ನೆಲ್ಯಾಡಿ: ಡಿ.31ರಂದು ನಿಧನರಾದ ಕಡಬ ತಾಲೂಕಿನ ಕೌಕ್ರಾಡಿ ಗ್ರಾಮದ ಗುತ್ತಿನಮನೆ ಮಾಧವ ಗೌಡರವರ ಪತ್ನಿ ಕಮಲ (75ವ.)ರವರ ಉತ್ತರಕ್ರಿಯೆ ಹಾಗೂ ಶ್ರದ್ಧಾಂಜಲಿ ಸಭೆ ಜ.12ರಂದು ಗುತ್ತಿನಮನೆಯಲ್ಲಿ ನಡೆಯಿತು.
ಕಮಲ ಅವರ ಪುತ್ರ ರವಿಪ್ರಸಾದ್ರವರು ಅಮ್ಮನ ಜೊತೆ ಕಳೆದ ನೆನಪುಗಳನ್ನು ಮತ್ತು ಅವರ ಚಲನವಲನಗಳ ಕುರಿತಾಗಿ ಮಾತನಾಡಿ ಭಾವುಕರಾದರು. ನಂತರ ನವ್ಯ ಪ್ರಸಾದ್ರವರು ಗುತ್ತಿನ ಮನೆಯ ಧ್ರುವತಾರೆ ಎಂಬ ಶೀರ್ಷಿಕೆಯಡಿ ಕಮಲರವರ ಜೀವನ ಚರಿತ್ರೆಯನ್ನು ತನ್ನ ಸ್ವ ರಚಿತ ಕವನದ ಮೂಲಕ ವಾಚನ ಮಾಡಿದರು.
’ಹಸಿದ ಹೊಟ್ಟೆಗೆ ಅನ್ನದ ಬೆಸುಗೆ
ಹಸಿದು ಬಂದವರಿಗೆ ತಟ್ಟೆ ತುಂಬ ಉಣ ಬಡಿಸಿ ಮೊಗದಲ್ಲಿ ತರಿಸಿದರು ನಗೆ
ಸಾಧಿಸಲಿಲ್ಲ ಯಾರಲ್ಲೂ ಹಗೆ
ಬೆಳಕಾದವರು ಅದೆಷ್ಟೋ ಜನರ ಬಾಳಿಗೆ’
ಎಂದು ಸ್ವರಚಿತ ಕವನದ ಮೂಲಕ ಶ್ರದ್ದಾಂಜಲಿ ಸಲ್ಲಿಸಿದರು. ಸುಂದರ ಗೌಡ ಪುಡಿಕೆತ್ತು ಕನ್ಯಾಡಿರವರು ಮಾತನಾಡಿ, ಮುಕ್ಕೋಟಿ ದೇವತೆಗಳ ಗುಣಗಳನ್ನು ಹೊಂದಿದ್ದ ಕಮಲ ಅವರು ಅದೆಷ್ಟೋ ಜನರಿಗೆ ಅನ್ನಪೂರ್ಣೇಶ್ವರಿಯಾಗಿದ್ದರು. ಅವರು ಅವಿಭಕ್ತ ಕುಟುಂಬದಲ್ಲಿದ್ದರೂ ಅಚ್ಚುಕಟ್ಟಾಗಿ ಎಲ್ಲಾ ಪರಿಸ್ಥಿತಿ ನಿಭಾಯಿಸಿದ್ದರು ಎಂದರು. ಜಯಂತಿ ಬಿ.ಯಂ.ಗರಡಿ ಅವರು ಕಮಲ ಅವರ ಜೊತೆಗೆ ಕಳೆದ ನೆನಪುಗಳನ್ನು ಮೇಲುಕು ಹಾಕುತ್ತ ನಾವೆಲ್ಲರೂ ಒಂದೇ ಎಂಬ ಸೋದರ ವಾತ್ಸಲ್ಯವಿತ್ತು. ಮಾತೃ ಹೃದಯಿಯ ಮಹಾನ್ ಮಾತೆಯಾಗಿದ್ದರು ಎಂದು ಹೇಳಿದರು.
ಗುಡ್ಡಪ್ಪ ಗೌಡ ಬಲ್ಯ ಅವರು ಮಾತನಾಡಿ, ಕಮಲ ಅವರು ಎಲ್ಲರಿಗೂ ಮಾದರಿಯಾಗಿದ್ದರು. ಅವರ ಒಳ್ಳೆಯತನಕ್ಕೆ ಯಾರು ಸರಿಸಾಟಿ ಇಲ್ಲ. ನಮ್ಮೆಲ್ಲರ ಮನದಲ್ಲಿ ಎಂದೆಂದೂ ಅಜರಾಮರ ಆಗಿರುತ್ತಾರೆ ಎಂದರು. ಮೃತರ ಆತ್ಮಕ್ಕೆ ಶಾಂತಿ ಕೋರಿ ಮೌನ ಪ್ರಾರ್ಥನೆ ಮಾಡಲಾಯಿತು. ಮೃತರ ಪತಿ ಮಾಧವ ಗೌಡ ಗುತ್ತಿನಮನೆ, ಪುತ್ರಿಯರಾದ ಸುನಂದಾ, ಸುಮಿತ್ರಾ, ಸ್ವರ್ಣಲತಾ, ಅಳಿಯಂದಿರಾದ ರತ್ನಾಕರ, ಬಾಲಕೃಷ್ಣ, ಪ್ರವೀಣ, ಪುತ್ರ ರವಿಪ್ರಸಾದ್, ಸೊಸೆ ಸೌಮ್ಯ, ಮೊಮ್ಮಕ್ಕಳಾದ ವರ್ಷ, ಪ್ರೇಕ್ಷ, ಶ್ರೇಷ್ಠ, ವೀಕ್ಷಾ, ಸೃಷ್ಟಿ, ಖುಷಿ, ಋತ್ವಿಕ್ ಮತ್ತು ಗುತ್ತಿನಮನೆ ಕುಟುಂಬಸ್ಥರು, ಬಂಧುಮಿತ್ರರು ಪಾಲ್ಗೊಂಡಿದ್ದರು.