ಕಾನೂನು ಬಾಹಿರವಾಗಿ ಜಮೀನಿನ ವಿಭಜನೆ ಆರೋಪ : ನಿರ್ಣಯಕ್ಕೆ ಬೆಲೆ ನೀಡದ್ದಕ್ಕೆ ಸದಸ್ಯರೋರ್ವರ ರಾಜೀನಾಮೆ
ಉಪ್ಪಿನಂಗಡಿ: ಪುಡಾ ಅನುಮತಿ ಪಡೆಯದೇ ಕಾನೂನು ಬಾಹಿರವಾಗಿ ವ್ಯಕ್ತಿಯೋರ್ವರಿಗೆ ಜಮೀನಿನ ವಿನ್ಯಾಸದಲ್ಲಿ ಮಲ್ಟಿ ಲೇ ಔಟ್ (ವಿಭಜನೆ) ಮಾಡಿಕೊಟ್ಟಿದ್ದಾರೆ ಎಂದು 34 ನೆಕ್ಕಿಲಾಡಿ ಗ್ರಾ.ಪಂ. ಪಿಡಿಒ ಅವರ ಮೇಲೆ ಗಂಭೀರ ಆರೋಪ ಮಾಡಿದ ಗ್ರಾ.ಪಂ. ಸದಸ್ಯ ಪ್ರಶಾಂತ್ ಎನ್. ಅವರು ಸದಸ್ಯರ ನಿರ್ಣಯಕ್ಕೆ ಬೆಲೆ ಇಲ್ಲದಿದ್ದಲ್ಲಿ ನಾವು ಇಲ್ಲಿದ್ದು ಏನು ಪ್ರಯೋಜನ ಎಂದು ಅಧ್ಯಕ್ಷರಿಗೆ ರಾಜೀನಾಮೆ ಪತ್ರ ನೀಡಿ ಸಭೆಯಿಂದ ತೆರಳಿದ ಘಟನೆ ಫೆ.11ರಂದು ನಡೆದ 34 ನೆಕ್ಕಿಲಾಡಿ ಸಾಮಾನ್ಯ ಸಭೆಯಲ್ಲಿ ನಡೆದಿದೆ.
ಗ್ರಾ.ಪಂ. ಅಧ್ಯಕ್ಷೆ ಸುಜಾತ ಆರ್. ರೈ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಸದಸ್ಯ ಪ್ರಶಾಂತ್ ಎನ್., ಉಮ್ಮರ್ ಎಂಬವರ ಜಾಗವನ್ನು ವಿಭಜನೆ ಮಾಡಿ ನೀಡಲು 2024ರ ಫೆಬ್ರವರಿಯ ದಿನಾಂಕ ನಮೂದಿಸಿ ಇಒ ಅವರು ಅನುಮೋದನೆ ನೀಡಿ, ಗ್ರಾ.ಪಂ.ಗೆ ಕಳುಹಿಸಿದ್ದಾರೆ. ಆದರೆ ಅದರಲ್ಲಿರುವ ಸ್ಟ್ಯಾಂಪ್ ಪೇಪರ್ 2024ರ ಆಗಸ್ಟ್ ತಿಂಗಳಿನದ್ದಾಗಿದೆ. ಕಾನೂನು ಪ್ರಕಾರವಾಗಿ ಈ ಜಾಗದ ವಿಭಜನೆಯನ್ನು ಮಾಡಿಕೊಡಬೇಕಾಗಿರುವುದು ಪುಡಾ. ಆದರೆ ಇಲ್ಲಿ ಕಾನೂನು ಬಾಹಿರವಾಗಿ ಅವರಿಗೆ ಜಾಗದ ವಿಭಜನೆ ಮಾಡಿ ವಿನ್ಯಾಸ ನಕ್ಷೆ ಮಾಡಿಕೊಡಲಾಗಿದೆ ಎಂದು ಆರೋಪಿಸಿದರು ಹಾಗೂ ಈ ಕಡತವನ್ನು ಪರಿಶೀಲಿಸಿದಾಗ 2024ರ ಮೇ ತಿಂಗಳಿನಲ್ಲಿ ಈ ಜಾಗದ 9/11(ಎ) ಖಾತೆ ಬದಲಾವಣೆಯಾಗಿದೆ. ಆದರೆ ಈ ಕಡತದಲ್ಲಿ 2024ರ ಫೆಬ್ರವರಿ ತಿಂಗಳಿನ ದಿನಾಂಕವನ್ನು ನಮೂದಿಸಿರುವುದರಿಂದ ಈ ಬಗ್ಗೆ ಸೂಕ್ತ ಮಾರ್ಗದರ್ಶನಕ್ಕಾಗಿ ತಾ.