ನಿಡ್ಪಳ್ಳಿ: ರೆಂಜದಿಂದ ಮುಡಿಪುನಡ್ಕ ಬಡಗನ್ನೂರು ಹೋಗುವ ಲೋಕೋಪಯೋಗಿ ರಸ್ತೆಯ ಕೂಟೇಲಿನಿಂದ ಕುಕ್ಕುಪುಣಿವರೆಗೆ ಇರುವ ಸುಮಾರು ಒಂದು ಕಿಲೊಮೀಟರ್ ರಸ್ತೆಯ ಎರಡೂ ಬದಿ ಹೊಂಡ ಬಿದ್ದ ಪರಿಣಾಮ ವಾಹನ ಸಂಚಾರಕ್ಕೆ ಸಮಸ್ಯೆಯುಂಟಾಗಿದೆ. ಅಲ್ಲದೆ ರಸ್ತೆ ಬಹಳ ಕಿರಿದಾಗಿದ್ದು ಅಗಲಗೊಳಿಸಿ ಅಭಿವೃದ್ಧಿಗೊಳಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಮಳೆಗಾಲದಲ್ಲಿ ಮಳೆ ನೀರು ರಸ್ತೆ ಬದಿ ಹರಿದು ಎರಡೂ ಬದಿ ಹೊಂಡ ಬಿದ್ದಿದೆ. ಕೂಟೇಲು ಸೇತುವೆ ನಿರ್ಮಾಣವಾದ ನಂತರ ಬಾಕಿ ಉಳಿದ ರಸ್ತೆ ಅಭಿವೃದ್ಧಿಗೊಳಿಸಲಾಗುವುದು ಎಂಬ ಮಾತು ಸಾರ್ವಜನಿಕವಾಗಿ ಕೇಳಿ ಬರುತ್ತಿತ್ತು. ಆದರೆ ವರ್ಷ ಎರಡು ಕಳೆಯುತ್ತಾ ಬಂದರೂ ಅಭಿವೃದ್ಧಿಯಾಗದಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ. ಈ ರಸ್ತೆಯಲ್ಲಿ ಎರಡು ವಾಹನಗಳು ಎದುರಾದರೆ ಸೈಡ್ ಕೊಡಲು ಡಾಮರು ರಸ್ತೆಯಿಂದ ಕೆಳಗಿಳಿಸಲಾಗದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಕೆಳಗಿಳಿಸಿದರೆ ಎಲ್ಲಿ ಮಗುಚಿ ಬೀಳುತ್ತದೊ ಎಂಬ ಭಯ ಇನ್ನೊಂದೆಡೆಯಾಗಿದೆ. ಜ.19 ರಿಂದ ನಿಡ್ಪಳ್ಳಿ ಕ್ಷೇತ್ರದ ಜಾತ್ರೆ ನಡೆಯಲಿದ್ದು ವಾಹನ ಸಂಚಾರಕ್ಕೆ ಬಹಳ ಸಮಸ್ಯೆ ಎದುರಾಗಲಿದೆ. ಆದುದರಿಂದ ಸಂಬಂಧಿಸಿದ ಇಲಾಖೆ ತಕ್ಷಣ ಗಮನ ಹರಿಸಿ ಅಭಿವೃದ್ಧಿ ಗೊಳಿಸಲು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.
ಎರಡು ಕಡೆ ಇರುವ ಅಪಾಯಕಾರಿ ತಿರುವು ನೇರಗೊಳಿಸಬೇಕು;
ಈ ರಸ್ತೆಯಲ್ಲಿ ಕೂಟೇಲು ಸೇತುವೆ ಮುಂದೆ ಇರುವ ಒಂದು ತಿರುವು ಬಹಳ ಅಪಾಯಕಾರಿಯಾಗಿದೆ. ಇಲ್ಲಿ ಒಂದು ಬದಿ ಸುಮಾರು ನಲ್ವತ್ತು ಅಡಿ ಆಳದ ಗುಂಡಿ ಇದ್ದು ರಸ್ತೆ ಬದಿ ಸೈಡ್ ಕೊಡಲು ಜಾಗವಿಲ್ಲ. ಇನ್ನೊಂದು ಬದಿ ನೀರು ಹರಿದು ಹೊಂಡ ಬಿದ್ದು ವಾಹನ ಇಳಿಸಲು ಸಾಧ್ಯವಿಲ್ಲ. ಕುಕ್ಕುಪುಣಿ ಹಾಲಿನ ಡೈರಿ ಬಳಿ ಇನ್ನೊಂದು ದೊಡ್ಡ ತಿರುವು ಇದೆ. ಈ ತಿರುವಿನಲ್ಲಿ ವಾಹನಗಳು ಹತ್ತದೆ ಅರ್ಧದಲ್ಲಿ ಬಾಕಿಯಾಗಿ ಪಲ್ಟಿಯಾದ ಎಷ್ಟೋ ಘಟನೆಗಳು ನಡೆದಿದೆ. ಕೆ.ಎಸ್.ಅರ್.ಟಿ.ಸಿ ಬಸ್ಸುಗಳು ತಿರುವಿನಲ್ಲಿ ಒಡಾಡಲು ಬಹಳ ಕಷ್ಟವಾಗುತ್ತಿದ್ದು ಅರ್ಧದಲ್ಲಿ ಬಾಕಿಯಾಗುತ್ತಿದೆ. ಆದುದರಿಂದ ರಸ್ತೆ ಅಗಲ ಗೊಳಿಸುವಾಗ ಈ ಎರಡು ಅಪಾಯಕಾರಿ ತಿರುವುಗಳನ್ನು ನೇರಗೊಳಿಸಬೇಕು ಎಂದು ಸಾರ್ವಜನಿಕರ ಒತ್ತಾಯವಾಗಿದೆ. ಸದ್ಯಕ್ಕೆ ಮಣ್ಣು ಹಾಕಿ ಹೊಂಡ ಮುಚ್ಚಿದರೆ ಧೂಳು ಎದ್ದು ಇನ್ನಷ್ಟು ತೊಂದರೆ ಎದುರಿಸ ಬೇಕಾದೀತು.
