ಕೆಲವು ತಾಂತ್ರಿಕ ಕಾರಣದಿಂದ ಕೆಲವರಿಗೆ ಹಣ ವರ್ಗಾವಣೆಯಾಗುತ್ತಿಲ್ಲ. ಅದನ್ನು ಸರಿಪಡಿಸುವ ಕಾರ್ಯ ನಡೆಯುತ್ತಿದೆ ಎಂದರು.


ಅಕ್ರಮ- ಸಕ್ರಮ ಸಮಿತಿಯ ಸದಸ್ಯ ಮುಹಮ್ಮದ್ ಬಡಗನ್ನೂರು ಮಾತನಾಡಿ, ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರವು ಈ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಾಗ ಟೀಕೆ ಮಾಡಿದವರೇ ಇಂದು ಬೇರೆ ರಾಜ್ಯಗಳಲ್ಲಿ ಇಂತಹ ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡುವ ಭರವಸೆ ನೀಡಿ ಮತ ಯಾಚನೆ ಮಾಡುತ್ತಿದ್ದಾರೆ. ಈ ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಜಿಡಿಪಿ ಮೇಲ್ಮಟ್ಟಕ್ಕೇರಿದೆ ಎಂದರು.


ಗೃಹ ಜ್ಯೋತಿ ಯೋಜನೆಯ ಬಗ್ಗೆ ಮಾತನಾಡಿದ ಫಲಾನುಭವಿ ಜತೀಂದ್ರ ಶೆಟ್ಟಿ ಮಾತನಾಡಿ, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರದಿಂದ ಮನೆ-ಮನೆಗೆ ವಿದ್ಯುತ್, ಮನ-ಮನಕ್ಕೆ ಬೆಳಕು ನೀಡುವ ಕಾರ್ಯವಾಗಿದೆ. ಇದು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನೆರವಾಗಿದೆ. ಈ ಗ್ಯಾರಂಟಿ ಯೋಜನೆಗಳಿಂದ ಹಣದ ರೊಟೇಶನ್ ಆಗುವುದರಿಂದ ಸರಕಾರಕ್ಕೆ ಇದರಿಂದ ಲಾಭವೇ ಹೊರತು ನಷ್ಟವಿಲ್ಲ. ಇಂತಹ ಯೋಜನೆ ನೀಡಿರುವ ಸರಕಾರಕ್ಕೆ ಅಭಿನಂದನೆ ಸಲ್ಲಿಸಿದರು.


ಗೃಹ ಜ್ಯೋತಿ ಯೋಜನೆಯ ಬಗ್ಗೆ ಮಾತನಾಡಿ ಸರಕಾರಕ್ಕೆ ಅಭಿನಂದನೆ ಸಲ್ಲಿಸಿದ ಫಲಾನುಭವಿ ರತಿ ಎಸ್. ನಾಯ್ಕ, ತಿಂಗಳಿಗೆ ಸರಕಾರ 2000 ರೂ. ನೀಡುವುದರಿಂದ ನನ್ನಂತ ಬೀಡಿ ಕಟ್ಟುವ ಮಹಿಳೆಯರಿಗೆ ತುರ್ತು ಸಂದರ್ಭದಲ್ಲಿ ಈ ಹಣ ನೆರವಿಗೆ ಬಂದಿದೆ ಎಂದರು.


ಅನ್ನ ಭಾಗ್ಯ ಯೋಜನೆಯ ಬಗ್ಗೆ ಮಾತನಾಡಿ ಸರಕಾರಕ್ಕೆ ಅಭಿನಂದನೆ ಸಲ್ಲಿಸಿದ ಫಲಾನುಭವಿ ಕೈರುನ್ನಿಸಾ, ರಾಜ್ಯ ಸರಕಾರ ಐದು ಕೆ.ಜಿ. ಅಕ್ಕಿ ಮತ್ತು ಐದು ಕೆ.ಜಿ. ಅಕ್ಕಿಯ ಬದಲಿಗೆ ಹಣವನ್ನು ನೀಡುವುದರಿಂದ ಬಡವರ ಬದುಕನ್ನು ಬದಲಾಯಿಸಿದೆ. ಐದು ಕೆ.ಜಿ. ಅಕ್ಕಿಯ ಹಣದಿಂದ ಇತರೆ ಸಾಮಗ್ರಿಗಳನ್ನು ತೆಗೆದುಕೊಳ್ಳಲು ನೆರವಾಗಿದೆ ಎಂದರು.
ಈ ಸಂದರ್ಭ ಉಪ್ಪಿನಂಗಡಿ, ಕೋಡಿಂಬಾಡಿ, 34 ನೆಕ್ಕಿಲಾಡಿ, ಹಿರೇಬಂಡಾಡಿ, ಬಜತ್ತೂರು ಗ್ರಾಮದವರ ನೋಂದಾವಣಿ ಬಾಕಿ ಇರುವ ಮತ್ತು ತಿರಸ್ಕೃತ ಅರ್ಜಿಗಳ ವಿಲೇವಾರಿ ಶಿಬಿರ ಹಾಗೂ ಯುವ ನಿಧಿಯ ನೋಂದಣಿ ಮಾಡಲಾಯಿತು.


