*ಬಜೆಟ್ ಮಂಡನೆ ಮಾಡಿದ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ
*ಒಟ್ಟು ಅಭಿವೃದ್ಧಿ, ಯೋಜನೆಗಳಿಗೆ ರೂ. 72.79 ಕೋಟಿ ಹಂಚಿಕೆ
*ಎಲ್ಲಾ ವಾರ್ಡ್ಗಳಿಗೆ ತಲಾ ರೂ. 10ಲಕ್ಷ ಘೋಷಣೆ
*ಹಸಿ ತ್ಯಾಜ್ಯದಿಂದ ಬಯೋಗ್ಯಾಸ್ ಉತ್ಪಾದನೆ
*ಪಾರಂಪರಿಕ ತ್ಯಾಜ್ಯ ನಿರ್ವಹಣೆ
*ವೈಜ್ಞಾನಿಕವಾಗಿ ಒಣ ತ್ಯಾಜ್ಯ ನಿರ್ವಹಣೆ
*ಒಳಚರಂಡಿ, ತ್ಯಾಜ್ಯ ಸಂಸ್ಕರಣ ಘಟಕ
*ಬಡತನ ನಿರ್ಮೂಲನಾ ಕೋಶದಲ್ಲಿ ವಿವಿಧ ಯೋಜನೆಗಳು
*ಅಮೃತ ಮಿತ್ರ 2.0 ಯೋಜನೆ
*ಕಛೇರಿ ಡಿಜಿಟಲೀಕರಣ – ಕಾಗದ ರಹಿತ ಕಛೇರಿ
*ಸಾರ್ವಜನಿಕ ದೂರುಗಳಿಗೆ ಜನಹಿತ ತಂತ್ರಾಂಶ
*ಉದ್ಯಮ ಪರವಾನಿಗೆ ಸರಳೀಕರಣ
*ಪೌರಕಾರ್ಮಿಕರಿಗೆ ವಸತಿಗೃಹ ಯೋಜನೆ ನಿರ್ಮಾಣ
*ಬೀದಿ ನಾಯಿಗಳ ಸಂತಾನ ಹರಣ ಕಾರ್ಯಕ್ರಮ
*ರುದ್ರ ಭೂಮಿಗಳ ಅಭಿವೃದ್ಧಿ
ಪುತ್ತೂರು:2025-26 ನೇ ಸಾಲಿನಲ್ಲಿ ಪುತ್ತೂರು ನಗರ ಸಭಾ ವ್ಯಾಪ್ತಿಯಲ್ಲಿ ಹಲವು ನೂತನ ಯೋಜನೆಗಳನ್ನೊಳಗೊಂಡು ರೂ 3.55 ಕೋಟಿ ಮಿಗತೆ ಬಜೆಟ್ನ್ನು ನಗರಸಭಾ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ ಅವರು ಮಂಡನೆ ಮಾಡಿದರು.
ಫೆ.7 ರಂದು ನಗರಸಭೆ ಮೀಟಿಂಗ್ ಹಾಲ್ನಲ್ಲಿ ನಡೆದ ನಗರಸಭಾ ವಿಶೇಷ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ ಅವರು ಬಜೆಟ್ ಮಂಡನೆ ಮಾಡಿದರು.
