ಪುತ್ತೂರು: ಭಾರತ ಚುನಾವಣಾ ಆಯೋಗ ಪುತ್ತೂರು ತಾಲೂಕು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮಂಗಳೂರು ಹಾಗೂ ತಾಲೂಕು ಕಾನೂನು ಸೇವೆಗಳ ಸಮಿತಿಯ ಆಶ್ರಯದಲ್ಲಿ ದೇಶದ 15ನೇ ರಾಷ್ಟ್ರೀಯ ಮತದಾರರ ದಿನಾಚರಣೆಯು ಜ.25ರಂದು ತಾ.ಪಂ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಪ್ರಮಾಣ ವಚನ ಬೋಧಿಸಿದ ಮತದಾನ ನೋಂದಾವಣಾಧಿಕಾರಿಯಾಗಿರುವ ಸಹಾಯಕ ಆಯುಕ್ತ ಜ್ಯುಬಿನ್ ಮೊಹಪಾತ್ರ ಮಾತನಾಡಿ, ಮತದಾನದ ಹಿಂದೆ ಬಹಳಷ್ಟು ಮಹತ್ವವಿದೆ. ಮತದಾನದ ಮೂಲಕ ನಮ್ಮ ನಾಯಕನನ್ನು ನಾವೇ ಆಯ್ಕೆ ಮಾಡಿಕೊಳ್ಳಲಾಗುತ್ತಿದೆ. ಇದಕ್ಕಾಗಿ ಇದಕ್ಕೆ ಬಲಿದಾನ ಮಾಡಿದವರಿದ್ದಾರೆ.ಇದರ ಹಿಂದಿರುವ ಇತಿಹಾಸ ತಿಳಿದುಕೊಳ್ಳಕೇಕಾದ ಆವಶ್ಯಕತೆಯಿದ್ದು ವಿದ್ಯಾರ್ಥಿಗಳು ರೀಲ್ಸ್ ಮಾತ್ರವಲ್ಲ ಗೂಗಲ್ ಮೂಲಕ ಉತ್ತಮ ವಿಚಾರಗಳನ್ನು ತಿಳಿದುಕೊಳ್ಳಬೇಕು. ಮತದಾನವು ಸಮಾಜದ ಒಂದು ಮುಖ್ಯ ಅಂಗ. ಮತದಾನವು ಅಮೂಲ್ಯವಾದ ಹಕ್ಕು ಬಳಸಿಕೊಳ್ಳಬೇಕು. ಮತದಾನದಲ್ಲಿ ಭಾಗವಹಿಸುವ ಮೂಲಕ ದೇಶದ ಬದಲಾವಣೆಯಲ್ಲಿ ಕೈಜೋಡಿಸಬೇಕು ಎಂದರು.
ಉಪನ್ಯಾಸ ನೀಡಿದ ಉಪ್ಪಿನಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಮಾಜ ಕಾರ್ಯವಿಭಾಗದ ಸಹ ಪ್ರಾಧ್ಯಾಪಕ ಡಾ.ನಂದೀಶ್ ವೈ.ಡಿ ಮಾತನಾಡಿ, ಸ್ವತಂತ್ರ ಭಾರತದ ಪ್ರಜಾಪ್ರಭುತ್ವದಲ್ಲಿ ಸರ್ವರಿಗೂ ಸಮಾನವಾದ ಮತದಾನದ ಹಕ್ಕು ಇದೆ. ನಾನು ಒಬ್ಬನಿಂದ ದೇಶ ಬದಲಾಗಲ್ಲ, ನನ್ನ ಒಬ್ಬನ ಮತದಿಂದ ಏನೂ ಆಗಲ್ಲ ಎಂಬ ಭಾವನೆ ಬಿಡಬೇಕು. ಪ್ರತಿಯೊಬ್ಬ ಭಾರತೀಯರು ಮತದಾರರ ಪಟ್ಟಿಯಲ್ಲಿ ನೋಂದಾಯಿಸಿಕೊಳ್ಳಬೇಕು. ಮತದಾನದಲ್ಲಿ ಭಾಗವಹಿಸುವುದರ ಜೊತೆಗೆ ಇತರರಿಗೆ ಪ್ರೇರಣೆ ನೀಡಬೇಕು. ಮತದಾನಕ್ಕಾಗಿ ಸರಕಾರ ಒಬ್ಬರಿಗೆ ರೂ.700-800ತನಕ ಖರ್ಚು ಮಾಡುತ್ತಿದೆ. ಹೀಗಾಗಿ ಮತದಾನ ಮಾಡುವ ಹಕ್ಕನ್ನು ಯಾರೂ ತಪ್ಪಸಿಕೊಳ್ಳಬಾರದು. ಮುತುವರ್ಜಿಯಿಂದ ಮತಚಲಾಯಿಸಿ ಆನಂದಿಸಬೇಕು ಎಂದರು.