ವೇದಿಕೆಯಲ್ಲಿ ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿಯ ಕಡಬ ತಾಲೂಕು ಅಧ್ಯಕ್ಷರಾದ ಸುಧೀರ್ ಶೆಟ್ಟಿ, ಜಿಲ್ಲಾ ಅನುಷ್ಠಾನ ಪ್ರಾಧಿಕಾರದ ಸದಸ್ಯ ಪೂರ್ಣೇಶ್ ಭಂಡಾರಿ, ಉಪ್ಪಿನಂಗಡಿ ಗ್ರಾ.ಪಂ. ಅಧ್ಯಕ್ಷೆ ಲಲಿತಾ, ಕೋಡಿಂಬಾಡಿ ಗ್ರಾ.ಪಂ. ಉಪಾಧ್ಯಕ್ಷ ಜಯಪ್ರಕಾಶ್ ಬದಿನಾರು, ಮೆಸ್ಕಾಂನ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ರಾಮಚಂದ್ರ, ಆಹಾರ ಶಿರಸ್ತೇದಾರರಾದ ಸರಸ್ವತಿ, ಉದ್ಯೋಗ ವಿನಿಮಯ ಕೇಂದ್ರದ ದಯಾನಂದ, ಮಹಿಳಾ ಮತ್ತು ಶಿಶು ಅಭಿವೃದ್ಧಿ ಇಲಾಖೆಯ ಸುಜಾತ, ಕೆಎಸ್ಸಾರ್ಟಿಸಿ ಪುತ್ತೂರು ಡಿಪೋ ಮೆನೇಜರ್ ಅಬ್ಬಾಸ್, ಗ್ಯಾರಂಟಿ ಸಮಿತಿ ಸದಸ್ಯರಾದ ಸಂತೋಷ್ ಭಂಡಾರಿ, ಸೇಸಪ್ಪ ನೆಕ್ಕಿಲು, ಬಬಿತಾ, ವಿಜಯಲಕ್ಷ್ಮೀ, ಅಬ್ಬು ಹುಸೈನ್, ಅಸ್ಮಾ, ಮುಹಮ್ಮದ್ ಫಾರೂಕ್, ಉಪ್ಪಿನಂಗಡಿ ಗ್ರಾ.ಪಂ. ಸದಸ್ಯರಾದ ತೌಸೀಫ್ ಯು.ಟಿ., ಸಣ್ಣಣ್ಣ, ವಿನಾಯಕ ಪೈ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ೩೪ ನೆಕ್ಕಿಲಾಡಿ ವಲಯ ಕಾಂಗ್ರೆಸ್ ಅಧ್ಯಕ್ಷೆ ಅನಿ ಮಿನೇಜಸ್, ಉಪ್ಪಿನಂಗಡಿ ವಲಯ ಕಾಂಗ್ರೆಸ್ ಅಧ್ಯಕ್ಷ ಆದಂ ಕೊಪ್ಪಳ, ಹಿರೆಬಂಡಾಡಿ ಗ್ರಾ.ಪಂ. ಕಾರ್ಯದರ್ಶಿ ಸತೀಶ್, ೩೪ ನೆಕ್ಕಿಲಾಡಿ ಗ್ರಾ.ಪಂ. ಪಿಡಿಒ ದೇವಪ್ಪ ನಾಯ್ಕ, ಪ್ರಮುಖರಾದ ಅಸ್ಕರ್ ಅಲಿ, ಸತೀಶ್ ಶೆಟ್ಟಿ ಹೆನ್ನಾಳ ಮತ್ತಿತರರು ಉಪಸ್ಥಿತರಿದ್ದರು.
ತಾ.ಪಂ. ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ ಸ್ವಾಗತಿಸಿದರು. ಉಪ್ಪಿನಂಗಡಿ ಗ್ರಾ.ಪಂ. ಕಾರ್ಯದರ್ಶಿ ಗೀತಾ ಶೇಖರ್ ವಂದಿಸಿದರು. ತಾಲೂಕು ಮಾಹಿತಿ ಶಿಕ್ಷಣ ಸಂವಹನ ಸಂಯೋಜಕ ಭರತ್ ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಪುತ್ತೂರು ತಾಲೂಕು ಅಧ್ಯಕ್ಷರಾದ ಉಮಾನಾಥ ಶೆಟ್ಟಿ ಪೆರ್ನೆ, ಪಂಚ ಗ್ಯಾರಂಟಿ ಯೋಜನೆಯಲ್ಲಿ ಪುತ್ತೂರು ತಾಲೂಕಿಗೆ 211 ಕೋಟಿಯ 48 ಲಕ್ಷದ 64 ಸಾವಿರದ 121 ರೂ. ಅನುದಾನ ಬಂದಿದೆ. ಬಂಟ್ವಾಳದ ವಿಟ್ಲ ಹೋಬಳಿಯ ಪುತ್ತೂರು ವಿಧಾನ ಸಭಾ ಕ್ಷೇತ್ರಕ್ಕೊಳಪಟ್ಟ ಗ್ರಾಮಗಳಿಗೆ ಗೃಹಜ್ಯೋತಿ, ಗೃಹ ಲಕ್ಷ್ಮೀ ಹಾಗೂ ಅನ್ನಭಾಗ್ಯ ಯೋಜನೆಯಲ್ಲಿ 49 ಕೋಟಿಯ 83 ಲಕ್ಷದ 38 ಸಾವಿರದ 542 ರೂ. ಅನುದಾನ ಬಂದಿದೆ. ಒಟ್ಟು ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ 261 ಕೋಟಿಯ 32 ಲಕ್ಷದ 2 ಸಾವಿರದ 668ರೂ. ಬಂದಿದೆ. ಇದರಿಂದ ಅದೆಷ್ಟೋ ಜನರಿಗೆ ನೆರವಾಗಿದೆ ಎಂದರು.

LEAVE A REPLY

Please enter your comment!
Please enter your name here