ಮುಖ್ಯಾಂಶಗಳು:
2025-26ನೇ ಸಾಲಿನ ನಗರಸಭೆಯ ಪ್ರಮುಖ ಸ್ವಂತ ಆದಾಯಗಳಾದ ಆಸ್ತಿ ತೆರಿಗೆ, ನೀರಿನ ಶುಲ್ಕ, ಕಟ್ಟಡ ಪರವಾನಗಿ ಶುಲ್ಕ, ಅಂಗಡಿ ಬಾಡಿಗೆ, ಮಾರುಕಟ್ಟೆ ಶುಲ್ಕ, ಉದ್ದಿಮೆ ಪರವಾನಗಿ ಮತ್ತು ಘನತ್ಯಾಜ್ಯ ವಸ್ತು ನಿರ್ವಹಣಾ ಶುಲ್ಕ ಇತ್ಯಾದಿಗಳಿಂದ ಸಂಗ್ರಹವಾಗುವ ಒಟ್ಟು ಸ್ವಂತ ರಾಜಸ್ವ ಆದಾಯ ರೂ. 13.40 ಕೋಟಿಗಳು, ರಾಜ್ಯ ಸರ್ಕಾರದಿಂದ ಬಿಡುಗಡೆ ಆಗತಕ್ಕ ರಾಜಸ್ವ ಅನುದಾನಗಳಾದ ವೇತನ ಅನುದಾನ, ಕುಡಿಯುವ ನೀರಿನ ಅನುದಾನ, ವಿದ್ಯುತ್ ಅನುದಾನ, ರಾಜ್ಯ ಹಣಕಾಸು ಮುಕ್ತ ನಿಧಿ ಅನುದಾನ ಮತ್ತು ಇತರೇ ರಾಜಸ್ವ ಅನುದಾನ 12.35 ಕೋಟಿಗಳು. ಎರಡು ಆದಾಯಗಳು ಸೇರಿ ಒಟ್ಟು ರೂ.25.75 ಕೋಟಿ ರಾಜಸ್ವ ಕಂದಾಯ ನಿರೀಕ್ಷಿಸಲಾಗಿದೆ.
ಅಭಿವೃದ್ಧಿ ಕಾರ್ಯಗಳಿಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ 15ನೇ ಹಣಕಾಸು ಅನುದಾನ, ಎಸ್.ಸಿ.ಪಿ ಮತ್ತು ಟಿ.ಎಸ್.ಪಿ ಅನುದಾನ, ಸ್ವಚ್ಛ ಭಾರತ್ ಮಿಷನ್ ಅನುದಾನ ಹಾಗೂ ರಾಜ್ಯ ಹಣಕಾಸು ಆಯೋಗದ ವಿಶೇಷ ಅನುದಾನ, ಲೋಕಸಭಾ, ವಿಧಾನಸಭಾ ಸದಸ್ಯರ ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನ, ಕುಡಿಯುವ ನೀರಿನ ಅನುದಾನ, ಪ್ರಾಕೃತಿಕ ವಿಕೋಪ ಅನುದಾನ, ಡೇ-ನಲ್ಮ್ ಅನುದಾನ, ಅಂಗನವಾಡಿ ಮತ್ತು ಶಾಲಾ ಕಟ್ಟಡ ರಿಪೇರಿ ಅನುದಾನ, ಮಲ ತ್ಯಾಜ್ಯ ಸಂಸ್ಕರಣೆ ಹಾಗೂ ನಿರ್ವಹಣೆಗೆ ಅನುದಾನ, ಎಸ್.ಎಸ್ಸಿ ವಿಶೇಷ ಅನುದಾನ, ಇತರೇ ಅನುದಾನ ಸೇರಿ ಒಟ್ಟು ರೂ. 35.95 ಕೋಟಿ ಅನುದಾನಗಳನ್ನು ಮತ್ತು ಅಸಾಧಾರಣ ಖಾತೆ ಹೊಂದಾಣಿಕೆ ಮತ್ತು ಬಂಡವಾಳ ಜಮಾ ಸೇರಿ ಒಟ್ಟು ರೂ5.48 ಕೋಟಿ ನಿರೀಕ್ಷಿಸಲಾಗಿದೆ. ಅದರಂತೆ ಅನುದಾನ, ನಗರಸಭೆಯ ಸ್ವಂತ ಆದಾಯ, ಅಸಾಧಾರಣ ಖಾತೆ ಹೊಂದಾಣಿಕೆ ಮತ್ತು ಬಂಡವಾಳ ಜಮಾ ಸೇರಿ ಒಟ್ಟು ರೂ. 