ತಹಶೀಲ್ದಾರ್ ಪುರಂದರ ಹೆಗ್ಡೆ ಮಾತನಾಡಿ, ಪ್ರಜಾಪ್ರಭುತ್ವ ದಲ್ಲಿ ಪ್ರಜೆಗಳ ಪಾತ್ರ ಮುಖ್ಯ ಎನ್ನುವುದನ್ನು ತಿಳಿದುಕೊಳ್ಳಬೇಕು. ನಮ್ಮ ಹಕ್ಕು ಮತ್ತು ಕರ್ತವ್ಯ ಗಳಿಗಾಗಿ ಮತದಾನ ಮಾಡಬೇಕು. ಪ್ರಜಾಪ್ರಭುತ್ವದಲ್ಲಿ ಮತ ಜೀವ ಇದ್ದಂತೆ. ಪ್ರಜೆಗಳಿರುವ ದೊಡ್ಡ ಅಸ್ತ್ರ ಮತದಾನ ಎಂದರು.
ಸನ್ಮಾನ:
ಕಳೆದ ಚುನಾವಣೆಯ ಸಂದರ್ಭದಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ ಬಿಎಲ್ಓಗಳಾದ ಪುಷ್ಪಾವತಿ, ಐವಿ ಗ್ರೆಟ್ಟಾ ಪಾಯಸ್, ಜಯಶ್ರೀ, ಉಪ್ಪಿನಂಗಡಿ ಉಪ ತಹಶೀಲ್ದಾರ್ ಚೆನ್ನಪ್ಪ ಗೌಡ, ತಾಲೂಕು ಕಚೇರಿ ಗ್ರೂಪ್ ಡಿ ನೌಕರ ರಾಧಾಕೃಷ್ಣ, ಗ್ರಾಮ ಸಹಾಯಕ ಬಾಲಕೃಷ್ಣ ಗೌಡ, ಆಹಾರ ನಿರೀಕ್ಷಕಿ ಸರಸ್ವತಿ, ಸಹಾಯಕ ಆಯುಕ್ತರ ಕಚೇರಿಯ ಲವ್ಯಶ್ರೀ, ಗ್ರಾಮ ಆಡಳಿತಾಧಿಕಾರಿಗಳಾದ ಜಂಗಪ್ಪ ಹಾಗೂ ಸುಜಾತರವರನ್ನು ಸನ್ಮಾನಿಸಲಾಯಿತು. ದಿ. ಕನಕರಾಜು ಅವರಿಗೆ ನೀಡುವ ಮರಣೋತ್ತರ ಗೌರವ ಸ್ಮರಣಿಕೆಯನ್ನು ಅವರ ಪತ್ನಿ ಚೈತ್ರ ಹಾಗೂ ಪುತ್ರಿ ನೇಹಾ ಸ್ವೀಕರಿಸಿದರು.
ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿ ಡಾ. ನಂದೀಶ್ರವರನ್ನು ಗೌರವಿಸಲಾಯಿತು. ತಾ.ಪಂ ಸ್ವೀಪ್ನಿಂದ ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ನಡೆಸಲಾದ ವಿವಿಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ನ್ಯಾಯವಾದಿ ಅಶ್ವಿನಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ತಾಲೂಕು ಸ್ವೀಪ್ ಅಧ್ಯಕ್ಷರಾಗಿರುವ ತಾ.ಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ ಸ್ವಾಗತಿಸಿದರು. ಉಪತಹಶೀಲ್ದಾರ್ ಸುಲೋಚನಾ ಪ್ರಸ್ತಾವಣೆಗೈದರು. ರಾಮಕೃಷ್ಣ ಪ್ರೌಢಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಶಿಕ್ಷಕ ಬಾಲಕೃಷ್ಣ ರೈ ಪೊರ್ದಾಲ್ ಕಾರ್ಯಕ್ರಮ ನಿರೂಪಿಸಿದರು. ನಗರ ಸಭಾ ಪೌರಾಯುಕ್ತ ಮಧು ಎಸ್.ಮನೋಹರ್ ವಂದಿಸಿದರು.