ಪಂ. ಕಾರ್ಯನಿರ್ವಹಣಾಧಿಕಾರಿಯವರಿಗೆ ಪತ್ರ ಬರೆಯಲು ನಿರ್ಣಯ ಕೈಗೊಳ್ಳಲಾಗಿತ್ತು. ಆದರೆ ಆ ನಿರ್ಣಯದಂತೆ ಇಒ ಅವರಿಗೆ ಪತ್ರ ಬರೆದು ಮಾರ್ಗದರ್ಶನ ಪಡೆದುಕೊಳ್ಳಲಾಗಿದೆಯಾ ಎಂದು ಪ್ರಶ್ನಿಸಿದರು. ಆಗ ಪಿಡಿಒ ದೇವಪ್ಪ ನಾಯ್ಕ ಮಾತನಾಡಿ, ಇಒ ಅವರು ಅನುಮೋದನೆ ನೀಡಿದಂತೆ ಇಲ್ಲಿ ಜಮೀನನ್ನು ವಿಭಜನೆ ಮಾಡಿ ನೀಡಲಾಗಿದೆ. ಸಾಮಾನ್ಯ ಸಭೆಯ ನಿರ್ಣಯದಂತೆ ಇಒ ಅವರಿಗೆ ಪತ್ರ ಬರೆಯಲಾಗಿದೆ ಎಂದರು. ಆಗ ಪ್ರಶಾಂತ್ ಮಾತನಾಡಿ, ಇಒ ಅವರಿಗೆ ಪತ್ರ ಬರೆದಿರುವ ಬಗ್ಗೆ ನನಗೆ ದಾಖಲೆ ಒದಗಿಸಿ. ಇಲ್ಲಿ ಜಾಗದ ವಿಭಜನೆ ಮಾಡಿಕೊಟ್ಟಾಗ ಪಂಚಾಯತ್ ಸದಸ್ಯರ ಗಮನಕ್ಕೆ ಯಾಕೆ ತಂದಿಲ್ಲ. ಇಲ್ಲಿ ಬಡವನಿಗೊಂದು ನ್ಯಾಯ ಶ್ರೀಮಂತನಿಗೊಂದು ನ್ಯಾಯ ಮಾಡಬೇಡಿ. ಕಾನೂನನ್ನು ಗಾಳಿಗೆ ತೂರಬೇಡಿ. ಸದಸ್ಯರ ನಿರ್ಣಯಕ್ಕೆ ಬೆಲೆ ಇಲ್ಲವಾದರೆ ನಾವಿದ್ದೂ ಏನು ಪ್ರಯೋಜನ ಎಂದು ಆಕ್ರೋಶ ವ್ಯಕ್ತಪಡಿಸಿದರಲ್ಲದೆ, ತನ್ನ ಸದಸ್ಯ ಸ್ಥಾನಕ್ಕೆ ಲಿಖಿತ ರಾಜೀನಾಮೆ ಪತ್ರವನ್ನು ನೀಡಿ ಸಭೆಯಿಂದ ಹೊರನಡೆದರು.
ಈ ಪ್ರಕರಣದ ಕೂಲಂಕುಶ ತನಿಖೆ ನಡೆದ ಬಳಿಕ ಸಭೆ ನಡೆಸಿ ಎಂದು ಸದಸ್ಯ ವಿಜಯಕುಮಾರ್ ಸಲಹೆ ನೀಡಿದರು. ಈ ಬಗ್ಗೆ ಚರ್ಚೆಗಳು ನಡೆದು ಇತರ ಸದಸ್ಯರೂ ಸಭಾತ್ಯಾಗ ಮಾಡಿದ ಬೆನ್ನಲ್ಲೇ ಪಿಡಿಒ ಸಭೆಯನ್ನು ಮುಂದೂಡಲಾಗಿದೆ ಎಂದು ತಿಳಿಸಿದರು.
ಕರುವೇಲು- ಶಾಂತಿನಗರ ರಸ್ತೆಯಲ್ಲಿ ಅಪರಿಚಿತರು ತ್ಯಾಜ್ಯ ತಂದು ಎಸೆಯುತ್ತಿದ್ದು, ಇಲ್ಲಿ ಪಂಚಾಯತ್ ವತಿಯಿಂದ ಸಿ.ಸಿ.ಕ್ಯಾಮರ ಅಳವಡಿಸಲು ಸದಸ್ಯರು ಸಲಹೆ ನೀಡಿದರು. ಉಪಾಧ್ಯಕ್ಷ ಹರೀಶ ಡಿ., ಮಾತನಾಡಿ, ಗ್ರಾ.ಪಂ.ನ ಮೈಂದಡ್ಕ ರಸ್ತೆಗೆ ಶಾಸಕರ 30 ಲಕ್ಷ ರೂ. ಅನುದಾನದಡಿ ಕಾಂಕ್ರೀಟ್ ಕಾಮಗಾರಿ ನಡೆದಿದ್ದು, ಗುತ್ತಿಗೆದಾರರು ಕಳಪೆ ಗುಣಮಟ್ಟದ ಕಾಮಗಾರಿ ನಡೆಸಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆಗೆ ಒತ್ತಾಯಿಸಿದರು.
ಸದಸ್ಯರಾದ ಹರೀಶ ಕೆ., ರಮೇಶ, ವೇದಾವತಿ, ಸ್ವಪ್ನ ಸಭೆಯಲ್ಲಿ ಉಪಸ್ಥಿತರಿದ್ದರು.
ಈ ಜಮೀನಿನ ಮಲ್ಟಿ ಲೇ ಔಟ್ (ವಿಭಜನೆ) ಈಗ ಮಾಡಿಕೊಟ್ಟಿರುವುದು ಕಾನೂನು ಬಾಹಿರವಾಗಿದೆ. ಇದನ್ನು ಮಾಡಿಕೊಡದಿರುವುದೇ ಈ ಹಿಂದಿನ ಪಿಡಿಒ ಅವರ ವರ್ಗಾವಣೆಗೆ ಕಾರಣವಾಗಿದೆ ಎಂಬ ಮಾತುಗಳು ಸದಸ್ಯರಿಂದ ಈ ಸಂದರ್ಭ ಕೇಳಿಬಂತು.