67.19ಕೋಟಿ ಆದಾಯವನ್ನು 2025-26ನೇ ಸಾಲಿನಲ್ಲಿ ನಿರೀಕ್ಷಿಸಲಾಗಿದೆ. ಆರಂಭದ ಶಿಲ್ಕು ರೂ.9.14 ಕೋಟಿ ಆಗಿದ್ದು, ನಗರಸಭೆಗೆ 2025-26 ನೇ ಸಾಲಿಗೆ ನಿರೀಕ್ಷಿಸಲಾದ ಸ್ವಂತ ಆದಾಯ ರೂ.13.40 ಕೋಟಿ ಆಗಿದ್ದು, 2025-26ನೇ ಸಾಲಿನಲ್ಲಿ ನಿರೀಕ್ಷಿಸಲಾದ ರಾಜಸ್ವ ಅನುದಾನ ರೂ. 12.35 ಕೋಟಿಗಳು, ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ನಿರೀಕ್ಷಿಸಲಾದ ನಿರ್ದಿಷ್ಟ ಅನುದಾನ ರೂ. 35.95 ಕೋಟಿ, ಇತರೇ ಹೊಂದಾಣಿಕೆ ಮೊತ್ತ ರೂ.5.48 ಕೋಟಿ, ಒಟ್ಟು ಆರಂಭಿಕ ಶುಲ್ಕ ಸೇರಿಸಿ ರೂ. 76.34ಕೋಟಿ, 2025-26 ನೇ ಸಾಲಿನಲ್ಲಿ ವಿವಿಧ ಯೋಜನೆಗಳಿಗೆ ಹಾಗೂ ಅಗತ್ಯತೆಗಳಿಗೆ ಹಂಚಿಕೆ ಮಾಡಲಾದ ಮೊತ್ತ ರೂ. 72.79ಕೋಟಿ ಸೇರಿ ರೂ.3.55 ಕೋಟಿಯ ಮಿಗತೆ ಬಜೆಟ್ ಮಂಡನೆ ಮಾಡಲಾಗಿದೆ. ನಗರಸಭೆ ಬಿಜೆಪಿ ಸದಸ್ಯರು ಉತ್ತಮ ಬಜೆಟ್ ಎಂದು ಪ್ರಶಂಸೆಯ ಮಾತುಗಳನ್ನಾಡಿದರು. ಬಜೆಟ್ ಮಂಡನೆಯಲ್ಲಿ ಇತರ ಪಕ್ಷದ ಸದಸ್ಯರ ವಿರೋಧವಿರಲಿಲ್ಲ.
ಸದಸ್ಯರ ಅನಿಸಿಕೆಗಳು:
ವಾರ್ಡ್ಗೆ ತಲಾ ರೂ. 10ಲಕ್ಷ ಕಡಿಮೆಯಾಗಿದೆ.
ಸ್ಮಶಾನಕ್ಕಿಟ್ಟ ಅನುದಾನ ಕಡಿಮೆಯಾಗಿದೆ. ಕಟ್ಟಿಗೆ ಒಡೆಯುವ ಯಂತ್ರದ ಅವಶ್ಯಕತೆಯಿದೆ
ಗ್ರಾಮಾಂತರದ ವಾರ್ಡ್ಗಳಿಗೆ ಹೆಚ್ಚಿನ ಅನುದಾನ ಇಡಬೇಕು
ನಗರಸಭೆ ವಾಣಿಜ್ಯ ಸಂಕೀರ್ಣ ನಿರ್ಮಾಣದ ಮೂಲಕ ಆದಾಯ ಗಳಿಸಬೇಕು
ಸ್ವಸಹಾಯ ಸಂಘಗಳ ಮೂಲಕ ಉದ್ಯಮ ಪರವಾನಿಗೆ ಸಮೀಕ್ಷೆ ನಡೆಸಬೇಕು
ಕಂದಾಯ ಅದಾಲತ್ ಅನ್ನು ಪ್ರತಿ ವಾರ್ಡ್ಗಳಿಗೂ ವಿಸ್ತರಿಸಬೇಕು
ಕಸ ಸಂಸ್ಕರಣಾ ಘಟಕಕ್ಕೆ ವಿದ್ಯಾರ್ಥಿಗಳ ಭೇಟಿ ಕಾರ್ಯಕ್ರಮ