ಪುತ್ತೂರು: ಸವಣೂರು ಬೆಳ್ಳಾರೆ ರಸ್ತೆಯ ಕುಂಜಾಡಿ ಬಳಿ ನಿರ್ಮಾಣ ಹಂತದ ಸೇತುವೆಯ ಸಂಪರ್ಕದ ರಸ್ತೆ ಧೂಳು ತುಂಬಿದ್ದು ದಿನಂಪ್ರತಿ ವಾಹನ ಸವಾರರಿಗೆ, ಪಾದಚಾರಿಗಳಿಗೆ ಧೂಳಿನ ಅಭಿಷೇಕವಾಗುತ್ತಿದೆ.
ಕುಂಜಾಡಿ -ಕಾಪುಕಾಡುವರೆಗೆ ಸುಮಾರು 12 ಕೋ.ರೂ.ವೆಚ್ಚದಲ್ಲಿ ರಸ್ತೆ, ಸೇತುವೆ ಕಾಮಗಾರಿ ನಡೆಯುತ್ತಿದ್ದು, ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿರುವ ಕಾರಣ ಸಂಚಾರ ನಿರತರ ಪಾಲಿಗೆ ಈ ರಸ್ತೆ ಸಂಕಷ್ಟದ ಹಾದಿಯೆನಿಸಿದೆ.
ಗಾಡಿಯಲ್ಲಿ ತೆರಳುವಾಗ ಏನಾದರೂ ಒಂದು ಘನ ವಾಹನ ಸಿಕ್ಕಿದರೆ ಆತನಿಗೆ ಧೂಳಿನ ಅಭಿಷೇಕ ಆಗೋದು ಕಟ್ಟಿಟ್ಟ ಬುತ್ತಿ. ಸಮವಸ್ತ್ರ ಕೂಡ ಧೂಳಿನಲ್ಲಿ ಮುಳುಗಿ ಅತ್ತ ಕಾಲೇಜುಗಳಿಗೆ ತೆರಳದೆ, ಮತ್ತೆ ಮನೆಯ ಕಡೆ ತೆರಳಿದ ವಿಚಾರಗಳೂ ಇದೆ. ಪುನಃ ಸಮವಸ್ತ್ರ ಬದಲಿಸಿ ಕಾಲೇಜಿಗೆ ಹೋದಾಗ ಅರ್ಧ ತರಗತಿಯೇ ಮುಗಿದಿರುತ್ತದೆ. ಇಷ್ಟೆಲ್ಲಾ ವಿದ್ಯಾರ್ಥಿಗಳ ಸಮಸ್ಯೆಯಾದರೆ, ಪ್ರತಿದಿನ ಕೆಲಸಕ್ಕೆ ತೆರಳುವ ಕೂಲಿ ಕಾರ್ಮಿಕರ ಸಮಸ್ಯೆ ಬೇರೆಯೇ ಆಗಿದೆ.
ಆಮೆ ನಡಿಗೆಯಲ್ಲಿ ಸಾಗುತ್ತಿರುವ ಕಾಮಗಾರಿ:
ಕಾಮಗಾರಿ ಪ್ರಾರಂಭ ಆಗಿ ಹಲವು ತಿಂಗಳು ಕಳೆದರೂ, ಇನ್ನೂ ಕೂಡ ಅಂತಿಮ ಹಂತಕ್ಕೆ ತಲುಪಿಲ್ಲ. ಆಮೆಯಾದರು ಎರಡು ತಿಂಗಳ ಹಿಂದೆ ನಡಿಗೆಯನ್ನು ಮಾಡುತ್ತಿದ್ದರೆ ಇಷ್ಟು ಹೊತ್ತಿಗೆ ತಲುಪಿರುತ್ತಿತ್ತು. ಆದರೆ ಕಾಮಗಾರಿ ಇನ್ನು ಕೂಡ ನಿಧಾನ ಗತಿಯಲ್ಲಿಯೇ ಸಾಗುತ್ತಿದೆ ಎಂದು ಸಾರ್ವಜನಿಕರು ಅಸಮಧಾನ ವ್ಯಕ್ತಪಡಿಸುತ್ತಿದ್ದಾರೆ. ಆದಷ್ಟೂ ಶೀಘ್ರ ಈ ಕಾಮಗಾರಿಯನ್ನು ಲೋಕೋಪಯೋಗಿ ಇಲಾಖೆ ಪೂರ್ಣಗೊಳಿಸಬೇಕೆಂಬುದು ಸಾರ್ವಜನಿಕರ ಆಗ್ರಹವಾಗಿದೆ.