ವಾಹನ ಓಡಿಸಲು ಭಯವಾಗುತ್ತದೆ;
ರಸ್ತೆಯ ಎರಡು ಬದಿ ಹೊಂಡ ಬಿದ್ದು ವಾಹನ ಚಲಾಯಿಸಲು ಸಮಸ್ಯೆಯಾಗಿದೆ. ಅಟೋ ಚಲಾಯಿಸುವಾಗ ಸೈಡ್ ನೀಡಲು ಕೆಳಗೆ ಇಳಿಸಿದರೆ ಎಲ್ಲಿ ಪಲ್ಟಿಯಾಗುವುದೋ ಎಂಬ ಭಯ ಎದುರಾಗಿದೆ. ಆದುದರಿಂದ ತಕ್ಷಣ ರಸ್ತೆಯನ್ನು ಅಗಲಗೊಳಿಸಿ ದುರಸ್ತಿ ಗೊಳಿಸಬೇಕಾಗಿದೆ.
ಮಂಜುನಾಥ. ಕೆ., ರಿಕ್ಷಾ ಚಾಲಕರು.
ಪಂಚಾಯತಿನಿಂದ ಪ್ರಸ್ತಾವನೆ ಕಳಿಸಲಾಗಿದೆ;
ರಸ್ತೆ ಅಭಿವೃದ್ಧಿ ಬಗ್ಗೆ ಕಾಳಜಿ ಹೊಂದಿರುವ ಪಂಚಾಯತ್ ಇದರ ಬಗ್ಗೆ ಗಮನ ನೀಡಿದೆ. ಕನಿಷ್ಠ ಹೊಂಡ ಮುಚ್ಚುವ ಕಾಮಗಾರಿಯಾದರೂ ಅಪಾಯ ಇರುತ್ತಿರಲಿಲ್ಲ. ರಸ್ತೆ ಅಗಲಗೊಳಿಸಿ ಅಭಿವೃದ್ಧಿ ಗೊಳಿಸುವಂತೆ ಈಗಾಗಲೇ ಪಂಚಾಯತ್ ವತಿಯಿಂದ ಇಲಾಖೆಗೆ ಪ್ರಸ್ತಾವನೆ ಕಳುಹಿಸಲಾಗಿದೆ. ಮತ್ತೆ ಈ ಬಗ್ಗೆ ಪತ್ರ ಬರೆಯಲಾಗುವುದು.
ವೆಂಕಟ್ರಮಣ ಬೋರ್ಕರ್, ಅಧ್ಯಕ್ಷರು ನಿಡ್ಪಳ್ಳಿ ಗ್ರಾ.ಪಂ.
ಭೇಟಿ ನೀಡಿ ಪರಿಶೀಲಿಸಿ ಮುಂದಿನ ಕ್ರಮ;
ಕುಕ್ಕುಪುಣಿ ಕೂಟೇಲು ಲೋಕೋಪಯೋಗಿ ರಸ್ತೆಯ ಎರಡೂ ಬದಿ ಸದ್ಯ ಮಣ್ಣು ಹಾಕಿ ಹೊಂಡ ಮುಚ್ಚಿದರೆ ಧೂಳಿನ ಸಮಸ್ಯೆ ಉಂಟಾಗಬಹುದು. ತಕ್ಷಣ ಭೇಟಿ ನೀಡಿ ಈ ರಸ್ತೆಯನ್ನು ಪರಿಶೀಲನೆ ನಡೆಸಿ ಮುಂದೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
ರಾಜೇಶ್ ರೈ, ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್, ಲೋಕೋಪಯೋಗಿ ಇಲಾಖೆ,ಮಂಗಳೂರು.